ನವದೆಹಲಿ(ನ.09): ದೇಶ ಕಾತರದಿಂದ ಕಾಯುತ್ತಿದ್ದ ಐತಿಹಾಸಿಕ ಅಯೋಧ್ಯೆ-ಬಾಬರಿ ಮಸೀದಿ ಭೂವಿವಾದದ ತೀರ್ಪನ್ನು ಕೊನೆಗೂ ಸುಪ್ರೀಂಕೋರ್ಟ್ ಪ್ರಕಟಿಸಿದೆ. ವಿವಾದಿತ 2.77 ಎಕರೆ ಜಾಗವನ್ನು ರಾಮಲಲ್ಲಾಗೆ  ವಹಿಸಿ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದೆ. ಈ ಮೂಲಕ ವಿವಾದಿತ ಜಾಗಕ್ಕಾಗಿ ಹೋರಾಡುತ್ತಿದ್ದ ಹಿಂದೂಗಳ ನಂಬಿಕೆಗೆ ಐತಿಹಾಸಿಕ ಜಯ ಲಭಿಸಿದೆ. ಆದರೆ, ಬಾಬರಿ ಮಸೀದಿ ಪ್ರತ್ಯೇಕ ಜಾಗವನ್ನು ಕಲ್ಪಿಸಲು ಕೋರ್ಟ್ ಸರಕಾರಕ್ಕೆ ಸೂಚಿಸಿದೆ. 

ಶಾಂತಿಗೆ ನೀಡಿ ಆದ್ಯತೆ

- ವಿವಾದಿತ ಸ್ಥಳದಲ್ಲಿ ರಾಮನ ಜನನ ಸತ್ಯ ಎಂದಿರುವ ಸುಪ್ರೀಂ ಕೋರ್ಟ್, ಕಾನೂನಾತ್ಮಕ ನಿಯಮ ರೂಪಿಸಿ ಮಂದಿರ ನಿರ್ಮಾಣಕ್ಕೆ ಮುಂದಾಗುವಂತೆ ಸರ್ಕಾರಕ್ಕೆ ಸ್ಪಷ್ಟ ನಿರ್ದೇಶಿಸಿದೆ.

- ಪಂಚಪೀಠದಿಂದ ಸರ್ವಸಮ್ಮತದ ತೀರ್ಪು ಪ್ರಕಟವಾಗಿದ್ದು, ಪೀಠದ ಯಾವುದೇ ನ್ಯಾಯಮೂರ್ತಿ ಪ್ರತ್ಯೇಕ ಅಭಿಪ್ರಾಯವನ್ನು ವ್ಯಕ್ತಪಡಿಸದಿರುವುದು ಈ ತೀರ್ಪಿನ ವಿಶೇಷ.

- ತೀರ್ಪು ಓದಲು ಬರೋಬ್ಬರಿ ಅರ್ಧ ಗಂಟೆ ಸಮಯ ತೆಗೆದುಕೊಂಡ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ತೀರ್ಪಿನ ಒಂದೊಂದೇ ಅಂಶವನ್ನು ಎಳೆಎಳೆಯಾಗಿ ಬಿಡಿಸಿಟ್ಟರು.

- ಆರಂಭದಲ್ಲೇ ಶಿಯಾ ವಕ್ಫ್ ಬೋರ್ಡ್ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್, ಬಾಬರ್ ಯಾವಾಗ ಮಸೀದಿ ಕಟ್ಟಿದ ಎಂಬುದು ಈಗ ಪ್ರಸ್ತುತವಲ್ಲ ಎಂದು ಅಭಿಪ್ರಾಯಪಟ್ಟಿತು.

- ವಿಳಂಬ ದಾವೆ ಕಾರಣ ನೀಡಿ ನಿರ್ಮೋಹಿ ಅಖಾರದ ಅರ್ಜಿಯನ್ನೂ ಸುಪ್ರೀಂ ಕೋರ್ಟ್ ಪಂಚಪೀಠ ವಜಾಗೊಳಿಸಿದೆ. ನಿರ್ಮೋಹಿ ಅಖಾರಕ್ಕೆ ವಿವಾದಿತ ಸ್ಥಳದಲ್ಲಿ ಪೂಜೆಗೆ ಅಧಿಕಾರವಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.. 

- ವಿವಾದಕ್ಕೆ ಸಂಬಂಧಿಸಿದಂತೆ ರಾಮಲಲ್ಲಾ ಹಾಗೂ ಸುನ್ನಿ ವಕ್ಫ್ ಬೋರ್ಡ್ ಅರ್ಜಿಯನ್ನು ಮಾತ್ರ ಪರಿಗಣಿಸುತ್ತಿರುವುದಾಗಿ ಸಿಜೆಐ ರಂಜನ್ ಗೊಗೊಯ್ ನೇತೃತ್ವದ ಪಂಚಪೀಠ ಸ್ಪಷ್ಟಪಡಿಸಿತು.

- ಬಾಬರ್ ಆದೇಶದಂತೆ ಮೀರ್ ಬಾಕಿ ಮಸೀದಿ ಕಟ್ಟಿರುವುದು ಹೌದೆಂದ ಸುಪ್ರೀಂ ಕೋರ್ಟ್, ಧಾರ್ಮಿಕ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ ಎಂದು ಮಾರ್ಮಿಕವಾಗಿ ಹೇಳಿತು. 

- ಯಾವುದೇ ಖಾಸಗಿ ವ್ಯಕ್ತಿಗಳು ಭೂಮಿಗಾಗಿ ಹಕ್ಕು ಮಂಡನೆ ಮಾಡದಿರುವುದರಿಂದ, ವಿವಾದಿತ ಸ್ಥಳವನ್ನು ಧಾರ್ಮಿಕ ನಂಬಿಕೆಯ ಆಧಾರದಲ್ಲಿ ನೋಡುವುದು ಅನಿವಾರ್ಯ ಎಂದು ಪೀಠ ಅಭಿಪ್ರಾಯ ವ್ಯಕ್ತಪಡಿಸಿತು.

- ಆದರೆ ಬಾಬಿ ಮಸೀದಿ ಖಾಲಿ ಸ್ಥಳದಲ್ಲಿ ನಿರ್ಮಾಣ ಮಾಡಿಲ್ಲ ಎಂದಿರುವ ಸುಪ್ರೀಂ ಕೋರ್ಟ್, ಅದಕ್ಕೂ ಮುಂಚೆ ಅಲ್ಲಿ ಮಂದಿರವಿತ್ತು ಎಂದು ಅಭಿಪ್ರಾಯಪಟ್ಟಿದೆ.

- ಮಸೀದಿ ಕೆಳಗೆ ವಿಶಾಲ ಅಡಿಪಾಯದ ಮಂದಿರವಿದ್ದು, ಅದು ಖಂಡಿತವಾಗಿಯೂ ಇಸ್ಲಾಮೇತರ ರಚನೆಯಾಗಿತ್ತು ಎಂದು ಪೀಠ ಐತಿಹಾಸಿಕ ತೀರ್ಪು ನೀಡಿದೆ.

- ಉತ್ಖನನದ ಸಂದರ್ಭದಲ್ಲಿ ವಿವಾದಿತ ಸ್ಥಳದಲ್ಲಿ ದೊರೆತಿರುವ ಕಲಾಕೃತಿಗಳು ಹಿಂದೂ ಸಂಸ್ಕೃತಿಯನ್ನು ಬಿಂಬಿಸುತ್ತಿದ್ದು, ಅಯೋಧ್ಯೆಯಲ್ಲಿ ರಾಮನ ಜನನವಾಗಿತ್ತು ಎಂಬ ಹಿಂದೂಗಳ ನಂಬಿಕೆ ಸರಿ ಎಂದು ಪೀಠ ಹೇಳಿದೆ..

- ಶತಮಾನಗಳಿಂದ ವಿವಾದಿತ ಜಾಗದಲ್ಲೇ ಹಿಂದೂಗಳು ಪೂಜೆ ಮಾಡುತ್ತಿದ್ದಾರೆ. ಅವರ ಪರಂಪರೆಯನ್ನು ಗೌರವಿಸಬೇಕಾಗುತ್ತದೆ ಎಂದು ಗೊಗೊಯ್ ಉಲ್ಲೇಖಿಸಿದರು.

- ಹಿಂದೂ ಪುರಾಣಗಳಲ್ಲೂ ರಾಮಲಲ್ಲಾ ಉಲ್ಲೇಖವಿದ್ದು, ವಿವಾದಿತ ಸ್ಥಳದಲ್ಲೇ ರಾಮನ ಜನನವಾಗಿತ್ತು ಎಂಬುದು ಇದರಿಂದ ಖಚಿತವಾಗಿದೆ ಎಂದು ಪೀಠ ಹೇಳಿದೆ.

- ಇದೇ ವೇಳೆ 1949ರಲ್ಲಿ ಅಕ್ರಮವಾಗಿ ವಿವಾದಿತ ಜಾಗದಲ್ಲಿ ರಾಮನ ಮೂರ್ತಿ ಇಡಲಾಗಿತ್ತು ಎಂಬ ಸುನ್ನಿ ವಕ್ಫ್ ಬೋರ್ಡ್ ಅರ್ಜಿಯನ್ನು ಮಾನ್ಯ ಮಾಡಿರುವ ಘನ ನ್ಯಾಯಾಲಯ, 1856ರವರೆಗೆ ಅಲ್ಲಿ ನಮಾಜ್ ಮಾಡಲಾಗುತ್ತಿತ್ತು ಎಂಬ ವಾದಕ್ಕೆ ಪುರಾವೆಯಿಲ್ಲ ಎಂದು ಸ್ಪಷ್ಟಪಡಿಸಿತು.

ಅಯೋಧ್ಯೆ ತೀರ್ಪು ಪ್ರಕಟಿಸಿದ ಪೀಠದಲ್ಲಿ ಯಾರಿದ್ದರು?

- ಸದ್ಯ ಅಯೋಧ್ಯೆ ವಿವಾದಿತ ಸ್ಥಳವನ್ನು ರಾಮಲಲ್ಲಾಗೆ ವಹಿಸಿ ತೀರ್ಪು ಪ್ರಕಟಿಸಿರುವ ಸುಪ್ರೀಂಕೋರ್ಟ್, ಮಂದಿರ ನಿರ್ಮಾಣ ಟ್ರಸ್ಟ್‌ಗೆ ಭೂಮಿ ಸ್ವಾದೀನ ಪ್ರಕ್ರಿಯೆ ಆರಂಭಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಸದ್ಯ ಭೂಮಿಯ ಹಕ್ಕು ಕೇಂದ್ರ ಸರ್ಕಾರದ ಅಧೀನದಲ್ಲೇ ಇರಲಿದ್ದು, ನಿಯಮ ರೂಪಿಸಿ ಮಂದಿರ ನಿರ್ಮಾಣಕ್ಕೆ ಮುಂದಾಗುವಂತೆ ಸಲಹೆ ನೀಡಿದೆ.

ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ವಿವಾದದ ಕೇಂದ್ರ ಬಿಂದುವಾಗಿರುವ 2.77 ಎಕರೆ ಪ್ರದೇಶದ ಕುರಿತ ತೀರ್ಪನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್, ನ್ಯಾ. ಎಸ್.ಎ.ಬೋಬ್ಡೆ, ಡಿ. ವೈ.ಚಂದ್ರಚೂಡ್, ನ್ಯಾ.ಅಶೋಕ್ ಭೂಷಣ್ ಮತ್ತು ಎಸ್. ಅಬ್ದುಲ್ ನಜೀರ್ ಅವರನ್ನೊಳಗೊಂಡ ಸಾಂವಿಧಾನಿಕ ಪೀಠ ಪ್ರಕಟಿಸಿದೆ.

ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಪ್ರಕರಣ ಸಂಬಂಧ 40 ದಿನಗಳ ಕಾಲ ಸರಣಿ ವಿಚಾರಣೆ ನಡೆಸಿದ್ದ ಪೀಠ ನೀಡಿದ ಈ ಐತಿಹಾಸಿಕ ತೀರ್ಪು, ರಾಮಮಂದಿರ ಕುರಿತ ಎಲ್ಲಾ ವಿವಾದಗಳಿಗೆ ತಾರ್ಕಿಕ ಅಂತ್ಯ ಹಾಡಿದೆ.

ಎಲ್ಲೆಡೆ ಕಟ್ಟೆಚ್ಚರ
"

ನವೆಂಬರ್ 9ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ