*ಬಿಜೆಪಿ-ಕೈ ಮಧ್ಯೆ ತುರುಸಿನ ಕಾಳಗ: ಮಣಿಪುರ, ಉ.ಪ್ರ.ದಲ್ಲಿ ಬಿಜೆಪಿಗೆ ಬಹುಮತ: ಸಮೀಕ್ಷೆ*ಸೊಸೆ ವಿರುದ್ಧ ಸ್ಪರ್ಧಿಸದೇ ಮಾಜಿ ಸಿಎಂ ರಾಣೆ ಕಣದಿಂದ ಹಿಂದಕ್ಕೆ*ಆರ್‌ಪಿಎನ್‌ ಆಯ್ತು, ರಾಜ್‌ ಬಬ್ಬರ್‌ ಕೂಡ ಕಾಂಗ್ರೆಸ್‌ಗೆ ಶೀಘ್ರ ರಾಜೀನಾಮೆ? 

ನವದೆಹಲಿ (ಜ. 29): ಪ್ರವಾಸಿಗರ ನೆಚ್ಚಿನ ತಾಣವಾದ ಗೋವಾ ವಿಧಾನಸಭೆ ಚುನಾವಣೆ ಫಲಿತಾಂಶವು ಕಾಂಗ್ರೆಸ್‌ ಮತ್ತು ಬಿಜೆಪಿ ಮಧ್ಯೆ ಫೋಟೋ ಫಿನಿಷ್‌ ಆಗಲಿದೆ. ಮಣಿಪುರದಲ್ಲಿ ಬಿಜೆಪಿ ಜಯ ಗಳಿಸಲಿದೆ ಎಂದು ಝೀ ವಾಹಿನಿಯ ಚುನಾವಣಾ ಪೂರ್ವ ಸಮೀಕ್ಷೆ ಭವಿಷ್ಯ ನುಡಿದಿದೆ.ಇನ್ನೊಂದೆಡೆ ‘ಟೈಮ್ಸ್‌ ನೌ’ ಸಮೀಕ್ಷೆಯು ಉತ್ತರ ಪ್ರದೇಶದಲ್ಲಿ ಬಿಜೆಪಿ ಸರಳ ಬಹುಮತ ಗಳಿಸಲಿದೆ ಎಂದಿದೆ.ಇನ್ನು 40 ಕ್ಷೇತ್ರಗಳನ್ನು ಒಳಗೊಂಡಿರುವ ಕರಾವಳಿ ರಾಜ್ಯ ಗೋವಾದಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್‌ ಮಧ್ಯೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ. ಇದರಿಂದಾಗಿ ಬಿಜೆಪಿ 15-19 ಸ್ಥಾನಗಳನ್ನು ಗೆಲ್ಲಲಿದ್ದು, ಪ್ರತಿಪಕ್ಷ ಕಾಂಗ್ರೆಸ್‌ 14-18 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆಯಿದೆ ಎಂದು ತಿಳಿಸಿದೆ.

ಝೀ ನ್ಯೂಸ್‌ ಸಮೀಕ್ಷೆ: 60 ವಿಧಾನಸಭೆ ಕ್ಷೇತ್ರ ಒಳಗೊಂಡಿರುವ ಮಣಿಪುರದಲ್ಲಿ ಬಿಜೆಪಿ 33-37 ಸ್ಥಾನಗಳನ್ನು ಗೆದ್ದು ಏಕಾಂಗಿಯಾಗಿ ಸರ್ಕಾರ ರಚನೆ ಮಾಡಲಿದೆ ಎಂದು ಝೀ ನ್ಯೂಸ್‌ ಸಮೀಕ್ಷೆ ಹೇಳಿದೆ.

ಉ.ಪ್ರ.ದಲ್ಲಿ ಬಿಜೆಪಿ- ಟೈಮ್ಸ್‌ ನೌ: ಉತ್ತರಪ್ರದೇಶದಲ್ಲಿ ಬಿಜೆಪಿ ಮತ್ತು ಅದರ ಮೈತ್ರಿ ಪಕ್ಷಗಳು 213-231 ಕ್ಷೇತ್ರಗಳಲ್ಲಿ ಜಯ ಸಾಧಿಸಿ, ಸರ್ಕಾರ ರಚನೆ ಮಾಡಲಿದೆ. ಅಖಿಲೇಶ್‌ ಯಾದವ್‌ ನೇತೃತ್ವದ ಎಸ್‌ಪಿ 147ರಿಂದ 158 ಕ್ಷೇತ್ರಗಳ ಜಯದೊಂದಿಗೆ 2ನೇ ಅತಿದೊಡ್ಡ ಪಕ್ಷವಾಗಿ ವಿಪಕ್ಷ ಸ್ಥಾನ ಅಲಂಕರಿಸಲಿದೆ. ಇನ್ನು ಮಾಯಾವತಿ ಅವರ ಬಿಎಸ್‌ಪಿ ಕೇವಲ 10-17, ಕಾಂಗ್ರೆಸ್‌ 9-15 ಹಾಗೂ 2-5 ಪಕ್ಷೇತರರು ಜಯಿಸಲಿದ್ದಾರೆ ಎಂದು ಟೈಮ್ಸ್‌ ನೌ ಸಮೀಕ್ಷೆ ಭವಿಷ್ಯ ನುಡಿದಿದೆ.

ಇದನ್ನೂ ಓದಿ:Trouble for Navjot Sidhu : ಸಿಧುವಷ್ಟು ಕ್ರೂರಿ ಯಾರೂ ಇಲ್ಲ ಅಂದ್ರು ಸಹೋದರಿ, ಆಕೆ ಯಾರು ಗೊತ್ತೇ ಇಲ್ಲ ಅಂದ್ರು ಸಿಧು ಪತ್ನಿ!

ಉತ್ತರ ಪ್ರದೇಶ:  ಒಟ್ಟು ಕ್ಷೇತ್ರ: 403, ಬಹುಮತಕ್ಕೆ: 202, ಬಿಜೆಪಿ 213-231, ಎಸ್‌ಪಿ 147-158, ಬಿಎಸ್‌ಪಿ 10-16, ಕಾಂಗ್ರೆಸ್‌ 9-15

ಗೋವಾ: ಒಟ್ಟು ಕ್ಷೇತ್ರ 40, ಬಹುಮತಕ್ಕೆ 21, ಪಕ್ಷ ಗೆಲ್ಲುವ ಸ್ಥಾನ, ಬಿಜೆಪಿ 15-19, ಕಾಂಗ್ರೆಸ್‌ 14-18, ಆಪ್‌ 0-2, ಎಂಜಿಪಿ 3-5, ಜಿಎಫ್‌ಪಿ 1-2

ಮಣಿಪುರ: ಒಟ್ಟು ಕ್ಷೇತ್ರಗಳು 60, ಬಹುಮತಕ್ಕೆ 31, ಪಕ್ಷ ಗೆಲ್ಲುವ ಸ್ಥಾನ, ಬಿಜೆಪಿ 33-37, ಕಾಂಗ್ರೆಸ್‌ 13-17, ಎನ್‌ಪಿಎಫ್‌ 4-6, ಎನ್‌ಪಿಪಿ 2-4

ಇದನ್ನೂ ಓದಿUP Elections : ಬಿಜೆಪಿ ನಾಯಕರಿಗೆ ಏರ್ ಟ್ರಾಫಿಕ್ ಇರೋದಿಲ್ವಾ? ಅಖಿಲೇಶ್ ಯಾದವ್ ಪ್ರಶ್ನೆ

ಗೋವಾ ಚುನಾವಣಾ ಪ್ರಚಾರ ಅಖಾಡಕ್ಕೆ ಡಿಕೆಶಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಗೋವಾ ವಿಧಾನಸಭೆ ಚುನಾವಣಾ ಅಖಾಡದ ಪ್ರಚಾರಕ್ಕೆ ಇಳಿದಿದ್ದಾರೆ. ಶುಕ್ರವಾರ ಅವರು, ಕಾಂಗ್ರೆಸ್‌ ಮಾರ್ಮಗೋವಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸಂಕಲ್ಪ್‌ ಅಮೋಣಕರ್‌ ಅವರ ಪರ ಪ್ರಚಾರ ನಡೆಸಿದರು. ಈ ವೇಳೆ ಅವರು ಗೋವಾದ ಬಿಜೆಪಿ ಸರ್ಕಾರ ಹಾಗೂ ಕೇಂದ್ರದ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಸೊಸೆ ವಿರುದ್ಧ ಸ್ಪರ್ಧಿಸದೇ ಮಾಜಿ ಸಿಎಂ ರಾಣೆ ಕಣದಿಂದ ಹಿಂದಕ್ಕೆ: ಗೋವಾ ವಿಧಾನಸಭೆ ಚುನಾವಣೆಯಲ್ಲಿ ವಿಚಿತ್ರ ಪ್ರಸಂಗವೊಂದು ನಡೆದಿದೆ. ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ ನಾಯಕ ಪ್ರತಾಪಸಿಂಹ ರಾಣೆ ಅವರ ವಿರುದ್ಧ ಪೊರೇಂ ಕ್ಷೇತ್ರದಲ್ಲಿ ಅವರ ಸೊಸೆ ದೇವಿಯಾ ರಾಣೆ ಅವರು ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ್ದಾರೆ. ಇದರಿಂದ ವಿಚಲಿತರಾಗಿರುವ ರಾಣೆ ತಮ್ಮ ಉಮೇದುವಾರಿಕೆ ಹಿಂಪಡೆದಿದ್ದಾರೆ.

ಈ ಬಗ್ಗೆ ರಾಣೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲವಾದರೂ, ಕಾಂಗ್ರೆಸ್‌ ಮೂಲಗಳು ರಾಣೆ ಹಿಂದೆ ಸರಿದಿದ್ದನ್ನು ಖಚಿತಪಡಿಸಿವೆ. ಕುಟುಂಬದಲ್ಲೇ ಸಂಘರ್ಷ ತಪ್ಪಿಸಲು ರಾಣೆ ಈ ನಿಲುವು ತೆಗೆದುಕೊಂಡಿದ್ದಾರೆ ಎಂದು ಅವು ಹೇಳಿವೆ.ಕೆಲ ವರ್ಷದ ಹಿಂದೆ ಪುತ್ರ ವಿಶ್ವಜಿತ್‌ ರಾಣೆ ಕಾಂಗ್ರೆಸ್‌ ಬಿಟ್ಟು ಬಿಜೆಪಿ ಸೇರಿದ್ದರು. ಈಗ ಅವರು ತಮ್ಮ ಪತ್ನಿಯನ್ನೇ ಅಖಾಡಕ್ಕೆ ಇಳಿಸಿದ್ದು ವಿಶೇಷ.

ಫೆಲೆರೋ ಹಿಂದಕ್ಕೆ: ಈ ನಡುವೆ, ಫಟೋರ್ಡಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎನ್‌ಸಿಪಿ ನಾಯಕ ಲುಯಿಜಿನೋ ಫೆಲೆರೋ ಕೂಡ ಕಣದಿಂದ ಹಿಂದೆ ಸರಿದಿದ್ದಾರೆ. ಈ ಹಿಂದೆ ತಾವು ಶಾಸಕರಾಗಿದ್ದಾಗ ಸಾಕಷ್ಟುಕೆಲಸ ಮಾಡಲು ಆಗಲಿಲ್ಲ ಎಂದು ಬೇಸರಿಸಿ ಅವರು ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ.

ಪ್ರಚಾರಕ್ಕೆ ಹೋಗುತ್ತಿದ್ದ ಅಖಿಲೇಶ್‌ ಕಾಪ್ಟರ್‌ಗೆ ತಡೆ:‘ಉತ್ತರ ಪ್ರದೇಶದ ವಿಧಾನಸಭೆ ಚುನಾವಣಾ ಪ್ರಚಾರಕ್ಕಾಗಿ ಮುಜಫ್ಫರನಗರಕ್ಕೆ ತೆರಳುತ್ತಿದ್ದ ತಮ್ಮ ಹೆಲಿಕಾಪ್ಟರ್‌ ಅನ್ನು ಸಕಾರಣವಿಲ್ಲದೆ ತಡೆಯಲಾಗಿದೆ. ಇದರಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲೇ ಉಳಿದುಕೊಳ್ಳುವಂತಾಗಿದೆ’ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ದೂರಿದ್ದಾರೆ. ಶುಕ್ರವಾರ ಹೆಲಿಕಾಪ್ಟರ್‌ ಮುಂದೆ ನಿಂತಿರುವ ಫೋಟೋ ಟ್ವೀಟ್‌ ಮಾಡಿರುವ ಅಖಿಲೇಶ್‌, ‘ಯಾವುದೇ ಕಾರಣವಿಲ್ಲದೆ ನನ್ನ ಹೆಲಿಕಾಪ್ಟರ್‌ ಅನ್ನು ತಡೆಯಲಾಗಿದೆ. ಆದರೆ ಬಿಜೆಪಿಯ ಹಿರಿಯ ನಾಯಕರೊಬ್ಬರ ವಿಮಾನ ಇಲ್ಲಿಂದಲೇ ಆಕಾಶದತ್ತ ಜಿಗಿಯಿತು. ಚುನಾವಣೆಯನ್ನು ಸೋಲುವ ಭೀತಿಯಲ್ಲಿರುವ ಬಿಜೆಪಿ ಈ ರೀತಿಯ ಪಿತೂರಿಯಲ್ಲಿ ತೊಡಗಿದೆ. ಆದರೆ ಇದೆಲ್ಲವನ್ನು ರಾಜ್ಯದ ಜನತೆಗೆ ಅರ್ಥವಾಗಿದೆ’ ಎಂದು ಕಿಡಿಕಾರಿದರು.

ಆರ್‌ಪಿಎನ್‌ ಆಯ್ತು, ರಾಜ್‌ ಬಬ್ಬರ್‌ ಕೂಡ ಕಾಂಗ್ರೆಸ್‌ಗೆ ಶೀಘ್ರ ರಾಜೀನಾಮೆ?: ಆರ್‌ಪಿಎನ್‌ ಸಿಂಗ್‌ ಬಳಿಕ ಉತ್ತರ ಪ್ರದೇಶದ ಇನ್ನೊಬ್ಬ ಕಾಂಗ್ರೆಸ್‌ ನಾಯಕ ಹಾಗೂ ನಟ ರಾಜ್‌ಬಬ್ಬರ್‌ ಅವರು ಪಕ್ಷ ತೊರೆಯಲಿದ್ದಾರೆ ಎಂಬ ಗುಸುಗುಸು ಕೇಳಿಬಂದಿದೆ. ಇತ್ತೀಚೆಗೆ ಕಾಂಗ್ರೆಸ್‌ ನಾಯಕ ಗುಲಾಂ ನಬಿ ಆಜಾದ್‌ ಅವರಿಗೆ ಪದ್ಮ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ನೀಡಿದ್ದರ ಬಗ್ಗೆ ಕಾಂಗ್ರೆಸ್‌ನ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದರು. ಇವರ ಬಗ್ಗೆ ಪರೋಕ್ಷವಾಗಿ ತಮ್ಮ ಟ್ವೀಟ್‌ಗಳಲ್ಲಿ ಬಬ್ಬರ್‌ ಕಿಡಿಕಾರಿದ್ದಾರೆ. ಇದರ ಬೆನ್ನಲ್ಲೇ ಅವರು ತಮ್ಮ ಹಿಂದಿನ ಪಕ್ಷವಾದ ಸಮಾಜವಾದಿ ಪಾರ್ಟಿಗೆ ಮರಳಲಿದ್ದಾರೆ. ಈ ಬಗ್ಗೆ ಅಖಿಲೇಶ್‌ ಜತೆ ಅವರು ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.