ಆಂಧ್ರಪ್ರದೇಶದ ವ್ಯಕ್ತಿಯೊಬ್ಬರು ತಮ್ಮ ಮನೆಯ ಮೇಲೆ ಟಾಟಾ ಸುಮೋ ಕಾರಿನ ಆಕಾರದ ನೀರಿನ ಟ್ಯಾಂಕ್ ನಿರ್ಮಿಸಿ ಗಮನ ಸೆಳೆದಿದ್ದಾರೆ. ಈ ಸೃಜನಾತ್ಮಕ ವಿನ್ಯಾಸ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರ ಸಮೀಪದಲ್ಲೇ ಮೀನಿನ ಆಕಾರದ ಮತ್ತೊಂದು ಟ್ಯಾಂಕ್ ಕೂಡ ಇದ್ದು, ಈ ಮನೆಗಳು ಸ್ಥಳೀಯ ಆಕರ್ಷಣೆಯಾಗಿವೆ.

ಪ್ರತಿಯೊಬ್ಬರಿಗೂ ತಮ್ಮ ಬದುಕಿನಲ್ಲಿ ಒಂದು ಸುಂದರವಾದ ಮನೆ ಕಟ್ಟಬೇಕು ಎಂಬ ದೊಡ್ಡ ಕನಸಿರುತ್ತದೆ. ಆ ಮನೆ ಕೇವಲ ನಾಲ್ಕು ಗೋಡೆಗಳ ಕಟ್ಟಡವಾಗಿರದೆ, ನಾಲ್ಕು ಜನ ತಿರುಗಿ ನೋಡುವಂತಿರಬೇಕು ಎಂಬ ಹಂಬಲ ಹಲವರದ್ದು. ಇದಕ್ಕಾಗಿ ಎಷ್ಟೋ ಜನ ಲಕ್ಷಾಂತರ ರೂಪಾಯಿ ಸಾಲ ಮಾಡಿಯಾದರೂ ಸರಿ, ವಿಭಿನ್ನ ವಿನ್ಯಾಸಗಳ ಮೊರೆ ಹೋಗುತ್ತಾರೆ. ಆದರೆ, ಆಂಧ್ರಪ್ರದೇಶದ ವ್ಯಕ್ತಿಯೊಬ್ಬರು ಮಾಡಿರುವ ಈ ಸಾಹಸ ಈಗ ಇಡೀ ದೇಶದ ಗಮನ ಸೆಳೆಯುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಅಡ್ಡಂಕಿ ಪಟ್ಟಣದ ನಿವಾಸಿಯೊಬ್ಬರು ತಮ್ಮ ಮನೆಯ ಮಹಡಿಯ ಮೇಲೆ ನಿರ್ಮಿಸಿರುವ ನೀರಿನ ಟ್ಯಾಂಕ್ (Water Tank) ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಕಾರಣವೇನು ಅಂದುಕೊಂಡಿದ್ದೀರಾ? ಆ ನೀರಿನ ಟ್ಯಾಂಕ್ ನೋಡಲು ಅಚ್ಚುಕಟ್ಟು ‘ಟಾಟಾ ಸುಮೋ’ (Tata Sumo) ಕಾರಿನಂತೆಯೇ ಇದೆ!

ನಕಲಿ ಕಾರಲ್ಲ, ಇದು ಕ್ರಿಯೇಟಿವಿಟಿ!

ದೂರದಿಂದ ಈ ಮನೆಯನ್ನು ನೋಡುವವರಿಗೆ, ಮನೆಯ ಮಹಡಿಯ ಮೇಲೆ ಯಾರೋ ಹೊಸ ಟಾಟಾ ಸುಮೋ ಕಾರನ್ನು ತಂದು ನಿಲ್ಲಿಸಿದಂತೆ ಭಾಸವಾಗುತ್ತದೆ. ಆದರೆ, ಹತ್ತಿರ ಹೋಗಿ ಸೂಕ್ಷ್ಮವಾಗಿ ಗಮನಿಸಿದಾಗ ಮಾತ್ರ ಇದು ಕಾರಲ್ಲ, ಬದಲಾಗಿ ಕಾರಿನ ಆಕಾರದಲ್ಲಿ ನಿರ್ಮಿಸಲಾದ ನೀರಿನ ಟ್ಯಾಂಕ್ ಎಂಬ ಸತ್ಯ ಬಯಲಾಗುತ್ತದೆ. ಈ ಟ್ಯಾಂಕ್ ನಿರ್ಮಾಣದಲ್ಲಿನ ಕಲೆಗಾರಿಕೆ ನಿಜಕ್ಕೂ ಅದ್ಭುತವಾಗಿದೆ. ಕಾರಿನ ಟೈರ್‌ಗಳಿಂದ ಹಿಡಿದು, ಕಿಟಕಿಗಳು, ಬಣ್ಣ ಮತ್ತು ಹಿಂಭಾಗದಲ್ಲಿರುವ ಬಿಡಿ ಚಕ್ರದವರೆಗೆ (Spare Wheel) ಪ್ರತಿಯೊಂದು ಭಾಗವನ್ನೂ ಅತ್ಯಂತ ಸೂಕ್ಷ್ಮವಾಗಿ ಮತ್ತು ನೈಜವಾಗಿ ನಿರ್ಮಿಸಲಾಗಿದೆ.

ನೆಟ್ಟಿಗರ ಹುಬ್ಬೇರಿಸಿದ ವಿನ್ಯಾಸ:

ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋಗಳು ಹರಿದಾಡುತ್ತಿದ್ದು, ನೆಟ್ಟಿಗರು ಈ ಮನೆಮಾಲೀಕನ ಐಡಿಯಾಗೆ ಫಿದಾ ಆಗಿದ್ದಾರೆ. 'ಇದು ನಿಜವಾದ ಇಂಜಿನಿಯರಿಂಗ್ ಅಂದರೆ!' ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದರೆ, ಇನ್ನು ಕೆಲವರು 'ಟಾಟಾ ಸುಮೋ ಮೇಲಿನ ಅಭಿಮಾನ ಇಷ್ಟೊಂದು ಇರಬೇಕಾ?' ಎಂದು ತಮಾಷೆ ಮಾಡುತ್ತಿದ್ದಾರೆ. ಆಧುನಿಕ ಕಾಲದಲ್ಲಿ ಕೇವಲ ಸಿಮೆಂಟ್ ಬಾಕ್ಸ್‌ಗಳಂತೆ ಟ್ಯಾಂಕ್ ಕಟ್ಟುವ ಬದಲು, ಇಂತಹ ಸೃಜನಾತ್ಮಕ ಯೋಚನೆ ಮಾಡಿದ್ದು ನಿಜಕ್ಕೂ ಶ್ಲಾಘನೀಯ.

ಆಕಾಶದಲ್ಲಿ ಈಜುವ ಮೀನು!

ಕುತೂಹಲಕಾರಿ ವಿಷಯವೆಂದರೆ, ಈ ಟಾಟಾ ಸುಮೋ ಟ್ಯಾಂಕ್ ಇರುವ ಪಕ್ಕದ ಬೀದಿಯಲ್ಲೇ ಮತ್ತೊಬ್ಬ ವ್ಯಕ್ತಿ ಇದೇ ರೀತಿಯ ವಿಭಿನ್ನ ಯೋಚನೆ ಮಾಡಿದ್ದಾರೆ. ಅವರು ತಮ್ಮ ಮನೆಯ ಮೇಲೆ ‘ಮೀನಿನ’ (Fish) ಆಕಾರದ ನೀರಿನ ಟ್ಯಾಂಕ್ ನಿರ್ಮಿಸಿದ್ದಾರೆ. ಇದನ್ನು ಕೆಳಗಿನಿಂದ ನೋಡಿದಾಗ ಆಕಾಶದಲ್ಲಿ ದೊಡ್ಡ ಮೀನೊಂದು ಈಜುತ್ತಿರುವಂತೆ ಕಾಣುತ್ತದೆ.

ಒಟ್ಟಾರೆಯಾಗಿ ಅಡ್ಡಂಕಿ ಪಟ್ಟಣದ ಈ ಎರಡು ಮನೆಗಳು ಈಗ ಪ್ರವಾಸಿ ತಾಣಗಳಂತೆ ಬದಲಾಗಿವೆ. ದಾರಿಯಲ್ಲಿ ಹೋಗುವವರು ಒಮ್ಮೆ ನಿಂತು ಈ ವಿಭಿನ್ನ ನೀರಿನ ಟ್ಯಾಂಕ್‌ಗಳನ್ನು ನೋಡಿ, ಫೋಟೋ ತೆಗೆದುಕೊಳ್ಳದೆ ಮುಂದೆ ಹೋಗುತ್ತಿಲ್ಲ. ಹೊಸ ಕಾಲದ ವಿನ್ಯಾಸಗಳಿಗೆ ಒತ್ತು ನೀಡುವ ಈ ಸೃಜನಾತ್ಮಕ ಐಡಿಯಾಗಳು, ಸಾಮಾನ್ಯ ಮನೆಗಳಿಗೂ ಒಂದು ವಿಶಿಷ್ಟ ಮೆರಗನ್ನು ನೀಡಿವೆ.