ಸೈಫ್ ಅಲಿ ಖಾನ್‌ರನ್ನ ಆಸ್ಪತ್ರೆಗೆ ಕರೆದೊಯ್ದಿದ್ದ ಆಟೋ ಚಾಲಕನಿಗೆ ಸಿಕ್ತು ನಗದು ಬಹುಮಾನ
ಚಾಕು ಇರಿತಕ್ಕೊಳಗಾಗಿದ್ದ ಸೈಫ್ ಅಲಿ ಖಾನ್‌ರನ್ನು ಆಸ್ಪತ್ರೆಗೆ ಕರೆದೊಯ್ದ ಆಟೋ ಚಾಲಕ ಭಜನ್ ಸಿಂಗ್ ರಾಣಾ ಅವರಿಗೆ ಸಂಸ್ಥೆಯೊಂದು ನಗದು ಬಹುಮಾನ ನೀಡಿ ಸನ್ಮಾನಿಸಿದೆ. ರಾಣಾ ಯಾವುದೇ ಆಟೋ ಶುಲ್ಕ ಪಡೆಯದೆ ಸೈಫ್‌ರನ್ನು ಆಸ್ಪತ್ರೆಗೆ ದಾಖಲಿಸಿದ್ದರು.

ಮುಂಬೈ: ಕಳ್ಳನಿಂದ ಚಾಕು ಇರಿತಕೊಳ್ಳಗಾಗಿದ್ದ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರನ್ನು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ದಾಖಲಿಸಿದ್ದ ಆಟೋ ಚಾಲಕ ಭಜನ್ ಸಿಂಗ್ ರಾಣಾ ಅವರಿಗೆ ಸಂಸ್ಥೆಯೊಂದು ಶಾಲು ಹೊದಿಸಿ ಸನ್ಮಾನ ಮಾಡಿ ಚೆಕ್ ವಿತರಣೆ ಮಾಡಿದೆ. ಸೈಫ್ ಅಲಿ ಖಾನ್ ಅವರನ್ನು ಆಸ್ಪತ್ರೆಗೆ ತಲುಪಿಸಿದ್ದ ಭಜನ್ ಸಿಂಗ್ ರಾಣಾ ಯಾವುದೇ ಆಟೋ ಶುಲ್ಕ ಪಡೆದಿರಲಿಲ್ಲ. ಜೀವಕ್ಕಿಂತ ಹಣ ಮುಖ್ಯವಲ್ಲ. ಹಾಗಾಗಿ ಆಸ್ಪತ್ರೆಗೆ ದಾಖಲಿಸಿದ ಬಳಿಕ ನಾನು ಹಿಂದಿರುಗಿದೆ ಎಂದು ಭಜನ್ ಸಿಂಗ್ ರಾಣಾ ಹೇಳಿಕೆ ನೀಡಿದ್ದರು. ರಾಣಾ ಅವರ ಈ ನಡೆದ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಭಜನ್ ರಾಣಾ ಸಿಂಗ್ ಅಂದು ಬೆಳಗಿನ ಜಾವ ನಡೆದ ಘಟನೆ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಿದ್ದರು. ಸೈಫ್ ಅಲಿ ಖಾನ್ ಮನೆಗೆ ನುಗ್ಗಿ ಚಾಕುವಿನಿಂದ ಇರಿದಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆಟೋ ಚಾಲಕ ಭಜನ್ ಸಿಂಗ್ ರಾಣಾ ಮೂಲತಃ ಉತ್ತರಾಖಂಡದವರಾಗಿದ್ದು, ಕಳೆದ ಹಲವು ವರ್ಷಗಳಿಂದ ಮುಂಬೈನಲ್ಲಿ ನೆಲೆಸಿದ್ದಾರೆ. ಸೈಫ್ ಅಲಿ ಖಾನ್ ಪ್ರಕರಣದ ನಂತರ ಭಜನ್ ಸಿಂಗ್ ರಾಣಾ ಹೆಸರು ಮುನ್ನಲೆಗೆ ಬಂದಿದೆ. ಇದೀಗ ಖಾಸಗಿ ಸಂಸ್ಥೆಯೊಂದು ಭಜನ್ ಸಿಂಗ್ ರಾಣಾ ಅವರನ್ನು ಸನ್ಮಾನಿಸಿ 11 ಸಾವಿರ ರೂಪಾಯಿ ಚೆಕ್ ವಿತರಿಸಿ ಗೌರವಿಸಿದೆ. ಸೈಫ್ ಅಲಿ ಖಾನ್ ಕುಟುಂಬ ಸಹ ಭಜನ್ ಸಿಂಗ್ ರಾಣಾ ಅವರನ್ನು ಗೌರವಿಸಬೇಕು ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬಂದಿವೆ.
ಘಟನೆ ವಿವರಿಸಿದ್ರು ಭಜನ್ ಸಿಂಗ್ ರಾಣಾ
ಮಹಿಳೆಯೊಬ್ಬರು ಗೇಟ್ ಬಳಿ ನಿಂತುಕೊಂಡು ಆಟೋ ಎಂದು ಕೂಗುತ್ತಾ ಸಹಾಯ ಕೇಳುತ್ತಿದ್ದರು. ಕೂಡಲೇ ನಾನು ಅಲ್ಲಿಗೆ ತೆರಳಿದಾಗ ಬಿಳಿ ಕುರ್ತಾ, ಪೈಜಾಮಾ ಧರಿಸಿದ ವ್ಯಕ್ತಿ ಬಂದು ಕುಳಿತರು. ಬಿಳಿ ಬಟ್ಟೆಯೆಲ್ಲಾ ರಕ್ತಮಯವಾಗಿತ್ತು. ಆಸ್ಪತ್ರೆಗೆ ತಲುಪಲು ಎಷ್ಟೊತ್ತು ಆಗುತ್ತೆ ಎಂದು ಕೇಳಿದಾಗ 8-10 ನಿಮಿಷ ಆಗುತ್ತೆ. ಈ ವೇಳೆ ಸಣ್ಣ ಬಾಲಕನೊಬ್ಬ ಸಹ ಆಟೋದಲ್ಲಿ ಬಂದನು. ಲೀಲಾವತಿ ಆಸ್ಪತ್ರೆ ತಲುಪಿದಾಗ ಸ್ಟ್ರೆಚರ್ ಮಲಗಿದಾದ, ನಾನು ಸೈಫ್ ಅಲಿ ಖಾನ್ ಅಂತ ಹೇಳಿದಾಗಲೇ ಅವರು ನಟ ಎಂದು ಗೊತ್ತಾಯ್ತು. ಯಾವುದೇ ಆಟೋ ಚಾರ್ಜ್ ಪಡೆಯದೇ ನಾನು ಅಲ್ಲಿಂದ ಹಿಂದಿರುಗಿ ಬಂದೆ ಎಂದು ಭಜನ್ ಸಿಂಗ್ ರಾಣಾ ಹೇಳಿದ್ದರು.
ಇದನ್ನೂ ಓದಿ: ಆಸ್ಪತ್ರೆಗೆ ಸೈಫ್ ಜೊತೆ ಬಂದಿದ್ದು ಮಗ ಇಬ್ರಾಹಿಂ ಅಲ್ಲ ಎಂದ ಆಟೋ ಚಾಲಕ
ಸೈಫ್ ದಾಳಿಕೋರನ ಬಂಧನ
ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಮೇಲೆ ಚಾಕು ದಾಳಿ ನಡೆದ 70 ತಾಸಿನ ಬಳಿಕ ದಾಳಿಕೋರನ ಬಂಧನವಾಗಿದೆ. ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ನುಸುಳಿದ್ದ 31 ವರ್ಷದ ವ್ಯಕ್ತಿಯನ್ನು ಮುಂಬೈ ಸನಿಹದ ಥಾಣೆಯಲ್ಲಿ ಶನಿವಾರ ತಡರಾತ್ರಿ ಸೆರೆ ಹಿಡಿಯಲಾಗಿದ್ದು, ಇದರೊಂದಿಗೆ ಪ್ರಕರಣ ತನಿಖೆಯಲ್ಲಿ ಪೊಲೀಸರಿಗೆ ಮಹತ್ವದ ಯಶಸ್ಸು ಲಭಿಸಿದೆ. ಶರೀಫುಲ್ ಇಸ್ಲಾಂ ಶೆಹಜಾದ್ ಮೊಹಮ್ಮದ್ ರೋಹಿಲ್ಲಾ ಅಮೀನ್ ಫಕೀರ್ (30) ಬಂಧಿತ ಆರೋಪಿ.
‘ಈತ ಭಾರತಕ್ಕೆ ಬಂದ ನಂತರ ವಿಜಯ ದಾಸ್ ಎಂದು ಹೆಸರು ಬದಲಿಸಿಕೊಂಡಿದ್ದ ಹಾಗೂ 5 ತಿಂಗಳಿಂದ ಮುಂಬೈಲ್ಲಿದ್ದ. ನಟನ ಮನೆಯೆಂದು ತಿಳಿಯದೇ ಕಳ್ಳತನದ ಉದ್ದೇಶದಿಂದ ಈತ ನುಗ್ಗಿದ್ದ ಎಂದು ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ.
ಇದನ್ನೂ ಓದಿ: ಸೈಫ್ ಅಲಿ ಖಾನ್ ಮೇಲಿನ ದಾಳಿಕೋರನ ಬಗ್ಗೆ ಆಘಾತಕಾರಿ ಮಾಹಿತಿ ಬಹಿರಂಗಗೊಳಿಸಿದ ಮುಂಬೈ ಪೊಲೀಸರು