ಬ್ಯಾನ್ ಆದರೂ ಹೈದರಾಬಾದ್ ವಿವಿಯಲ್ಲಿ ಮೋದಿ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ: ಕೇರಳ, ಜೆಎನ್‌ಯೂನಲ್ಲೂ ಸ್ಕ್ರೀನಿಂಗ್..!
ಈ ಪ್ರದರ್ಶನವನ್ನು ರದ್ದುಗೊಳಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜವಾಹರಲಾಲ್ ನೆಹರೂ ವಿವಿ ಎಚ್ಚರಿಕೆ ನೀಡಿದೆ. ಇಂತಹ ಅನಧಿಕೃತ ಚಟುವಟಿಕೆಯು ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರಬಹುದು ಎಂಬುದನ್ನು ವಿವಿ ಹೇಳಿದೆ.
ನವದೆಹಲಿ (ಜನವರಿ 24, 2023) : ಪ್ರಧಾನಿ ಮೋದಿಯ ಬಿಬಿಸಿ ಸಾಕ್ಷ್ಯಚಿತ್ರ ವಿವಾದ ಸದ್ಯಕ್ಕೆ ತಣ್ಣಗಾಗೋ ಲಕ್ಷಣ ಕಾಣುತ್ತಿಲ್ಲ. ಬಿಬಿಸಿ ಸಾಕ್ಷ್ಯಚಿತ್ರ ಸುಳ್ಳಿನಿಂದ ಕೂಡಿದೆ ಎಂದು 2002ರ ಗುಜರಾತ್ ದಂಗೆಯ ಕುರಿತು ಬಿಬಿಸಿ ತಯಾರಿಸಿರುವ ವಿವಾದಿತ ‘ಇಂಡಿಯಾ: ದಿ ಮೋದಿ ಕ್ವಶ್ಚನ್’ ಸಾಕ್ಷ್ಯಚಿತ್ರದ ಎಲ್ಲಾ ಲಿಂಕ್‌ಗಳನ್ನು ಕೇಂದ್ರ ಸರ್ಕಾರ ಬ್ಲಾಕ್ ಮಾಡಿದೆ. ಅಲ್ಲದೆ, ಟ್ವಿಟ್ಟರ್ ಹಾಗೂ ಯುಟ್ಯೂಬ್‌ನಲ್ಲಿ ಶೇರ್ ಆಗುತ್ತಿರುವ ಈ ಡಾಕ್ಯುಮೆಂಟರಿಯ ಲಿಂಕ್‌ಗಳನ್ನು ತೆಗೆದುಹಾಕುವಂತೆ ಆ ಕಂಪನಿಗಳಿಗೆ ಸೂಚಿಸಿದೆ. ಆದರೂ, ಹೈದರಾಬಾದ್‌ನ ವಿವಿಯೊಂದರಲ್ಲಿ ಈ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಗಿದೆ. ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಷನ್ ಹಾಗೂ ಮುಸ್ಲಿಂ ವಿದ್ಯಾರ್ಥಿಗಳ ಫೆಡರೇಷನ್ ಈ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಜನವರಿ 21 ರಂದು ಆಯೋಜಿಸಿತ್ತು. ಈ ವೇಳೆ ಹೈದರಾಬಾದ್ ಕೇಂದ್ರ ವಿವಿಯ 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದನ್ನು ವೀಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು, ರಾಷ್ಟ್ರ ರಾಜಧಾನಿ (National Capital) ದೆಹಲಿಯ (Delhi) ಜವಾಹರಲಾಲ್ ನೆಹರೂ ವಿವಿಯ (ಜೆಎನ್‌ಯು)ನಲ್ಲಿ (Jawaharlal Nehru University) ಸಹ ಗುಜರಾತ್ ಗಲಭೆಯಲ್ಲಿ (Gujarat Riots) ನರೇಂದ್ರ ಮೋದಿ (Narendra Modi) ಅವರ ಪಾತ್ರದ ಕುರಿತಾದ ನಿಷೇಧಿತ ಸಾಕ್ಷ್ಯಚಿತ್ರ ಪ್ರದರ್ಶನ (Banned Documentary Screening) ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ. ನಿಷೇಧಿತ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ನಿನ್ನೆ ರಾತ್ರಿ ಅಂದರೆ ಸೋಮವಾರ ರಾತ್ರಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ವಿವಿ ಆಡಳಿತ ಮಂಡಳಿ ಮಧ್ಯಪ್ರವೇಶಿಸಿ ಪ್ರದರ್ಶನ ರದ್ದು ಮಾಡಿದೆ. ಶಾಂತಿ ಕಾಪಾಡುವ ಉದ್ದೇಶದಿಂದ ಪ್ರದರ್ಶನ ರದ್ದು ಮಾಡಲಾಗಿದೆ ಎಂದು ವಿವಿ ಹೇಳಿದೆ. ಸೋಮವಾರ ರಾತ್ರಿ 9ಕ್ಕೆ ಜೆಎನ್‌ಯು ವಿದ್ಯಾರ್ಥಿ ಒಕ್ಕೂಟದ ಕಚೇರಿಯಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನವಿದೆ ಎಂದು ಒಕ್ಕೂಟದ ಹೆಸರಲ್ಲಿ ಪೋಸ್ಟರ್ ಪ್ರತ್ಯಕ್ಷವಾಗಿದ್ದವು.
ಇದನ್ನು ಓದಿ: ಪ್ರಧಾನಿ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರಕ್ಕೆ ಭಾರತದಲ್ಲಿ ‘ನಿಷೇಧ’
ಆದರೆ, ಈ ಪ್ರದರ್ಶನವನ್ನು ರದ್ದುಗೊಳಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜವಾಹರಲಾಲ್ ನೆಹರೂ ವಿವಿ ಎಚ್ಚರಿಕೆ ನೀಡಿದೆ. ಇಂತಹ ಅನಧಿಕೃತ ಚಟುವಟಿಕೆಯು ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರಬಹುದು ಎಂಬುದನ್ನು ವಿವಿ ಹೇಳಿದೆ. ಈ ಹಿನ್ನೆಲೆ ಪ್ರಸ್ತಾವಿತ ಕಾರ್ಯಕ್ರಮವನ್ನು ತಕ್ಷಣವೇ ರದ್ದುಗೊಳಿಸುವಂತೆ ಸಂಬಂಧಪಟ್ಟ ವಿದ್ಯಾರ್ಥಿಗಳು ಅಥವಾ ವ್ಯಕ್ತಿಗಳಿಗೆ ದೃಢವಾಗಿ ಸೂಚಿಸಲಾಗಿದೆ. ವಿಫಲವಾದರೆ ವಿಶ್ವವಿದ್ಯಾಲಯದ ನಿಯಮಗಳ ಪ್ರಕಾರ ಕಠಿಣ ಶಿಸ್ತು ಕ್ರಮವನ್ನು ಪ್ರಾರಂಭಿಸಬಹುದು ಎಂದು ಅಡ್ವೈಸರಿಯಲ್ಲಿ ಹೇಳಿದೆ.
ಕೇರಳದಲ್ಲೂ ಪ್ರದರ್ಶನ..!
ಹೈದರಾಬಾದ್, ದೆಹಲಿ ಮಾತ್ರವಲ್ಲದೆ, ಕೇರಳದ ಆಡಳಿತಾರೂಢ ಸಿಪಿಐಎಂನ ಯುವ ಘಟಕವಾದ ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ (ಡಿವೈಎಫ್‌ಐ) ಮಂಗಳವಾರ ಬಿಬಿಸಿಯ ವಿವಾದಾತ್ಮಕ ಸಾಕ್ಷ್ಯಚಿತ್ರ “ಇಂಡಿಯಾ: ದಿ ಮೋದಿ ಕ್ವೆಶ್ಚನ್” ಅನ್ನು ರಾಜ್ಯದಲ್ಲಿ ಪ್ರದರ್ಶಿಸುವುದಾಗಿ ಘೋಷಿಸಿದೆ. ಡಿವೈಎಫ್‌ಐ ತನ್ನ ಫೇಸ್‌ಬುಕ್ ಪುಟದಲ್ಲಿ ಈ ಘೋಷಣೆ ಮಾಡಿದೆ. ಹಾಗೂ, ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಸಹ ವಿವಾದಿತ ಬಿಬಿಸಿ ಸಾಕ್ಷ್ಯಚಿತ್ರವನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರದರ್ಶಿಸುವುದಾಗಿ ಘೋಷಿಸಿದೆ. ಸಾಕ್ಷ್ಯಚಿತ್ರದ ಮೇಲೆ ‘ಅಘೋಷಿತ ನಿಷೇಧ’ದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಅಡ್ವ ಶಿಹಾಬುದ್ದೀನ್ ಕರಿಯಾತ್ ಹೇಳಿದ್ದಾರೆ.
ಇದನ್ನೂ ಓದಿ: ಬಿಬಿಸಿ ವಿರುದ್ಧ ಮತ್ತಷ್ಟು ಆಕ್ರೋಶ: ನಿಷೇಧದ ಬಳಿಕವೂ ಮತ್ತೆ ಸಾಕ್ಷ್ಯಚಿತ್ರ ಶೇರ್ ಮಾಡಿದ ಟಿಎಂಸಿ ಎಂಪಿ..!
ಕೇಂದ್ರ ಸರ್ಕಾರ ಬಿಬಿಸಿಯ ವಿವಾದಿತ ಸಾಕ್ಷ್ಯಚಿತ್ರವನ್ನು ನಿಷೇಧ ಮಾಡಿದ ಬಳಿಕ, ಪ್ರವೇಶವನ್ನು ನಿರ್ಬಂಧಿಸುವ ಸರ್ಕಾರದ ಕ್ರಮವನ್ನು ವಿರೋಧ ಪಕ್ಷಗಳು ಖಂಡಿಸಿವೆ.
ಇದನ್ನೂ ಓದಿ: ಮೋದಿ ವಿರುದ್ಧ ಅಪಪ್ರಚಾರ, ಸಾಕ್ಷ್ಯ ಚಿತ್ರದ ಮೂಲಕ ಬ್ರಿಟಿಷ್ ಟಿವಿ ಹುನ್ನಾರ!