ಸಂಸತ್ತಲ್ಲೂ ಈಗ ಏಕರೂಪ ನಾಗರಿಕ ಸಂಹಿತೆ ಬಗ್ಗೆ ಚರ್ಚೆ: ಖಾಸಗಿ ಮಸೂದೆ ಮಂಡಿಸಿದ ಬಿಜೆಪಿಗ

ಸಂಸತ್ತಲ್ಲೂ ಈಗ ಏಕರೂಪ ನಾಗರಿಕ ಸಂಹಿತೆ ಬಗ್ಗೆ ಚರ್ಚೆಯಾಗಿದ್ದು, ರಾಜ್ಯಸಭೆಯಲ್ಲಿ ಬಿಜೆಪಿ ಸಂಸದರೊಬ್ಬರು ಖಾಸಗಿ ಮಸೂದೆ ಮಂಡಿಸಿದ್ದಾರೆ. ಮಸೂದೆ ಮಂಡನೆ ಪರ ಹೆಚ್ಚು ಸದಸ್ಯರಿಂದ ಮತ ಬಂದಿದೆ.

bjp member moves private bill on uniform civil code in rajyasabha resistance from opposition ash

ನವದೆಹಲಿ: ವಿವಾದಾತ್ಮಕ ‘ಏಕರೂಪ ನಾಗರಿಕ ಸಂಹಿತೆ’ (Uniform Civil Code) ರೂಪಿಸಲು ಗುಜರಾತ್‌ (Gujarat), ಉತ್ತರಾಖಂಡ (Uttarakhand) ಹಾಗೂ ಹಿಮಾಚಲ ಪ್ರದೇಶದ (Himachal Pradesh) ಬಿಜೆಪಿ (BJP) ಸರ್ಕಾರಗಳು ಚಾಲನೆ ನೀಡಿದ ಬೆನ್ನಲ್ಲೇ, ಕೇಂದ್ರ ಸರ್ಕಾರದ (Central Government) ಮಟ್ಟದಲ್ಲೂ ಈ ಕುರಿತ ಯತ್ನಗಳು ಆರಂಭವಾಗಿವೆ. ರಾಜ್ಯಸಭೆಯಲ್ಲಿ (Rajya Sabha) ಬಿಜೆಪಿ ಸಂಸದ ಕಿರೋಡಿ ಲಾಲ್‌ ಮೀನಾ ಅವರು, ‘ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡುವುದರ ಕುರಿತಾಗಿ ಅಧ್ಯಯನ ನಡೆಸಲು ಸಮಿತಿ ರಚನೆ ಮಾಡಬೇಕು’ ಎಂದು ಖಾಸಗಿ ಮಸೂದೆ ಮಂಡಿಸಿದ್ದಾರೆ.

‘ಏಕರೂಪ ನಾಗರಿಕ ಸಂಹಿತೆ’ ಎಂಬುದು ಬಿಜೆಪಿ ಪ್ರಣಾಳಿಕೆಯಲ್ಲಿ ಪ್ರಮುಖ ಅಂಶವಾಗಿತ್ತು. ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಕೂಡ ‘ಎಲ್ಲರ ಸಮ್ಮತಿ ಪಡೆದು ಸಂಹಿತೆ ಜಾರಿಗೆ ಯತ್ನಿಸಲಾಗುವುದು’ ಎಂದಿದ್ದರು. ಇದರ ಬೆನ್ನಲ್ಲೇ ಆಡಳಿತಾರೂಢ ಪಕ್ಷದ ಸದಸ್ಯರು ಖಾಸಗಿ ಮಸೂದೆ ಮಂಡಿಸಿದ್ದು ಗಮನಾರ್ಹವಾಗಿದೆ.

ಇದನ್ನು ಓದಿ: ಮಹಿಳೆಗೂ ಒಂದಕ್ಕಿಂತ ಹೆಚ್ಚು ಮದುವೆಯಾಗೋ ಹಕ್ಕು ಕೊಡಿ: ಮುಸಲ್ಮಾನ ವೈಯಕ್ತಿಕ ಕಾನೂನು ವಿರುದ್ಧ ಜಾವೇದ್‌ ಅಖ್ತರ್ ಕಿಡಿ

ವಿರೋಧದ ನಡುವೆ ಮಂಡನೆ:
‘ಏಕರೂಪ ನಾಗರಿಕ ಸಂಹಿತೆ ಮಸೂದೆ-2020’ (The Uniform Civil Code in India Bill, 2020) ಹೆಸರಿನ ಖಾಸಗಿ ಮಸೂದೆಯನ್ನು ಮೀನಾ ಅವರು ಮಂಡಿಸುತ್ತಿದ್ದಂತೆಯೇ ಕಾಂಗ್ರೆಸ್‌, ಸಿಪಿಎಂ, ಟಿಎಂಸಿ ಮುಂತಾದ ಪಕ್ಷಗಳು ಪ್ರತಿಭಟನೆ ನಡೆಸಿದವು. ‘ಈ ಮಸೂದೆ ದೇಶದ ಐಕ್ಯೆತೆಯನ್ನು ನಾಶ ಮಾಡುತ್ತದೆ. ಇದು ಅಸಾಂವಿಧಾನಿಕ ಮಸೂದೆ’ ಎಂಬ ಕಾರಣವನ್ನು ನೀಡಿ ತೀವ್ರವಾಗಿ ವಿರೋಧಿಸಿದವು. ಆದರೆ ಇದಕ್ಕೆ ತಿರುಗೇಟು ನೀಡಿದ ಕೇಂದ್ರ ಸಚಿವ, ಸಭಾ ನಾಯಕ ಪೀಯೂಷ್‌ ಗೋಯಲ್‌, ‘ಖಾಸಗಿ ಮಸೂದೆ ಮಂಡನೆ ಸದಸ್ಯರ ಹಕ್ಕು. ಮಸೂದೆ ಬಗ್ಗೆ ಚರ್ಚೆ ನಡೆಯಲಿ’ ಎಂದರು.

ಹಾಗಾಗಿ ಈ ಮಸೂದೆಯನ್ನು ಸಭಾಧ್ಯಕ್ಷ ಜಗದೀಪ್‌ ಧನಕರ್‌ ಅವರು ಮತಕ್ಕೆ ಹಾಕಿದರು. ಈ ಮಸೂದೆಯ ಪರವಾಗಿ 63 ಹಾಗೂ ವಿರುದ್ಧವಾಗಿ 23 ಮತಗಳು ಚಲಾವಣೆಯಾದವು. ಈ ಹಿಂದೆಯೂ ಈ ಮಸೂದೆಯನ್ನು ಮಂಡಿಸಲು ಲಿಸ್ಟ್‌ ಮಾಡಿದ್ದರೂ ಸಹ ರಾಜ್ಯಸಭೆಯಲ್ಲಿ ಅದು ಪಾಸ್‌ ಆಗಿರಲಿಲ್ಲ.

ಇದನ್ನೂ ಓದಿ: ಸಾಧ್ಯವಾದಷ್ಟು ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ: ಬಿಜೆಪಿ ಅಧ್ಯಕ್ಷ ನಡ್ಡಾ ಘೋಷಣೆ

ಏನಿದು ಖಾಸಗಿ ಮಸೂದೆ?:
ಸರ್ಕಾರಗಳು ಮಂಡಿಸುವ ಮಸೂದೆಯನ್ನು ಸರ್ಕಾರಿ ಮಸೂದೆಗಳು ಎನ್ನುತ್ತಾರೆ. ಇದನ್ನು ಸಚಿವರೇ ಮಂಡಿಸಬೇಕು. ಖಾಸಗಿ ಮಸೂದೆಗಳನ್ನು ಸಂಸದರೂ ಮಂಡಿಸಬಹುದು. ಇದಕ್ಕೆ ಪ್ರತಿ ಶುಕ್ರವಾರ ಮಾತ್ರ ಅವಕಾಶವಿರುತ್ತದೆ. ಆದರೆ 1956ರಿಂದ 1970ರವರೆಗೆ 14 ಖಾಸಗಿ ಮಸೂದೆಗಳನ್ನು ಸದನ ಅಂಗೀಕರಿಸಿದ್ದನ್ನು ಬಿಟ್ಟರೆ ಕಳೆದ 52 ವರ್ಷದಲ್ಲಿ ಒಂದೂ ಖಾಸಗಿ ವಿಧೇಯಕವನ್ನು ಸರ್ಕಾರ ಅಂಗೀಕರಿಸಿಲ್ಲ.

ಮುಂದೇನು?

  • ಖಾಸಗಿ ಮಸೂದೆ ಮಂಡಿಸಲು ಸಂಸದರಿಗೆ ಅವಕಾಶ ಇದೆ. ಅದರಂತೆ ಮಸೂದೆ ಮಂಡನೆಯಾಗಿದೆ
  • ವಿಧೇಯಕದ ಆಶಯದ ಪರ ಸರ್ಕಾರ ಇದ್ದರೆ ಅದನ್ನು ಕೈಗೆತ್ತಿಕೊಂಡು ತನ್ನದೇ ಮಸೂದೆ ರೂಪಿಸಬಹುದು
  • ವಿವಿಧ ಬಿಜೆಪಿ ಸರ್ಕಾರಗಳು ಈಗಾಗಲೇ ಏಕರೂಪ ನಾಗರಿಕ ಸಂಹಿತೆ ಜಾರಿ ಕುರಿತು ತಯಾರಿ ನಡೆಸಿವೆ
  • ಬಿಜೆಪಿ ಕೂಡ ಲೋಕಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಏಕರೂಪ ನಾಗರಿಕ ಸಂಹಿತೆ ಭರವಸೆ ನೀಡಿತ್ತು
  • ಹೀಗಾಗಿ ಸರ್ಕಾರ ಖಾಸಗಿ ಮಸೂದೆ ವಿಚಾರವಾಗಿ ಯಾವ ನಿಲುವು ತಳೆಯುತ್ತದೆ ಎಂಬುದು ಕುತೂಹಲಕಾರಿ

ಇದನ್ನೂ ಓದಿ: ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಬಗ್ಗೆ ಶೀಘ್ರ ನಿರ್ಧಾರ: ಸಿಎಂ ಬೊಮ್ಮಾಯಿ

Latest Videos
Follow Us:
Download App:
  • android
  • ios