ಬಾಬರ್ ಅಯೋಧ್ಯೆ(5 ಎಕರೆ)ಯಲ್ಲೇ ಇರಲಿದ್ದಾನೆ: ಸಹೋದರರ ನಂಬಿಕೆ ಮುಖ್ಯ ಎಂದ ಸುಪ್ರೀಂ!
ಐತಿಹಾಸಿಕ ಅಯೋಧ್ಯೆ-ಬಾಬರಿ ಮಸೀದಿ ಭೂವಿವಾದ ತೀರ್ಪು ಪ್ರಕಟ/ ಅಯೋಧ್ಯೆ ಪ್ರಭು ಶ್ರೀರಾಮನಿಗೆ ಸೇರಿದ್ದು ಎಂದ ಸುಪ್ರೀಂಕೋರ್ಟ್/ ಶತಮಾನಗಳ ಧಾರ್ಮಿಕ ನಂಬಿಕೆಗೆ ಕಾನೂನಿನ ಮಾನ್ಯತೆ ದೊರಕಿಸಿಕೊಟ್ಟ ಸುಪ್ರೀಂಕೋರ್ಟ್ / ಮಂದಿರ ನಿರ್ಮಾಣದ ಹಕ್ಕನ್ನು ಟ್ರಸ್‌ಗೆ ವರ್ಗಾಯಿಸಿದ ಸುಪ್ರೀಂಕೋರ್ಟ್/ ಮುಸ್ಲಿಮರಿಗೆ ಅಯೋಧ್ಯೆಯಲ್ಲೇ ಪ್ರತ್ಯೇಕ 5 ಎಕರೆ ಜಾಗಕ್ಕೆ ಸುಪ್ರೀಂಕೋರ್ಟ್ ಆದೇಶ/ ಸುಪ್ರೀಂ ತೀರ್ಪನ್ನು ಗೌರವಿಸುವುದಾಗಿ ಹೇಳಿದ ಸುನ್ನಿ ವಕ್ಫ್ ಬೋರ್ಡ್/ ತೀರ್ಪು ತೃಪ್ತಿ ತಂದಿಲ್ಲ ಎಂದ ಬೋರ್ಡ್ ಪರ ವಕೀಲ ಜಫರಯಾಬ್ ಜಿಲಾನಿ/ ಮರುಪರಿಶೀಲನೆ ಕೋರಿ ಅರ್ಜಿ ಸಲ್ಲಿಸುವ ಕುರಿತು ಶೀಘ್ರದಲ್ಲೇ ನಿರ್ಧಾರ/
ನವದೆಹಲಿ(ನ.09): ದೇಶ ಕಾತರದಿಂದ ಕಾಯುತ್ತಿದ್ದ ಐತಿಹಾಸಿಕ ಅಯೋಧ್ಯೆ-ಬಾಬರಿ ಮಸೀದಿ ಭೂವಿವಾದದ ತೀರ್ಪನ್ನು ಕೊನೆಗೂ ಸುಪ್ರೀಂಕೋರ್ಟ್ ಪ್ರಕಟಿಸಿದೆ.
ವಿವಾದಿತ 2.77 ಎಕರೆ ಜಾಗವನ್ನು ರಾಮಲಲ್ಲಾಗೆ ವಹಿಸಿ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದೆ. ಈ ಮೂಲಕ ವಿವಾದಿತ ಜಾಗಕ್ಕಾಗಿ ಹೋರಾಡುತ್ತಿದ್ದ ಹಿಂದೂಗಳ ನಂಬಿಕೆಗೆ ಐತಿಹಾಸಿಕ ಜಯ ಲಭಿಸಿದೆ. ಆದರೆ, ಬಾಬರಿ ಮಸೀದಿ ಪ್ರತ್ಯೇಕ ಜಾಗವನ್ನು ಕಲ್ಪಿಸಲು ಕೋರ್ಟ್ ಸರಕಾರಕ್ಕೆ ಸೂಚಿಸಿದೆ.
ರಾಮನಿಗೆ ದೊರೆತ ಅಯೋಧ್ಯೆ: ಶತಮಾನಗಳ ನಂಬಿಕೆಗೆ ಸುಪ್ರೀಂ ತೀರ್ಪಿನ ನೈವೇದ್ಯೆ!
ವಿವಾದಿತ ಸ್ಥಳದಲ್ಲಿ ರಾಮನ ಜನನ ಸತ್ಯ ಎಂದಿರುವ ಸುಪ್ರೀಂ ಕೋರ್ಟ್, ಕಾನೂನಾತ್ಮಕ ನಿಯಮ ರೂಪಿಸಿ ಮಂದಿರ ನಿರ್ಮಾಣಕ್ಕೆ ಮುಂದಾಗುವಂತೆ ಸರ್ಕಾರಕ್ಕೆ ಸ್ಪಷ್ಟ ನಿರ್ದೇಶಿಸಿದೆ.
ಆದರೆ ಮಸೀದಿ ನಿರ್ಮಾಣಕ್ಕೆ ಅಯೋಧ್ಯೆಯಲ್ಲೇ ಪ್ರತ್ಯೇಕ 5 ಎಕರೆ ಜಾಗ ಕಲ್ಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಆದೇಶ ನೀಡಿದೆ.
ಅಯೋಧ್ಯೆಯಲ್ಲಿ ಎಲ್ಲಿ ಜಾಗ ನೀಡಬೇಕು ಎಂಬುದು ಕೇಂದ್ರ ಸರ್ಕಾರದ ವಿವೇಚನೆಗೆ ಬಿಟ್ಟ ವಿಷಯ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಆದರೆ ಇದಕ್ಕೆ ಯಾವುದೇ ಕಾಲಮಿತಿಯನ್ನು ಸುಪ್ರೀಂಕೋರ್ಟ್ ನಿಗದಿಪಡಿಸಿಲ್ಲ.
ಯಾರೂ ಗೆಲ್ಲಲ್ಲ, ಯಾರೂ ಸೋಲಲ್ಲ: ಸಾಮರಸ್ಯ ಕಾಪಾಡೋಣ ಎಂದ ಮೋದಿ!
ಈ ಮಧ್ಯೆ ಸುಪ್ರೀಂಕೋರ್ಟ್ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಅರ್ಜಿ ಸಲ್ಲಿಸುವ ಕುರಿತು ಸುನ್ನಿ ವಕ್ಫ್ ಬೋರ್ಡ್ ಶೀಘ್ರದಲ್ಲೇ ನಿರ್ಧರಿಸಲಿದೆ ಎಂದು ಬೋರ್ಡ್ ಪರ ವಕೀಲ ಜಫರಯಾಬ್ ಜಿಲಾನಿ ಸ್ಪಷ್ಟಪಡಿಸಿದ್ದಾರೆ.
ನಾವು ಸುಪ್ರೀಂ ತೀರ್ಪನ್ನು ಗೌರವಿಸುತ್ತೇವೆ ಆದರೆ ತೀರ್ಪು ನಮಗೆ ತೃಪ್ತಿ ತಂದಿಲ್ಲ ಎಂದು ಜಿಲಾನಿ ಪ್ರತಿಕ್ರಿಯಿಸಿದ್ದಾರೆ. ಅಲ್ಲದೇ ಬೋರ್ಡ್ ಜೊತೆ ಸಮಾಲೋಚನೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಿಲಾನಿ ತಿಳಿಸಿದ್ದಾರೆ.
ನವೆಂಬರ್ 9ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ