ಬೀದಿ ನಾಯಿಯೊಂದು ಬಾಲಕನ ಮೇಲೆ ದಾಳಿ ಮಾಡಿದಾಗ ಬೆಕ್ಕೊಂದು ರಕ್ಷಿಸಿದೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ, ಪ್ರಾಣಿಗಳ ಸೂಕ್ಷ್ಮತೆಗೆ ಇದು ಸಾಕ್ಷಿಯಾಗಿದೆ.
ಪುಟ್ಟ ಮಕ್ಕಳ ಮೇಲೆ ಬೀದಿ ನಾಯಿಗಳು ದಾಳಿ ಮಾಡುವ ಸುದ್ದಿಯನ್ನು ನೀವು ಆಗಾಗ ಕೇಳಿರಬಹುದು. ಆದರೆ ಇಂತಹ ಘಟನೆಯೊಂದರಲ್ಲಿ ಬೆಕ್ಕೊಂದು ಬಾಲಕನನ್ನು ಕಾಪಾಡಿದಂತಹ ಘಟನೆಯೊಂದು ನಡೆದಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಪ್ರಾಣಿಗಳು ಕೂಡ ಸೂಕ್ಷ್ಮತೆ ಹಾಗೂ ಸಂವೇದನಶೀಲತೆಯನ್ನು ಹೊಂದಿವೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ವೈರಲ್ ಆದ ವೀಡಿಯೋದಲ್ಲೇನಿದೆ.
ವೀಡಿಯೋದಲ್ಲಿ ಕಾಣಿಸುವಂತೆ ಬಾಲಕರಿಬ್ಬರು ರಸ್ತೆಯಲ್ಲಿ ಸೈಕಲ್ ತುಳಿದುಕೊಂಡು ಸುತ್ತು ಬರುತ್ತಾ ಆಟವಾಡುತ್ತಿರುತ್ತಾರೆ. ಈ ವೇಳೆ ಮಾಲೀಕನ ಕೈಯಿಂದ ಸಂಕೋಲೆ ಕಳಚಿ ತಪ್ಪಿಸಿಕೊಂಡು ಬಂದ ನಾಯಿಯೊಂದು ನೀಲಿ ಬಣ್ಣದ ಶರ್ಟ್ ತೊಟ್ಟು ಸೈಕಲ್ ಮೆಟ್ಟುತ್ತಿದ್ದ ಬಾಲಕನ ಮೇಲೆ ಮುಗಿಬಿದ್ದಿದೆ. ಕೂಡಲೇ ಬಾಲಕ ಸೈಕಲ್ ಸಮೇತ ಕೆಳಗೆ ಬಿದ್ದಿದ್ದಾನೆ. ಆದರೂ ನಾಯಿ ದಾಳಿ ಮುಂದುವರೆಸಿದೆ. ಕೂಡಲೇ ಓಡಿ ಬರುವ ನಾಯಿಯ ಮಾಲೀಕ ನಾಯಿಯನ್ನು ಎಷ್ಟೇ ಹಿಡಿದು ಎಳೆದರು ನಾಯಿ ಮಾತ್ರ ಆಕ್ರಮಣಕಾರಿಯಾಗಿ ಬಾಲಕನ ಮೇಲೆ ದಾಳಿ ಮುಂದುವರಿಸಿದೆ. ಈ ವೇಳೆ ಎಲ್ಲಿಂದಲೋ ಬಂದ ಬೆಕ್ಕೊಂದು ನಾಯಿಯ ಮೇಲೆ ದಾಳಿಗೆ ಮುಂದಾಗಿದೆ.
ಮುದ್ದಿನ ಬೆಕ್ಕಿನ ಸಾವು ತಂದ ನೋವು: ಬದುಕಿಗೆ ಗುಡ್‌ಬಾಯ್ ಹೇಳಿದ ವಿಚ್ಚೇದಿತ ಮಹಿಳೆ
ಮುಂದಿದ್ದ ಕಬ್ಬಿಣದ ಸರಳುಗಳ ಎಡೆಯಿಂದ ಓಡಿ ಬಂದ ಬೆಕ್ಕೊಂದು ನಾಯಿಯ ಮೇಲೆ ಹಾರಿ ದಾಳಿ ನಡೆಸಿದೆ. ಎರೆಡರಡು ಬಾರಿ ನಾಯಿಯ ಮೇಲೆ ಹಾರಿದ ಬೆಕ್ಕು ಅದರ ಗಮನವನ್ನು ಬೇರೆಡೆ ಸೆಳೆಯಲು ಯತ್ನಿಸಿದೆ, ಬೆಕ್ಕನ್ನು ನೋಡಿದ ನಂತರವೇ ನಾಯಿ ಬಾಲಕನನ್ನು ಬಿಟ್ಟು ಸುಮ್ಮನಾಗಿದೆ. ಇದೇ ವೇಳೆ ಹುಡುಗ ಬದುಕಿದೆನೋ ಬಡ ಜೀವ ಎಂದು ಅಲ್ಲಿಂದ ಓಡಿ ಹೋಗಿದ್ದರೆ ನಾಯಿ ಉಗ್ರರೂಪದಲ್ಲೇ ಇದ್ದು, ನಾಯಿಯ ಮಾಲೀಕನ ಅದನ್ನು ಗಟ್ಟಿಯಾಗಿ ಹಿಡಿದುಕೊಂಡು ಅಲ್ಲಿಂದ ಎಳೆದುಕೊಂಡು ಹೋಗಿದ್ದಾನೆ. ಈ ವೇಳೆ ಬೆಕ್ಕು ಅದರ ಹಿಂದೆಯೇ ಓಡಿಸುತ್ತಾ ಹೋಗಿದೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಬೆಕ್ಕಿನ ಚಾಣಾಕ್ಷತನಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ತಮ್ಮನನ್ನು ರಕ್ಷಿಸಲು ಹೋಗಿ ತಾನೇ ಬೀದಿನಾಯಿಗಳಿಗೆ ಆಹಾರವಾದ 6 ವರ್ಷದ ಬಾಲಕಿ
ಸಾಮಾನ್ಯವಾಗಿ ನಾಯಿಗಳು ದಾಳಿ ನಡೆಸಿದಾಗ ಮನುಷ್ಯರೇ ಹತ್ತಿರ ಹೋಗಲು ಭಯಪಡುತ್ತಾರೆ. ಕೆಲವೊಮ್ಮೆ ಅನಾಹುತಗಳಾದಾಗ ಮನುಷ್ಯರು ನೋಡುತ್ತಾ ನಿಲ್ಲುವುದು ಅಥವಾ ತಮ್ಮ ಮೊಬೈಲ್‌ನಲ್ಲಿ ದೃಶ್ಯವನ್ನು ಸೆರೆ ಹಿಡಿಯುತ್ತಾ ರಕ್ಷಣೆಗೆ ಹೋಗದೇ ಸೂಕ್ಷ್ಮತೆ ಮರೆತಂತೆ ವರ್ತಿಸುವಂತಹ ಹಲವು ಘಟನೆಗಳು ನಡೆದಿವೆ. ಹೀಗಿರುವಾಗ ಬೆಕ್ಕೊಂದು ಚಾಣಾಕ್ಷತನ ತೋರಿ ಉಪಾಯವಾಗಿ ನಾಯಿಯನ್ನು ದೂರ ಓಡಿಸಿರುವುದು ನಿಜಕ್ಕೂ ಮೆಚ್ಚಬೇಕಾದ ವಿಚಾರ. ಪ್ರಾಣಿಗಳಿಗೂ ಕೂಡ ಮಾನವೀಯತೆ ಸೂಕ್ಷ್ಮತೆ ಇದೆ ಎಂಬುದಕ್ಕೆ ಈ ಘಟನೆ ಒಂದು ಉತ್ತಮ ಉದಾಹರಣೆಯಾಗಿದೆ. ಈ ಬಗ್ಗೆ ನಿಮ್ಮೆ ಅಭಿಪ್ರಾಯವೇನು ಕಾಮೆಂಟ್ ಮಾಡಿ.
