- Home
- News
- India News
- ರಾಹುಲ್ ಗಾಂಧಿಯನ್ನು ಹಿಂದೂ ಧರ್ಮದಿಂದ ಬಹಿಷ್ಕಾರ ಹಾಕಿದ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸ್ವಾಮೀಜಿ
ರಾಹುಲ್ ಗಾಂಧಿಯನ್ನು ಹಿಂದೂ ಧರ್ಮದಿಂದ ಬಹಿಷ್ಕಾರ ಹಾಕಿದ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸ್ವಾಮೀಜಿ
ರಾಹುಲ್ ಗಾಂಧಿ ಅವರನ್ನು ಹಿಂದೂ ಧರ್ಮದಿಂದ ಬಹಿಷ್ಕರಿಸಲಾಗುತ್ತಿದೆ ಎಂದು ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಹೇಳಿದ್ದಾರೆ. ಸಂಸತ್ತಿನಲ್ಲಿ ಮನುಸ್ಮೃತಿ ಕುರಿತು ರಾಹುಲ್ ಗಾಂಧಿ ನೀಡಿದ ಹೇಳಿಕೆಯಿಂದ ಸನಾತನ ಧರ್ಮದ ಅನುಯಾಯಿಗಳ ಭಾವನೆಗಳಿಗೆ ಧಕ್ಕೆಯುಂಟಾಗಿದೆ ಎಂದು ಅವರು ಹೇಳಿದರು.

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇನ್ಮುಂದೆ ಹಿಂದೂ ಧರ್ಮದ ಭಾಗವಾಗಿರುವುದಿಲ್ಲ. ರಾಹುಲ್ ಗಾಂಧಿ ಅವರನ್ನು ಹಿಂದೂ ಧರ್ಮದಿಂದ ಸಾರ್ವಜನಿಕವಾಗಿ ಬಹಿಷ್ಕರಿಸಲಾಗುತ್ತಿದೆ ಎಂದು ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಹೇಳಿದ್ದಾರೆ.
ಇಂದು ಬದರಿನಾಥದ ಶಂಕರಾಚಾರ್ಯ ಆಶ್ರಮದಲ್ಲಿ ಮಾಧ್ಯಮಗಳ ಜೊತೆ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಮಾತನಾಡಿದರು. ಇತ್ತೀಚೆಗೆ ಸಂಸತ್ತಿನಲ್ಲಿ ರಾಹುಲ್ ಗಾಂಧಿ ಅವರು ಮನುಸ್ಮೃತಿ ಕುರಿತ ನೀಡಿದ ಹೇಳಿಕೆಯಿಂದ ಸನಾತನ ಧರ್ಮದ ಎಲ್ಲಾ ಅನುಯಾಯಿಗಳ ಭಾವನೆಗಳಿಗೆ ಧಕ್ಕೆಯುಂಟಾಗಿದೆ ಎಂದು ಹೇಳಿದರು.
ಸಂಸತ್ತಿನಲ್ಲಿ ಮಾತನಾಡುವಾಗ ರಾಹುಲ್ ಗಾಂಧಿ, ಅತ್ಯಾಚಾರಿಯನ್ನು ರಕ್ಷಿಸುವ ಸೂತ್ರವು ಸಂವಿಧಾನದಲ್ಲಿ ಬರೆಯಲ್ಪಟ್ಟಿಲ್ಲ. ನಿಮ್ಮ ಪುಸ್ತಕವಾದ ಮನುಸ್ಮೃತಿಯಲ್ಲಿ ಬರೆಯಲ್ಪಟ್ಟಿದೆ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿಯವರ ಹೇಳಿಕೆ ಖಂಡನೀಯ ಎಂದು ಸ್ವಾಮೀಜಿಗಳು ಹೇಳಿದ್ದಾರೆ
ಮುಂದುವರಿದು ಮಾತನಾಡಿದ ಸ್ವಾಮೀಜಿಗಳು, ಮೂರು ತಿಂಗಳ ಹಿಂದೆ ರಾಹುಲ್ ಗಾಂಧಿ ಅವರಿಗೆ ನೋಟಿಸ್ ನೀಡಲಾಗಿತ್ತು. ನಿಮ್ಮ ಹೇಳಿಕೆ ಮನುಸ್ಮೃತಿಯಲ್ಲಿ ಎಲ್ಲಿ ಉಲ್ಲೇಖಿಸಲಾಗಿದೆ ಎಂದು ತೋರಿಸುವಂತೆ ಹೇಳಲಾಗಿತ್ತು. ನೋಟಿಸ್ ನೀಡಿ ಮೂರು ತಿಂಗಳಾದ್ರೂ ರಾಹುಲ್ ಗಾಂಧಿ ಅವರಿಂದ ಉತ್ತರ ಬಂದಿಲ್ಲ ಮತ್ತು ತಮ್ಮ ಹೇಳಿಕೆಗೂ ಕ್ಷಮೆಯನನ್ನು ಸಹ ಕೇಳಿಲ್ಲ ಎಂದಿದ್ದಾರೆ. ರಾಹುಲ್ ಗಾಂಧಿ ತಮ್ಮನ್ನು ಹಿಂದೂ ಎಂದು ಕರೆದುಕೊಳ್ಳಲು ಅನರ್ಹರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಒಬ್ಬ ವ್ಯಕ್ತಿ ನಿರಂತರವಾಗಿ ಹಿಂದೂ ಧರ್ಮಗ್ರಂಥಗಳನ್ನು ಅವಮಾನಿಸುತ್ತಾನೆ. ತನ್ನ ಹೇಳಿಕೆಗಳಿಗೆ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ. ಅಂತಹ ವ್ಯಕ್ತಿಗೆ ಹಿಂದೂ ಧರ್ಮದಲ್ಲಿ ಸ್ಥಾನ ನೀಡಲಾಗುವುದಿಲ್ಲ ಎಂದು ಸ್ವಾಮೀಜಿಗಳು ಹೇಳಿದ್ದಾರೆ. ಎಲ್ಲಾ ದೇವಸ್ಥಾನಗಳು ರಾಹುಲ್ ಗಾಂಧಿಯನ್ನು ವಿರೋಧಿಸಬೇಕು. ರಾಹುಲ್ ಗಾಂಧಿಯವರ ಯಾವುದೇ ಪೂಜೆಗಳನ್ನು ಅರ್ಚಕರು ಮಾಡಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.