ಸ್ವಾಮಿ ಅವಿಮುಕ್ತೇಶ್ವರಾನಂದ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದ ಅಶುತೋಷ್ ಬ್ರಹ್ಮಚಾರಿ ಮಹಾರಾಜ್ ಅವರ ಮೇಲೆ ಚಲಿಸುವ ರೇವಾ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಮಾರಣಾಂತಿಕ ಹಲ್ಲೆ ನಡೆದಿದೆ. ಹರಿತವಾದ ಆಯುಧಗಳಿಂದ ದಾಳಿ ನಡೆದಿದ್ದು, ಶೌಚಾಲಯದಲ್ಲಿ ಅಡಗಿ ಅವರು ಪ್ರಾಣ ಉಳಿಸಿಕೊಂಡಿದ್ದಾರೆ.

ಅವಿಮುಕ್ತೇಶ್ವರಾನಂದ ವಿರುದ್ಧ ಲೈಂಗಿಕ ಕಿರುಕುಳ ಕೇಸ್ ಹಾಕಿದ್ದ ಅಶುತೋಷ್ ಮೇಲೆ ಹಲ್ಲೆ

ಪ್ರಯಾಗ್‌ರಾಜ್‌: ಸದಾ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಲ್ಲಿರುವ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿರುವ ಅಶುತೋಷ್ ಬ್ರಹ್ಮಚಾರಿ ಮಹಾರಾಜ್ ಅವರ ಮೇಲೆ ಚಲಿಸುವ ರೈಲಿನಲ್ಲೇ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ. ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ಗೆ ಪ್ರಯಾಣಿಸುತ್ತಿದ್ದಾಗ ಕೌಶಂಬಿ ಜಿಲ್ಲೆಯ ಫತೇಪುರ್ ಮತ್ತು ಸಿರಾತು ರೈಲು ನಿಲ್ದಾಣಗಳ ನಡುವೆ ರೇವಾ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಅವರ ಮೇಲೆ ಹರಿತವಾದ ಆಯುಧಗಳಿಂದ ದಾಳಿ ನಡೆದಿದ್ದು, ಅವರಿಗೆ ಗಂಭೀರ ಗಾಯಗಳಾಗಿದೆ. ಆದರೆ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.

Add Asianetnews Kannada as a Preferred SourcegooglePreferred

ವರದಿಗಳ ಪ್ರಕಾರ, ದಾಳಿ ಮಾಡಿದವರು ಹರಿತವಾದ ಆಯುಧದಿಂದ ಅವರ ಮೂಗನ್ನು ಕತ್ತರಿಸಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಅಶುತೋಷ್ ಬ್ರಹ್ಮಚಾರಿ ಅವರು ರೈಲಿನ ಶೌಚಾಲಯದೊಳಗೆ ಒಳಗಿನಿಂದ ಲಾಕ್ ಮಾಡಿಕೊಂಡು ಅಡಗಿಕೊಳ್ಳುವ ಮೂಲಕ ತಮ್ಮನ್ನು ತಾವು ರಕ್ಷಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ದಾಳಿಯಿಂದ ಅವರಿಗೆ ಹಲವು ಗಾಯಗಳಾಗಿದ್ದು ರಕ್ತಸುರಿಯುತ್ತಲೇ ಅವರು ಪ್ರಯಾಗರಾಜ್‌ವರೆಗೆ ಬಂದಿದ್ದಾರೆ. ಪ್ರಸ್ತುತ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.

ಪ್ರಯಾಗ್‌ರಾಜ್ ತಲುಪಿದ ನಂತರ ಅಶುತೋಷ್ ಬ್ರಹ್ಮಚಾರಿ ಅವರು ಪ್ರಯಾಗ್‌ರಾಜ್ ಜಂಕ್ಷನ್‌ನಲ್ಲಿರುವ ಸರ್ಕಾರಿ ರೈಲ್ವೆ ಪೊಲೀಸ್ ನಿಲ್ದಾಣದಲ್ಲಿ ಘಟನೆಗೆ ಸಂಬಂಧಿಸಿದಂಯೆ ಎಫ್‌ಐಆರ್ ದಾಖಲಿಸಿದ್ದಾರೆ. ಬಳಿಕ ಕೊಲ್ವಿನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅಶುತೋಷ್ ಬ್ರಹ್ಮಚಾರಿ ಈ ದಾಳಿಯು ಸ್ವಾಮಿ ಅವಿಮುಕ್ತೇಶ್ವರಾನಂದ ಅವರಿಗೆ ಸಂಬಂಧಿಸಿದ ಪಿತೂರಿಯಾಗಿದೆ. ದಾಳಿ ಮಾಡಿದವರು ಶ್ರೀಗಳ ವಿರುದ್ಧ ಪ್ರಕರಣ ದಾಖಲಿಸಿದ್ದಕ್ಕಾಗಿ ನನಗೆ ಬೆದರಿಸಿದ್ದಾರೆ ಎಂದು ಆರೋಪಿಸಿದರು. ಗಾಜಿಯಾಬಾದ್‌ನಿಂದ ಪ್ರಯಾಗ್‌ರಾಜ್‌ಗೆ ರೇವಾ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ರೈಲಿನೊಳಗೆ ದಾಳಿ ನಡೆದಿದೆ.

ಮಥುರಾದ ಶ್ರೀ ಕೃಷ್ಣ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದ ಪ್ರಕರಣವನ್ನು ಮಾರ್ಚ್ 12 ರಂದು ಅಲಹಾಬಾದ್ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಸಲು ನಿರ್ಧರಿಸಲಾಗಿದೆ. ಸ್ವಾಮಿ ಅವಿಮುಕ್ತೇಶ್ವರಾನಂದ್ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪಗಳ ಕುರಿತು ಹೈಕೋರ್ಟ್‌ನಲ್ಲಿಯೂ ಉತ್ತರ ಸಲ್ಲಿಸಬೇಕಾಗಿದೆ. ಈ ಎರಡು ವಿಚಾರಗಳಿಗೆ ಸಂಬಂಧಿಸಿದಂತೆ ಪ್ರಯಾಗ್‌ರಾಜ್‌ಗೆ ರೇವಾ ಎಕ್ಸ್‌ಪ್ರೆಸ್‌ನ H1 ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ದಾಳಿ ನಡೆದಿದೆ ಎಂದು ಅಶುತೋಷ್ ಬ್ರಹ್ಮಚಾರಿ ಹೇಳಿದ್ದಾರೆ.

ಇದನ್ನೂ ಓದಿ: ವೈದ್ಯರು ಆಗಷ್ಟೇ ಜನಿಸಿದ ಮಗುವನ್ನು ಕೈಗಿತ್ತಾಗ ಹೆದರಿ ನಡುಗಿದ ಮಗುವಿನ ಅಪ್ಪ: ವೀಡಿಯೋ ಭಾರಿ ವೈರಲ್

ತಮ್ಮ ಮೇಲಿನ ಈ ದಾಳಿಗೆ ಸ್ವಾಮಿ ಅವಿಮುಕ್ತೇಶ್ವರಾನಂದರನ್ನೇ ದೂಷಿಸಿದ ಅಶುತೋಷ್ ಬ್ರಹ್ಮಚಾರಿ, ಸ್ವಾಮಿಯ ಅನುಯಾಯಿಗಳು ಇತ್ತೀಚೆಗೆ ಅವರ ಮೂಗು ಕತ್ತರಿಸುವವರಿಗೆ 21 ಲಕ್ಷ ರೂ. ಬಹುಮಾನ ಘೋಷಿಸಿದ್ದರು ಮತ್ತು ಅದನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದ್ದರು ಎಂದು ಆರೋಪಿಸಿದರು. ದಾಳಿ ನಡೆಸಿದವನೋರ್ವ, ನೀವು ನಮ್ಮ ಗುರುಗಳ ವಿರುದ್ಧ ಪ್ರಕರಣ ದಾಖಲಿಸಿದ್ದೀರಿ, ನಾವು ನಿಮ್ಮನ್ನು ಕೊಲ್ಲುತ್ತೇವೆ ಎಂದು ಬೆದರಿಕೆ ಹಾಕಿದ್ದನು ಎಂದು ಅವರು ಹೇಳಿದ್ದಾರೆ.

ಪ್ರಕರಣದ ಆರೋಪಿಗಳನ್ನು ಗುರುತಿಸಲು ರೈಲ್ವೆ ಪೊಲೀಸ್ ಹಲವು ತಂಡ ರಚಿಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಸಿರಾತು ರೈಲು ನಿಲ್ದಾಣದ ಬಳಿ ಮಾಹಿತಿ ಸಂಗ್ರಹಿಸಿದ್ದು, ಅಶುತೋಷ್ ಬ್ರಹ್ಮಚಾರಿ ಅವರಿಂದಲೂ ದಾಳಿಯ ವಿವರಗಳನ್ನು ಪಡೆದುಕೊಂಡಿದ್ದಾರೆ. ಘಟನೆಯ ಸಮಯದಲ್ಲಿ ಹಲ್ಲೆಕೋರನು ಮದ್ಯದ ಅಮಲಿನಲ್ಲಿದ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ದಾಳಿಯ ನಂತರ, ಅಶುತೋಷ್ ಬ್ರಹ್ಮಚಾರಿ ತಮಗೆ ಭದ್ರತೆ ನೀಡುವಂತೆ ಕೋರಿದ್ದಾರೆ. ಮೂಗು ಕತ್ತರಿಸಿದರೆ ಬಹುಮಾನ ನೀಡುವುದಾಗಿ ಘೋಷಿಸಲಾಗಿದ್ದು, ಇದು ತಮ್ಮ ಇದು ಅವರ ಜೀವಕ್ಕೆ ಅಪಾಯವನ್ನುಂಟುಮಾಡಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಮಧ್ಯಪ್ರಾಚ್ಯ ಸಂಘರ್ಷ: ಇರಾನ್‌ ತೈಲ ಡಿಪೋಗಳ ಮೇಲೆ ಇಸ್ರೇಲ್ ಬಾಂಬ್ ದಾಳಿ: ಆಕಾಶದೆತ್ತರಕ್ಕೆ ಎದ್ದ ಬೆಂಕಿ ಜ್ವಾಲೆ

ಇತ್ತ ಅಶುತೋಷ್ ಮಹಾರಾಜ್ ಮೇಲಿನ ದಾಳಿಯ ಬಗ್ಗೆ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಪ್ರತಿಕ್ರಿಯಿಸಿದ್ದು, ನಾನು ಇಲ್ಲಿ ಕುಳಿತಿದ್ದೇನೆ. ನಿಮ್ಮ ಮೂಲಕ ನನಗೆ ಈ ವಿಚಾರ ತಿಳಿಯಿತು. ಅವರು ಶೌಚಾಲಯಕ್ಕೆ ಹೋದಾಗ ಅವರು ಚೆನ್ನಾಗಿದ್ದರು ಎಂದು ಹೇಳಿದರು ಎಂದು ತಿಳಿಯಿತು. ಆದರೆ ಶೌಚಾಲಯದಿಂದ ಹಿಂದಿರುಗಿದ ನಂತರ ಆರೋಪ ಮಾಡಿದ್ದಾರೆ. ಯಾವುದೇ ದೈಹಿಕ ಹಾನಿ ಅಥವಾ ಹಿಂಸೆಯನ್ನು ಉಂಟುಮಾಡಬೇಡಿ ಎಂದು ನಾನು ನನ್ನ ಬೆಂಬಲಿಗರಿಗೆ ಹೇಳಿದ್ದೇನೆ ಎಂದರು 21 ಲಕ್ಷ ಬಹುಮಾನದ ಬಗ್ಗೆ ಕೇಳಿದಾಗ ನಾನು ಯಾವುದೇ ಬಹುಮಾನ ಘೋಷಿಸಿಲ್ಲ, ಘೋಷಿಸಿದವರಿಗೆ ಆ ಬಗ್ಗೆ ತಿಳಿದಿರಬೇಕು. ನಾವು ಅಂತಹ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ. ನಮ್ಮ ಬೆಂಬಲಿಗರಿಗೆ ದೈಹಿಕವಾಗಿ ಅಲ್ಲ, ಬೌದ್ಧಿಕವಾಗಿ ಪ್ರತಿಕ್ರಿಯಿಸಬೇಕು ಎಂದು ನಾವು ಸ್ಪಷ್ಟವಾಗಿ ಹೇಳಿದ್ದೇವೆ ಎಂದು ಹೇಳಿದರು.