ಬಿಹಾರದಲ್ಲಿ ವಿಕಾಸಶೀಲ್ ಇನ್ಸಾನ್ ಪಾರ್ಟಿಗೆ ಶಾಕ್ ವಿಐಪಿ ಪಾರ್ಟಿ ತೊರೆದು ಬಿಜೆಪಿ ಸೇರಿದ ಮೂವರು ಶಾಸಕರು ಬಿಹಾರ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಬಲ 77ಕ್ಕೆ ಏರಿಕೆ
ಪಾಟ್ನಾ(ಮಾ.24): ಬಿಹಾರದಲ್ಲಿ ವಿಕಾಸಶೀಲ್ ಇನ್ಸಾನ್ ಪಾರ್ಟಿ (ವಿಐಪಿ) ಮುಖ್ಯಸ್ಥ ಮುಖೇಶ್ ಸಹಾನಿ ಅವರಿಗೆ ದೊಡ್ಡ ಹೊಡೆತ ಉಂಟಾಗಿದ್ದು, ಆ ಪಕ್ಷದ ಎಲ್ಲಾ 3 ಶಾಸಕರು ಬುಧವಾರ ಬಿಜೆಪಿ ಸೇರಿದ್ದಾರೆ. ಮುಖೇಶ್ ಸಹಾನಿ ನೇತೃತ್ವದ ವಿಕಾಸಶೀಲ್ ಇನ್ಸಾನ್ ಪಾರ್ಟಿ (ವಿಐಪಿ)ಯ ಮೂವರು ಶಾಸಕರು ಪಕ್ಷವನ್ನು ತೊರೆದು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ತಮ್ಮ ಬೆಂಬಲವನ್ನು ನೀಡಿದ್ದಾರೆ. ವಿಐಪಿಯು ಬಿಜೆಪಿ, ಜನತಾ ದಳ ಯುನೈಟೆಡ್ (ಜೆಡಿಯು) ಮತ್ತು ಹಿಂದೂಸ್ತಾನ್ ಅವಾಮಿ ಮೋರ್ಚಾ (ಎಚ್‌ಎಎಂ) ಒಳಗೊಂಡಿರುವ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಮಿತ್ರ ಪಕ್ಷವಾಗಿದೆ.
ರಾಜು ಸಿಂಗ್ (Raju Singh), ಮಿಶ್ರಿ ಲಾಲ್ ಯಾದವ್ (Mishri Lal Yadav) ಮತ್ತು ಸ್ವರ್ಣ ಸಿಂಗ್ (Swarna Singh) ವಿಐಪಿ ತೊರೆದು ಬಿಜೆಪಿ ಸೇರಿದ ಮೂವರು ಶಾಸಕರಾಗಿದ್ದಾರೆ. ಈ ಮೂವರು ಶಾಸಕರು ಬುಧವಾರ ಸಂಜೆ ಬಿಹಾರ ವಿಧಾನಸಭೆ ಸ್ಪೀಕರ್ ವಿಜಯ ಕುಮಾರ್ ಸಿನ್ಹಾ ಅವರನ್ನು ಭೇಟಿ ಮಾಡಿ ತಾವು ಬಿಜೆಪಿ ಪರವಾಗಿರುವುದಾಗಿ ಪತ್ರವೊಂದನ್ನು ನೀಡಿದ್ದಾರೆ. ನಂತರ ಬಿಜೆಪಿ ರಾಜ್ಯಾಧ್ಯಕ್ಷ ಸಂಜಯ್ ಜೈಸ್ವಾಲ್ ಹಾಗೂ ಬಿಜೆಪಿ ಇತರ ನಾಯಕರಾದ ತರ್ಕಿಶೋರ್ ಪ್ರಸಾದ್, ರೇಣು ದೇವಿ ಈ ಮೂವರನ್ನು ಬಿಜೆಪಿ ಕಚೇರಿಯಲ್ಲಿ ಪಕ್ಷಕ್ಕೆ ಬರ ಮಾಡಿಕೊಂಡಿದ್ದಾರೆ.
'ನನ್ನನ್ನು ಸಿಎಂ ಸ್ಥಾನದಿಂದ ಮಧ್ಯದಲ್ಲೇ ಪದಚ್ಯುತಗೊಳಿಸಬಹುದು'!
ಈ ಮಾಧ್ಯಮದವರು ಸ್ಪೀಕರ್ ವಿಜಯ್‌ಕುಮಾರ್ ಸಿನ್ಹಾ ಅವರಿಗೆ ಕರೆ ಮಾಡಿ ವಿಚಾರಿಸಿದಾಗ, ಪ್ರಸ್ತುತ ವಿಧಾನಸಭಾ ಅಧಿವೇಶನ ನಡೆಯುತ್ತಿದ್ದು, ತಾನು ಈ ವಿಚಾರವಾಗಿ ಏನೂ ಹೇಳುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಈ ಬಗ್ಗೆ ಗುರುವಾರ ವಿಧಾನಸಭೆಯಲ್ಲಿ ಮಾಹಿತಿ ನೀಡುವುದಾಗಿ ಅವರು ಹೇಳಿದ್ದಾರೆ. ಮೂವರು ವಿಐಪಿ ಶಾಸಕರ ಸೇರ್ಪಡೆಯಿಂದಾಗಿ ಬಿಜೆಪಿ ಈಗ ಬಿಹಾರ ವಿಧಾನಸಭೆಯಲ್ಲಿ 77 ಶಾಸಕರನ್ನು ಹೊಂದಿರುವ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. 75 ಶಾಸಕರನ್ನು ಹೊಂದಿರುವ ಆರ್‌ಜೆಡಿ ಎರಡನೇ ಸ್ಥಾನಕ್ಕೆ ಬಂದಿದೆ. ಜೆಡಿಯು 45, ಕಾಂಗ್ರೆಸ್ 19 ಮತ್ತು ಎಡಪಕ್ಷಗಳು 15 ಶಾಸಕರನ್ನು ಹೊಂದಿವೆ.
Spurious Liquor ಬಿಹಾರದಲ್ಲಿ ಹೋಳಿ ವೇಳೆ ಕಳ್ಳಬಟ್ಟಿಸೇವಿಸಿ 17 ಸಾವು!
ಉತ್ತರ ಪ್ರದೇಶ (Uttar Pradesh) ವಿಧಾನಸಭೆ ಚುನಾವಣೆಯಲ್ಲಿ ಮುಖೇಶ್ ಸಹಾನಿ (Mukesh Sahani) ನೇತೃತ್ವದ ವಿಐಪಿ ಬಿಜೆಪಿ ವಿರುದ್ಧ 57 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಏಪ್ರಿಲ್ 12 ರಂದು ನಡೆಯಲಿರುವ ಬೋಚಾಹಾ (Bochaha) ವಿಧಾನಸಭಾ ಉಪಚುನಾವಣೆಯಲ್ಲಿ ಅವರು ಬಿಜೆಪಿಯ ಬೇಬಿ ಕುಮಾರಿ (Baby Kumari) ವಿರುದ್ಧ ಗೀತಾ ದೇವಿ (Geeta Devi) ಎಂಬ ಅಭ್ಯರ್ಥಿಯನ್ನು ಕೂಡ ಹಾಕಿದ್ದಾರೆ. ಸಹಾನಿ ಎಂಎಲ್‌ಸಿ ಆಗಿದ್ದು, ಜುಲೈನಲ್ಲಿ ಅವರ ಅವಧಿ ಮುಕ್ತಾಯವಾಗಲಿದೆ. ಅವರು ಮುಖ್ಯಮಂತ್ರಿ (Chief Minister) ನಿತೀಶ್ ಕುಮಾರ್ (Nitish Kumar) ನೇತೃತ್ವದ ಬಿಹಾರದ ಎನ್‌ಡಿಎ ಸರ್ಕಾರದಲ್ಲಿ ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವರಾಗಿದ್ದಾರೆ.
ತಮ್ಮ ಪಕ್ಷದ ಶಾಸಕರೆಲ್ಲರೂ ಪಕ್ಷ ತೊರೆದಿದ್ದರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ವಿಐಪಿ ಮುಖ್ಯಸ್ಥ ಮುಖೇಶ್ ಸಹಾನಿ ನಿರಾಕರಿಸಿದ್ದಾರೆ. ಈ ಬಗ್ಗೆ ಸಿಎಂ ನಿತೀಶ್ ಕುಮಾರ್ ನಿರ್ಧಾರ ಮಾಡಲಿ ಅವರ ನಿರ್ಧಾರಕ್ಕೆ ತಾನು ಬದ್ಧ ಎಂದು ಮುಖೇಶ್ ಸಹಾನಿ ಹೇಳಿದ್ದಾರೆ.