ಪ್ರಧಾನಿ ನರೇಂದ್ರ ಮೋದಿಯವರ ಯೋಗ ಗುರು ಹಾಗೂ ಬೆಂಗಳೂರಿನ ಎಸ್-ವ್ಯಾಸ ಸಂಸ್ಥಾಪಕರಾದ ಡಾ. ಎಚ್. ಆರ್. ನಾಗೇಂದ್ರ ಅವರು ಜೂ.21 ರಂದು ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ನೇತೃತ್ವ ವಹಿಸಲಿದ್ದಾರೆ. 

ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಅವರ ಯೋಗಗುರು ಹಾಗೂ ಬೆಂಗಳೂರಿನ ಪ್ರಖ್ಯಾತ ಯೋಗ ತಜ್ಞ ಎಚ್. ಆರ್. ನಾಗೇಂದ್ರ ಜೂ.21ರಂದು ನ್ಯೂಯಾರ್ಕ್‌ನ ಐಕಾನಿಕ್ ಟೈಮ್ಸ್ ಸ್ಕ್ವೇರ್‌ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ (ಐಡಿವೈ) ನೇತೃತ್ವ ವಹಿಸಲಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದಕ್ಕೂ ಮುನ್ನ ಅವರು ಜೂ.12-14ರವರೆಗೆ ನ್ಯೂಯಾರ್ಕ್‌ನ ಮಾಂಟಿಸೆಲ್ಲೊದಲ್ಲಿ ವಿಶೇಷ ಯೋಗ ಮತ್ತು ಸ್ವಾಸ್ಥ್ಯ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ.

‘ಅಂತಾರಾಷ್ಟ್ರೀಯ ಯೋಗ ದಿನಾಚರಣೆಗಾಗಿ ನ್ಯೂಯಾರ್ಕ್‌ಗೆ ಭೇಟಿ ನೀಡಲು ಸಂತೋಷವಾಗುತ್ತಿದೆ. ಅಲ್ಲಿನ ಭಾರತೀಯ ಕಾನ್ಸುಲೇಟ್ ಜನರಲ್ ಆಹ್ವಾನದ ಮೇರೆಗೆ ಟೈಮ್ಸ್ ಸ್ಕ್ವೇರ್ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಅತೀವ ಗೌರವ ತಂದಿದೆ’ ಎಂದು ನಾಗೇಂದ್ರ ತಿಳಿಸಿದ್ದಾರೆ.

ಯಾರು ಈ ಯೋಗ ಗುರು?

ನಾಗೇಂದ್ರ ಪ್ರಖ್ಯಾತ ಯೋಗ ಶಿಕ್ಷಕ, ಸಾಹಿತಿ ಹಾಗೂ ಬೆಂಗಳೂರಿನ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದ (ಎಸ್‌-ವ್ಯಾಸ) ಸಂಸ್ಥಾಪಕ ಉಪಕುಲಪತಿ. ಮೂಲತಃ ಮೆಕ್ಯಾನಿಕಲ್ ಇಂಜಿನಿಯರ್ ಆಗಿರುವ ಇವರು ಸುಮಾರು 35 ಕೃತಿಗಳನ್ನು ರಚಿಸಿದ್ದಾರೆ. ಯೋಗಸಾಧನೆಗಾಗಿ 2016ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಈ ವರ್ಷದ ಯೋಗ ದಿನದ ಥೀಂ ‘ಆರೋಗ್ಯಕರ ವಯಸ್ಸಿಗಾಗಿ ಯೋಗ’. ಇದು ದೀರ್ಘಾಯುಷ್ಯ, ಸಕ್ರಿಯತೆ ಮತ್ತು ಮುಂಚಿತ ಆರೋಗ್ಯ ರಕ್ಷಣೆಗಾಗಿ ಯೋಗವನ್ನು ಸಾಧನವನ್ನಾಗಿ ಬಳಸುವುದನ್ನು ಉತ್ತೇಜಿಸುತ್ತದೆ. 2014ರ ಡಿ.11ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಜೂ.21 ಅನ್ನು ಅಂತಾರಾಷ್ಟ್ರೀಯ ಯೋಗ ದಿನವೆಂದು ಘೋಷಿಸಿತು.

ಮೊದಲ ಯೋಗ ದಿನವನ್ನು 2015ರ ಜೂ.21ರಂದು ಆಚರಿಸಲಾಯಿತು. ಅಂದಿನಿಂದ ಪ್ರತಿ ವರ್ಷ ವಿಶ್ವಾದ್ಯಂತ ಲಕ್ಷಾಂತರ ಜನ ಈ ದಿನವನ್ನು ಆಚರಿಸುತ್ತಿದ್ದಾರೆ.