ಮೇ 9ರಂದು ಬೆಂಗಳೂರಿನ ವೈಟ್‌ಫೀಲ್ಡ್‌ನ ಪ್ರಶಾಂತ್ ಲೇಔಟ್‌ನಲ್ಲಿ ಛತ್ತೀಸ್‌ಗಢ ಮೂಲದ ೨೬ ವರ್ಷದ ಟೆಕ್ಕಿ ಶುಭಾಂಶು ಶುಕ್ಲಾ ಪಾಕ್ ಪರ ಘೋಷಣೆ ಕೂಗಿದ್ದಕ್ಕಾಗಿ ಬಂಧಿತನಾಗಿದ್ದಾನೆ. ಪಿಜಿಯ ಬಾಲ್ಕನಿಯಿಂದ ಘೋಷಣೆ ಕೂಗಿದ್ದು, ಎದುರಿನ ಪಿಜಿಯವರು ವಿಡಿಯೋ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಬೆಂಗಳೂರು (ಮೇ 14): ಬೆಂಗಳೂರು ನಗರದ ವೈಟ್‌ಫೀಲ್ಡ್ ಪ್ರದೇಶದಲ್ಲಿರುವ ಪ್ರಶಾಂತ್ ಲೇಔಟ್‌ನ ಪಿಜಿ (ಪೇಯಿಂಗ್ ಗೆಸ್ಟ್)ವೊಂದರಲ್ಲಿ ಪಾಕ್ ಪರ ಘೋಷಣೆ ಕೂಗಿದ ಯುವಕನನ್ನು ಪೊಲೀಸರು ಬಂಧಿಸಿರುವ ಘಟನೆ ಮೇ 9ರ ಮಧ್ಯರಾತ್ರಿ ನಡೆದಿದೆ.

ಆರೋಪಿ ಛತ್ತೀಸ್‌ಗಢ ಮೂಲದ 26 ವರ್ಷದ ಹಿಂದೂ ಯುವಕ ಶುಭಾಂಶು ಶುಕ್ಲಾ ಎಂಬಾತನಾಗಿದ್ದಾನೆ. ಬೆಂಗಳೂರಿನಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ ಈತ, ವೈಟ್‌ಫೀಲ್ಡ್‌ನ ಪ್ರಶಾಂತ್ ಲೇಔಟ್‌ನಲ್ಲಿ ಪಿಜಿಯಲ್ಲಿ ವಾಸಿಸುತ್ತಿದ್ದ. ಮೇ 9ರ ರಾತ್ರಿ 12.30ರ ಸುಮಾರಿಗೆ ಈತ ಪಿಜಿಯ ಬಾಲ್ಕನಿಗೆ ಬಂದು ಪಾಕ್ ಪರ ಘೋಷಣೆ ಕೂಗಿದ್ದಾನೆ ಎನ್ನಲಾಗಿದೆ. ಅಂದಿನ ದಿನ 'ಆಪರೇಷನ್ ಸಿಂದೂರ್' ಯಶಸ್ವಿಯಾಗಿ ನಡೆಯುತ್ತಿದ್ದಾಗ, ದೇಶಾದ್ಯಾಂತ ಉತ್ಸಾಹದ ವಾತಾವರಣವಿತ್ತು. ಈ ನಡುವೆ ಪಾಕ್ ಪರ ಘೋಷಣೆ ಕೇಳಿದ ಎದುರು ಪಿಜಿಯ ಯುವಕರು ಭೀತಿಗೊಳಗೊಂಡಿದ್ದಾರೆ. ಕೆಲವರು ಉಗ್ರರು ಬಂದುಬಿಟ್ಟರೆಂಬ ಆತಂಕಕ್ಕೊಳಗಾಗಿದ್ದರು.

ಈ ಘಟನೆಯ ವೀಡಿಯೊವನ್ನು ಎದುರು ಪಿಜಿಯಲ್ಲಿ ಇರುವ ಯುವಕನೊಬ್ಬ ಮೊಬೈಲ್‌ನಲ್ಲಿ ದಾಖಲಿಸಿ, ತಕ್ಷಣವೇ 112 ಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಸ್ಥಳಕ್ಕೆ ಧಾವಿಸಿದ ವೈಟ್‌ಫೀಲ್ಡ್ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವೀಡಿಯೊ ಪರಿಶೀಲನೆ ವೇಳೆ ಶುಭಾಂಶು ಎಂಬಾತ ಪಾಕ್ ಪರ ಘೋಷಣೆ ಕೂಗಿರುವುದು ದೃಢಪಟ್ಟಿದ್ದು, ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. 

ವೈಟ್‌ಫೀಲ್ಡ್ ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತಾ, ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ ಅಥವಾ ದೇಶದ ವಿರುದ್ಧವಾದ ಯಾವುದೇ ಕೃತ್ಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಮಹತ್ವದ ಮಾಹಿತಿ:
ಘಟನೆ ದಿನಾಂಕ: ಮೇ 9, ರಾತ್ರಿ 12:30
ಸ್ಥಳ: ಪ್ರಶಾಂತ್ ಲೇಔಟ್, ವೈಟ್‌ಫೀಲ್ಡ್, ಬೆಂಗಳೂರು
ಆರೋಪಿ: ಶುಭಾಂಶು ಶುಕ್ಲಾ (26), ಛತ್ತೀಸ್‌ಗಢ ಮೂಲದ ಟೆಕ್ಕಿ
ಕ್ರಮ: ಪಾಕ್ ಪರ ಘೋಷಣೆ ಕೂಗಿದ ಆರೋಪದಲ್ಲಿ ಬಂಧನ

ನವಾಜ್ ಹೆಸರಿನಲ್ಲಿ ಪ್ರಧಾನಿ ಮೋದಿ ವಿರುದ್ಧ ದೇಶದ್ರೋಹಿ ವಿಡಿಯೋ ಪೋಸ್ಟ್ ಮಾಡಿದ ರಮೇಶ!
ಮತ್ತೊಂದು ಪ್ರಕರಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಪ್ರಚೋದನಾತ್ಮಕ ಮತ್ತು ದೇಶದ್ರೋಹೀಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ವೈರಲ್ ಮಾಡಿದ್ದ ವ್ಯಕ್ತಿಯೊಬ್ಬನನ್ನು ಬೆಂಗಳೂರು ಪೊಲೀಸರ ತಂಡ ನಾಟಕೀಯವಾಗಿ ಬಂಧಿಸಿದೆ. ನವಾಜ್ ಎಂಬ ನಾಮಧೇಯದಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ ಆರೋಪಿ, ನಿಜವಾಗಿ ರಮೇಶ್ ಬಾನೋತ್ ಎಂಬಾತನಾಗಿದ್ದು, ಬಂಡೇಪಾಳ್ಯ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ರಮೇಶ್, ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ 'Public Servant' ಎಂಬ ಐಡಿಯನ್ನು ಬಳಸಿಕೊಂಡು ಪ್ರಚೋದನಾತ್ಮಕ ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿದ್ದನು. ಈ ವಿಡಿಯೋಗಳಲ್ಲಿ ರಮೇಶ್, ಭಾರತ ಮತ್ತು ಪಾಕಿಸ್ತಾನ ಸೈನಿಕರ ಸಂಘರ್ಷದ ಸಂದರ್ಭದಲ್ಲಿಯೇ ಪ್ರಧಾನಿ ಮೋದಿಯವರ ಮನೆ ಮೇಲೆ ಬಾಂಬ್ ಬೀಳಬೇಕೆಂದು ಉದ್ದೇಶಪೂರ್ವಕವಾಗಿ ಹೇಳಿಕೆ ನೀಡಿದ್ದನು. ಜನರು ಸುಮ್ಮನೆ ಇರುವವರನ್ನ ತೊಂದರೆ ಮಾಡುತ್ತಿರುವ ಮೋದಿ ಮನೆ ಮೇಲೆ ಯಾಕೆ ಬಾಂಬ್ ಬೀಳುತ್ತಿಲ್ಲ? ಮೊದಲು ಮೋದಿಯವರ ಮನೆ ಮೇಲೆ ಬಾಂಬ್ ಹಾಕಬೇಕು" ಎಂಬಂತೆಯೇ ಅಪಾರಧಾಯಕ ಹೇಳಿಕೆ ನೀಡಿದ್ದ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗಿತ್ತು.

ಈ ವಿಷಯ ಕುರಿತು ಹಲವು ದೂರುಗಳು ಬಂದ ಬಳಿಕ, ಬಂಡೇಪಾಳ್ಯ ಪೊಲೀಸ್ ಠಾಣೆ ಪೊಲೀಸರು ತನಿಖೆ ಆರಂಭಿಸಿದರು. ಈತನ ಇನ್‌ಸ್ಟಾಗ್ರಾಂ ಪೋಸ್ಟ್ ಆಧರಿಸಿ ಆರೋಪಿಗೆ ಸರಿಯಾಗಿ ಪತ್ತೆ ಹಚ್ಚಿ ಬಂಧಿಸಿದರು. ಜಂಟಿ ಆಯುಕ್ತರು ಈ ಪ್ರಕರಣದ ಕುರಿತು ಅಧಿಕೃತ ಮಾಹಿತಿ ನೀಡಿದ್ದಾರೆ. ಈಗ ರಮೇಶ್‌ನ್ನು ಪರಪ್ಪನ ಅಗ್ರಹಾರ ಜೈಲುಗೆ ಕಳುಹಿಸಲಾಗಿದ್ದು, ಮುಂದಿನ ತನಿಖೆ ಜಾರಿಯಲ್ಲಿದೆ.