ತಮಿಳುನಾಡಿನಲ್ಲಿ ತಮ್ಮ ಸಿದ್ಧಾಂತ ರಕ್ಷಣೆಗಾಗಿ ಕಾಂಗ್ರೆಸ್, ಡಿಎಂಕೆ ಬದಲು ಟಿವಿಕೆ ಪಕ್ಷವನ್ನು ಬೆಂಬಲಿಸಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸಮರ್ಥಿಸಿಕೊಂಡರು. ರಾಜ್ಯಪಾಲರ ಕಚೇರಿಗಳು ಬಿಜೆಪಿ ಕಚೇರಿಗಳಾಗಿವೆ ಹಾಗೂ ಕೇಂದ್ರ ಸರ್ಕಾರ ಬೆಲೆ ಏರಿಕೆ, ನಿರುದ್ಯೋಗದಂತಹ ಸಮಸ್ಯೆಗಳನ್ನು ನಿರ್ಲಕ್ಷ್ಯಕ್ಕೆ ಕಿಡಿ.

ಬೆಂಗಳೂರು (ಮೇ.7): 'ನಮ್ಮ ಸಿದ್ಧಾಂತವನ್ನು (Ideology) ಉಳಿಸಿಕೊಳ್ಳಲು ಹೈಕಮಾಂಡ್ ಈ ನಿರ್ಧಾರ ತೆಗೆದುಕೊಂಡಿದೆ. ಸದ್ಯದ ಅನಿವಾರ್ಯ ಪರಿಸ್ಥಿತಿಯಲ್ಲಿ ನಾವು ಇದಕ್ಕೆ ಬದ್ಧರಾಗಬೇಕಿದೆ' ಎಂದು ತಮಿಳುನಾಡಿನಲ್ಲಿ ಡಿಎಂಕೆ(DMK) ಜೊತೆಗಿನ ಮೈತ್ರಿ ಬಿಟ್ಟು ನಟ ವಿಜಯ್ ನೇತೃತ್ವದ ಟಿವಿಕೆ (TVK) ಪಕ್ಷವನ್ನು ಕಾಂಗ್ರೆಸ್ ಬೆಂಬಲಿಸಿರುವ ವಿಚಾರವಾಗಿ ಸಚಿವ ಪ್ರಿಯಾಂಕ್ ಸಮರ್ಥಿಸಿಕೊಂಡರು.

Add Asianetnews Kannada as a Preferred SourcegooglePreferred

ಚುನಾವಣಾ ಫಲಿತಾಂಶ ವಿಚಾರವಾಗಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು,ಒಂದು ಐಡಿಯಾಲಜಿಯನ್ನ ನಾವು ಸೇಫ್ ಗಾರ್ಡ್ ಮಾಡಲು ಪ್ರಯತ್ನವನ್ನ ನಾವು ಮಾಡ್ತಾ ಇದ್ದೀವಿ. ಈಗ ಅದನ್ನ ಅರ್ಥ ಮಾಡ್ಕೋಬೇಕು. ಅಧಿಕಾರದಿಂದ ಬಿಜೆಪಿ ಐಡಿಯಾಲಜಿ ದೂರ ಇಡಬೇಕು. ಅದಕ್ಕೋಸ್ಕರ ಹೈಕಮಾಂಡ್ ಒಂದು ನಿರ್ಧಾರಕ್ಕೆ ಬಂದಿದೆ ಎಂದರು.

ನಾವು ಡಿಎಂಕೆ ಅವರಿಗೆ ನಾವು ಮೋಸ ಮಾಡ್ತಾ ಇದ್ದೀವಿ ಅಂತ ಅವರು ಹೇಳ್ತಾ ಇದ್ದಾರೆ. ಆದರೆ ನಾವು ಇದೇ ಐಡಿಯಾಲಜಿನಲ್ಲಿ ಇರೋದು ಅಲ್ವಾ? ಡಿಎಂಕೆ‌ ಪಕ್ಷದವರು ನಮ್ಮಿಂದ ಸಹಾಯ ತಗೊಂಡಿದ್ದಾರೆ, ನಾವು ಅವರ ಕಡೆಯಿಂದ ಸಹಾಯ ತಗೊಂಡಿದೀವಿ, ನಮ್ಮ ಐಡಿಯಾಲಜಿಗಳು ಬೇರೆ ಅಲ್ಲ, ಆದರೆ ಈಗಿನ ಸಂದರ್ಭ ಅನಿವಾರ್ಯ ಪರಿಸ್ಥಿತಿ ಹೀಗಿದೆ ನೋಡೋಣ ಮುಂದೇನಾಗುತ್ತೋ ಎಂದರು.

ರಾಜಭವನಗಳು ಬಿಜೆಪಿ ಕಚೇರಿಗಳಾಗಿವೆ!

ಬಹುಮತ ಸಾಬೀತಿಗೆ ಗವರ್ನರ್ ಇನ್ನೂ ಅವಕಾಶ‌‌ ಕೊಡದ ವಿಚಾರವಾಗಿ ಗರಂ ಆದ ಖರ್ಗೆ ಅವರು, ಅವರು ನಮ್ಮೆದುರಿಗೂ ಕಿರಿಕ್ ಶುರು ಮಾಡಿದ್ದಾರೆ. ಸರ್ಕಾರ ರಚನೆ ಮಾಡೋದಕ್ಕೆ ಗವರ್ನರ್‌‌ಗಳ ಪಾತ್ರ ಏನು? ತಮಿಳುನಾಡು, ಕೇರಳ, ಕರ್ನಾಟಕ, ಮತ್ತೆ ಎಲ್ಲೆಲ್ಲಿ ವಿರೋಧ ಪಕ್ಷದಲ್ಲಿ ಇದೆ ಅಲ್ಲೆಲ್ಲಾ ನೋಡಿದೀವಿ. ವಿರೋಧ ಪಕ್ಷಗಳಿರುವ ರಾಜ್ಯಗಳಲ್ಲಿ ರಾಜ್ಯಪಾಲರು ಕಿರಿಕ್ ಶುರು ಮಾಡಿದ್ದಾರೆ. ಮಹಾರಾಷ್ಟ್ರದಲ್ಲಿ ಬೆಳಗಿನ ಜಾವ 5 ಗಂಟೆಗೆ ಪ್ರಮಾಣ ವಚನ ನೀಡಿದ್ದು ಯಾವ ಕಾನೂನಿನ ಅಡಿಯಲ್ಲಿ? ಈಗ ರಾಜ್ಯಪಾಲರ ಕಚೇರಿ ಹಾಗೂ ಬಿಜೆಪಿ-ಆರ್‌ಎಸ್‌ಎಸ್ ಕಚೇರಿಗಳ ನಡುವೆ ವ್ಯತ್ಯಾಸವೇ ಇಲ್ಲದಂತಾಗಿದೆ' ಎಂದು ಕಿಡಿಕಾರಿದರು.

ಬೆಲೆ ಏರಿಕೆ ಕೇಳಿದರೆ 'ಧರ್ಮದ ನಶೆ' ಏರಿಸುತ್ತಾರೆ

ಇನ್ನು ಗ್ಯಾಸ್ ದರ ಹೆಚ್ಚಳದ ಬಗ್ಗೆ ಬಿಜೆಪಿ ನಾಯಕರು ಪ್ರತಿಕ್ರಿಯಿಸದ ವಿಚಾರವಾಗಿ ಟೀಕಿಸಿದ ಪ್ರಿಯಾಂಕ್ ಖರ್ಗೆ ಅವರು, ಇದರಲ್ಲೇ ಗೊತ್ತಾಗುತ್ತೆ ಬಿಜೆಪಿಯವರು ಎಂಥ ಹೇಡಿಗಳು ಅಂತ. ಹೀಗೆ ಮೌನವಾಗಿದ್ರೆ ಸಮಸ್ಯೆಗಳಿಗೆ ಪರಿಹಾರ ಹೇಗೆ ಸಿಗುತ್ತೆ. ಮೊದಲು ಸಮಸ್ಯೆ ಇದೆ ಅನ್ನೋದನ್ನ ಅರ್ಥಮಾಡಿಕೊಳ್ಳಬೇಕು, ಅವರು ಸಮಸ್ಯೆನೇ ಇಲ್ಲ ಅಂತ ಹೇಳ್ತಿದ್ದಾರೆ. ಕಳೆದ ಹತ್ತು ವರ್ಷದಿಂದ ಆರ್ಥಿಕ ಸಮಸ್ಯೆ ಇಲ್ಲ, ಉದ್ಯೋಗ ಸಮಸ್ಯೆ ಇಲ್ಲ, ಬೆಲೆ ಏರಿಕೆ ಸಮಸ್ಯೆ ಇಲ್ಲ ಅಂತಾರೆ, ಮಾಧ್ಯಮ ಸ್ನೇಹಿತರಿಗೆ ಸ್ವಾತಂತ್ರ್ಯ ಇದೆ ಅಂತ ಹೇಳ್ತಾರೆ, ಬಡತನ ಇಲ್ಲ ಅಂತ ಹೇಳುತ್ತಾರೆ, ಹಸಿವು ಮುಕ್ತ ಭಾರತ ಅಂತ ಹೇಳ್ತಾರೆ, ನೀವು ಪ್ರಪಂಚದ ಯಾವುದೇ ಇಂಡೆಕ್ಸ್ ತೆಗೆದುಕೊಳ್ಳಿ, ಅದರಲ್ಲಿ ನಮ್ಮ ದೇಶದ ಯಾವ ರ್‍ಯಾಂಕಿಂಗ್ ನಲ್ಲಿ ಇದೆ ಅಂತ ಅವರಿಗೆ ಗೊತ್ತಿದೆ. ಆದರೂ ಯಾವುದೇ ಸಮಸ್ಯೆ ಇಲ್ಲ ಅಂತಾರೆ. ಇವರಿಗೆ ಪ್ರಶ್ನೆ ಕೇಳಿದರೆ ಉತ್ತರ ಕೊಡೋಲ್ಲ, ಇವರಿಗೆ ಸದನ ನಡೆಸಲು ಇಷ್ಟ ಇಲ್ಲ, ಪಾರ್ಲಿಮೆಂಟ್ ನಡೆಸಲು ಇಷ್ಟ ಇಲ್ಲ, ಪ್ರಧಾನಿಗಳೇ ಉತ್ತರ ಕೊಡುವುದಿಲ್ಲ, ಪಾರ್ಲಿಮೆಂಟ್ ನಲ್ಲಿ ಸುರಕ್ಷತೆ ಇಲ್ಲ ಅಂತ ಓಡಿ ಹೋಗ್ತಾರೆ, 13 ವರ್ಷದಿಂದ ಒಂದೂ ಪ್ರೆಸ್ ಮೀಟ್ ಮಾಡಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.

ಚುನಾವಣಾ ಅಕ್ರಮ: ರಾಜೇಗೌಡರ ದೂರಿಗೆ ಬೆಂಬಲ

ಮತಗಳ ಟ್ರಂಕ್ ವಿಚಾರವಾಗಿ ರಾಜೇಗೌಡರು ನೀಡಿರುವ ದೂರಿನ ಬಗ್ಗೆ ಮಾತನಾಡಿದ ಸಚಿವರು, "ಪ್ರಜಾಪ್ರಭುತ್ವದ ವಿರುದ್ಧವಾಗಿ ಕೆಲವರು ನಡೆದುಕೊಳ್ಳುತ್ತಿದ್ದಾರೆ. ಮತಗಳಿದ್ದ ಟ್ರಂಕ್‌ಗಳನ್ನು ಒಡೆದಿರುವುದು ಅಕ್ಷಮ್ಯ. ಅಳಂದದಲ್ಲಿ ವೋಟ್ ಚೋರಿ ಮಾಡಿದವರು ಯಾರು ಎಂಬುದು ಎಲ್ಲರಿಗೂ ಗೊತ್ತಿದೆ' ಎಂದು ಮಾರ್ಮಿಕವಾಗಿ ನುಡಿದರು.

ಕೇರಳ ಸಿಎಂ ಆಯ್ಕೆ ಹೈಕಮಾಂಡ್ ಅಧೀನ

ಕೇರಳದ ಮುಂದಿನ ಮುಖ್ಯಮಂತ್ರಿ ಆಯ್ಕೆ ವಿಚಾರವಾಗಿ ಮಾತನಾಡುತ್ತಾ, 'ಅಲ್ಲಿನ ಶಾಸಕರು ಕೈಗೊಳ್ಳುವ ನಿರ್ಧಾರವನ್ನು ಹೈಕಮಾಂಡ್‌ಗೆ ತಿಳಿಸಲಾಗುತ್ತದೆ. ಅಂತಿಮವಾಗಿ ಪಕ್ಷದ ಹೈಕಮಾಂಡ್ ಈ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ' ಎಂದು ಸ್ಪಷ್ಟಪಡಿಸಿದರು.

ಬಂಡವಾಳ, ಐಪಿಎಲ್ ಕೂಡ ಗುಜರಾತ್ ಪಾಲು!*

ಕರ್ನಾಟಕಕ್ಕೆ ಬರಬೇಕಾದ ಬಂಡವಾಳ ಮತ್ತು ಐಪಿಎಲ್ ಪಂದ್ಯಗಳನ್ನು ಗುಜರಾತ್‌ಗೆ ಹೈಜಾಕ್ ಮಾಡಲಾಗುತ್ತಿದೆ. ಸೆಮಿಕಂಡಕ್ಟರ್ ಯೋಜನೆಗಳಿಗೆ ಕಂಪನಿಗಳು ಕರ್ನಾಟಕವನ್ನು ಆಯ್ಕೆ ಮಾಡಿದರೂ ಅವುಗಳನ್ನು ಅಸ್ಸಾಂ ಅಥವಾ ಗುಜರಾತ್‌ಗೆ ಕೊಂಡೊಯ್ಯಲಾಗುತ್ತಿದೆ. ಬಿಸಿಸಿಐನಲ್ಲಿ ಜಯ್ ಶಾ ಇರುವುದರಿಂದ ಅವರಿಗೆ ಮನಸ್ಸಿಗೆ ಬಂದಂತೆ ಮಾಡುತ್ತಿದ್ದಾರೆ, ಎಂದು ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದರು.