ಹೊಸ ಹಗರಣವೊಂದರಲ್ಲಿ ಸಿಲುಕಿರುವ ಲಾಲು ಕುಟುಂಬ ಪಾಟ್ನಾದ ರಾಬ್ರಿ ನಿವಾಸದ ಮೇಲೆ ದಾಳಿ ಮಾಡಿದ್ದ ಸಿಬಿಐ ದಾಳಿ ವೇಳೆ ನಿವಾಸದ ಹೊರಭಾಗದಲ್ಲಿ ಕಾರ್ಯಕರ್ತರ ಪ್ರತಿಭಟನೆ
ಪಾಟ್ನಾ: ಮೇವು ಹಗರಣದ ನಂತರ ಬಿಹಾರ ಮಾಜಿ ಸಿಎಂ ಲಾಲೂ ಪ್ರಸಾದ್ ಅವರ ಕುಟುಂಬದ ವಿರುದ್ಧ ಮತ್ತೊಂದು ಹೊಸ ಹಗರಣದ ಆರೋಪ ಕೇಳಿ ಬಂದಿದ್ದು, ಇದಕ್ಕೆ ಸಂಬಂಧಿಸಿದಂತೆ ಸಿಬಿಐ, ಪಾಟ್ನಾದ ಲಾಲೂ ನಿವಾಸ ಸೇರಿದಂತೆ 15ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ ನಡೆಸಿತ್ತು. ಈ ವೇಳೆ ಮನೆ ಮುಂದೆ ಅವರ ಮನೆ ಮುಂದೆ ಆರ್‌ಜೆಡಿ ಪಕ್ಷದ ಕಾರ್ಯಕರ್ತರು ಜಮಾಯಿಸಿ ಸಿಬಿಐ ಅಧಿಕಾರಿಗಳಿಗೆ ಹೊರಗೆ ಹೋಗಲು ಜಾಗವೂ ಇಲ್ಲದಂತೆ ನಿಂತಿದ್ದರು. ಕಾರ್ಯಕರ್ತರ ಈ ವರ್ತನೆಗೆ ಬೇಸತ್ತ ಆರ್‌ಜೆಡಿ ನಾಯಕಿ ರಾಬ್ರಿ ದೇವಿ, ಓರ್ವ ಕಾರ್ಯಕರ್ತನಿಗೆ ಬಾರಿಸಿ ಬಿಟ್ಟಿದ್ದಾರೆ.
ಪಾಟ್ನಾದಲ್ಲಿರುವ ಲಾಲು ಪ್ರಸಾದ್ ಯಾದವ್ ಅವರ ನಿವಾಸದ ಹೊರಗೆ ಆರ್‌ಜೆಡಿ ಕಾರ್ಯಕರ್ತರ ಅಶಿಸ್ತಿನ ವರ್ತನೆಯಿಂದ ಆಕ್ರೋಶಗೊಂಡ ಅವರ ಪತ್ನಿ ರಾಬ್ರಿ ದೇವಿ ತಾಳ್ಮೆ ಕಳೆದುಕೊಂಡು ತಮ್ಮ ಪಕ್ಷದ ಬೆಂಬಲಿಗರೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾಲೂ ಪ್ರಸಾದ್ ಯಾದವ್ ಅವರ ಪಾಟ್ನಾ ನಿವಾಸ ಸೇರಿದಂತೆ 15 ಸ್ಥಳಗಳಲ್ಲಿ ಕೇಂದ್ರೀಯ ತನಿಖಾ ಸಂಸ್ಥೆ ನಡೆಸಿದ ದಾಳಿಯನ್ನು ವಿರೋಧಿಸಿ ಆರ್‌ಜೆಡಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ.
ಲಾಲು ಪ್ರಸಾದ್ ಯಾದವ್ ವಿರುದ್ಧದ ರೈಲ್ವೇ ನೇಮಕಾತಿಯಲ್ಲಿ ಅಕ್ರಮವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ(20) ರಂದು ಲಾಲೂ ಪತ್ನಿ ರಾಬ್ರಿ ದೇವಿ ವಾಸಿಸುವ ಸರ್ಕ್ಯುಲರ್ ರಸ್ತೆಯಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಿದ ಸಿಬಿಐ ತಂಡವು ನಿವಾಸಕ್ಕೆ ಒಳಭಾಗದಿಂದ ಬೀಗ ಹಾಕಿತ್ತು. ಈ ವೇಳೆ ಆರ್‌ಜೆಡಿ ಬೆಂಬಲಿಗರು ನಿವಾಸದ ಹೊರಗೆ ಗಲಾಟೆ ಆರಂಭಿಸಿದ್ದರು.
ಸಿಬಿಐ ಅಧಿಕಾರಿಗಳು ರಾಬ್ರಿ ನಿವಾಸದಲ್ಲಿ ಶೋಧ ಮುಗಿಸಿ ಹೊರ ನಡೆಯುವ ವೇಳೆ ಆರ್‌ಜೆಡಿ ಕಾರ್ಯಕರ್ತರು ಸಿಬಿಐ ಅಧಿಕಾರಿಗಳಿಗೆ ಹೋಗಲು ದಾರಿ ಬಿಡದೇ ತಡೆದಿದ್ದಾರೆ. ಇದರಿಂದ ಸಿಟ್ಟುಗೊಂಡ ರಾಬ್ರಿ ದೇವಿ ಹಾಗೂ ಅವರ ಮಗ ತೇಜ್ ಪ್ರತಾಪ್ ಯಾದವ್ ಆರ್‌ಜೆಡಿ ಕಾರ್ಯಕರ್ತರನ್ನು ದೂರ ಸರಿಸಿ ಸಿಬಿಐ ಅಧಿಕಾರಿಗಳಿಗೆ ದಾರಿಮಾಡಿ ಕೊಟ್ಟಿದ್ದಾರೆ. ಈ ವೇಳೆ ಗಲಾಟೆ ಮಾಡಿದ ಕಾರ್ಯಕರ್ತರೊಬ್ಬರಿಗೆ ರಾಬ್ರಿ ಬಾರಿಸಿದ್ದು, ಇದರ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಲ್ಲದೇ ಅಧಿಕಾರಿಗಳಿಗೆ ಹೋಗಲು ಬಿಡುವಂತೆ ಹೇಳುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತಿದೆ.
ಹೊಸ ಹಗರಣದಲ್ಲಿ ಸಿಲುಕಿದ ಲಾಲೂ ಕುಟುಂಬ: ಸಿಬಿಐನಿಂದ 15 ಸ್ಥಳಗಳಲ್ಲಿ ಶೋಧ
ಆರ್‌ಜೆಡಿ ಕಾರ್ಯಕರ್ತರ ದೊಡ್ಡ ಪ್ರತಿಭಟನೆಯ ನಡುವೆಯೇ ಸಿಬಿಐ ಅಧಿಕಾರಿಗಳು ಹಲವು ಗಂಟೆಗಳ ಕಾಲ ರಾಬ್ರಿ ನಿವಾಸದಲ್ಲಿ ಶೋಧ ನಡೆಸಿ ವಿಚಾರಣೆಯನ್ನು ನಡೆಸಿದ್ದಾರೆ. ಹೊರಗೆ ಕಾರ್ಯಕರ್ತರು ಕೇಂದ್ರದ ಎನ್‌ಡಿಎ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ವಿಚಾರಣೆಯ ನಂತರ ಸಿಬಿಐ ತಂಡ ಹೊರಡುವ ಸಮಯ ಬಂದಾಗ ಸರ್ಕಾರಿ ಬಂಗಲೆಯ ಹೊರಗೆ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಅಧಿಕಾರಿಗಳು ಕೂಡ ಕಾರ್ಯಕರ್ತರ ಬಗ್ಗೆ ಜಾಗರೂಕರಾಗಿದ್ದರು.
Bihar Politics| ಮದ್ಯ ಹುಡುಕಿ ವಧುವಿನ ಬೆಡ್‌ರೂಂ, ಬಾತ್‌ರೂಂ ನುಗ್ಗಿದ ಪೊಲೀಸರು, ರಾಬ್ರಿದೇವಿ ಕಿಡಿ!
ಶುಕ್ರವಾರ ತಡರಾತ್ರಿಯ ವೇಳೆಗೆ ಸಿಬಿಐ ಅಧಿಕಾರಿಗಳನ್ನು ಸುರಕ್ಷಿತವಾಗಿ ಹೊರಗೆ ಕಳುಹಿಸಲು ಸ್ವತಃ ರಾಬ್ರಿ ದೇವಿ ಅವರೇ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಅವರೊಂದಿಗೆ ಹೊರಬಂದರು. ಶನಿವಾರ ಮುಂಜಾನೆ ಇದರ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಮಾಜಿ ಮುಖ್ಯಮಂತ್ರಿ, ಸರಳವಾದ, ಇಸ್ತ್ರಿ ಮಾಡದ ಸಲ್ವಾರ್ ಕಮೀಜ್‌ನಲ್ಲಿ ತಮ್ಮ ಬೆಂಬಲಿಗರನ್ನು ಶಾಂತಗೊಳಿಸಲು ಮನವಿ ಮಾಡುವುದನ್ನು ವೀಡಿಯೊದಲ್ಲಿ ಕಾಣಬಹುದು. ಇದರ ನಡುವೆಯೂ ಅಶಿಸ್ತಿನಿಂದ ವರ್ತಿಸಿದ್ದಾಗ ರಾಬ್ರಿ ತಾಳ್ಮೆ ಮೀರಿ ಕಾರ್ಯಕರ್ತನಿಗೆ ಬಾರಿಸಿದರು.
