ತಮ್ಮನನ್ನು ರಕ್ಷಿಸಲು ಹೋಗಿ ತಾನೇ ಬೀದಿನಾಯಿಗಳಿಗೆ ಆಹಾರವಾದ 6 ವರ್ಷದ ಬಾಲಕಿ
ಬೀದಿನಾಯಿಗಳಿಂದ ತನ್ನ 2 ವರ್ಷದ ತಮ್ಮನನ್ನು ರಕ್ಷಿಸಲು ಹೋಗಿ ಆರು ವರ್ಷದ ಬಾಲಕಿಯೊಬ್ಬಳು ಅವುಗಳಿಗೆ ಆಹಾರವಾದ ಹೃದಯ ಹಿಂಡುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಕಾನ್ಪುರ: ಬೀದಿನಾಯಿಗಳಿಂದ ತನ್ನ 2 ವರ್ಷದ ತಮ್ಮನನ್ನು ರಕ್ಷಿಸಲು ಹೋಗಿ ಆರು ವರ್ಷದ ಬಾಲಕಿಯೊಬ್ಬಳು ಅವುಗಳಿಗೆ ಆಹಾರವಾದ ಹೃದಯ ಹಿಂಡುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಭಾನುವಾರ ತಡರಾತ್ರಿ ಘಟನೆ ನಡೆದಿದೆ. ಗೋವಿಂದ ನಗರ ಪೊಲೀಸ್ ಠಾಣೆ ಪ್ರದೇಶದ ಸಿಟಿಐ ಬಸ್ತಿ ಎಂಬಲ್ಲಿ ಈ ಘಟನೆ ನಡೆದಿದೆ. ಮಕ್ಕಳಿಬ್ಬರ ಮೇಲೆ ಬೀದಿ ನಾಯಿ ದಾಳಿ ಮಾಡಿದ್ದು, ಈ ವೇಳೆ ತಮ್ಮನನ್ನು ರಕ್ಷಿಸಲು ಮುಂದಾದ ಪುಟ್ಟ ಅಕ್ಕನ ಮೇಲೆ ಬೀದಿನಾಯಿಗಳು ಮುಗಿಬಿದ್ದಿವೆ. ಪರಿಣಾಮ ಬಾಲಕಿ ಬೀದಿ ನಾಯಿಗಳ ದಾಳಿಯಿಂದ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾಳೆ. ಇತ್ತ ತಮ್ಮನಿಗೂ ಗಂಭೀರ ಗಾಯಗಳಾಗಿವೆ.
ಬೀದಿ ನಾಯಿಯ ದಾಳಿಗೊಳಗಾದ ಮಕ್ಕಳ ತಂದೆ ಚೋಟು ಮದುವೆ ಸಮಾರಂಭಗಳಲ್ಲಿ ವೈಟರ್ ಆಗಿ ಕೆಲಸ ಮಾಡುತ್ತಿದ್ದರು. ಹಾಗೆಯೇ ತಾಯಿ ಪೂಜಾ ಚಿಂದಿ ಆಯುವ ಕೆಲಸ ಮಾಡುತ್ತಿದ್ದು, ಘಟನೆ ನಡೆಯುವ ವೇಳೆ ಅಪ್ಪ ಅಮ್ಮ ಇಬ್ಬರೂ ಮನೆಯಲ್ಲಿ ಇರಲಿಲ್ಲ, ಇತ್ತ ಘಟನೆ ನಡೆಯುವ ವೇಳೆ ಅಲ್ಲಿದ್ದ ಸ್ಥಳೀಯರು ಮಗುವಿನ ಚೀರಾಟದ ಸದ್ದು ಕೇಳಿ ನಾಯಿಗಳನ್ನು ದೂರ ಓಡಿಸಿದ್ದಾರೆ. ಆದರೆ ಅಷ್ಟರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿ ಸಾವನ್ನಪ್ಪಿದ್ದರೆ, ಇತ್ತ ಆಕೆಯ ಸೋದರನೂ ಗಂಭೀರ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮನೆಗೆ ನುಗ್ಗಿ 5 ತಿಂಗಳ ಮಗು ಕೊಂದು ತಿಂದ ಬೀದಿ ನಾಯಿ: ಜನರಿಂದ ನಾಯಿಯ ಹತ್ಯೆ
ಬೀದಿ ನಾಯಿಗಳನ್ನು ನಿಯಂತ್ರಿಸಲು ಆಡಳಿತವೂ ವಿಫಲವಾಗಿದೆ. ಇದರಿಂದಲೇ ಇಂತಹ ಜೀವ ಕಳೆದುಕೊಳ್ಳುವ ಘಟನೆ ನಡೆಯುತ್ತಿದೆ ಎಂದು ಆರೋಪಿಸಿ ಘಟನೆಯ ಬಳಿಕ ಮಗುವಿನ ಪೋಷಕರು ಬಾಲಕಿಯ ಶವವನ್ನು ರಸ್ತೆಯಲ್ಲಿ ಇರಿಸಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡಿದ್ದಾರೆ. ಇದಾದ ನಂತರ ಗೋವಿಂದ ನಗರ ಪೊಲೀಸ್ ಠಾಣೆಯ ಇನ್‌ಚಾರ್ಜ್ ಪ್ರಶಾಂತ್ ಮಿಶ್ರಾ, ಎಸಿಪಿ ಬಾಬುಪುರ್ವ ಅಮರ್ನಾಥ್ ಯಾದವ್ ಸ್ಥಳಕ್ಕೆ ಭೇಟಿ ನೀಡಿ ಪೋಷಕರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.
ಬೀದಿನಾಯಿಗಳ ಹಾವಳಿಯ ಬಗ್ಗೆ ಹಲವು ಬಾರಿ ದೂರು ನೀಡಲಾಗಿದೆ. ಆದರೆ ಯಾರು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮೇಯರ್ ಪ್ರಮೀಳಾ ಪಾಂಡೆ ಪ್ರತಿಕ್ರಿಯಿಸಿದ್ದು, ಸಂಬಂಧಿಸಿದ ಮುನ್ಸಿಪಲ್ ಕಾರ್ಪೋರೇಷನ್ ಅಧಿಕಾರಿಗಳು ಈ ಬಗ್ಗೆ ವಿವರಣೆ ನೀಡಬೇಕು ಎಂದಿದ್ದಾರೆ.
#Watch: ಆಜಾನುಬಾಹು ವ್ಯಕ್ತಿಯ ಮೇಲೆ ದಾಳಿ ಮಾಡಿದ ರಕ್ಕಸ ಬೀದಿ ನಾಯಿಗಳು; ಇನ್ನು ಚಿಕ್ಕ ಮಕ್ಕಳ ಪಾಡೇನು?