Username ಫೀಚರ್ ವಿಚಾರವಾಗಿ ಕೇಂದ್ರ ಸರ್ಕಾರವು ವಾಟ್ಸಾಪ್, ಟೆಲಿಗ್ರಾಮ್ ಮತ್ತು ಸಿಗ್ನಲ್ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಿದೆ. ಈ ವೈಶಿಷ್ಟ್ಯದಿಂದಾಗಬಹುದಾದ ಆನ್‌ಲೈನ್ ವಂಚನೆ ಮತ್ತು ಸೈಬರ್ ಅಪರಾಧಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸರ್ಕಾರ, ಕೈಗೊಂಡಿರುವ ಸುರಕ್ಷತಾ ಕ್ರಮಗಳ ಬಗ್ಗೆ ವಿವರಣೆ ಕೇಳಿದೆ. ಆದರೆ, ಈ ಫೀಚರ್ ಐಚ್ಛಿಕವಾಗಿದ್ದು, ಬಳಕೆದಾರರ ಖಾಸಗಿತನವನ್ನು ರಕ್ಷಿಸುತ್ತದೆ ಎಂದು ವಾಟ್ಸಾಪ್ ಸ್ಪಷ್ಟಪಡಿಸಿದೆ.
ಸೋಶಿಯಲ್ ಮೀಡಿಯಾ ಆ್ಯಪ್‌ಗಳಲ್ಲಿನ ಬಳಕೆದಾರರ ಹೆಸರು (Username) ವಿಚಾರಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ಮತ್ತು ಟೆಕ್ ಸಂಸ್ಥೆಗಳ ನಡುವಿನ ವಿವಾದ ಹೊಸ ತಿರುವು ಪಡೆದುಕೊಂಡಿದೆ. ವಾಟ್ಸಾಪ್‌ಗೆ ನೋಟಿಸ್ ಜಾರಿ ಮಾಡಿದ ಬೆನ್ನಲ್ಲೇ, ಟೆಲಿಗ್ರಾಮ್ ಮತ್ತು ಸಿಗ್ನಲ್ ಸಂಸ್ಥೆಗಳಿಗೂ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ನೋಟಿಸ್ ಜಾರಿ ಮಾಡಿದೆ.
ಯೂಸರ್ ನೇಮ್ ಫೀಚರ್ ಬಳಸಿ ನಡೆಯುತ್ತಿರುವ ನಕಲಿ ಗುರುತು ಸೃಷ್ಟಿ, ಆನ್‌ಲೈನ್ ವಂಚನೆ ಹಾಗೂ ಸೈಬರ್ ಅಪರಾಧಗಳನ್ನು ತಡೆಯಲು ಯಾವ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಉಭಯ ಪ್ಲಾಟ್‌ಫಾರ್ಮ್‌ಗಳಿಂದ ವಿವರಣೆ ಕೇಳಿದೆ.
ಟೆಲಿಗ್ರಾಮ್ ಮತ್ತು ಸಿಗ್ನಲ್‌ಗೆ ನೋಟಿಸ್
ಯೂಸರ್ ನೇಮ್ ಫೀಚರ್ ಮುಂದುವರಿಸುವ ಅಗತ್ಯವೇನು ಮತ್ತು ಇದರ ದುರುಪಯೋಗ ತಡೆಗಟ್ಟಲು ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳೇನು ಎಂದು ಟೆಲಿಗ್ರಾಮ್‌ನಿಂದ ಕೇಂದ್ರ ಸ್ಪಷ್ಟನೆ ಕೇಳಿದೆ. ಇದಕ್ಕೂ ಒಂದು ದಿನದ ಮೊದಲು ಅಂದರೆ ಬುಧವಾರ ಕೇಂದ್ರ ಸರ್ಕಾರವು ವಾಟ್ಸಾಪ್‌ನ ಯೂಸರ್ ನೇಮ್ ಫೀಚರ್ ಕುರಿತು ಮೆಟಾ ಸಂಸ್ಥೆಗೆ ನೋಟಿಸ್ ಜಾರಿ ಮಾಡಿತ್ತು. ಯೂಸರ್ ನೇಮ್ ಬಳಕೆಯಿಂದಾಗಿ ಆನ್‌ಲೈನ್ ವಂಚನೆ, ಸುಳ್ಳು ಗುರುತು ಸೃಷ್ಟಿ ಮತ್ತು ಇತ್ತೀಚೆಗೆ ಹೆಚ್ಚಾಗುತ್ತಿರುವ 'ಡಿಜಿಟಲ್ ಅರೆಸ್ಟ್' ನಂತಹ ಗಂಭೀರ ಸೈಬರ್ ಅಪರಾಧಗಳಿಗೆ ಪ್ರಚೋದನೆ ಸಿಗಬಹುದು ಎಂದು ಸರ್ಕಾರ ಆತಂಕ ವ್ಯಕ್ತಪಡಿಸಿದೆ.
ಮೆಟಾ ಸಂಸ್ಥೆಯನ್ನು ಪ್ರಶ್ನಿಸಿದ ಸರ್ಕಾರ
ವಾಟ್ಸಾಪ್‌ನ ನೂತನ ಯೂಸರ್ ನೇಮ್ ವೈಶಿಷ್ಟ್ಯಕ್ಕೆ ಸಂಬಂಧಿಸಿದಂತೆ ಐಟಿ ಕಾಯ್ದೆ ಮತ್ತು ನಿಯಮಗಳ ಅಡಿಯಲ್ಲಿ ಏಕೆ ಕ್ರಮ ಕೈಗೊಳ್ಳಬಾರದು ಎಂದು ಕೇಂದ್ರ ಸರ್ಕಾರ ಮೆಟಾ ಸಂಸ್ಥೆಯನ್ನು ಪ್ರಶ್ನಿಸಿದೆ. ಆದರೆ, ವಾಟ್ಸಾಪ್ ಈ ಆರೋಪಗಳಿಗೆ ಸಂಬಂಧಿಸಿದಂತೆ ತನ್ನ ಬ್ಲಾಗ್ ಮೂಲಕ ಸ್ಪಷ್ಟನೆ ನೀಡಿದೆ.ಈ ಯೂಸರ್ ನೇಮ್ ವೈಶಿಷ್ಟ್ಯದಿಂದಾಗಿ ಬಳಕೆದಾರರ ಮೊಬೈಲ್ ಸಂಖ್ಯೆಗಳು ಅಪರಿಚಿತರಿಗೆ ಬಹಿರಂಗವಾಗುವುದಿಲ್ಲ, ಇದರಿಂದ ಅವರ ಪ್ರೈವೆಸಿ ಮತ್ತಷ್ಟು ಸುರಕ್ಷಿತವಾಗಿರುತ್ತದೆ ಎಂದು ವಾಟ್ಸಾಪ್ ಸಮರ್ಥಿಸಿಕೊಂಡಿದೆ.
ವಾಟ್ಸಾಪ್‌ನ ಸ್ಪಷ್ಟನೆ ಏನು?
ವಾಟ್ಸಾಪ್ ತನ್ನ ಹೊಸ ಯೂಸರ್ ನೇಮ್ ಫೀಚರ್ ಕುರಿತು ಪದೇ ಪದೇ ಕೇಳಲಾಗುವ ಪ್ರಶ್ನೆಗಳಿಗೆ (FAQs) ಉತ್ತರಿಸಿದ್ದು, ಈ ವೈಶಿಷ್ಟ್ಯವು ಬಳಕೆದಾರರಿಗೆ ಕಡ್ಡಾಯವಾಗಿರುವುದಿಲ್ಲ. ಬದಲಿಗೆ ಇದು ಕೇವಲ ಆಪ್ಷನಲ್ (Optional) ಆಯ್ಕೆಯಾಗಿರಲಿದೆ ಎಂದು ಸ್ಪಷ್ಟಪಡಿಸಿದೆ.


