ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ಗೆ ಅವಕಾಶ ನೀಡಿ, ಕೇಸರಿ ಶಾಲಿಗೆ ನಿರ್ಬಂಧ ವಿಧಿಸಿದ ಕರ್ನಾಟಕ ಸರ್ಕಾರದ ಕ್ರಮವನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಇದು ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ರಾಜಕಾರಣ ಮತ್ತು ಮತಬ್ಯಾಂಕ್ ತಂತ್ರ ಎಂದು ಬಿಜೆಪಿ ವಕ್ತಾರ ಶೆಹಜಾದ್‌ ಪೂನಾವಾಲಾ ಆರೋಪಿಸಿದ್ದಾರೆ.

ಕಾಂಗ್ರೆಸ್‌ ಸರ್ಕಾರದಿಂದ ತುಷ್ಟೀಕರಣ ರಾಜಕಾರಣ: ಆರೋಪ

ನವದೆಹಲಿ: ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ಗೆ ಅವಕಾಶ ನೀಡಿ ಕೇಸರಿ ಶಾಲಿಗೆ ನಿರ್ಬಂಧಿಸಿರುವ ಕಾಂಗ್ರೆಸ್‌ ನೇತೃತ್ವದ ಕರ್ನಾಟಕ ಸರ್ಕಾರದ ವಿರುದ್ಧ ಬಿಜೆಪಿ ತೀವ್ರ ಹರಿಹಾಯ್ದಿದೆ. ಇದು ಔರಂಗಜೇಬ್‌ ಸರ್ಕಾರ. ಮತಬ್ಯಾಂಕ್‌ ಮತ್ತು ತುಷ್ಟೀಕರಣ ರಾಜಕಾರಣಕ್ಕಾಗಿ ಸರ್ಕಾರ ಇಂಥ ಆದೇಶ ಹೊರಡಿಸಿದೆ ಎಂದು ಕಿಡಿಕಾರಿದೆ.

ಕೋರ್ಟ್ ಅನುಮತಿಸದಿದ್ರೂ ಕಾಂಗ್ರೆಸ್‌ ಹಿಜಾಬ್‌ಗೆ ಅವಕಾಶ

ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ ಅನುಮತಿಸದಿದ್ದರೂ ಈ ಸರ್ಕಾರ ಶಿಕ್ಷಣ ಸಂಸ್ಥೆಯೊಳಗೆ ಹಿಜಾಬ್‌ ಧರಿಸಲು ಅವಕಾಶ ನೀಡುತ್ತದೆ. ಆದರೆ, ಕೇಸರಿ ಶಾಲಿಗೆ ನಿಷೇಧ ಹೇರಿದೆ. ಇದು ಸಿದ್ದರಾಮಯ್ಯ ಸರ್ಕಾರದ ಮನಸ್ಥಿತಿ. ಇದು ಔರಂಗಜೇಬ್‌ ಸರ್ಕಾರ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್‌ ಪೂನಾವಾಲಾ ಆರೋಪಿಸಿದ್ದಾರೆ.

ತುಷ್ಟೀಕರಣ ರಾಜಕಾರಣ

ಈ ಸರ್ಕಾರ ತುಷ್ಟೀಕರಣ ರಾಜಕಾರಣಕ್ಕಾಗಿ ಯಾವ ಹಂತಕ್ಕೆ ಬೇಕಿದ್ದರೂ ಇಳಿಯಬಹುದು. ಈ ಹಿಂದೆಯೂ ಸನಾತನ ಧರ್ಮವನ್ನು ಈ ಸರ್ಕಾರ ನಿಂದನೆ ಮಾಡಿತ್ತು. ಅವರು ಹಿಂದೆಯೂ ಹಿಂದೂ ಉಗ್ರವಾದ ಪದ ಬಳಸಿ ಹಿಂದೂ ವಿರೋಧಿ ನಿಲುವು ಪ್ರದರ್ಶಿಸಿದ್ದರು. ತಮಿಳುನಾಡಿನಲ್ಲಿ ಕಾಂಗ್ರೆಸ್‌ ನಾಯಕರು ಯಾವ ರೀತಿ ಸನಾತನ ಧರ್ಮವನ್ನು ಅವಮಾನಿಸಿದ್ದಾರೆ ಎಂಬುದನ್ನು ನಾವು ನೋಡಿದ್ದೇವೆ. ಸಿದ್ದರಾಮಯ್ಯ ಸರ್ಕಾರವು ತಾರತಮ್ಯ ನೀತಿ ಅನುಸರಿಸುತ್ತಿದೆ. ಈ ಹಿಂದೆ ಈ ಸರ್ಕಾರವು ಮುಸ್ಲಿಂ ಕೇಂದ್ರಿತ ಬಜೆಟ್‌ ಮತ್ತು ಮುಸ್ಲಿಂ ಕಾಲನಿಗಳನ್ನೂ ಘೋಷಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.