ಚೀನಾದಿಂದ ದಾಳಿ, ಭಾರತೀಯ ಯೋಧರ ಸಾಹಸ ಕಡೆಗಣಿಸಿದ ರಾಹುಲ್ ವಿರುದ್ದ ಆಕ್ರೋಶ!
ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಕಿರಿಕ್ ಮಾಡಿದ ಚೀನಾ ಯೋಧರಿಗೆ ಭಾರತ ತಕ್ಕ ಪಾಠ ಕಲಿಸಿದೆ. ಈ ವಿಡಿಯೋ ವೈರಲ್ ಆಗಿದೆ. ಆದರೆ ರಾಹುಲ್ ಗಾಂಧಿ ಬಿಜೆಪಿ ಹಾಗೂ ಕೇಂದ್ರ ಸರ್ಕಾರವನ್ನು ಟೀಕಿಸುವ ಭರದಲ್ಲಿ ಭಾರತೀಯ ಯೋಧರ ಸಾಹಸವನ್ನೇ ಕಡೆಗಣಿಸಿದ್ದಾರೆ.
ನವದೆಹಲಿ(ಡಿ.16): ಅರುಣಾಚಲ ಪ್ರದೇಶದ ತವಾಂಗ್ ಗಡಿಯಲ್ಲಿ ಭಾರತ ಹಾಗೂ ಚೀನಾ ಯೋಧರ ನಡುವಿನ ಚಕಮಕಿ ಇದೀಗ ರಾಜಕೀಯವಾಗಿ ಭಾರಿ ಸದ್ದು ಮಾಡುತ್ತಿದೆ. ಚೀನಾ ಯುದ್ಧಕ್ಕೆ ಸಜ್ಜಾಗಿದೆ. ಕೇಂದ್ರ ಸರ್ಕಾರ ಚೀನಾ ದಾಳಿ ಹಿಮ್ಮೆಟ್ಟಿಸಲು ಸಾಧ್ಯವಾಗದೇ ಕೈಕಟ್ಟಿ ಕುಳಿತಿದೆ. ಭಾರತದ ಪ್ರದೇಶಗಳನ್ನು ಚೀನಾ ಆಕ್ರಮಿಸುತ್ತಿದೆ. ಲಡಾಖ್ ಬಳಿಕ ಇದೀಗ ತವಾಂಗ್ ಕೂಡ ಚೀನಾ ಕೈವಶವಾಗುತ್ತಿದೆ ಎಂದು ವಿಪಕ್ಷಗಳು ಕೇಂದ್ರದ ವಿರುದ್ಧ ಟೀಕೆ ವ್ಯಕ್ತಪಡಿಸುತ್ತಿದೆ. ಇದೇ ವಿಚಾರವಾಗಿ ಭಾರತ್ ಜೋಡೋ ಯಾತ್ರೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಭಾರತೀಯ ಯೋಧರ ಸಾಹಸವನ್ನು ಕಡೆಗಣಿಸಿದ್ದಾರೆ. ಚೀನಾ ಯೋಧರು ಭಾರತೀಯ ಯೋಧರನ್ನು ಥಳಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಶ್ನೆ ಮಾಡುತ್ತಿಲ್ಲ ಎಂದು ರಾಹುಲ್ ಗಾಂಧಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ಭಾರತೀಯ ಸೇನೆ, ಚೀನಾ ಯೋಧರ ಮೇಲೆ ದಾಳಿ ಮಾಡುವ ದೃಶ್ಯವಿದೆ. ಬಡಿಗೆಗಳಿಂದ ಚೀನಾ ಯೋಧರನ್ನು ಹಿಮ್ಮೆಟ್ಟಿಸುವ ದೃಶ್ಯ ಭಾರಿ ಸದ್ದು ಮಾಡುತ್ತಿದೆ. ತವಾಂಗ್ ಪ್ರದೇಶದಲ್ಲಿ ಕಾಲು ಕೆರೆದು ಬಂದ ಚೀನಾ ಸೈನಿಕರಿಗೆ ಭಾರತೀಯ ಯೋಧರು ತಕ್ಕ ಉತ್ತರ ನೀಡಿದ್ದಾರೆ. ಬಡಿಗೆ, ಕಲ್ಲುಗಳಿಂದ ತಿರುಗೇಟು ನೀಡಿದ್ದಾರೆ. ಭಾರತೀಯ ಯೋಧರ ಹೊಡೆತ ತಾಳಲಾರದೇ ಚೀನಾ ಸೈನಿಕರು ಮರಳಿ ಓಡಿದ್ದಾರೆ. ಆದರೆ ರಾಹುಲ್ ಗಾಂಧಿ ಸುದ್ದಿಗೋಷ್ಠಿಯಲ್ಲಿ ಚೀನಾ ಸೈನಿಕರು ಭಾರತೀಯ ಯೋಧರ ಮೇಲೆ ಹಲ್ಲೆ ಮಾಡಿದ್ದಾರೆ ಎಂದಿದ್ದಾರೆ. ಇದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.
ಚೀನಾ ಕಿರಿಕ್ ಬೆನ್ನಲ್ಲೇ ತವಾಂಗ್ ಗಡಿಯಲ್ಲಿ ಭಾರತೀಯ ವಾಯುಪಡೆಯ ಹದ್ದಿನ ಕಣ್ಣು!
ಈ ಕುರಿತು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಪ್ರತಿಕ್ರಿಯಿಸಿದ್ದಾರೆ. ರಾಹುಲ್ ಗಾಂಧಿ ಚೀನಾ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಗಾಂಧಿ ಕುಟುಂಬ ಚೀನಾ ಆತಿಥ್ಯವನ್ನು ಅತೀಯಾಗಿ ಆನಂದಿಸಿದೆ. ಇಷ್ಟೇ ಅಲ್ಲ ರಾಜೀವ್ ಗಾಂಧಿ ಫೌಂಡೇಷನ್‌ಗೆ ಚೀನಾದಿಂದ ಹಣ ದೇಣಿಗೆಯಾಗಿ ಪಡೆದುಕೊಂಡಿದೆ. ಹೀಗಾಗಿ ರಾಹುಲ್ ಗಾಂಧಿಗೆ ಚೀನಾ ಯೋಧರು ಭಾರತದ ಸೈನಿಕರ ಮೇಲೆ ದಾಳಿ ಮಾಡಿದ್ದು ಕಾಣುತ್ತಿದೆ. ನಮ್ಮ ಯೋಧರು ಚೀನಾ ಯೋಧರನ್ನು ಹಿಮ್ಮೆಟ್ಟಿಸಿುವುದು ಕಾಣುತ್ತಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಬಡಿಗೆಯಲ್ಲೇ ಚೀನಿ ಸೈನಿಕರನ್ನು ಹೊಡೆದೋಡಿಸಿದ ಭಾರತೀಯ ಯೋಧರು!
ಸಂಘರ್ಷ ಬೆನ್ನಲ್ಲೇ ಚೀನಾ ಗಡಿ ಬಳಿ ವಾಯುಪಡೆ ಸಮರಾಭ್ಯಾಸ
ಅರುಣಾಚಲಪ್ರದೇಶದ ತವಾಂಗ್ ಗಡಿಯಲ್ಲಿ ಕಾಲು ಕೆರೆದು ಜಗಳಕ್ಕೆ ಬಂದ ಚೀನಾ ಯೋಧರಿಗೆ ಭಾರತ ತಕ್ಕ ಶಾಸ್ತಿ ಮಾಡಿದ ಬೆನ್ನಲ್ಲೇ, ಗಡಿಗೆ ಸಮೀಪದಲ್ಲಿರುವ ಈಶಾನ್ಯ ಭಾರತದ 4 ವಾಯುನೆಲೆಗಳಲ್ಲಿ ಗುರುವಾರದಿಂದ ಎರಡು ದಿನಗಳ ಸಮರಾಭ್ಯಾಸವನ್ನು ವಾಯುಪಡೆ ಆರಂಭಿಸಿರುವುದು ಸಂಚಲನಕ್ಕೆ ಕಾರಣವಾಗಿದೆ. ಈ ತಾಲೀಮಿನ ಹಿನ್ನೆಲೆಯಲ್ಲಿ ಅಸ್ಸಾಂನ ತೇಜಪುರ, ಛಾಬುವಾ, ಜೋರ್ಹಾತ್ ಹಾಗೂ ಪಶ್ಚಿಮಬಂಗಾಳದ ಹಾಶಿಮಾರಾ ವಾಯುನೆಲೆ ಬಳಿ ವಿಮಾನ ಹಾರಾಟವನ್ನು ನಿರ್ಬಂಧಿಸಲಾಗಿದೆ. ಆದರೆ, ‘ಈ ಅಭ್ಯಾಸಕ್ಕೂ ಚೀನಾ ಜತೆ ನಡೆದ ಸಂಘಷಕ್ಕೂ ಯಾವುದೇ ಸಂಬಂಧವಿಲ್ಲ. ಇದೆಲ್ಲ ಪೂರ್ವನಿಗದಿಯಾಗಿತ್ತು’ ಎಂದು ವಾಯುಪಡೆ ಸ್ಪಷ್ಟಪಡಿಸಿದೆ.
ಈ ತಾಲೀಮಿನಲ್ಲಿ ಗಡಿಯ ಮುಂಚೂಣಿ ಭಾಗಕ್ಕೆ ನಿಯೋಜನೆಗೊಳ್ಳುವ ಯುದ್ಧ ವಿಮಾನಗಳು ಹಾಗೂ ಸಂಪನ್ಮೂಲಗಳನ್ನು ಬಳಸಿಕೊಳ್ಳಲಾಗುತ್ತಿದೆ. ಯುದ್ಧ ಸನ್ನದ್ಧತೆಯನ್ನು ಪರೀಕ್ಷಿಸುವ ಉದ್ದೇಶದಿಂದ ಈ ಸೇನಾ ಸಮರಾಭ್ಯಾಸ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.