ಕರ್ನಾಟಕದಲ್ಲಿ 24 ವರ್ಷಗಳ ನಂತರ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (SIR) ಆರಂಭವಾಗಿದೆ. ಮತದಾರರ ಪಟ್ಟಿಯಿಂದ ನಿಮ್ಮ ಹೆಸರು ತೆಗೆದುಹಾಕುವುದನ್ನು ತಪ್ಪಿಸಲು, ಜುಲೈ 29ರೊಳಗೆ ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಎನ್ಯುಮರೇಶನ್‌ ಅರ್ಜಿಯನ್ನು ಕಡ್ಡಾಯವಾಗಿ ತುಂಬಬೇಕು.

ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (SIR) ಇದಾಗಲೇ ಹಲವು ರಾಜ್ಯಗಳಲ್ಲಿ ಮುಗಿದಿದ್ದು, ಕರ್ನಾಟಕದಲ್ಲಿಯೂ ಆರಂಭವಾಗಿದೆ. 24 ವರ್ಷಗಳ ಬಳಿಕ ಅಂದರೆ 2002ರ ನಂತರ ಮತ್ತೆ ಇದನ್ನು ಆರಂಭಿಸಲಾಗಿದೆ. ಮತದಾರರ ಪಟ್ಟಿಯಿಂದ ನಿಮ್ಮ ಹೆಸರು ತೆಗೆಯಬಾರದು ಎಂದು ಇದರಲ್ಲಿ ಪ್ರತಿಯೊಬ್ಬರೂ ಭಾಗವಹಿಸಲೇಬೇಕು. ಇದಾಗಲೇ ಸಿಬ್ಬಂದಿ ಮನೆಮನೆಗೆ ತೆರಳಿ ಈ ಕಾರ್ಯವನ್ನು ಜಾರಿಗೊಳಿಸುತ್ತಿದ್ದಾರೆ. ಮೊದಲ ಹಂತದಲ್ಲಿ ಮತದಾರರು ಎನ್ಯುಮರೇಶನ್‌ ಅರ್ಜಿ ತುಂಬಬೇಕಿದ್ದು, ಇದಕ್ಕೆ ಮೊನ್ನೆ ಜೂನ್‌ 30 ರಿಂದ ಚಾಲನೆ ಸಿಕ್ಕಿದೆ. ಈ ಜುಲೈ 29ರವರೆಗೂ ಇದಕ್ಕೆ ಅವಕಾಶವಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಒಂದು ವೇಳೆ ನೀವು ಈ ಹಂತದಲ್ಲಿ ಮಾಹಿತಿ ನೀಡದಿದ್ದರೆ ಮತದಾರರ ಪಟ್ಟಿಯಿಂದ ನಿಮ್ಮ ಹೆಸರು ಡಿಲೀಟ್ ಆಗುವ ಸಾಧ್ಯತೆ ಇರುತ್ತದೆ. ಮನೆಯಲ್ಲಿಯೇ ಕುಳಿತು ಈ ಅರ್ಜಿಯನ್ನು ತುಂಬಬಹುದಾಗಿದೆ. ಇದು ಸಾಧ್ಯವಿಲ್ಲದೇ ಹೋದರೆ ಆಫ್​ಲೈನ್​ನಲ್ಲಿಯೂ ಅವಕಾಶ ಇದದ್ದೇ. ಇವರೆಡರ ಬಗ್ಗೆ ಸಂಪೂರ್ಣ ಡಿಟೇಲ್ಸ್​ ಇಲ್ಲಿ ನೀಡಲಾಗಿದೆ.

Onlineನಲ್ಲಿ SIR ಪ್ರಕ್ರಿಯೆ ಪೂರ್ಣಗೊಳಿಸೋ ಬಗೆ ಹೀಗಿದೆ:

- https://voters.eci.gov.in/ ಪೋರ್ಟಲ್​ ಆನ್​ ಮಾಡಿ

- ‘Fill Enumeration Form' ಎಂಬ ಆಯ್ಕೆ ಆರಂಭದಲ್ಲಿಯೇ ಇದೆ. ಕೊನೆಯ SIRನಲ್ಲಿ ಹೆಸರು ಇದೆಯೇ ಎನ್ನುವುದನ್ನೂ ಕೂಡ ನೀವು ಇಲ್ಲಿಯೇ ನೋಡಬಹುದು.

- ನಿಮ್ಮ ಎಪಿಕ್ ನಂಬರ್ (ಮತದಾರರ ಗುರುತಿನ ಚೀಟಿಯ ಸಂಖ್ಯೆ) ಅಥವಾ ಮೊಬೈಲ್ ನಂಬರ್ ಬಳಸಿ ಲಾಗಿನ್ ಆಗಬೇಕು. ಒಂದು ವೇಳೆ‌ ನಿಮ್ಮ ವೋಟರ್‌ ಐಡಿಗೆ ಮೊಬೈಲ್‌ ನಂಬರ್‌ ಲಿಂಕ್ ಆಗಿದ್ದರೆ ನಿಮಗೆ ಮೊಬೈಲ್‌ ಸಂಖ್ಯೆ ಮೂಲಕ ಲಾಗಿನ್‌ ಆಗುವ ಅವಕಾಶವಿದೆ. ಮೊಬೈಲ್‌ ನಂಬರ್‌ ಲಿಂಕ್‌ ಆಗಿಲ್ಲದಿದ್ದರೆ, ಆನ್‌ಲೈನ್‌ ಮೂಲಕ ನೀವು ಎನ್ಯುಮರೇಶನ್‌ ಫಾರ್ಮ್‌ ಅನ್ನು ಭರ್ತಿ ಮಾಡಲು ಆಗುವುದಿಲ್ಲ.

- ನಿಮ್ಮ ಮೊಬೈಲ್ ನಂಬರ್ ವೋಟರ್ ಐಡಿಗೆ ಲಿಂಕ್ ಆಗಿರದಿದ್ದರೆ, 'Form 8' ಮೂಲಕ ತಕ್ಷಣವೇ ಲಿಂಕ್ ಮಾಡಬಹುದು. ಆಧಾರ್ OTP ಬಳಸಿ ಇದನ್ನು ತ್ವರಿತವಾಗಿ ಪೂರ್ಣಗೊಳಿಸಬಹುದು. ಚುನಾವಣಾ ಆಯೋಗವು ಇದಕ್ಕೆ ಅಲ್ಲಿಯೇ ಅವಕಾಶವನ್ನು ನೀಡಿದೆ.

- ಮೊಬೈಲ್‌ ಲಿಂಕ್‌ ಆದ ಬಳಿಕ ಆನ್‌ಲೈನ್‌ನಲ್ಲಿ ನಿಮ್ಮ ಹೆಸರು, ಭಾಗದ ಸಂಖ್ಯೆ ಮತ್ತು ಸೀರಿಯಲ್ ನಂಬರ್ ಸರಿಯಾಗಿದೆಯೇ ಎಂದು ನೋಡಿ. ಆಧಾರ್‌ ಕಾರ್ಡ್‌ನಲ್ಲಿನ ಹೆಸರು ಹಾಗೂ ವೋಟರ್‌ ಐಡಿಯಲ್ಲಿರುವ ಹೆಸರಿಗೂ ಮ್ಯಾಚ್‌ ಆಗಬೇಕು, ಏನಾದರೂ ತಪ್ಪುಗಳಿದ್ದರೆ, ಕರೆಕ್ಷನ್‌ ಮಾಡಲು ನಿಮ್ಮ ಬಿಎಲ್‌ಒ ಮೂಲಕವೇ ಎನ್ಯುಮರೇಶನ್‌ ಫಾರ್ಮ್‌ ಅನ್ನು ಭರ್ತಿ ಮಾಡಬೇಕು. ಇಲ್ಲದಿದ್ದರೆ, ಎನ್ಯುಮರೇಶನ್‌ ಫಾರ್ಮ್‌ ಭರ್ತಿಯಾಗಲ್ಲ. ಇಲ್ಲಿಯೂ ಕೂಡ ನಿಮ್ಮ ಬಿಎಲ್‌ಒ ಹೆಸರು ಹಾಗೂ ಅವರ ಮೊಬೈಲ್‌ ನಂಬರ್‌ ಅನ್ನು ಚುನಾವಣಾ ಆಯೋಗ ನೀಡಿರುತ್ತದೆ.

- ಎಲ್ಲ ಮಾಹಿತಿ ಸರಿಯಿದೆ ಎಂದು ದೃಢೀಕರಿಸಿದ ಬಳಿಕ 2002ರ SIRನಲ್ಲಿ ನಿಮ್ಮ ಪೋಷಕರ ಹೆಸರು ಇದ್ದರೆ, ಅವರ ವಿವರಗಳನ್ನು ಇಲ್ಲಿ ನಮೂದಿಸಿ Existing Detail ಎಂದು ಮಾರ್ಕ್ ಮಾಡಿ.

- ಅದಾದ ಬಳಿಕ ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಮೂದಿಸಿ. ಆಧಾರ್‌ ನಂಬರ್‌ ಐಚ್ಛಿಕವಾಗಿದ್ದು, ಮೊಬೈಲ್‌ ಸಂಖ್ಯೆ, ತಂದೆ, ತಾಯಿ ಹೆಸರು ಹಾಗೂ ನಿಮ್ಮ ಇತ್ತೀಚಿನ ಭಾವಚಿತ್ರವನ್ನು ಅಪ್‌ಲೋಡ್‌ ಮಾಡಿ. Submit ಬಟನ್​ ಕ್ಲಿಕ್​ ಮಾಡಿ.

- ನೀವು ಅರ್ಜಿಯನ್ನು ಸಬ್ಮಿಟ್​ ಕೊಟ್ಟ ಬಳಿಕ ಕೊನೆಯದಾಗಿ ಆಧಾರ್ OTP ಮೂಲಕ ಈ-ಸೈನ್ ಮಾಡಿದರೆ ನಿಮ್ಮ ಅರ್ಜಿ ಯಶಸ್ವಿಯಾಗಿ ಸಬ್ಮಿಟ್ ಆಗುತ್ತದೆ. ಅಲ್ಲಿಗೆ ನಿಮ್ಮ ಎನ್ಯುಮರೇಶನ್‌ ಫಾರ್ಮ್‌ ಭರ್ತಿಯಾಗಿರುತ್ತದೆ.

ಆಫ್‌ಲೈನ್‌ನಲ್ಲಿ ಹೀಗೆ ಫಾರ್ಮ್​ ತುಂಬಬೇಕು

ಮತಗಟ್ಟೆ ಮಟ್ಟದ ಅಧಿಕಾರಿಗಳು ನಿಮ್ಮ ಮನೆಗೆ ಬಂದು ಫಾರ್ಮ್ ನೀಡುತ್ತಾರೆ. ಅದನ್ನು ಭರ್ತಿ ಮಾಡುವ ವಿಧಾನ ತುಂಬಾ ಸುಲಭವಾಗಿದ್ದು, ಅದರಲ್ಲಿ ಈ ಎಲ್ಲಾ ಮಾಹಿತಿ ಇರುತ್ತವೆ.

- ನಿಮ್ಮ ಹೆಸರು, ಮತದಾರರ ಗುರುತಿನ ಚೀಟಿಯ ಸಂಖ್ಯೆ ಮತ್ತು ವಿಳಾಸ ಈಗಾಗಲೇ ಮುದ್ರಣವಾಗಿರುತ್ತದೆ. ಅದನ್ನು ಒಮ್ಮೆ ಮರುಪರಿಶೀಲಿಸಿ. ಜೊತೆಗೆ ನಿಮ್ಮ ಕ್ಷೇತ್ರದ ಹೆಸರು, ಮತಗಟ್ಟೆ ಸಂಖ್ಯೆ, ಕ್ರಮ ಸಂಖ್ಯೆ ಕೂಡ ಇರುತ್ತದೆ. ಅದಲ್ಲದೇ ಕ್ಯೂಆರ್‌ ಕೋಡ್‌ ಮತ್ತು ನಿಮ್ಮ ಹಳೇ ಭಾವಚಿತ್ರ ಕೂಡ ಅರ್ಜಿಯಲ್ಲಿ ಮುದ್ರಣವಾಗಿರುತ್ತದೆ. ನಿಮ್ಮ ಬಿಎಲ್‌ಒ ಹೆಸರು ಹಾಗೂ ಅವರ ಸಂಖ್ಯೆ ಕೂಡ ಮೊದಲೇ ಮುದ್ರಣವಾಗಿರುತ್ತದೆ.

- ಹಳೇ ಫೋಟೋ ಪಕ್ಕದಲ್ಲೇ ಹೊಸ ಫೋಟೋವನ್ನು ಅಂಟಿಸಲು ಜಾಗ ನೀಡಲಾಗಿದ್ದು, ಅಲ್ಲಿ ನಿಮ್ಮ ಇತ್ತೀಚಿನ ಭಾವಚಿತ್ರವನ್ನು ಅಂಟಿಸಿ.

- ಒಂದು ವೇಳೆ ನೀವು 2002ರ ಎಸ್ಐಆರ್ ಪ್ರಕ್ರಿಯೆಯಲ್ಲಿ ಇರದಿದ್ದರೆ, ನಿಮ್ಮ ಕುಟುಂಬದ ಹಿರಿಯರ (ತಂದೆ/ತಾಯಿ/ಪತಿ) ಜೊತೆ ಮ್ಯಾಪಿಂಗ್ ಮಾಡಬೇಕಾಗುತ್ತದೆ. ನೀವು 2002ರ ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರೆ, ನಿಮ್ಮ ವಿವರಗಳನ್ನು, ನಿಮ್ಮ ತಂದೆ/ತಾಯಿ/ಪತಿಯ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ. ಜೊತೆಗೆ ನಿಮ್ಮ ವಿಧಾನಸಭಾ ಕ್ಷೇತ್ರ, ಮತಗಟ್ಟೆ ಸಂಖ್ಯೆ, ಕ್ರಮ ಸಂಖ್ಯೆಯನ್ನು ಕೂಡ ನಮೂದಿಸಬೇಕು.

- ನಿಮ್ಮ ಆಧಾರ್ ನಂಬರ್ ಐಚ್ಛಿಕವಾಗಿದ್ದು, ಮೊಬೈಲ್ ನಂಬರ್ ಅನ್ನು ಕಡ್ಡಾಯವಾಗಿ ನಮೂದಿಸಬೇಕು. ತಂದೆ/ತಾಯಿ ಅಥವಾ ಸಂಗಾತಿಯ ಹೆಸರು ಮತ್ತು ಅವರ ವೋಟರ್ ಐಡಿ ನಂಬರ್ ದಾಖಲಿಸಬೇಕು. ಮತದಾರರ ಗುರುತಿನ ಚೀಟಿ ಸಂಖ್ಯೆ ಲಭ್ಯವಿದ್ದರೆ ನಮೂದಿಸಬಹುದು, ಇಲ್ಲದಿದ್ದರೆ ಸಮಸ್ಯೆಯಿಲ್ಲ.

- ನೀವು ಮನೆಯಲ್ಲಿ ಇಲ್ಲದಿದ್ದರೂ ಸಹ, ನಿಮ್ಮ ಕುಟುಂಬದ 18 ವರ್ಷ ಮೇಲ್ಪಟ್ಟ ಯಾವುದೇ ಸದಸ್ಯರು ಸಹಿ ಮಾಡಿ ಬಿಎಲ್‌ಓಗಳಿಗೆ ನೀಡಬಹುದು. ನೀವೇ ಇರಬೇಕು ಎಂಬುದು ಇಲ್ಲ. ನೀವು ಬಿಎಲ್‌ಒಗಳಿಗೆ ಇಷ್ಟು ಮಾಹಿತಿ ನೀಡಿದರೆ ಸಾಕು. ಅಲ್ಲಿಗೆ ನಿಮ್ಮ ಕೆಲಸ ಮುಗಿಯುತ್ತದೆ.