ದೆಹಲಿಯತ್ತ ಪ್ರಯಾಣ ಬೆಳೆಸಿದ ವಿಮಾನದಿಂದ ಹೈಜಾಕ್ ಸಂದೇಶ ಬಂದಿದೆ. ಏರ್‌ಟ್ರಾಫಿಕ್ ಕಂಟ್ರೋಲ್ ತಕ್ಷಣವೇ ವಿಮಾನವನ್ನು ಜೈಪುರದಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ವ್ಯವಸ್ಥೆ ಮಾಡಿದೆ. ವಿಮಾನ ಭೂಸ್ಪರ್ಶವಾಗುತ್ತಿದ್ದಂತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಜೈಪುರ (ಅ.14) ಫ್ಲೈ ದುಬೈ ವಿಮಾನ ಹೈಜಾಕ್ ಘಟನೆಯನ್ನು ಭಾರತೀಯ ಮೂಲದ ಕ್ಯಾಪ್ಟನ್ ಪೈಲೆಟ್ ಸ್ಮಿತ್ ಮಛಾರ್ ತಪ್ಪಿಸಿ 174 ಮಂದಿಯ ಜೀವ ಉಳಿಸಿದ ಘಟನೆ ಇತ್ತೀಚೆಗೆ ದೇಶಾದ್ಯಂತ ಸದ್ದು ಮಾಡಿತ್ತು. ಈ ಘಟನೆ ನಡೆದ ಕೆಲವೇ ದಿನಗಳ ಬಳಿಕ ಇದೀಗ ಫ್ರಾಂಕ್‌ಫ್ರಟ್‌ನಿಂದ ದೆಹಲಿಗೆ ಪ್ರಯಾಣ ಬೆಳೆಸಿದ ಏರ್ ಇಂಡಿಯಾ ವಿಮಾನದಲ್ಲಿ ಪೈಲೆಟ್ ಹೈಜಾಕ್ ಸಂದೇಶ ನೀಡಿದ್ದಾರೆ. ತುರ್ತು ಸಂದೇಶ ಬರುತ್ತಿದ್ದಂತೆ ಏರ್ ಟ್ರಾಫಿಕ್ ಕಂಟ್ರೋಲ್ ಜೈಪುರದಲ್ಲಿ ವಿಮಾನ ಲ್ಯಾಂಡಿಂಗ್ ಮಾಡಲು ವ್ಯವಸ್ಥೆ ಮಾಡಲಾಗಿದೆ. ಪೈಲೆಟ್ ಜೈಪುರದಲ್ಲಿ ವಿಮಾನವನ್ನು ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಲಾಗಿದೆ. ಆದರೆ ಲ್ಯಾಂಡಿಂಗ್ ಆದ ಬೆನ್ನಲ್ಲೇ ಘಟನೆಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಏನಿದು ಹೈಜಾಕ್ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್

ವಿಮಾನ ಲ್ಯಾಂಡಿಂಗ್ ಆದ ಬೆನ್ನಲ್ಲೇ ಪೈಲೆಟ್‌ಗೆ ತನ್ನ ತಪ್ಪಿನ ಅರಿವಾಗಿದೆ. ಪೈಲೆಟ್ ತಪ್ಪಾಗಿ ಹೈಜಾಕ್ ಸಂದೇಶ ಬಟನ್ ಕೋಡ್ ಪ್ರೆಸ್ ಮಾಡಿದ್ದರು ಎಂದು ವರದಿಯಾಗಿದೆ. ಪೈಲೆಟ್ ಮಾಡಿದ ಅಚಾತುರ್ಯದಿಂದ ಪ್ರಯಾಣಿಕರು ಆತಂಕ ಎದುರಿಸಿದರೆ, ಟ್ರಾಫಿಕ್ ಕಂಟ್ರೋಲ್ ಸೇರಿದಂತೆ ಭದ್ರತಾ ಸಿಬ್ಬಂದಿ ಪರಿಸ್ಥಿತಿ ನಿಭಾಯಿಸಲು ಎಲ್ಲಾ ಪ್ರಯತ್ನ ನಡೆಸಿದ್ದರು. ಪ್ರಾಥಮಿಕ ಮಾಹಿತಿ ಪ್ರಕಾರ ಪೈಲೆಟ್ ತಪ್ಪಾಗಿ ಹೈಜಾಕ್ ಸಂದೇಶ ನೀಡಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ಘಟನೆ ಕುರಿತು ತನಿಖೆಗೆ ಆದೇಶಿಸಲಾಗಿದೆ.

ಏನಿದು ಘಟನೆ?

ಫ್ರಾಂಕ್‌ಫ್ರುಟ್‌ನಿಂದ ಹೊರಟ ಏರ್ ಇಂಡಿಯಾ AI-2030 ವಿಮಾನ ದೆಹಲಿಯಲ್ಲಿ ಪ್ರಯಾಣ ಬೆಳೆಸಿತ್ತು. ಭಾರತದ ಗಡಿ ಪ್ರವೇಶಿಸಿ ನೇರವಾಗಿ ದೆಹಲಿಯತ್ತ ತೆರಳುತ್ತಿದ್ದ ವಿಮಾನದಿಂದ ಅಹಮ್ಮದಾಬಾದ್ ಏರ್ ಟ್ರಾಫಿಕ್ ಕಂಟ್ರೋಲ್‌ಗೆ ಹೈಜಾಕ್ ಅಲರ್ಟ್ ಸಂದೇಶ ಬಂದಿದೆ. ಏರ್ ಇಂಡಿಯಾ ವಿಮಾನದ ಪೈಲೆಟ್ Squawk 7500 ಕೋಡ್ ಪ್ರೆಸ್ ಮಾಡಿದ್ದಾರೆ. ಇದು ಹೈಜಾಕ್ ಸಂದರ್ಭದಲ್ಲಿ ಬಳಸುವ ಎಮರ್ಜೆನ್ಸಿ ಕೋಡ್. ಅಹಮ್ಮದಾಬಾದ್ ಏರ್ ಟ್ರಾಫಿಕ್ ಕಂಟ್ರೋಲ್‌ಗೆ ಈ ಸಂದೇಶ ಬಂದ ಬೆನ್ನಲ್ಲೇ ವಿಮಾನದ ಹತ್ತಿರದ ನಿಲ್ದಾಣ ಜೈಪುರದಲ್ಲಿ ಲ್ಯಾಂಡಿಂಗ್ ಮಾಡಲು ವ್ಯವಸ್ಥೆ ಮಾಡಲಾಗಿದೆ. ಪೊಲೀಸರು, ಭದ್ರತಾ ಸಿಬ್ಬಂದಿಗಳು, ಆಂಬುಲೆನ್ಸ್, ಅಗ್ನಿಶಾಮಕ ದಳ ಸೇರಿದಂತೆ ಇಡೀ ತಂಡವೂ ಸಜ್ಜಾಗಿತ್ತು.

ವಿಮಾನ ತುರ್ತು ಲ್ಯಾಂಡಿಂಗ್ ಆಗುತ್ತಿದ್ದಂತೆ ನಿರಂತರ ಸಂಪರ್ಕದಲ್ಲಿದ್ದ ಏರ್ ಟ್ರಾಫಿಕ್ ಕಂಟ್ರೋಲ್ ಯೂನಿಟ್, ವಿಮಾನವನ್ನು ಭದ್ರತಾ ಪಡೆಗಳು ವಶಕ್ಕೆ ಪಡೆಯಲು ಸುತ್ತುವರಿದಿದ್ದಾರೆ. ಬಳಿಕ ಇಬ್ಬರು ಪೈಲೆಟ್‌ಗಳನ್ನು ತನಿಖಾ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಇತ್ತ ಪ್ರಯಾಣಿಕರು ಸುರಕ್ಷತಾ ಚೆಕ್ ನಡೆಸಲಾಗಿದೆ. ಸ್ಥಳದಲ್ಲಿ ಭಯೋತ್ಪಾದನಾ ವಿರೋಧಿ ತಂಡ ಹಾಗೂ ಇತರ ಭದ್ರತಾ ಪಡೆಗಳು ಕಾರ್ಯನಿರ್ವಹಿಸುತ್ತಿದೆ.

ಪೈಲೆಟ್ ತಪ್ಪಾಗಿ ಹೈಜಾಕ್ ಸಂದೇಶ ನೀಡಿದ್ದಾರೋ ಅಥವಾ ಪ್ರಯತ್ನಗಳು ನಡೆದಿತ್ತಾ ಅನ್ನೋ ಕುರಿತು ತನಿಖೆ ನಡೆಯಲಿದೆ. ಇದೇ ವೇಳೆ ತಪ್ಪಾಗಿ ಹೈಜಾಕ್ ಬಟನ್ ಪ್ರೆಸ್ ಮಾಡಿದ್ದು ಯಾಕೆ ಅನ್ನೋ ಕುರಿತು ವಿಚಾರಣೆ ನಡೆಯಲಿದೆ. ಸದ್ಯ ಪ್ರಯಾಣಿಕರಿಗೆ ಬೇರೆ ವಿಮಾನ ವ್ಯವಸ್ಥೆ ಮಾಡಲಾಗಿದ್ದು, ಪೈಲೆಟ್ ವಿಚಾರಣೆ ಕಸ್ಟಡಿಯಲ್ಲಿದ್ದಾರೆ.