ಅಯೋಧ್ಯೆ ರಾಮ ಮಂದಿರಕ್ಕೆ ಕನ್ನಡಿಗನ ವಿಗ್ರಹ ಆಯ್ಕೆ: ಜ. 22ರಂದು ಮೈಸೂರಿನ ಶಿಲ್ಪಿಯ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ
ಕರ್ನಾಟಕದ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ರಾಮಲಲ್ಲಾ ವಿಗ್ರಹವನ್ನೇ ಅಯೋಧ್ಯೆಯ ಭವ್ಯವಾದ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡಲು ಆಯ್ಕೆಯಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಪೋಸ್ಟ್ ಮಾಡಿದ್ದಾರೆ.
ನವದೆಹಲಿ (ಜನವರಿ 2, 2024): ಜನವರಿ 22 ರಂದು ರಾಮಮಂದಿರ ಉದ್ಘಾಟನೆಗೆ ಸಜ್ಜಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಈ ಪೈಕಿ ಕರ್ನಾಟಕದ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ರಾಮಲಲ್ಲಾ ವಿಗ್ರಹವನ್ನೇ ಅಯೋಧ್ಯೆಯ ಭವ್ಯವಾದ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡಲಾಗೋದು ಖಚಿತವಾಗಿದೆ. ಮೈಸೂರಿನ ಅರುಣ್ ಯೋಗಿರಾಜ್ ಅವರ ವಿಗ್ರಹವೇ ಅಂತಿಮವಾಗಿ ಆಯ್ಕೆಯಾಗಿದೆ.
ಮೈಸೂರಿನ ಅರುಣ್ ಯೋಗಿರಾಜ್ ಅವರು ಕೆತ್ತಿರುವ ರಾಮಲಲ್ಲಾ ಪ್ರತಿಮೆಯನ್ನು ಅಯೋಧ್ಯೆಯಲ್ಲಿ ಸ್ಥಾಪಿಸಲು ಆಯ್ಕೆ ಮಾಡಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಷಿ ಸೋಮವಾರ ಪ್ರಕಟಿಸಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ‘ಎಲ್ಲಿ ರಾಮನೋ ಅಲ್ಲಿ ಹನುಮನು. ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ಕೆ ವಿಗ್ರಹ ಆಯ್ಕೆ ಅಂತಿಮಗೊಂಡಿದೆ. ನಮ್ಮ ನಾಡಿನ ಹೆಸರಾಂತ ಶಿಲ್ಪಿ ನಮ್ಮ ಹೆಮ್ಮೆಯ ಶ್ರೀ ಅರುಣ್ ಯೋಗಿರಾಜ್ ಅವರು ಕೆತ್ತಿರುವ ಶ್ರೀರಾಮನ ವಿಗ್ರಹ ಪುಣ್ಯಭೂಮಿ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಳ್ಳಲಿದೆ. ರಾಮ ಹನುಮರ ಅವಿನಾಭಾವ ಸಂಬಂಧಕ್ಕೆ ಇದು ಮತ್ತೊಂದು ನಿದರ್ಶನ. ಹನುಮನ ನಾಡು ಕರ್ನಾಟಕದಿಂದ ರಾಮಲಲ್ಲಾನಿಗೆ ಇದೊಂದು ಮಹತ್ವಪೂರ್ಣ ಸೇವೆ ಎಂದರೆ ತಪ್ಪಾಗಲಾರದು’ ಎಂದಿದ್ದಾರೆ.
ಇದನ್ನು ಓದಿ: ರಾಮ ಮಂದಿರ ಉದ್ಘಾಟನೆ: ಅಡ್ವಾಣಿ, ಜೋಶಿ ಅಯೋಧ್ಯೆಗೆ ಕರೆತರಲು ವಿಶೇಷ ವಿಮಾನ?
ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹಾಗೂ ಪುತ್ರ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಕೂಡ ಯೋಗಿರಾಜ್ ರಾಜ್ಯ ಮತ್ತು ಮೈಸೂರು ಹೆಮ್ಮೆಪಡುವಂತೆ ಮಾಡಿದ್ದಾರೆ ಎಂದು ಅರುಣ್ ಯೋಗಿರಾಜ್ ರನ್ನು ಶ್ಲಾಘಿಸಿದ್ದಾರೆ.
ಆದರೆ, ಈ ಬಗ್ಗೆ ಸುದ್ದಿಸಂಸ್ಥೆ ಪಿಟಿಐ ಜತೆ ಮಾತನಾಡಿದ ಅರುಣ್ ಯೋಗಿರಾಜ್, ‘ನಾನು ಕೆತ್ತಿದ ವಿಗ್ರಹ ಆಯ್ಕೆಯಾಗಿದೆಯೋ? ಇಲ್ಲವೋ ಎಂಬುದರ ಕುರಿತು ಈವರೆಗೆ ನನಗೆ ಅಧಿಕೃತವಾಗಿ ಮಾಹಿತಿ ಬಂದಿಲ್ಲ. ಬಿಜೆಪಿ ನಾಯಕರ ಟ್ವೀಟರ್ ಪೋಸ್ಟ್‌ಗಳು, ನನ್ನ ವಿಗ್ರಹ ಆಯ್ಕೆಯಾಗಿರಬಹುದು ಎಂಬ ನಂಬಿಕೆಯನ್ನು ಮೂಡಿಸಿದೆ. ಏನೇ ಆದರೂ ಮುಖ್ಯ ವಿಗ್ರಹ ಕೆತ್ತಲು ಆಯ್ಕೆಯಾದ ದೇಶದ ಮೂವರಲ್ಲಿ ನಾನೂ ಒಬ್ಬ ಎಂಬ ಹೆಮ್ಮೆ, ಖುಷಿ ನನಗಿದೆ’ ಎಂದು ಹೇಳಿದ್ದಾರೆ.
ಅಯೋಧ್ಯೇಲಿ ಅಭಿವೃದ್ಧಿ ಪರ್ವ: 15700 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳಿಗೆ ಮೋದಿ ಚಾಲನೆ
ಕರ್ನಾಟಕದ ಅರುಣ್ ಯೋಗಿರಾಜ್, ಕರ್ನಾಟಕದ ಇಡಗುಂಜಿಯ ಜಿ.ಎಲ್.ಭಟ್ ಮತ್ತು ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಅವರಿಗೆ ತಲಾ ಒಂದೊಂದು ಬಾಲರಾಮನ ವಿಗ್ರಹ ಕೆತ್ತುವ ಹೊಣೆ ವಹಿಸಲಾಗಿತ್ತು.
ಡಿಸೆಂಬರ್ 30 ರಂದು ಭಗವಾನ್ ರಾಮ ಲಲ್ಲಾನ ಮೂರು ವಿಗ್ರಹಗಳ ಮೇಲೆ ಮತದಾನ ನಡೆಯಿತು. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟಿಗಳ ಮಂಡಳಿಯು ರಾಮ ಲಲ್ಲಾನ ಎಲ್ಲಾ ಮೂರು ವಿಗ್ರಹಗಳನ್ನು ಪರಿಶೀಲಿಸಿತು ಮತ್ತು ಅಂತಿಮ ನಿರ್ಧಾರ ತೆಗೆದುಕೊಳ್ಳಲು ಟ್ರಸ್ಟ್‌ಗೆ ತಮ್ಮ ಅಭಿಪ್ರಾಯವನ್ನು ಲಿಖಿತವಾಗಿ ಹಸ್ತಾಂತರಿಸಿತ್ತು.
ರಾಮಮಂದಿರ ವಿವಾದ ಗಂಭೀರತೆ ಅರಿತು ಒಮ್ಮತದ ತೀರ್ಪು; ಈ ಕಾರಣ ತೀರ್ಪಿನಲ್ಲಿ ಜಡ್ಜ್ ಹೆಸರು ಹಾಕಲಿಲ್ಲ: ಚಂದ್ರಚೂಡ್
ಕರ್ನಾಟಕದ ಶಿಲ್ಪಿಗಳು ಕಪ್ಪು ಕಲ್ಲುಗಳನ್ನು ಬಳಸಿದರೆ, ರಾಜಸ್ಥಾನದ ಶಿಲ್ಪಿ ಬಿಳಿ ಮಕ್ರಾನ ಮಾರ್ಬಲ್ ಅನ್ನು ಬಳಸಿದ್ದಾರೆ. ಮುಂಬೈ ಮೂಲದ ಖ್ಯಾತ ಕಲಾವಿದ ವಾಸುದೇವ ಕಾಮತ್ ಅವರು ಟ್ರಸ್ಟ್‌ಗೆ ಪ್ರಸ್ತುತಪಡಿಸಿದ ರೇಖಾಚಿತ್ರವನ್ನು ರಾಮ ಲಲ್ಲಾ ವಿಗ್ರಹಗಳು ಆಧರಿಸಿವೆ.