ಪಾಕಿಸ್ತಾನ ಭಾರತದಿಂದ ಬಂದ ತನ್ನ ಪ್ರಜೆಗಳನ್ನು ತನ್ನ ದೇಶದೊಳಗೆ ಬಿಟ್ಟುಕೊಳ್ಳದೇ ಆ ಕಡೆಯ ಗೇಟನ್ನು ಬಂದ್ ಮಾಡಿದೆ ಎಂದು ವರದಿಯಾಗಿದ್ದು, ಇದರಿಂದ ಅಟ್ಟಾರಿ ವಾಘಾ ಬಾರ್ಡರ್‌ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ನವದೆಹಲಿ: ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಪಹಲ್ಗಾಮ್ ದಾಳಿಯ ನಂತರ ಭಾರತ ಪಾಕಿಸ್ತಾನದ ಜೊತೆಗಿದ್ದ ಏಕೈಕ ರಸ್ತೆ ಮಾರ್ಗವಾದ ಅಟ್ಟಾರಿ ವಾಘಾ ಬಾರ್ಡರ್‌ ರೋಡನ್ನು ಮುಚ್ಚಿದೆ. ಜೊತೆಗೆ ಭಾರತದಲ್ಲಿರುವ ಎಲ್ಲಾ ಪಾಕಿಸ್ತಾನಿಗಳಿಗೆ ದೇಶ ಬಿಟ್ಟು ಹೋಗುವಂತೆ ಹೇಳಿದ್ದಲ್ಲದೇ ಏಪ್ರಿಲ್‌ 29ರವರೆಗೆ ಗಡುವನ್ನು ಕೂಡ ನೀಡಿತ್ತು. ಆದರೆ ಪಾಕಿಸ್ತಾನ ಭಾರತದಿಂದ ಬಂದ ತನ್ನ ಪ್ರಜೆಗಳನ್ನು ತನ್ನ ದೇಶದೊಳಗೆ ಬಿಟ್ಟುಕೊಳ್ಳದೇ ಆ ಕಡೆಯ ಗೇಟನ್ನು ಬಂದ್ ಮಾಡಿದೆ ಎಂದು ವರದಿಯಾಗಿದ್ದು, ಇದರಿಂದ ಅಟ್ಟಾರಿ ವಾಘಾ ಬಾರ್ಡರ್‌ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಪಾಕಿಸ್ತಾನವು ಇಂದು ಬೆಳಗ್ಗೆ 8:00 ಗಂಟೆಯಿಂದ ತನ್ನ ಪ್ರಜೆಗಳನ್ನು ಒಳಗೆ ಬಿಟ್ಟುಕೊಳ್ಳುವ ಕೌಂಟರ್‌ಗಳನ್ನು ಮುಚ್ಚಿದೆ ಎಂದು ಭಾರತೀಯ ವಲಸೆ ಅಧಿಕಾರಿಗಳು ದೃಢಪಡಿಸಿದ್ದಾರೆ, ಇದರಿಂದಾಗಿ ನೂರಾರು ಪಾಕಿಸ್ತಾನಿ ಪ್ರಜೆಗಳು ಗಡಿಯಲ್ಲಿಯೇ ಸಿಲುಕಿಕೊಂಡಿದ್ದಾರೆ. ಹಿರಿಯ ನಾಗರಿಕರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಪಾಕಿಸ್ತಾನಿ ನಾಗರಿಕರು ಈಗ ಯಾವುದೇ ಆಶ್ರಯ, ಆಹಾರ ಅಥವಾ ಅವರ ಸ್ಥಿತಿಯ ಬಗ್ಗೆ ಸ್ಪಷ್ಟತೆ ಇಲ್ಲದೆ ಸಂಕಷ್ಟದಲ್ಲಿ ಸಿಲುಕಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ. ತನ್ನದೇ ಪ್ರಜೆಗಳ ಒಳಗೆ ಸೇರಿಸಿಕೊಳ್ಳದೇ ಪಾಕಿಸ್ತಾನದ ಈ ಹಠಾತ್ ವರ್ತನೆಯಿಂದ ಅಟ್ಟಾರಿ ಪೋಸ್ಟ್‌ನಲ್ಲಿ ಆತಂಕ ಸೃಷ್ಟಿಯಾಗಿದ್ದು, ಭದ್ರತೆಯನ್ನು ಹೆಚ್ಚಿಸಲಾಗಿದೆ. ಈ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಇದು ಪಾಕಿಸ್ತಾನದ ನಾಚಿಕೆಗೇಡಿನ ಕೃತ್ಯ ಎಂದು ಅನೇಕರು ಕರೆದಿದ್ದಾರೆ. 

ಪಾಕಿಸ್ತಾನದ ನಿಲುವಿಗೆ ವಿರುದ್ಧವಾಗಿ, ಭಾರತ ಸರ್ಕಾರವು ಮುಂದಿನ ಸೂಚನೆ ಬರುವವರೆಗೆ ಪಾಕಿಸ್ತಾನಿ ನಾಗರಿಕರು ಅಟ್ಟಾರಿ-ವಾಘಾ ಗಡಿಯ ಮೂಲಕ ತಮ್ಮ ದೇಶಕ್ಕೆ ತೆರಳಲು ಅವಕಾಶ ನೀಡಿದೆ. ಗೃಹ ಸಚಿವಾಲಯದ ಇತ್ತೀಚಿನ ಆದೇಶದಂತೆ ಏಪ್ರಿಲ್ 30 ರಿಂದ ಗಡಿಯನ್ನು ಮುಚ್ಚುವುದನ್ನು ಕಡ್ಡಾಯಗೊಳಿಸಿದ್ದ ತನ್ನ ಹಿಂದಿನ ನಿರ್ದೇಶನದಲ್ಲಿ ಬದಲಾವಣೆ ಮಾಡಲಾಗಿದೆ. 

ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ನಂತರ ಹೊರಡಿಸಲಾದ ಹಿಂದಿನ ಆದೇಶದ ಗಡುವಿನ ಕೊನೆಯ ದಿನದಂದು ನೂರಾರು ಪಾಕಿಸ್ತಾನಿ ಪ್ರಜೆಗಳು ಗಡಿ ದಾಟಿದ್ದರು. ಕೇಂದ್ರ ಸರ್ಕಾರದ ಆದೇಶದ ನಂತರ ಒಂದು ವಾರದ ಅವಧಿಯಲ್ಲಿ,ಪಾಕಿಸ್ತಾನದ 55 ರಾಜತಾಂತ್ರಿಕರು ಮತ್ತು ಅವರ ಸಹಾಯಕ ಸಿಬ್ಬಂದಿ ಸೇರಿದಂತೆ ಸುಮಾರು 800 ಪಾಕಿಸ್ತಾನಿ ಪ್ರಜೆಗಳು ಅಟ್ಟಾರಿ-ವಾಘಾ ಗಡಿಯ ಮೂಲಕ ಭಾರತವನ್ನು ತೊರೆದು ಹೋಗಿದ್ದಾರೆ. ಹಾಗೆಯೇ ಸುಮಾರು 1,500 ಭಾರತೀಯ ನಾಗರಿಕರು ಪಾಕಿಸ್ತಾನದಿಂದ ಹಿಂತಿರುಗಿದ್ದಾರೆ. 

ಇತ್ತ ಭಾರತ ಸರ್ಕಾರದ ನಿರ್ದೇಶನವನ್ನು ಜಾರಿಗೊಳಿಸಲು ಉನ್ನತ ಮಟ್ಟದ ಪ್ರಯತ್ನವಾಗಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಕಳೆದ ವಾರ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳನ್ನು ಸಂಪರ್ಕಿಸಿ, ಯಾವುದೇ ಪಾಕಿಸ್ತಾನಿ ಪ್ರಜೆ ನಿಗದಿತ ಗಡುವನ್ನು ಮೀರಿ ದೇಶದಲ್ಲಿ ಉಳಿದುಕೊಳ್ಳದಂತೆ ನೋಡಿಕೊಳ್ಳಲು ಸೂಚನೆ ನೀಡಿದ್ದರು. 

ಇನ್ನೊಂದೆಡೆ ಭಾರತದ ಸಿಆರ್‌ಪಿಎಫ್ ಯೋಧನನ್ನು ಮದುವೆಯಾದ ಪಾಕಿಸ್ತಾನಿ ಮಹಿಳೆಗೆ ಕೊನೆಕ್ಷಣದಲ್ಲಿ ರಿಲೀಫ್ ಸಿಕ್ಕಿದ್ದು, ಇದು ಈಗ ಹಲವರು ಪ್ರಶ್ನೆಗಳಿಗೆ ಕಾರಣವಾಗಿದೆ. ಪಹಲ್ಗಾಮ್ ದಾಳಿಯ ನಂತರ ಭಾರತ ಕೈಗೊಂಡ ಹಲವು ಕಠಿಣ ಕ್ರಮಗಳ ಭಾಗವಾಗಿ ಪಾಕಿಸ್ತಾನಿಗಳ ವೀಸಾವನ್ನು ರದ್ದು ಮಾಡಿದ್ದಲ್ಲದೇ, ಏಪ್ರಿಲ್ 29ರೊಳಗೆ ದೇಶ ಬಿಟ್ಟು ಹೋಗುವಂತೆ ಸೂಚಿಸಲಾಗಿತ್ತು. ಆದರೆ ಈ ಆದೇಶದ ನಡುವೆಯೂ ಸಿಆರ್‌ಪಿಎಫ್‌ ಯೋಧನ ಪತ್ನಿಗೆ ರಿಲೀಫ್ ಸಿಕ್ಕಿದೆ. 7 ತಿಂಗಳ ಹಿಂದಷ್ಟೇ ಪಾಕಿಸ್ತಾನದ ಪಂಜಾಬ್ ಮೂಲದ ಮಹಿಳೆ ಮಿನಾಲ್ ಎಂಬುವವರನ್ನು ಆನ್‌ಲೈನ್‌ನಲ್ಲಿ ಭೇಟಿಯಾಗಿದ್ದ ಜಮ್ಮುವಿನ ಸಿಆರ್‌ಪಿಎಫ್ ಯೋಧ ಮುನೀರ್ ಖಾನ್ ಎಂಬುವವರು ಆನ್‌ಲೈನ್‌ನಲ್ಲೇ ಮದುವೆಯಾಗಿದ್ದರು. ಮದುವೆಯ ನಂತರ ಅವರು ಶಾರ್ಟ್ ಟೈಮ್ ವೀಸಾದ ಮೇಲೆ ಭಾರತಕ್ಕೆ ಬಂದಿದ್ದರು. ಅವರ ಈ ಶಾರ್ಟ್ ಟೈಮ್ ವೀಸಾ ಮಾರ್ಚ್‌ 22ರಂದೇ ಮುಕ್ತಾಯವಾಗಿದ್ದರೂ ಅವರು ಪಾಕಿಸ್ತಾನಕ್ಕೆ ವಾಪಸ್ ಹೋಗಿರಲಿಲ್ಲ. ಆದರೆ ಈಗ ಭಾರತ ಸರ್ಕಾರದ ಆದೇಶದ ನಂತರ ಆಕೆ ಅಟ್ಟಾರಿ ವಾಘಾ ಬಾರ್ಡರ್‌ ತಲುಪುವುದಕ್ಕಾಗಿ ಜಮ್ಮುವಿನಿಂದ ಅಲ್ಲಿಗೆ ಹೊರಟಿದ್ದರು. ಆದರೆ ಕೊನೆಕ್ಷಣದಲ್ಲಿ ಅವರಿಗೆ ರಿಲೀಫ್ ಸಿಕ್ಕಿದೆ.