Asianet Suvarna News Asianet Suvarna News

ಮೋದಿ ಜನ್ಮದಿನಕ್ಕೆ ದೇಶಾದ್ಯಂತ ‘ವಿವಿಧತೆಯಲ್ಲಿ ಏಕತೆ’ ಉತ್ಸವ

ಪ್ರಧಾನಿ ನರೇಂದ್ರ ಮೋದಿ ಅವರ 72ನೇ ಜನ್ಮದಿನವನ್ನು ವಿಶಿಷ್ಟವಾಗಿ ಆಚರಿಸಲು ಬಿಜೆಪಿ ಮುಂದಾಗಿದೆ. 15 ದಿನಗಳ ‘ವಿವಿಧತೆಯಲ್ಲಿ ಏಕತೆ’ ಉತ್ಸವವನ್ನು (ಯುನಿಟಿ ಇನ್‌ ಡೈವರ್ಸಿಟಿ) ದೇಶದ ಎಲ್ಲ ಜಿಲ್ಲೆಗಳಲ್ಲಿ ಆಚರಿಸಲು ನಿರ್ಧರಿಸಿದೆ. 

BJP to organise unity in diversity festivals in all districts to mark PM Modis birthday gvd
Author
First Published Sep 2, 2022, 4:00 AM IST

ನವದೆಹಲಿ (ಸೆ.02): ಪ್ರಧಾನಿ ನರೇಂದ್ರ ಮೋದಿ ಅವರ 72ನೇ ಜನ್ಮದಿನವನ್ನು ವಿಶಿಷ್ಟವಾಗಿ ಆಚರಿಸಲು ಬಿಜೆಪಿ ಮುಂದಾಗಿದೆ. 15 ದಿನಗಳ ‘ವಿವಿಧತೆಯಲ್ಲಿ ಏಕತೆ’ ಉತ್ಸವವನ್ನು (ಯುನಿಟಿ ಇನ್‌ ಡೈವರ್ಸಿಟಿ) ದೇಶದ ಎಲ್ಲ ಜಿಲ್ಲೆಗಳಲ್ಲಿ ಆಚರಿಸಲು ನಿರ್ಧರಿಸಿದೆ. ಸೆ. 17ರಂದು ಮೋದಿಯವರ ಜನ್ಮದಿನದಂದು ಆರಂಭವಾಗುವ ಈ ಉತ್ಸವ ಅ. 2 ಗಾಂಧಿ ಜಯಂತಿಯಂದು ಮುಕ್ತಾಯವಾಗಲಿದೆ. ಈ 15 ದಿನಗಳ ಕಾಲ ಬಿಜೆಪಿ ದೇಶಾದ್ಯಂತ ಸೇವಾ ಅಭಿಯಾನವನ್ನೂ ನಡೆಸಲಿದೆ.

ಏಕ ಭಾರತ, ಶ್ರೇಷ್ಠ ಭಾರತ: ಪ್ರತಿ ಜಿಲ್ಲೆಯಲ್ಲಿರುವ ಬಿಜೆಪಿ ಕಾರ್ಯಕರ್ತರು ವಿವಿಧತೆಯಲ್ಲಿ ಏಕತೆ ಉತ್ಸವವನ್ನು ಆಯೋಜನೆ ಮಾಡಲಿದ್ದು, ಜನ ಸಮುದಾಯಕ್ಕೆ ‘ಏಕ ಭಾರತ ಶ್ರೇಷ್ಠ ಭಾರತ’ ಎಂಬ ಸಂದೇಶವನ್ನು ಹಂಚಲಿದ್ದಾರೆ. ಈ ಉತ್ಸವದ ಭಾಗವಾಗಿ ರಾಜ್ಯದ ಬಿಜೆಪಿ ಘಟಕಗಳು ತಮಗಿಂತ ವಿಭಿನ್ನವಾಗಿರುವ ಬೇರೊಂದು ರಾಜ್ಯವನ್ನು ಗುರುತಿಸಿ, ಒಂದು ದಿನದ ಮಟ್ಟಿಗೆ ಆ ರಾಜ್ಯದ ಭಾಷೆ ಹಾಗೂ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಲು ಸೂಚಿಸಲಾಗಿದೆ. ಈ ಉತ್ಸವವನ್ನು ಆಚರಿಸಿದ್ದರ ಬಗ್ಗೆ ಚಿತ್ರ ಹಾಗೂ ಮಾಹಿತಿಯನ್ನು ಪ್ರಧಾನ ಮಂತ್ರಿಯವರ ನಮೋ ಆ್ಯಪ್‌ನಲ್ಲಿ ಅಪಲೋಡ್‌ ಮಾಡಲು ಸೂಚನೆ ನೀಡಲಾಗಿದ್ದು, ಅತ್ಯುತ್ತಮವಾಗಿ ಉತ್ಸವ ಆಚರಿಸುವ 5 ರಾಜ್ಯ ಬಿಜೆಪಿ ಘಟಕಗಳಿಗೆ ವಿಶೇಷ ಬಹುಮಾನವನ್ನೂ ಘೋಷಿಸಲಾಗಿದೆ. ಅಭಿಯಾನದ ಮೇಲ್ವಿಚಾರಣೆ ನಡೆಸಲು ಬಿಜೆಪಿ ಮುಖ್ಯ ಕಾರ್ಯದರ್ಶಿ ಅರುಣ್‌ ಸಿಂಗ್‌ ನೇತೃತ್ವದಲ್ಲಿ 8 ಜನರ ಕೇಂದ್ರ ಸಮಿತಿಯನ್ನು ಬಿಜೆಪಿ ರಚಿಸಿದೆ.

700 ಕೋಟಿ ವೆಚ್ಚದ ಕೊಚ್ಚಿ ಮೆಟ್ರೋ ರೈಲು ಉದ್ಘಾಟನೆ ಮಾಡಲಿರುವ ಪ್ರಧಾನಿ ಮೋದಿ

ಸೇವಾ ದಿವಸ: ಕಳೆದ ಹಲವಾರು ವರ್ಷಗಳಿಂದ ಬಿಜೆಪಿ ಪ್ರಧಾನಿ ಮೋದಿಯವರ ಜನ್ಮದಿನವನ್ನು ‘ಸೇವಾ ದಿವಸ’ ಎಂದು ಆಚರಿಸುತ್ತ ಬಂದಿದೆ. ಈ ಹಿನ್ನೆಲೆಯಲ್ಲಿ ಜಲ ಸಂರಕ್ಷಣೆ ಹಾಗೂ ಸ್ವಚ್ಛತಾ ಅಭಿಯಾನ, ಗಿಡಗಳನ್ನು ನೆಡುವ ಕಾರ್ಯಕ್ರಮ, ಅಂಗವಿಕಲರ ನೆರವಿಗಾಗಿ ಸಾಧನಗಳ ವಿತರಣೆ, ಸ್ಥಳೀಯ ಉತ್ಪನ್ನಗಳ ಪ್ರಚಾರ, ಉಚಿತ ಆರೋಗ್ಯ ಶಿಬಿರ ಹಾಗೂ ರಕ್ತದಾನ ಶಿಬಿರ ಮೊದಲಾದ ಕಾರ್ಯಕ್ರಮಗಳನ್ನು ನಡೆಸಲು ನಿರ್ಧರಿಸಲಾಗಿದೆ. ಈ ಅಭಿಯಾನದ ಭಾಗವಾಗಿ ಬಿಜೆಪಿ ಕಾರ್ಯಕರ್ತರು ಹಾಗೂ ಸಾಮಾನ್ಯ ಜನರಿಗೆ ಅ. 2ರಂದು ಖಾದಿ ತೊಡಲು ಹಾಗೂ ಸ್ಥಳೀಯ ಉತ್ಪನ್ನಗಳನ್ನು ಬಳಸಲು ಕರೆ ನೀಡಲಾಗಿದೆ.

ರಾಜ್ಯ ನಾಯಕರ ಜತೆ ಪ್ರಧಾನಿ ಮೋದಿ ಸಭೆ?: ವಿವಿಧ ಅಭಿವೃದ್ಧಿ ಕಾಮಗಾರಿಗಳ ಚಾಲನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಮಂಗಳೂರಿಗೆ ಆಗಮಿಸುತ್ತಿದ್ದು, ಬಿಜೆಪಿ ರಾಜ್ಯ ನಾಯಕರೊಂದಿಗೆ ಸಭೆ ನಡೆಸುವ ಸಾಧ್ಯತೆಯಿದೆ. ಈ ಬಗ್ಗೆ ಇದುವರೆಗೆ ಅಧಿಕೃತ ನಿರ್ಧಾರ ಹೊರಬಿದ್ದಿಲ್ಲವಾದರೂ ಸಭೆ ನಡೆಸುವ ಕುರಿತಂತೆ ಪಕ್ಷದ ರಾಜ್ಯ ಘಟಕದ ವತಿಯಿಂದ ಪ್ರಧಾನಿ ಕಚೇರಿಯನ್ನು ಸಂಪರ್ಕಿಸಿ ಪ್ರಯತ್ನ ನಡೆಸಲಾಗುತ್ತಿದೆ. ಬುಧವಾರ ಅಥವಾ ಗುರುವಾರ ಸ್ಪಷ್ಟಮಾಹಿತಿ ಹೊರಬೀಳಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಭಜನೆ, ಭಕ್ತಿಗೀತೆ ಹಾಡೋದ್ರಿಂದ ಅಪೌಷ್ಟಿಕತೆಯನ್ನು ಕಡಿಮೆ ಮಾಡಬಹುದು ಎಂದು ಪ್ರಧಾನಿ ಮೋದಿ ಹೇಳಿಲ್ಲ!

ಪಕ್ಷದ ಹಿರಿಯ ನಾಯಕರನ್ನು ಒಳಗೊಂಡ ಕೋರ್‌ ಕಮಿಟಿ ಸದಸ್ಯರೂ ಸೇರಿದಂತೆ ಹಲವು ಹಿರಿಯ ಮುಖಂಡರಿಗೆ ಮೌಖಿಕವಾಗಿ ರಾಜ್ಯ ಘಟಕ ಮಾಹಿತಿ ನೀಡಿದೆ. ಆದರೆ, ಇದು ಕೇವಲ ನಾಯಕರ ವಿಶೇಷ ಸಭೆಯೋ ಅಥವಾ ಕೋರ್‌ ಕಮಿಟಿ ಸದಸ್ಯರ ಸಭೆಯೋ ಎಂಬುದು ಇನ್ನೂ ತೀರ್ಮಾನವಾಗಿಲ್ಲ. ಸಾಮಾನ್ಯವಾಗಿ ಪ್ರಧಾನಿ ಮೋದಿ ಅವರು ಅಧಿಕೃತ ಭೇಟಿಗೆ ಆಗಮಿಸಿದ ವೇಳೆ ಪಕ್ಷದ ನಾಯಕರ ಸಭೆ ನಡೆಸಿದ್ದು ತೀರಾ ಕಡಮೆ. ಚುನಾವಣಾ ಪ್ರಚಾರಕ್ಕೆ ಆಗಮಿಸಿದ ವೇಳೆ ನಾಯಕರೊಂದಿಗೆ ಸಭೆ ನಡೆಸಿದ ಉದಾಹರಣೆಗಳಿವೆ. ಹೀಗಾಗಿ, ಮಂಗಳೂರು ಭೇಟಿ ವೇಳೆ ಪಕ್ಷದ ನಾಯಕರೊಂದಿಗೆ ಸಭೆ ನಡೆಸುವ ಬಗ್ಗೆ ಅನುಮಾನವಿದೆ ಎನ್ನಲಾಗುತ್ತಿದೆ.

Follow Us:
Download App:
  • android
  • ios