ಭೋಪಾಲ್‌ನಲ್ಲಿ 61 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದ 81 ವರ್ಷದ ನೇತ್ರತಜ್ಞೆ ಹೇಮಲತಾ ಶ್ರೀವಾಸ್ತವ್ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಆರೋಗ್ಯವಾಗಿದ್ದ ಅವರು ಹಠಾತ್ ಅಸ್ವಸ್ಥರಾದ ಸಮಯದಲ್ಲಿ ಆಸ್ತಿ ದಾನ ಮಾಡಿದ ದಾಖಲೆಗಳಿಗೆ ಸಹಿ ಹಾಕಿದ್ದಾರೆ ಎನ್ನಲಾಗಿದ್ದು, ಅವರ ಸಾವು ಅನುಮಾನ ಹುಟ್ಟಿಸಿದೆ.
61 ಕೋಟಿ ಆಸ್ತಿಯ ಒಡತಿ, 81 ವರ್ಷದ ವೈದ್ಯೆಯ ನಿಗೂಢ ಸಾವು:
ಭೋಪಾಲ್: ಮಧ್ಯಪ್ರದೇಶದಲ್ಲಿ 81 ವರ್ಷದ ವೈದ್ಯಯೊಬ್ಬರು 61 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದ ವೈದ್ಯರೊಬ್ಬರು ನಿಗೂಢವಾಗಿ ಸಾವನ್ನಪ್ಪಿದ್ದು, ಅವರ ಸಾವು ಈಗ ಹಲವು ಅನುಮಾನಗಳಿಗೆ ಕಾರಣವಾಗಿದೆ. ಅವರ ಗಂಡ ಹಾಗೂ ಮಗ ಮೊದಲೇ ಸಾವನ್ನಪ್ಪಿದ್ದರಿಂದ ಆ ಆಸ್ತಿಗೆ ಯಾವುದೇ ವಾರಸುದಾರರಿರಲಿಲ್ಲ. ಹೌದು ಭೋಪಾಲ್‌ನ ರೈಟ್ ಟೌನ್ ನಿವಾಸಿ ಖ್ಯಾತ ನೇತ್ರತಜ್ಞೆ ಹೇಮಲತಾ ಶ್ರೀವಾಸ್ತವ್ ಅವರ ಸಾವು ಈಗ ನಗರದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಆರೋಗ್ಯವಾಗಿಯೇ ಇದ್ದ ಅವರು ಕೆಲ ದಿನಗಳಿಂದ ಹಠಾತ್ ಅಸ್ವಸ್ಥರಾಗಿ ಸಾವನ್ನಪ್ಪಿದ್ದಾರೆ.
ಹೇಮಲತಾ ಅವರ ಹುಟ್ಟುಹಬ್ಬ ಜನವರಿ 12ರಂದು ಇತ್ತು. ಹೇಮಲತಾ ತಮ್ಮ ಮಗನ ಸ್ನೇಹಿತ ಡಾ. ಸುಮಿತ್ ಜೈನ್ ಮತ್ತು ಅವರ ಪತ್ನಿ ಪ್ರಾಚಿ ಜೈನ್ ಅವರೊಂದಿಗೆ ಕೇಕ್ ಕತ್ತರಿಸುತ್ತಿರುವ ವಿಡಿಯೋವೊಂದು ಈಗ ವೈರಲ್ ಆಗಿದೆ. ಈ ಘಟನೆ ನಡೆದು ಎರಡು ದಿನಗಳ ನಂತರ, ಅವರ ಆರೋಗ್ಯ ಹದಗೆಟ್ಟಿದೆ. ಜನವರಿ 15 ರ ಹೊತ್ತಿಗೆ, ಅವರ ಸ್ಥಿತಿ ಗಂಭೀರವಾಗಿತ್ತು. ಈ ದಿನಗಳಲ್ಲಿ ಒಂದು ದಿನ, ರೈಟ್ ಟೌನ್‌ನಲ್ಲಿ 11,000 ಚದರ ಅಡಿ ಭೂಮಿಯನ್ನು ಡಾ. ಸುಮಿತ್‌ಗೆ ದಾನ ಮಾಡುವ ದಾಖಲೆಗಳಿಗೆ ಅವರು ಸಹಿ ಹಾಕಿದರು ಎನ್ನಲಾಗಿದ್ದು ಈ ವಿಚಾರ ಈಗ ವಿವಾದಕ್ಕಿಡಾಗಿದೆ. ಹೇಮಲತಾ ತಮ್ಮ ಮಗ ಹಾಗೂ ಪತಿಯ ಹೆಸರಿನಲ್ಲಿ ಅವರ ಸ್ಮರಣಾರ್ಥ ಆಸ್ಪತ್ರೆ ನಿರ್ಮಿಸಲು ಸ್ವಯಂಪ್ರೇರಣೆಯಿಂದ ಭೂಮಿಯನ್ನು ದಾನ ಮಾಡಿದ್ದಾರೆ ಎಂದು ಸುಮಿತ್ ಹೇಳಿದ್ದಾರೆ.
ಆದರೆ ಭಾರತೀಯ ವೈದ್ಯಕೀಯ ಸಂಘವು ಸುಮಿತ್ ಅವರ ಹೇಳಿಕೆಯನ್ನು ತಿರಸ್ಕರಿಸಿದೆ.. ವೈದ್ಯರು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿ ಇಲ್ಲದೇ ಇದ್ದ ಸಮಯದಲ್ಲಿ ಬೆದರಿಕೆ ಹಾಗೂ ಒತ್ತಡ ಹಾಕಿ ಅವರಿಂದ ದಾಖಲೆಗಳಿಗೆ ಸಹಿ ಹಾಕಿಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ. ಈ ನಡುವೆ, ಗಾಯತ್ರಿ ಮಂದಿರ ಎಂಬ ಟ್ರಸ್ಟ್ ಮುಂದೆ ಬಂದು, ವೈದ್ಯರು ಸಂಪೂರ್ಣ ಆಸ್ತಿಯನ್ನು ತಮಗೆ ನೀಡಲು ಬಯಸಿದ್ದಾರೆಂದು ಹೇಳಿಕೊಂಡಿದೆ. ಹೇಮಲತಾ ಅವರ ಸಹೋದರಿಯರಲ್ಲಿ ಒಬ್ಬರಾದ ಕನಕ್ ಲತಾ ಮಿಶ್ರಾ ಈ ಹೇಳಿಕೆಯನ್ನು ಬೆಂಬಲಿಸಿದ್ದಾರೆ. ಆದರೂಮತ್ತೊಬ್ಬ ಸಹೋದರಿ ಶಾಂತಿ ಮಿಶ್ರಾ ಅವರು ಹೇಮಲತಾ ಅವರ ದೇಹವನ್ನು ಸ್ವೀಕರಿಸಿದ್ದು, ಆಸ್ತಿಯ ಮೇಲೆ ಕಾನೂನುಬದ್ಧ ಹಕ್ಕುಗಳನ್ನು ಪಡೆಯಲು ಮುಂದೆ ಬಂದಿದ್ದಾರೆ.
ಆಸ್ತಿ ವಿವಾದ ತೀವ್ರಗೊಳ್ಳುತ್ತಿದ್ದಂತೆ, ಜಿಲ್ಲಾಧಿಕಾರಿ ರಾಘವೇಂದ್ರ ಸಿಂಗ್ ಅವರು ನಿರ್ಣಾಯಕ ವಿಚಾರ ಬಹಿರಂಗಪಡಿಸಿದ್ದು, ಈಗ ಎಲ್ಲರೂ ಹಕ್ಕು ಸಾಧಿಸುತ್ತಿರುವ ಭೂಮಿ ಪುರಸಭೆಯ ಗುತ್ತಿಗೆಯಲ್ಲಿದೆ ಮತ್ತು ಅದನ್ನು ಕಾನೂನುಬದ್ಧವಾಗಿ ಬೇರೆಯವರಿಗೆ ದಾನ ಮಾಡಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ. ತಮ್ಮ ಮರಣಕ್ಕೂ ಮೊದಲು ನೀಡಿದ ಹೇಳಿಕೆಯಲ್ಲಿ ಡಾ. ಹೇಮಲತಾ ಅವರು ಆಸ್ತಿಯನ್ನು ದಾನ ಮಾಡಿಲ್ಲ ಮತ್ತು ಸುಳ್ಳು ಮಾಹಿತಿಯನ್ನು ನೀಡುವ ಮೂಲಕ ದಾಖಲೆಗಳನ್ನು ಸಿದ್ಧಪಡಿಸಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರೈಲಿನಲ್ಲೇ ಗರ್ಭಿಣಿಗೆ ಸೀಮಂತ ಮಾಡಿದ ಮಹಿಳಾ ಸಹ ಪ್ರಯಾಣಿಕರು: ವೀಡಿಯೋ ವೈರಲ್
ಹೇಮಲತಾ ಅವರ ಏಕೈಕ ಪುತ್ರ 2022 ರಲ್ಲಿ ಹೃದಯಾಘಾತದಿಂದ ನಿಧನರಾದರು. ಅವರ ಪತಿ ಡಿಸೆಂಬರ್ 2024 ರಲ್ಲಿ ನಿಧನರಾದರು. 2025ರ ನವೆಂಬರ್ ವರೆಗೆ ದೈಹಿಕವಾಗಿ ಸಂಪೂರ್ಣವಾಗಿ ಆರೋಗ್ಯವಾಗಿದ್ದ ಹೇಮಲತಾ ಅವರು ಇದ್ದಕ್ಕಿದ್ದಂತೆ ಹೇಗೆ ಅಶಕ್ತರಾದರು ಎಂದು ನೆರೆಹೊರೆಯವರು ಮತ್ತು ವೈದ್ಯರು ಸಂಶಯ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ನವೆಂಬರ್ 9 ರಂದು ನಡೆದ ವೈದ್ಯಕೀಯ ಸಮ್ಮೇಳನದಲ್ಲಿ ಭಾಗವಹಿಸಿದಾಗಲೂ ಅವರು ಆರೋಗ್ಯವಾಗಿದ್ದರು. ಜನವರಿ ವೇಳೆಗೆ ಅವರು ಹಠಾತ್ ಆಗಿ ಈ ಸ್ಥಿತಿಯನ್ನು ಹೇಗೆ ತಲುಪಿದರು ಎಂಬುದರ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.
ವೈದ್ಯೆ ಹೆಮಲತಾ ಅವರ ಸ್ಥಿತಿ ಹದಗೆಟ್ಟಾಗ, ಅವರನ್ನು ಧಾರ್ಮಿಕ ಗುಂಪಿಗೆ ಸೇರಿದ ವ್ಯಕ್ತಿಗಳು ಕಾರಿನಲ್ಲಿ ಕರೆದೊಯ್ದಿದ್ದಾರೆ ಎಂಬ ವರದಿಗಳು ಪ್ರಕರಣದ ಅನುಮಾನವನ್ನು ಮತ್ತಷ್ಟು ಹಚ್ಚಿಸಿವೆ. ನೆರೆಹೊರೆಯವರು ಆಕ್ಷೇಪ ವ್ಯಕ್ತಪಡಿಸಿದ ಕಾರಣ ಪೊಲೀಸರು ಮಧ್ಯಪ್ರವೇಶಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ, ಅವರಿಗೆ ಎಲ್ಲಿ ಚಿಕಿತ್ಸೆ ನೀಡಲಾಯಿತು, ಯಾವ ಔಷಧಿಗಳನ್ನು ನೀಡಲಾಯಿತು ಮತ್ತು ಅವರ ಆರೋಗ್ಯ ಏಕೆ ಬೇಗನೆ ಹದಗೆಟ್ಟಿತು ಎಂಬ ಬಗ್ಗೆ ಪ್ರಶ್ನೆಗಳು ಎದ್ದಿವೆ.
ಈಗ ಈ ಇಡೀ ವಿಚಾರವನ್ನು ಉಪ ವಿಭಾಗೀಯ ಮ್ಯಾಜಿಸ್ಟೇಟ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಸಂಬಂಧಪಟ್ಟ ಎಲ್ಲ ಪಕ್ಷಗಳ ಹೇಳಿಕೆಗಳನ್ನು ದಾಖಲಿಸಲಾಗುತ್ತಿದೆ. ಕಾನೂನು ನಿಬಂಧನೆಗಳ ಪ್ರಕಾರ ಕಟ್ಟುನಿಟ್ಟಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಘಟನೆಗೆ ಸಂಬಂಧಿಸಿದಂತೆ ಕಲೆಕ್ಟರ್ ಹೇಳಿದ್ದಾರೆ.
ಇದನ್ನೂ ಓದಿ: ಒಬ್ಬನೇ ಒಬ್ಬ ಮಗ ಅಪಘಾತದಲ್ಲಿ ಸಾವು: ನೋವು ತಾಳಲಾರದೇ ಸಾವಿಗೆ ಶರಣಾದ ದಂಪತಿ


