ದೆಹಲಿಯಲ್ಲಿ 150 ಶಾಲೆಗಳಿಗೆ ಬಾಂಬ್ ಬೆದರಿಕೆ! ಉಗ್ರರ ಕೃತ್ಯ?
ಅತ್ಯಂತ ಕಂಡು ಕೇಳರಿಯದ ಸನ್ನಿವೇಶವೊಂದರಲ್ಲಿ ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ವಲಯವಾದ ಎನ್‌ಸಿಆರ್ ಪ್ರದೇಶದಲ್ಲಿ ಕನಿಷ್ಠ 150 ಶಾಲೆಗಳು ಬುಧವಾರ ಮುಂಜಾನೆ ಇ-ಮೇಲ್ ಮೂಲಕ ಒಂದೇ ರೀತಿಯ ಬಾಂಬ್ ಬೆದರಿಕೆ ಸ್ವೀಕರಿಸಿವೆ. ಇದರಿಂದ ಭಯಭೀಯತರಾದ ಪೋಷಕರು ಶಾಲೆಗಳತ್ತ ಧಾವಿಸಿದರು.
ನವದೆಹಲಿ (ಮೇ.2) : ಅತ್ಯಂತ ಕಂಡು ಕೇಳರಿಯದ ಸನ್ನಿವೇಶವೊಂದರಲ್ಲಿ ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ವಲಯವಾದ ಎನ್‌ಸಿಆರ್ ಪ್ರದೇಶದಲ್ಲಿ ಕನಿಷ್ಠ 150 ಶಾಲೆಗಳು ಬುಧವಾರ ಮುಂಜಾನೆ ಇ-ಮೇಲ್ ಮೂಲಕ ಒಂದೇ ರೀತಿಯ ಬಾಂಬ್ ಬೆದರಿಕೆ ಸ್ವೀಕರಿಸಿವೆ. ಇದರಿಂದ ಭಯಭೀಯತರಾದ ಪೋಷಕರು ಶಾಲೆಗಳತ್ತ ಧಾವಿಸಿ ಬಂದು ಸಾಮೂಹಿಕವಾಗಿ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ತಪಾಸಣೆ ಬಳಿಕ ಯಾವ ಶಾಲೆಯಲ್ಲೂ ಬಾಂಬ್ ಪತ್ತೆ ಆಗಿಲ್ಲ. ಹೀಗಾಗಿ ಇದು ಹುಸಿ ಕರೆ ಎಂದು ಸಾಬೀತಾಗಿದೆ. ಇದರ ಬೆನ್ನಲ್ಲೇ ತನಿಖೆ ವೇಳೆ ಭೀತಿಯನ್ನು ಸೃಷ್ಟಿಸುವ ಉದ್ದೇಶದಿಂದ ರಷ್ಯಾದಿಂದ ಇ-ಮೇಲ್ ಕಳುಹಿಸಲಾಗಿದೆ ಎಂದು ಗೊತ್ತಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಎಲ್ಲ ಇ-ಮೇಲ್ ಗಳೂ ಏಕರೀತಿಯ ಸಂದೇಶ ಹೊಂದಿವೆ.
ದುಷ್ಕರ್ಮಿಗಳು ಡಾರ್ಕ್ ನೆಟ್ ಬಳಸಿ ತಮ್ಮ ಗುರುತನ್ನು ಮರೆಮಾಚಿರುವ ಸಾಧ್ಯತೆಯೂ ಇದೆ. ಘಟನೆಯು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿರುವುದರಿಂದ ದೆಹಲಿ ಪೊಲೀಸರು ಐಪಿಸಿಯ ಕಠಿಣ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸುವ ಸಾಧ್ಯತೆಯಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚೆನ್ನೈನ 13 ಶಾಲೆಗಳಿಗೆ ಬಾಂಬ್ ಕರೆ, 'ಹುಸಿ ಬಾಂಬ್ ಬೆದರಿಕೆ' ಎಂದ ಪೊಲೀಸ್!
6ರಿಂದ 12ರವರೆಗೆ ಆತಂಕ:
ಬೆಳಗ್ಗೆ 6 ಗಂಟೆಯ ಸುಮಾರಿಗೇ ಸಾಕಷ್ಟು ಶಾಲೆಗಳು ಬೆದರಿಕೆ ಇ-ಮೇಲ್ ಸ್ವೀಕರಿಸಿವೆ. ಇದಾದ ನಂತರ ಶಾಲೆಗಳು ಒಂದೊಂದಾಗಿ ಇ-ಮೇಲ್‌ಗಳನ್ನು ಪಡೆದಿವೆ. ದೆಹಲಿ ಅಗ್ನಿಶಾಮಕ ಸೇವೆ ಪ್ರಕಾರ, ಬುಧವಾರ ಮಧ್ಯಾಹ್ನ 12 ಗಂಟೆಯವರೆಗೆ ವಿವಿಧ ಶಾಲೆಗಳಿಂದ ಕನಿಷ್ಠ 97 ತುರ್ತು ಕರೆಗಳನ್ನು ಸ್ವೀಕರಿಸಲಾಗಿದೆ. ಬೆಳಗ್ಗೆ 6 ಗಂಟೆಗೆ ಬಾಂಬ್ ಬೆದರಿಕೆ ಇ-ಮೇಲ್ ಬಗ್ಗೆ ಕರೆಗಳು ಬರಲಾರಂಭಿಸಿದವು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ನೋಯ್ಡಾ, ಗ್ರೇಟರ್ ನೋಯ್ಡಾ, ಘಾಜಿಯಾಬಾದ್ ಮತ್ತು ಗುರುಗ್ರಾಮದ ಅನೇಕ ಖಾಸಗಿ ಶಾಲೆಗಳಿಗೂ ಬಾಂಬ್ ಬೆದರಿಕೆ ಬಂದಿತ್ತು. ಪೂರ್ವ ದೆಹಲಿಯ 24 ಖಾಸಗಿ ಶಾಲೆಗಳು, ದಕ್ಷಿಣ ದೆಹಲಿಯ 18 ಶಾಲೆಗಳು, ಪಶ್ಚಿಮ ದೆಹಲಿಯ 21 ಶಾಲೆಗಳು ಮತ್ತು ಶಹದಾರದ 10 ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿದದದವು. ಆದರೆ ಸ್ಥಳೀಯ ಪೊಲೀಸರು ಅವುಗಳನ್ನು ಸುಳ್ಳು ಎಂದು ತಳ್ಳಿಹಾಕಿದ್ದಾರೆ.
ಶಾಲೆಗಳತ್ತ ಪೋಷಕರ ದೌಡು:
ಅನೇಕ ಶಾಲೆಗಳಲ್ಲಿ ಪೋಷಕರು ತಮ್ಮ ಮಕ್ಕಳನ್ನು ಶಾಲೆಗಳಿಂದ ವಾಪಸ್ ಕರೆದುಕೊಂಡು ಹೋಗಲು ಶಾಲೆಗಳ ಹೊರಗೆ ಗುಂಪುಗೂಡಿದರು. ಇದನ್ನು ಮನಗಂಡ ಕೇಂದ್ರ ಗೃಹ ಸಚಿವಾಲಯವು ಬೆದರಿಕೆ ಹುಸಿಯಂತೆ ತೋರುತ್ತಿರುವುದರಿಂದ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದೆ. ಬಾಂಬ್ ಬೆದರಿಕೆ ಬಂದಿರುವ ಎಲ್ಲಾ ಶಾಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದ್ದೇವೆ. ಆದರೆ ಏನೂ ಪತ್ತೆಯಾಗಿಲ್ಲ. ಇದು ಸುಳ್ಳು ಬೆದರಿಕೆ ಆಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ಬೆದೆರಿಕೆ ಮೇಲ್ ಸ್ವೀಕರಿಸಿದ ಮಾಡೆಲ್ ಟೌನ್‌ನ ಡಿಎವಿ ಶಾಲೆಗೆ ಭೇಟಿ ನೀಡಿದರು. ದೆಹಲಿ ಪೊಲೀಸರು ಬೆದರಿಕೆ ಇಮೇಲ್‌ಗಳ ಮೂಲವನ್ನು ಪತ್ತೆಹಚ್ಚಿದ್ದಾರೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿದೆ ಎಂದು ಭರವಸೆ ನೀಡಿದರು. ದೆಹಲಿ ಶಿಕ್ಷಣ ಸಚಿವ ಅತಿಶಿ ಅವರು ಶಾಲೆಗಳಲ್ಲಿ ಏನೂ ಕಂಡುಬಂದಿಲ್ಲ ಮತ್ತು ಪೋಷಕರು ಭಯಪಡಬೇಡಿ ಎಂದು ವಿನಂತಿಸಿದ್ದಾರೆ.
ಇ-ಮೇಲ್‌ನಲ್ಲಿ ಏನಿದೆ?
ಪ್ರತಿ ಶಾಲೆಗೆ ಮೇಲ್‌ನ ವಿಷಯವು ಒಂದೇ ಆಗಿದೆ. ಇದನ್ನು sawariim@mail.ru. ಇಮೇಲ್ ಐಡಿ ಹೊಂದಿರುವ ಬಳಕೆದಾರರಿಂದ ಕಳುಹಿಸಲಾಗಿದೆ.
‘ನೀವು ಎಲ್ಲಿ ಭೇಟಿಯಾಗುತ್ತೀರೋ ಅಲ್ಲಿ ನಿಮ್ಮನ್ನು ಕೊಲ್ಲುತ್ತೇವೆ. ನಿಮ್ಮನ್ನು ಯಾರು ಯಾವ ಸ್ಥಳದಲ್ಲಿ ಬಿಟ್ಟು ಹೋಗಿದ್ದಾರೋ ಅಲ್ಲಿಂದ ನಿಮ್ಮನ್ನು ಓಡಿಸಲಾಗುತ್ತದೆ. ಶಾಲೆಯಲ್ಲಿ ಹಲವು ಸ್ಫೋಟಕ ಸಾಧನಗಳಿವೆ. ಎಂದು ಎಲ್ಲಾ ಶಾಲೆಗಳಿಗೆ ಒಂದೇ ರೀತಿಯ ಇಮೇಲ್ ಕಳುಹಿಸಲಾಗಿದೆ. ಇದು ಶಾಲಾ ಮಕ್ಕಳನ್ನು ಉದ್ದೇಶಿಸಿಯೇ ಕಳಿಸಲಾಗಿದೆ ಎಂದು ಹೇಳಲಾಗಿದೆ.
ಬೆಂಗಳೂರು ಏರ್‌ಪೋರ್ಟ್: ಚೆಕ್ಕಿಂಗ್ ವೇಳೆ ಬಾಂಬ್ ಇದೆ ಎಂದು ಜೋಕ್! ಯುವಕನ ಬಂಧನ
ಡಿ.1ರಂದು ಬೆಂಗಳೂರಿನ 68 ಶಾಲೆಗೆ ಬಂದಿತ್ತು ಕರೆ
ಬೆಂಗಳೂರಿನ 48 ಹಾಗೂ ಹೊರವಲಯದ 20 ಸೇರಿ 68 ಶಾಲೆಗಳಿಗೆ ಡಿ.1ರಂದು ಇದೇ ಮಾದರಿಯ ಬೆದರಿಕೆ ಇ-ಮೇಲ್ ಬಂದಿತ್ತು. ಬಳಿಕ ಅದು ಹುಸಿ ಎಂದು ಸಾಬೀತಾಗಿತ್ತು. ಅದನ್ನು kharijites@beeble.com ನಿಂದ ಸ್ವೀಕರಿಸಲಾಗಿತ್ತು. ಈ ಇ-ಮೇಲ್ ನಗರದಲ್ಲಿ ಭಾರಿ ಆತಂಕ ಸೃಷ್ಟಿಸಿತ್ತು.