ಸೈಫ್ ಅಲಿ ಖಾನ್ ಮೇಲೆ ಚಾಕುವಿನಿಂದ ದಾಳಿ ನಡೆಸಿರುವ ಹಲ್ಲೆಕೋರನ ಬಗ್ಗೆ ಮುಂಬೈ ಪೊಲೀಸರು ಆಘಾತಕಾರಿ ಮಾಹಿತಿಯನ್ನು ಬಹಿರಂಗಗೊಳಿಸಿದ್ದಾರೆ.
ಮುಂಬೈ: ಸೈಫ್ ಅಲಿಖಾನ್ ಅವರ ಸದ್ಗುರು ಶರಣ್ ಅಪಾರ್ಟ್‌ಮೆಂಟ್‌ಗೆ ನುಗ್ಗಿ ಚಾಕು ಇರಿಯುವುದಕ್ಕೂ ಮುನ್ನ ಆರೋಪಿ ನಟ ಶಾರುಖ್ ಅವರ ನಿವಾಸ ‘ಮನ್ನತ್’ ಮೇಲೆಯೂ ದಾಳಿಗೆ ಸಂಚು ರೂಪಿಸಿದ್ದನು ಎನ್ನುವ ಮಾಹಿತಿಯನ್ನು ಪೊಲೀಸರು ಬಹಿರಂಗಗೊಳಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪೊಲೀಸ್ ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ಜ.14ರಂದು ಮುಂಬೈನಲ್ಲಿರುವ ಶಾರುಖ್ ಖಾನ್ ಅವರ ನಿವಾಸದ ಬಳಿ ಅನುಮಾನಸ್ಪದ ವ್ಯಕ್ತಿಯೊಬ್ಬರ ಚಲನವಲನಗಳು ಕಂಡು ಬಂದಿದೆ. ಮನ್ನತ್ ನಿವಾಸದ ಪಕ್ಕದಲ್ಲಿರುವ ರಿಟ್ರೀಟ್ ಹೌಸ್‌ನ ಹಿಂಭಾಗದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ 6-8 ಅಡಿ ಉದ್ದದ ಕಬ್ಬಿಣ ಏಣಿಯನ್ನು ಹತ್ತಿ, ಶಾರುಖ್ ಮನೆಯ ಆವರಣಗಳನ್ನು ಪರಿಶೀಲಿಸಿರುವುದು ಬಹಿರಂಗವಾಗಿದೆ. ಈ ವ್ಯಕ್ತಿಗೂ ಹಾಗೂ ಸೈಫ್‌ಗೆ ಇರಿದ ವ್ಯಕ್ತಿಗೂ ಹೋಲಿಕೆ ಕಂಡು ಬಂದಿದ್ದು, ಪೊಲೀಸರು ಆ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಶಾರುಖ್ ಯಾವುದೇ ದೂರು ದಾಖಲಿಸಿಲ್ಲವಾದರೂ, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಆಸ್ಪತ್ರೆಗೆ ಸೈಫ್ ಜೊತೆ ಬಂದಿದ್ದು ಮಗ ಇಬ್ರಾಹಿಂ ಅಲ್ಲ ಎಂದ ಆಟೋ ಚಾಲಕ
ಸೈಫ್ ದಾಳಿಕೋರನ ಮತ್ತೊಂದು ಚಿತ್ರ ರಿಲೀಸ್
ನಟ ಸೈಫ್ ಅಲಿಖಾನ್‌ಗೆ ಚಾಕು ಇರಿದಿದ್ದ ಆರೋಪಿಯ ಮತ್ತೊಂದು ದೃಶ್ಯ ಸಿಸಿಟೀವಿಯಲ್ಲಿ ಸೆರೆಯಾಗಿದ್ದು, ನಟನ ಅಪಾರ್ಟ್‌ಮೆಂಟ್‌ಗೆ ನುಗ್ಗಿ ಹಲ್ಲೆ ನಡೆಸಿದ ಬಳಿಕ ದರೋಡೆಕೋರ ಬಟ್ಟೆ ಬದಲಿಸಿರುವುದು ಕಂಡಬಂದಿದೆ.
ಅಪಾರ್ಟ್‌ಮೆಂಟ್‌ನಿಂದ ಪರಾರಿಯಾದ ಬಳಿಕ ಆರೋಪಿ ಬಟ್ಟೆ ಬದಲಿಸಿ, ನೀಲಿ ಶರ್ಟ್ ಧರಿಸಿ ಬಾಂದ್ರಾದ ರೈಲು ನಿಲ್ದಾಣದಲ್ಲಿ ಕಾಣಿಸಿಕೊಂಡಿರುವ ಫೋಟೋ ವೈರಲ್ ಆಗಿದೆ. ಇದಕ್ಕೂ ಮುನ್ನ ಆರೋಪಿಗೆ ಸಂಬಂಧಿಸಿದ ಮತ್ತೊಂದು ಸಿಸಿಟೀವಿ ದೃಶ್ಯ ವೈರಲ್ ಆಗಿತ್ತು. ಅದರಲ್ಲಿ ಆರೋಪಿ ಮುಖಕ್ಕೆ ಬಟ್ಟೆ ಮುಚ್ಚಿಕೊಂಡು ನಟನ ಅಪಾರ್ಟ್‌ಮೆಂಟ್‌ಗೆ ಪ್ರವೇಶಿಸುತ್ತಿರುವುದು ಸೆರೆಯಾಗಿತ್ತು.
ಇದನ್ನೂ ಓದಿ: ರಕ್ತಸಿಕ್ತವಾಗಿ ಗಾಯಗೊಂಡಿದ್ದರೂ ಸೈಫ್ ಹುಲಿಯಂತೆ ಆಸ್ಪತ್ರೆಗೆ ಬಂದ್ರು: ವೈದ್ಯ
