Asianet Suvarna News Asianet Suvarna News

ಹೊಸ ಹಗರಣದಲ್ಲಿ ಸಿಲುಕಿದ ಲಾಲೂ ಕುಟುಂಬ: ಸಿಬಿಐನಿಂದ 15 ಸ್ಥಳಗಳಲ್ಲಿ ಶೋಧ

  • ಲಾಲು ಕುಟುಂಬ ಸದಸ್ಯರ ವಿರುದ್ಧ ಸಿಬಿಐನಿಂದ ಹೊಸ ಭ್ರಷ್ಟಾಚಾರ ಪ್ರಕರಣ
  • ರೈಲ್ವೆ ಸಚಿವರಾಗಿದ್ದಾಗ ನಡೆದ ನೇಮಕಾತಿಯಲ್ಲಿ ಅಕ್ರಮ ಆರೋಪ
  • ಉದ್ಯೋಗ ನೀಡುವುದಾಗಿ ಆಕಾಂಕ್ಷಿಗಳಿಂದ ಹಣ ಆಸ್ತಿ ಪಡೆದ ಆರೋಪ
CBIs New Corruption Case Against Lalu prasad Yadav Family Members akb
Author
Bangalore, First Published May 20, 2022, 1:06 PM IST

ಪಾಟ್ನಾ: 1990- 96 ರ ಅವಧಿಯಲ್ಲಿ ನಡೆದ ಮೇವು ಹಗರಣ ಪ್ರಕರಣದಲ್ಲಿ ಜಾಮೀನು ಪಡೆದ ವಾರಗಳ ನಂತರ ಆರ್‌ಜೆಡಿ ನಾಯಕ ಬಿಹಾರ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್  ಮತ್ತೆ ಹೊಸದೊಂದು ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿ ಹಾಕಿಕೊಂಡಿದ್ದು ಸಂಕಷ್ಟಕ್ಕೀಡಾಗಿದ್ದಾರೆ. ಲಾಲೂ ಪ್ರಸಾದ್ ಯಾದವ್ ಅವರು ರೈಲ್ವೆ ಸಚಿವರಾಗಿದ್ದಾಗ 2004 ಮತ್ತು 2009 ರ ಅವಧಿಯಲ್ಲಿ ನಡೆದ ನೇಮಕಾತಿಯಲ್ಲಿ ಅಕ್ರಮ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಲಾಲೂ ಪ್ರಸಾದ್ ಯಾದವ್ ಅವರಲ್ಲದೆ, ಅವರ ಪತ್ನಿ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ, ಪುತ್ರಿ ಮತ್ತು ರಾಜ್ಯಸಭಾ ಸಂಸದೆ ಮಿಸಾ ಭಾರತಿ ಮತ್ತು ಇತರ ಕುಟುಂಬ ಸದಸ್ಯರನ್ನು ಹೊಸ ಪ್ರಕರಣದಲ್ಲಿ ಆರೋಪಿಗಳೆಂದು ಹೆಸರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಇಂದು ರಾಷ್ಟ್ರೀಯ ಜನತಾ ದಳದ  ಮುಖ್ಯಸ್ಥರ ನಿವಾಸ ಸೇರಿದಂತೆ 15 ಸ್ಥಳಗಳಲ್ಲಿ ಶೋಧ ಆರಂಭಿಸಿದೆ. ಈ ಹೊಸ ಪ್ರಕರಣದಲ್ಲಿ ಯಾದವ್ ಮತ್ತು ಅವರ ಕುಟುಂಬ ಸದಸ್ಯರು ರೈಲ್ವೆ ಉದ್ಯೋಗಗಳನ್ನು ನೀಡುವುದಕ್ಕಾಗಿ ಭೂಮಿ ಮತ್ತು ಆಸ್ತಿಯನ್ನು ಲಂಚವಾಗಿ ಪಡೆದಿದ್ದಾರೆ ಎಂದು ಸಿಬಿಐ ಆರೋಪಿಸಿದೆ. 

ದಾಳಿಯ ಬೆನ್ನಲ್ಲೇ ಕಾರ್ತಿ ಚಿದಂಬರಂ ಆಪ್ತ ಸ್ನೇಹಿತನನ್ನು ಬಂಧಿಸಿದ ಸಿಬಿಐ!

139 ಕೋಟಿ ಡೊರಾಂಡಾ ಖಜಾನೆ ಹಗರಣ ಪ್ರಕರಣದಲ್ಲಿ  73 ವರ್ಷದ ಹಿರಿಯ ನಾಯಕ ಲಾಲೂ ಪ್ರಸಾದ್‌ ಯಾದವ್ ಅವರಿಗೆ ಜಾರ್ಖಂಡ್ ಹೈಕೋರ್ಟ್ ಜಾಮೀನು ನೀಡಿದ ನಂತರ  ಕಳೆದ ತಿಂಗಳು ಜೈಲಿನಿಂದ ಹೊರ ನಡೆದಿದ್ದರು. ಈ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ಫೆಬ್ರವರಿಯಲ್ಲಿ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಅಲ್ಲದೆ 60 ಲಕ್ಷ ದಂಡವನ್ನೂ ವಿಧಿಸಿತ್ತು.ಖಜಾನೆ ಹಗರಣ ಪ್ರಕರಣವು ಯಾದವ್ ಅವರು  ದೋಷಿ ಆದಂತಹ ಐದನೇ ಮೇವು ಹಗರಣ ಪ್ರಕರಣವಾಗಿದೆ. ಯಾದವ್ ಅವರ ಪತ್ನಿ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರ ಪಾಟ್ನಾ ನಿವಾಸದಲ್ಲಿ ಇಂದು ಬೆಳಿಗ್ಗೆ ದಾಳಿ ನಡೆಸಲಾಗಿದೆ.

ಲಾಲೂ ಪ್ರಸಾದ್‌ ಯಾದವ್ (Lalu Yadav) ದೆಹಲಿಯಲ್ಲಿದ್ದಾರೆ ಮತ್ತು ಅವರ ಮಗ ಮತ್ತು ಪಕ್ಷದ ನಾಯಕ ತೇಜಸ್ವಿ ಯಾದವ್ ಕೂಡ ಬೇರೆಲ್ಲೋ ಇದ್ದಾರೆ. ಅಧಿಕಾರದಲ್ಲಿರುವವರು ಲಾಲು ಯಾದವ್ ಮತ್ತು ತೇಜಸ್ವಿ ಯಾದವ್ (Tejashwi Yadav) ಅವರ ಜನಪ್ರಿಯತೆಯನ್ನು ಸಹಿಸಲಾಗದೇ ಅವರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸುತ್ತಿದ್ದಾರೆ ಎಂದು ಆರ್‌ಜೆಡಿ ಶಾಸಕ ಡಾ ಮುಖೇಶ್ ರೋಷನ್ (Mukesh Roshan) ಹೇಳಿದ್ದಾರೆ. 

ಲಾಲೂ ಪ್ರಸಾದ್ ಯಾದವ್ ಗೆ ತೀವ್ರ ಅನಾರೋಗ್ಯ, ದೆಹಲಿ ಏಮ್ಸ್ ಗೆ ವರ್ಗಾವಣೆ

ಈ ಬಗ್ಗೆ ಮಾತನಾಡಿದ ಪಕ್ಷದ ಹಿರಿಯ ನಾಯಕ ಅಲೋಕ್ ಮೆಹ್ತಾ (Alok Mehta) ಇದು ಪ್ರತಿಪಕ್ಷಗಳನ್ನು ಮುಗಿಸುವ ಪ್ರಯತ್ನವಾಗಿದೆ, ಈ ಪ್ರಕರಣಗಳಿಗೆ ಯಾವುದೇ ಆಧಾರವಿಲ್ಲ. ಇದು ತಮ್ಮ ವಿರುದ್ಧದ ಟೀಕೆಗಳನ್ನು ಮುಚ್ಚುವ  ಪ್ರಯತ್ನವಾಗಿದೆ ಎಂದು ಹೇಳಿದರು.ಆರ್‌ಜೆಡಿ ನಾಯಕನ ವಿರುದ್ಧದ ಹಳೆಯ ಪ್ರಕರಣವನ್ನು ಕೆದಕಲು ಹೊರಟಿರುವ ಸಿಬಿಐನ ಕ್ರಮವು ಮುಖ್ಯಮಂತ್ರಿ ನಿತೀಶ್ ಕುಮಾರ್‌ಗೆ (Nitish Kumar) ಎಚ್ಚರಿಕೆ ಆಗಿರಬಹುದು ಎಂದು ಜೆಡಿಯು ಜೊತೆ ಕೆಲಸ ಮಾಡಿರುವ ಆರ್‌ಜೆಡಿ ಹಿರಿಯ ನಾಯಕ ಶಿವಾನಂದ್ ತಿವಾರಿ (Shivanand Tiwary) ಹೇಳಿದ್ದಾರೆ.

ಜಾತಿ ಗಣತಿಗಾಗಿ ಬಿಹಾರ ಸಿಎಂ ನಿತೀಶ್ ಕುಮಾರ್ (Nitish Kumar) ಮತ್ತು ತೇಜಸ್ವಿ ಯಾದವ್ (Tejashwi Yadav) ಒಗ್ಗೂಡುತ್ತಿರುವ ಬಗ್ಗೆ ಬಿಜೆಪಿ ಅಸಮಾಧಾನಗೊಂಡಿದೆ. ಇಲ್ಲದಿದ್ದರೆ ಏಕೆ ಸಿಬಿಐ ಜಾತಿ ಗಣತಿಯ ಬೇಡಿಕೆಯ ಕುರಿತು ಸರ್ವಪಕ್ಷ ಸಭೆ ಕರೆಯಲು ಸಿಎಂ ನಿತೀಶ್‌ ಕುಮಾರ್‌ ಮುಂದಾದ ಸಂದರ್ಭದಲ್ಲೇ ಈ ಪ್ರಕರಣದ ತನಿಖೆಗೆ ಮುಂದಾಗಿದೆ ಎಂದು ತಿವಾರಿ ಪ್ರಶ್ನಿಸಿದ್ದಾರೆ. ರೈಲ್ವೆ ಹಗರಣ ಎಂದು ಕರೆಯಲ್ಪಡುವ ಈ ಹಗರಣಕ್ಕೆ ಸಂಬಂಧಿಸಿದಂತೆ ಹಲವಾರು ದಾಳಿಗಳನ್ನು ನಡೆಸಲಾಗಿದೆ ಆದರೆ ಏನೂ ಕಂಡುಬಂದಿಲ್ಲ ಎಂದು RJD ತನ್ನ ಅಧಿಕೃತ ಖಾತೆಯಿಂದ  ಟ್ವೀಟ್ ಮಾಡಿದೆ.
 

Follow Us:
Download App:
  • android
  • ios