ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಅಪಪ್ರಚಾರ ಮತ್ತು ಕಾನೂನುಬಾಹಿರ ವಿಷಯಗಳನ್ನು ತಡೆಯಲು ಕೇಂದ್ರ ಸರ್ಕಾರವು ಮೆಟಾ ಸಂಸ್ಥೆಗೆ ಖಡಕ್ ಸೂಚನೆ ನೀಡಿದೆ. ಅಲ್ಗಾರಿದಂಗಳಲ್ಲಿ ಸೂಕ್ತ ಬದಲಾವಣೆ ಮಾಡಿ, ಭಾರತೀಯ ಕಾನೂನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಡಿಜಿಟಲ್ ವೇದಿಕೆಗಳನ್ನು ಸುರಕ್ಷಿತವಾಗಿರಿಸಲು ಸರ್ಕಾರ ತಾಕೀತು

ನವದೆಹಲಿ (ಆ.8): ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಅಪಪ್ರಚಾರ ಹಾಗೂ ಕಾನೂನುಬಾಹಿರ ವಿಷಯಗಳನ್ನು ತಡೆಯಲು ಅಲ್ಗಾರಿದಂಗಳಲ್ಲಿ ಸೂಕ್ತ ಬದಲಾವಣೆ ಮಾಡುವ ಮೂಲಕ ಸ್ಪಷ್ಟವಾದ ಕ್ರಿಯಾ ಯೋಜನೆಯನ್ನು (ರೋಡ್‌ಮ್ಯಾಪ್‌) ಸಲ್ಲಿಸುವಂತೆ ಕೇಂದ್ರ ಸರ್ಕಾರವು ಮೆಟಾ ಸಂಸ್ಥೆಗೆ ಸೂಚನೆ ನೀಡಿದೆ.

ಭಾರತದ ಕಾನೂನಿನ್ವಯ ಕೆಲಸ ಮಾಡಲು ತಾಕೀತು

ದೇಶದಲ್ಲಿ ಮೆಟಾ ಒಡೆತನದ ವೇದಿಕೆಗಳಾದ ಫೇಸ್ಬುಕ್, ಇನ್‌ಸ್ಟಾಗ್ರಾಂ, ವಾಟ್ಸಾಪ್‌ಗಳ ಮೂಲಕ ಹರಡುತ್ತಿರುವ ಡೀಪ್‌ಫೇಕ್‌ಗಳು, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿಷಯಗಳು ಮತ್ತು ನಕಲಿ ಖಾತೆಗಳ ಹಾವಳಿಯಂತಹ ಗಂಭೀರ ಸಮಸ್ಯೆಗಳ ಕುರಿತು ಸರ್ಕಾರ ತೀವ್ರ ಕಳವಳ ವ್ಯಕ್ತಪಡಿಸಿದೆ. ಅಮೆರಿಕದ ಕಾನೂನುಗಳ ಆಧಾರದ ಮೇಲೆ ಭಾರತದಲ್ಲಿ ಜಾಲತಾಣಗಳನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿರುವ ಸರ್ಕಾರ, ಇಲ್ಲಿನ ಕಾನೂನುಗಳು ಮತ್ತು ಸಾರ್ವಜನಿಕ ಸುರಕ್ಷತೆಗೆ ಎಲ್ಲಾ ಪ್ಲಾಟ್‌ಫಾರ್ಮ್‌ಗಳು ಬದ್ಧವಾಗಿರಬೇಕು ಎಂದು ಒತ್ತಾಯಿಸಿದೆ.

ಡಿಜಿಟಲ್‌ ವೇದಿಕೆಗಳ ಸುರಕ್ಷತೆ ಬಗ್ಗೆ ಕೇಂದ್ರ ಕಳವಳ

ಕಂಟೆಂಟ್ ಮಾಡರೇಷನ್, ನಿಯಮಗಳ ಪಾಲನಾ ವ್ಯವಸ್ಥೆಗಳು ಮತ್ತು ಬಳಕೆದಾರರ ಸುರಕ್ಷತಾ ಕ್ರಮಗಳ ಸಂಪೂರ್ಣ ವಿವರಗಳನ್ನು ಒದಗಿಸುವಂತೆ ಮೆಟಾ ಕಂಪನಿಗೆ ನಿರ್ದೇಶಿಸಲಾಗಿದೆ. ಭಾರತೀಯ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಡಿಜಿಟಲ್ ವೇದಿಕೆಗಳನ್ನು ಸುರಕ್ಷಿತವಾಗಿರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ತಾಕೀತು ಮಾಡಿದೆ.