ಹೈದರಾಬಾದ್(ನ.12): ಇಡೀ ದೇಶ ಅಯೋಧ್ಯೆ ಭೂವಿವಾದ ಕುರಿತಾದ ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸಿದೆ. ಆದರೆ ಎಐಎಂಐಎಂ ಸಂಸದ ಅಸದುದ್ದೀನ್ ಒವೈಸಿ ಮಾತ್ರ ಸುಪ್ರೀಂಕೋರ್ಟ್ ತೀರ್ಪನ್ನು ಒಪ್ಪಿಕೊಂಡಿಲ್ಲ.

ಅಯೋಧ್ಯೆ ಕುರಿತಾದ ಸುಪ್ರೀಂಕೋರ್ಟ್ ತೀರ್ಪನ್ನು ಒಪ್ಪಲು ಸಾಧ್ಯವಿಲ್ಲ ಎಂದಿರುವ ಒವೈಸಿ, ಮಸೀದಿ ನಿರ್ಮಾಣಕ್ಕಾಗಿ ಸುಪ್ರೀಂ ನೀಡಿರುವ 5 ಎಕರೆ ಭೂಮಿಯ ಭಿಕ್ಷೆ ನಮಗೆ ಬೇಕಿಲ್ಲ ಎಂದು ಹೇಳಿದ್ದರು.

5 ಎಕರೆ ಭೂಮಿಯ ಭಿಕ್ಷೆ ಬೇಡ: ಇದು ಒವೈಸಿ ರಿಯಾಕ್ಷನ್!

ಒವೈಸಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ತೆಲಂಗಾಣ ಬಿಜೆಪಿ ನಾಯಕ ಎನ್‌ವಿ ಸುಭಾಷ್, ಒವೈಸಿ ಅವರ ಸುಪ್ರೀಂಕೋರ್ಟ್ ತೀರ್ಪಿನ ವ್ಯಾಖ್ಯಾನ ಖಂಡನೀಯ ಎಂದು ಜರೆದಿದ್ದಾರೆ.

ಒವೈಸಿ ಮತ್ತವರ ಪಕ್ಷಕ್ಕೆ ದೇಶ ಒಡೆಯುವ ಅಜೆಂಡಾವಿದ್ದು, ಅದರಂತೆ ಸಮಾಜದ ಏಕತೆ ಒಡೆಯಲು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಸುಭಾಷ್ ಆರೋಪಿಸಿದ್ದಾರೆ.

ರಾಮನಿಗೆ ದೊರೆತ ಅಯೋಧ್ಯೆ: ಶತಮಾನಗಳ ನಂಬಿಕೆಗೆ ಸುಪ್ರೀಂ ತೀರ್ಪಿನ ನೈವೇದ್ಯೆ!

ಸುಪ್ರೀಂಕೋರ್ಟ್ ತೀರ್ಪನ್ನು ಇಡೀ ದೇಶವೇ ಸ್ವಾಗತಿಸಿದೆ. ಕೋಮು ಸಾಮರಸ್ಯಕ್ಕೆ ಸುಪ್ರೀಂ ಆದೇಶ ಸಹಾಯಕಾರಿಯಾಗಿದೆ. ಆದರೆ ಒವೈಸಿ ಮಾತ್ರ ಇದರಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಸುಭಾಷ್ ಹರಿಹಾಯ್ದಿದ್ದಾರೆ.

ಇಡೀ ವಿಶ್ವದ ಕುತೂಹಲ ಕೆರಳಿಸಿದ್ದ ಅಯೋಧ್ಯೆ-ಬಾಬರಿ ಮಸೀದಿ ಭೂವಿವಾದದ ಕುರಿತು ಸುಪ್ರೀಂಕೋರ್ಟ್ ಕಳೆದ ನ.09 ರಂದು ತೀರ್ಪು ನೀಡಿತ್ತು. ವಿವಾದಿತ ಸ್ಥಳದಲ್ಲಿ ಮಂದಿರ ಕಟ್ಟಲು ಅನುಮತಿ ನೀಡಿದ್ದ ಘನ ನ್ಯಾಯಾಲಯ, ಬೇರೊಂದು ಪ್ರದೇಶದಲ್ಲಿ ಮಸೀದಿ ನಿರ್ಮಾಣಕ್ಕೆ 5 ಎಕರೆ ಭೂಮಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿತ್ತು.

ಬಾಬರ್ ಅಯೋಧ್ಯೆ(5 ಎಕರೆ)ಯಲ್ಲೇ ಇರಲಿದ್ದಾನೆ: ಸಹೋದರರ ನಂಬಿಕೆ ಮುಖ್ಯ ಎಂದ ಸುಪ್ರೀಂ!