ರಾಜ್ಯದಲ್ಲೂ ಏಕರೂಪದ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರುವ ಸಂಬಂಧ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. 

ಶಿವಮೊಗ್ಗ/ಬೆಂಗಳೂರು (ನ.26): ರಾಜ್ಯದಲ್ಲೂ ಏಕರೂಪದ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರುವ ಸಂಬಂಧ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಜೊತೆಗೆ ಈ ಬಗ್ಗೆ ಶೀಘ್ರದಲ್ಲೇ ದೃಢ ನಿರ್ಧಾರ ಕೈಗೊಳ್ಳಲಾಗುವುದು ಎಂದೂ ಅವರು ಹೇಳಿದ್ದಾರೆ. ಶುಕ್ರವಾರ ಶಿವಮೊಗ್ಗದ ಕಿಮ್ಮನೆ ಗಾಲ್ಫ್ ರೆಸಾರ್ಟ್‌ನಲ್ಲಿ ರಾಜ್ಯ ಬಿಜೆಪಿ ವತಿಯಿಂದ ಆಯೋಜಿಸಿದ್ದ ಪ್ರಶಿಕ್ಷಣ ವರ್ಗದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಇದೀಗ ಎಲ್ಲ ಕಡೆಗಳಲ್ಲಿಯೂ ಏಕರೂಪ ನಾಗರಿಕ ಸಂಹಿತೆ ಕುರಿತು ಚರ್ಚೆಯಾಗುತ್ತಿದೆ. 

ನಮ್ಮ ಸರ್ಕಾರ ಕೂಡ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ಇದನ್ನು ಜಾರಿಗೆ ತರುವ ನಿಟ್ಟಿನಲ್ಲಿ ಗಮನ ಹರಿಸಿದ್ದೇವೆ ಎಂದರು. ಏಕರೂಪ ನಾಗರಿಕ ಸಂಹಿತೆ ಎಲ್ಲ ಸಮಾಜ ಮತ್ತು ಧರ್ಮದವರಲ್ಲಿ ಸಮಾನತೆ ತರುತ್ತದೆ. ಎಲ್ಲ ಜನರಿಗೆ ಅನ್ವಯ ಆಗುವ ಸಾಮಾನ್ಯ ನಿಯಮ ಮತ್ತು ಕಾನೂನು ಜಾರಿಗೊಳಿಸುವ ವಿಷಯದಲ್ಲಿ ನಮ್ಮ ಸರ್ಕಾರ ಹಿಂದೆ ಮುಂದೆ ನೋಡುವುದಿಲ್ಲ. ಈ ವಿಷಯದಲ್ಲಿ ಶೀಘ್ರದಲ್ಲೇ ದೃಢ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕಾಂಗ್ರೆಸ್ ಮುಳುಗುತ್ತಿರುವ ಹಡಗು, ಸಿದ್ದರಾಮಯ್ಯ ಅಡ್ರೆಸ್ ಇಲ್ಲದಂತಾಗುತ್ತಾರೆ: ಬಿಎಸ್‌ವೈ

ಅಮಿತ್‌ ಶಾ ಹೇಳಿಕೆ ಮರುದಿನ: ಗುರುವಾರವಷ್ಟೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು, ಈ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವಲ್ಲಿ ಬಿಜೆಪಿ ಬದ್ಧವಾಗಿದೆ. ಎಲ್ಲರೊಂದಿಗೆ ಸಮಾಲೋಚನೆ ಹಾಗೂ ಪ್ರಜಾಸತ್ತಾತ್ಮಕ ಚರ್ಚೆ ನಡೆಸಿದ ಬಳಿಕ ಸಂಹಿತೆ ಜಾರಿಗೊಳಿಸುವ ಉದ್ದೇಶವಿದೆ ಎಂದು ಹೇಳಿಕೆ ನೀಡಿದ್ದರು. ಅವರ ಹೇಳಿಕೆ ಮರುದಿನವೇ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ಪ್ರಸ್ತಾಪವನ್ನು ಮುಖ್ಯಮಂತ್ರಿ ಬೊಮ್ಮಾಯಿ ಮಾಡಿದ್ದಾರೆ. ಉತ್ತರ ಭಾರತದ ಬಿಜೆಪಿ ಆಡಳಿತವಿರುವ ಕೆಲವು ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಅಧಿಕೃತ ಪ್ರಯತ್ನ ನಡೆದಿರುವ ಬೆನ್ನಲ್ಲೇ ಕರ್ನಾಟಕದಲ್ಲೂ ಈ ಸಂಹಿತೆ ಜಾರಿಗೆ ಮುಂದಾಗಬೇಕು ಎಂದು ಆಡಳಿತಾರೂಢ ಬಿಜೆಪಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿತ್ತು.

ಯುವತಿಯ ಆಡಿಯೋ ವೈರಲ್ ವಿಚಾರ: ಪೊಲೀಸ್ ಕಮಿಷನರ್‌ಗೆ ದೂರು ನೀಡಿದ ನಟ ವಿದ್ಯಾಭರಣ

3 ರಾಜ್ಯಗಳಲ್ಲಿ ಈಗಾಗಲೇ ಕ್ರಮ: ಈಗಾಗಲೇ ಉತ್ತರಾಖಂಡ, ಹಿಮಾಚಲ ಪ್ರದೇಶ ಹಾಗೂ ಗುಜರಾತ್‌ ಸರ್ಕಾರಗಳು ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ದಿಕ್ಕಿನಲ್ಲಿ ಮೊದಲ ಹೆಜ್ಜೆ ಇರಿಸಿವೆ. ಇತ್ತೀಚೆಗಷ್ಟೇ ಗುಜರಾತ್‌ ವಿಧಾನಸಭೆ ಚುನಾವಣೆ ಘೋಷಣೆಯಾಗುವ ಕೆಲದಿನಗಳ ಮೊದಲು ಈ ಏಕರೂಪ ನಾಗರಿಕ ಸಂಹಿತೆ ಜಾರಿ ತರುವ ಉದ್ದೇಶದಿಂದ ಅಧ್ಯಯನ ನಡೆಸಲು ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚಿಸುವುದಾಗಿ ಘೋಷಿಸಿತ್ತು. ಅದಕ್ಕೂ ಮೊದಲು ಉತ್ತರಾಖಂಡ ಹಾಗೂ ಹಿಮಾಚಲಪ್ರದೇಶ ಸರ್ಕಾರಗಳು ಸಮಿತಿ ರಚನೆ ಮಾಡಿದ್ದವು. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವೂ ಹೆಜ್ಜೆ ಇಡಬೇಕು ಎಂಬುದು ರಾಜ್ಯ ಬಿಜೆಪಿಯ ಒತ್ತಾಸೆಯಾಗಿದೆ. ಈ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಮುಖ್ಯಮಂತ್ರಿ ಬೊಮ್ಮಾಯಿ ಅವರೊಂದಿಗೆ ಚರ್ಚೆಯನ್ನೂ ನಡೆಸಿದ್ದರು ಎನ್ನಲಾಗಿದೆ.