ಭಾರತಕ್ಕೆ ನುಗ್ಗಲು ಹೊಸ ದಾರಿ ಹುಡುಕ್ತಿದೆ ಪಾಕ್: ಗುಜರಾತ್, ರಾಜಸ್ಥಾನದ ಮೂಲಕ ಪ್ರವೇಶ ಯತ್ನ
ಉಗ್ರರ ಒಳನುಸುಳಿಸಲು ಹೊಸ ಮಾರ್ಗಗಳಿಗಾಗಿ ಪಾಕ್ ಶೋಧ | ಗುಜರಾತ್, ರಾಜಸ್ಥಾನ ಮೂಲಕವೂ ಪ್ರವೇಶ ಯತ್ನ
ನವದೆಹಲಿ(ಡಿ.27): ಈವರೆಗೆ ಕೇವಲ ಜಮ್ಮು-ಕಾಶ್ಮೀರ ಹಾಗೂ ಪಂಜಾಬ್ ಗಡಿಗಳ ಮೂಲಕ ನುಸುಳಲು ಯತ್ನಿಸುತ್ತಿದ್ದ ಪಾಕಿಸ್ತಾನಿ ಉಗ್ರರು, ಈಗ ಗುಜರಾತ್ ಹಾಗೂ ರಾಜಸ್ಥಾನದ ಮೂಲಕವೂ ನುಸುಳಲು ಯತ್ನಿಸುತ್ತಿರುವ ವಿಷಯ ಬೆಳಕಿಗೆ ಬಂದಿದೆ.
2020ರಲ್ಲಿ ಈ ಎರಡೂ ರಾಜ್ಯಗಳ ಮೂಲಕ ಉಗ್ರರನ್ನು ನುಸುಳಿಸಲು ಪಾಕಿಸ್ತಾನ ಯತ್ನಿಸಿತ್ತು ಎಂದು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಹೇಳಿದೆ. ಗಡಿಯಲ್ಲಿ ಒಳನುಸುಳುವಿಕೆ ಯತ್ನಗಳ ಪ್ರಮಾಣ ಹೆಚ್ಚಿದೆ ಎಂದೂ ಬಿಎಸ್‌ಎಫ್ ವರದಿ ಕಳವಳ ವ್ಯಕ್ತಪಡಿಸಿದೆ.
ಸೂಪರ್‌ಸ್ಟಾರ್ ಬಿಪಿ ಏರು ಪೇರು: ಡಿಸ್ಚಾರ್ಜ್ ಯಾವಾಗ..?
‘ಕಳೆದ ವರ್ಷ ಗುಜರಾತ್ ಹಾಗೂ ರಾಜಸ್ಥಾನದ ಗಡಿಗಳಲ್ಲಿ ಇಂತಹ ಯಾವುದೇ ಯತ್ನಗಳು ನಡೆದಿರಲಿಲ್ಲ. ಆದರೆ ಈ ವರ್ಷ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಈ ರಾಜ್ಯಗಳ ಗಡಿ ಮೂಲಕ ನುಸುಳುವ ಯತ್ನಗಳು ನಡೆದಿವೆ’ ಎಂದು ಅದು ತಿಳಿಸಿದೆ.
ಆದರೆ ಕಾಶ್ಮೀರದ ಗಡಿಯಲ್ಲಿ ಕಳೆದ ವರ್ಷ 4 ನುಸುಳುವಿಕೆ ಯತ್ನಗಳು ನಡೆದಿದ್ದರೆ, ಈ ಸಲ ಕೇವಲ 1 ಯತ್ನ ದಾಖಲಾಗಿದೆ ಎಂಬ ಅಚ್ಚರಿಯ ಮಾಹಿತಿಯನ್ನು ಇದರಲ್ಲಿ ನೀಡಲಾಗಿದೆ.
ಬ್ರಿಟನ್‌ನಂಥದ್ದೇ ವೈರಸ್ ಭಾರತದಲ್ಲಿ ಮಾರ್ಚ್‌ನಲ್ಲೇ ಇತ್ತು: ಜೀನೋಮಿಕ್ಸ್
ಇದರರ್ಥ, ಪಾಕಿಸ್ತಾನವು ಭಾರತಕ್ಕೆ ಉಗ್ರರನ್ನು ಕಳಿಸಲು ಹೊಸ ಮಾರ್ಗಗಳನ್ನು ಶೋಧಿಸುತ್ತಿದೆ. ಆದರೆ ಗಡಿಯಲ್ಲಿ 24 ತಾಸೂ ಹದ್ದಿನ ಕಣ್ಣು ಇಟ್ಟಿರುವ ಬಿಎಸ್‌ಎಫ್, ಈ ಯತ್ನಗಳನ್ನು ವಿಫಲಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟಾರೆ ಜಮ್ಮು-ಕಾಶ್ಮೀರ, ಪಂಜಾಬ್, ರಾಜಸ್ಥಾನ ಹಾಗೂ ಗುಜರಾತ್- ಈ ಗಡಿಗಳ ಮೂಲಕ 11 ಒಳನುಸುಳುವಿಕೆ ಯತ್ನಗಳು ಈ ವರ್ಷದ ನವೆಂಬರ್ 1ನೇ ವಾರದವರೆಗೆ ದಾಖಲಾಗಿವೆ. ಜಮ್ಮು ಹಾಗೂ ಪಂಜಾಬ್ ಗಡಿಗಳಲ್ಲಿ ಅತಿ ಹೆಚ್ಚು ಎಂದರೆ ತಲಾ 4 (ಒಟ್ಟಾರೆ 8) ನುಸುಳುವಿಕೆ ಯತ್ನಗಳು ನಡೆದಿವೆ.