Kerala snake news: ತಿರುವನಂತಪುರದ ಮನೆಯೊಂದರ ಬೆಡ್‌ರೂಮ್ ಎಸಿಯಲ್ಲಿ ಬರೋಬ್ಬರಿ ಐದು ಹಾವುಗಳು ಪತ್ತೆಯಾಗಿವೆ. ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ನಾಲ್ಕನ್ನು ಹಿಡಿಯಲಾಗಿದ್ದು, ಒಂದು ಹಾವು ತಪ್ಪಿಸಿಕೊಂಡಿದೆ.  

ತಿರುವನಂತಪುರ: ಮನೆಯ ಬೆಡ್‌ರೂಮ್‌ನಲ್ಲಿರೋ ಎಸಿ ಆನ್ ಮಾಡೋ ಮುನ್ನ ಒಮ್ಮೆ ಚೆಕ್ ಮಾಡೋದು ಒಳ್ಳೇದು. ಯಾಕಂದ್ರೆ, ತಿರುವನಂತಪುರದ ಶ್ರೀಕಾರ್ಯಂನಲ್ಲಿರೋ ಮನೆಯೊಂದರ ಎಸಿಯಲ್ಲಿ ಬರೋಬ್ಬರಿ ಐದು ಹಾವುಗಳು ಪತ್ತೆಯಾಗಿವೆ!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶ್ರೀಕಾರ್ಯಂನ ಚೆರುವೈಕ್ಕಲ್ ನಿವಾಸಿ, ಟೆಕ್ನೋಪಾರ್ಕ್ ಉದ್ಯೋಗಿ ಮಾಧವ್ ಜೆ ಪಣಿಕರ್ ಅವರ ಮನೆಯಲ್ಲೇ ಈ ಘಟನೆ ನಡೆದಿದೆ. ಮಾಧವ್ ಸಂಜೆ ಕೆಲಸ ಮುಗಿಸಿ ಮನೆಗೆ ಬಂದಾಗ, ಬೆಡ್‌ರೂಮ್‌ನ ಎಸಿಯ ಕೆಳಭಾಗದಲ್ಲಿ ಬಾಲದ ತರ ಏನೋ ನೇತಾಡುತ್ತಿರುವುದು ಕಂಡಿದೆ. ಅನುಮಾನ ಬಂದು ಹತ್ತಿರ ಹೋಗಿ ನೋಡಿದಾಗ ಅದು ಹಾವೆಂದು ಗೊತ್ತಾಗಿ ಮನೆಯವರೆಲ್ಲಾ ಬೆಚ್ಚಿಬಿದ್ದಿದ್ದಾರೆ.

ತಕ್ಷಣ ಅವರು ಪ್ರಸಿದ್ಧ ಉರಗ ತಜ್ಞರಿಗೆ ಕರೆ ಮಾಡಲು ಪ್ರಯತ್ನಿಸಿದ್ದಾರೆ, ಆದರೆ ಸಂಪರ್ಕ ಸಾಧ್ಯವಾಗಿಲ್ಲ. ಬಳಿಕ, ಅರಣ್ಯ ಇಲಾಖೆಯ ಸ್ನೇಕ್ ರೆಸ್ಕ್ಯೂ ಆಫೀಸರ್ ರೋಷ್ನಿ ಅವರಿಗೆ ಕರೆ ಮಾಡಿದ್ದಾರೆ. ರೋಷ್ನಿ ಅವರ ಸೂಚನೆಯಂತೆ, 'ಸರ್ಪ' ಆ್ಯಪ್‌ನ ಸ್ನೇಕ್ ಕ್ಯಾಚರ್ ಗೌತಮ್ ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದಾರೆ.

ನಾಲ್ಕು ಸೆರೆ, ಒಂದು ಎಸ್ಕೇಪ್!

ಗೌತಮ್ ಟಾರ್ಚ್ ಹಾಕಿ ನೋಡಿದಾಗ, ಅವು 'ಕೊಂಬೇರಿ' ಅಥವಾ 'ವಿಲ್ಲೂನ್ನಿ' ಎಂಬ ವಿಷರಹಿತ ಹಾವುಗಳೆಂದು ಗೊತ್ತಾಗಿದೆ. ಎಸಿಯನ್ನು ಬಿಚ್ಚದೆ ಹಾವುಗಳನ್ನು ಹಿಡಿಯಲು ಸಾಧ್ಯವಿಲ್ಲ ಎಂದು ಗೊತ್ತಾದ ಮೇಲೆ, ಎಸಿ ಟೆಕ್ನಿಷಿಯನ್‌ನನ್ನು ಕರೆಸಲಾಯಿತು. ಟೆಕ್ನಿಷಿಯನ್ ಎಸಿ ಓಪನ್ ಮಾಡಿದಾಗ ಎಲ್ಲರಿಗೂ ಶಾಕ್! ಒಳಗೆ ಇದ್ದಿದ್ದು ಬರೋಬ್ಬರಿ ಐದು ಹಾವುಗಳು.

ಎಸಿಯ ಔಟರ್ ವಾಟರ್ ಪೈಪ್ ಬಳಿ ಗೋಡೆಯಲ್ಲಿ ಕೊರೆದಿದ್ದ ತೂತಿನ ಮೂಲಕ ಈ ಹಾವುಗಳು ಒಳಗೆ ಬಂದಿದ್ದವು. ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ನಾಲ್ಕು ಹಾವುಗಳನ್ನು ಹಿಡಿಯಲಾಯಿತು. ಆದರೆ ಐದನೇ ಹಾವು ಔಟರ್ ಪೈಪ್‌ನ ಪಕ್ಕದಿಂದ ಜಾರಿಕೊಂಡು ತಪ್ಪಿಸಿಕೊಂಡಿದೆ.

ಮನೆಯ ಟೆರೇಸ್‌ಗೆ ತಾಗಿಕೊಂಡಿದ್ದ ಮರದ ಕೊಂಬೆಗಳ ಮೂಲಕ ಹಾವುಗಳು ಮನೆಗೆ ಬಂದಿರಬಹುದು ಎಂದು ಹೇಳಲಾಗಿದೆ. ಹಿಡಿದ ಹಾವುಗಳನ್ನು ಜನವಸತಿ ಇಲ್ಲದ ಪೊದೆಗೆ ಬಿಡಲಾಯಿತು.