ಹೆರಿಗೆ ಆಸ್ಪತ್ರೆ ಮುಂದೆಯೇ ರಸ್ತೆಯಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ
ತುಂಬು ಗರ್ಭಿಣಿಯೊಬ್ಬಳನ್ನು ದಾಖಲಿಸಿಕೊಳ್ಳಲು ಆಸ್ಪತ್ರೆ ನಿರಾಕರಿಸಿದ ಹಿನ್ನೆಲೆಯಲ್ಲಿ ಹೆರಿಗೆ ಆಸ್ಪತ್ರೆ ಎದುರಿನ ರಸ್ತೆಯಲ್ಲೇ ತಾಯಿಯೊಬ್ಬಳು ಮಗುವಿಗೆ ಜನ್ಮ ನೀಡಿದ ಆಘಾತಕಾರಿ ಘಟನೆ ನಡೆದಿದೆ.
ತಿರುಪತಿ: ತುಂಬು ಗರ್ಭಿಣಿಯೊಬ್ಬಳನ್ನು ದಾಖಲಿಸಿಕೊಳ್ಳಲು ಆಸ್ಪತ್ರೆ ನಿರಾಕರಿಸಿದ ಹಿನ್ನೆಲೆಯಲ್ಲಿ ಹೆರಿಗೆ ಆಸ್ಪತ್ರೆ ಎದುರಿನ ರಸ್ತೆಯಲ್ಲೇ ತಾಯಿಯೊಬ್ಬಳು ಮಗುವಿಗೆ ಜನ್ಮ ನೀಡಿದ ಆಘಾತಕಾರಿ ಘಟನೆ ನಡೆದಿದೆ. ಏಳು ಬೆಟ್ಟದೊಡೆಯ ತಿಮ್ಮಪ್ಪನ ಊರಲ್ಲೇ ಈ ಘಟನೆ ಸಂಭವಿಸಿದ್ದು, ಈ ಅಮಾನವೀಯ ಘಟನೆಯ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಹೆರಿಗೆ ಆಸ್ಪತ್ರೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಆಂಧ್ರಪ್ರದೇಶದ (Andhra Pradesh) ತಿರುಪತಿಯಲ್ಲಿ 10 ಹಾಸಿಗೆ ಸಾಮರ್ಥ್ಯದ ಹೆರಿಗೆ ಆಸ್ಪತ್ರೆ ಇದ್ದು, ಹೆರಿಗೆ ನೋವಿನೊಂದಿಗೆ (labour pain) ಈ ಆಸ್ಪತ್ರೆಗೆ ಗರ್ಭಿಣಿಯೊಬ್ಬರು ಆಗಮಿಸಿದ್ದಾರೆ. ಆದರೆ ಗರ್ಭಿಣಿ ಜೊತೆ ಬೇರೆ ಯಾರೂ ಇಲ್ಲದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ವೈದ್ಯಕೀಯ ಸಿಬ್ಬಂದಿ ನಿರಾಕರಿಸಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಮಾನವೀಯತೆ ಮರೆತರೂ ಕೆಲ ಅಪರಿಚಿತ ವ್ಯಕ್ತಿಗಳು ಈ ತಾಯಿಯ ನೆರವಿಗೆ ಧಾವಿಸಿ ಬಂದು ಮಾನವೀಯತೆ ಮೆರೆದಿದ್ದಾರೆ.
ಮಧ್ಯರಾತ್ರಿ ನಡು ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ ಗರ್ಭಿಣಿ..!
ಮಹಿಳೆಗೆ ಹೆರಿಗೆ ನೋವು ಜೋರಾಗಿದ್ದು, ಕೆಲ ಪ್ರಾಥಮಿಕ ಆರೋಗ್ಯ ಸಹಾಯಕರು ಕೂಡ ಆಕೆ ಮಗುವಿಗೆ ಜನ್ಮ ನೀಡಲು ಸಹಾಯ ಮಾಡಿದ್ದಾರೆ. ಆದರೆ ಹೆರಿಗೆಯ ನಂತರದಲ್ಲಿ ಮಹಿಳೆ ಹಾಗೂ ಮಗುವನ್ನು ಆಸ್ಪತ್ರೆ ಸಿಬ್ಬಂದಿ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ(Social Media) ವೈರಲ್ ಆಗುತ್ತಿದ್ದಂತೆ ತಿರುಪತಿ ಜಿಲ್ಲಾ ಆರೋಗ್ಯ ಮೇಲುಸ್ತುವಾರಿ ಅಧಿಕಾರಿ ಶ್ರೀಹರಿ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದು, ಈ ಬಗ್ಗೆ ತನಿಖೆಗೆ ಆದೇಶಿಸಲಗಿದೆ. ಘಟನೆಯಲ್ಲಿ ತಪ್ಪಿತಸ್ಥರು ಎಂದು ಕಂಡು ಬಂದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಯಾರು ಇಲ್ಲದೇ ಒಬ್ಬಳೇ ಬಂದರೂ ಸರಿ ಯಾವ ಗರ್ಭಿಣಿಗೂ ಆಸ್ಪತ್ರೆಗೆ ಪ್ರವೇಶ ನಿರಾಕರಿಸುವಂತಿಲ್ಲ ಎಂದು ಅವರು ಹೇಳಿದರು.
ಬಾಲಕಿಗೆ ರಸ್ತೆಯಲ್ಲೇ ಆಯ್ತು ಹೆರಿಗೆ : ಮಗು ಸಾವು
ಇನ್ನು ಆಸ್ಪತ್ರೆಯ ಸಿಬ್ಬಂದಿ ಆಕೆ ಗರ್ಭಿಣಿ (Pragnent) ಎಂಬುದು ನಮಗೆ ಗೊತ್ತಿರಲಿಲ್ಲ. ಈ ಆಸ್ಪತ್ರೆಗೆ ಹಿಂದೆಂದೂ ಆಕೆ ತಪಾಸಣೆಗೆ ಬಂದಿರಲಿಲ್ಲ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ. ಆದರೆ ತಿರುಪತಿ ಜಿಲ್ಲಾಧಿಕಾರಿ ಕೆ. ವೆಂಕಟರಮನ್ ರೆಡ್ಡಿ (Venkatraman reddy) ಅವರು, ಈ ಬಗ್ಗೆ ಕಾರಣ ಕೇಳಿ ಜಿಲ್ಲಾ ಆರೋಗ್ಯಾಧಿಕಾರಿಗೆ ಸಮನ್ಸ್ ನೀಡಿದ್ದರು. ಇತ್ತ ಘಟನೆಯ ಬಗ್ಗೆ ಟಿಡಿಪಿ ನಾಯಕ ಎಂ ಸುಗುಣಮ್ಮ (Sugunamma) ಅವರು ಹೆರಿಗೆ ಆಸ್ಪತ್ರೆಯ ಈ ಅಮಾನವೀಯ ವರ್ತನೆಯನ್ನು ಖಂಡಿಸಿದ್ದರು.