ಬಾಲಕಿಗೆ ರಸ್ತೆಯಲ್ಲೇ ಆಯ್ತು ಹೆರಿಗೆ : ಮಗು ಸಾವು
ಬಾಲಕಿಯೋರ್ವಳು ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ್ದು, ಮಗು 2 ಗಂಟೆಯಲ್ಲೇ ಮೃತಪಟ್ಟ ಘಟನೆಯೊಂದು ಕುಷ್ಟಗಿಯಲ್ಲಿ ನಡೆದಿದೆ. ಬಾಲ್ಯ ವಿವಾಹದ ಪರಿಣಾಮವಾಗಿ ಮಗು ಜನನವಾಗಿದೆ.
ಕುಷ್ಟಗಿ : ಬಾಲ್ಯ ವಿವಾಹದ ಪರಿಣಾಮ ಎಸ್ಸೆಸ್ಸೆಲ್ಸಿ ಓದುತ್ತಿದ್ದ ಬಾಲಕಿಗೆ ಶನಿವಾರ ರಸ್ತೆಯಲ್ಲಿಯೇ ಹೆರಿಗೆಯಾಗಿ, ಬಳಿಕ ಮಗು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಬಾಲಕಿಯನ್ನು ವಿವಾಹವಾಗಿದ್ದ ಯುವಕ ಸೇರಿ ನಾಲ್ವರ ಮೇಲೆ ಪ್ರಕರಣ ದಾಖಲಾಗಿದೆ.
ಶನಿವಾರ ಪ್ರೌಢಶಾಲೆಯಲ್ಲಿ ಕವಾಯತಿನ ವೇಳೆ ಬಾಲಕಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣ ಆಕೆ ತನ್ನ ವಣಗೇರಿ ಗ್ರಾಮಕ್ಕೆ ಹೊರಡಲು ಅನುವಾಗಿದ್ದಾಳೆ. ಆದರೆ, ಕುಷ್ಟಗಿ ಮಾರ್ಗಮಧ್ಯದಲ್ಲಿಯೇ ಹೆರಿಗೆಯಾಗಿದೆ. ಅವಧಿ ಮುನ್ನವೇ ಹೆರಿಗೆಯಾದ ಕಾರಣ ಜನಿಸಿದ ಗಂಡುಶಿಶು 2 ಗಂಟೆಯಲ್ಲಿ ಮೃತಪಟ್ಟಿದೆ.
ಈ ಪ್ರಕರಣದ ಬಳಿಕವೇ ಬಾಲಕಿಗೆ ಬಾಲ್ಯವಿವಾಹವಾಗಿದ್ದು ತಿಳಿದುಬಂದಿದ್ದು, ವಿವಾಹ ಮಾಡಿಕೊಂಡ ಯುವಕ ಸಾಯಿಬಾಬಾ ಗುರಿಕಾರ (21) ಸೇರಿ ಯುವಕನ ತಾಯಿ ನಾಗಮ್ಮ ಗುರಿಕಾರ, ಯುವಕನ ಸಹೋದರ ಮಾರುತಿ ಗುರಿಕಾರ, ಬಾಲಕಿಯ ತಂದೆಯ ಮೇಲೆ ದೂರು ದಾಖಲಾಗಿದೆ.
ಘಟನೆ ವಿವರ: ಬಾಲಕಿಗೆ 2015ರಲ್ಲಿ ಕೆ. ಗೋದೂರು ಗ್ರಾಮದ ಯುವಕನ ಜತೆ ಬಾಲ್ಯವಿವಾಹವಾಗಿತ್ತು. ಅಪ್ರಾಪ್ತ ವಯಸ್ಕಳಾಗಿದ್ದ ಕಾರಣ ಬಾಲಕಿಯ ಸಂಬಂಧಿಕರು ಆಕೆಯನ್ನು ಗಂಡನ ಮನೆಗೆ ಕಳುಹಿಸಿರಲಿಲ್ಲ. ಬಾಲಕಿ ಸ್ಥಳೀಯ ಬಾಲಕಿಯ ಪ್ರೌಢಶಾಲೆಯೊಂದರಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದು, ಯುವಕ ಇವರ ಮನೆಗೆ ಬಂದು ಹೋಗುತ್ತಿದ್ದ.
ಹೀಗಾಗಿ ಬಾಲಕಿ 6 ತಿಂಗಳ ಗರ್ಭಿಣಿಯಾಗಿದ್ದಳು.ಶನಿವಾರ ಶಾಲೆಯಲ್ಲಿ ನಡೆದ ಕವಾಯತಿನಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಬಾಲಕಿಗೆ ಹೊಟ್ಟೆನೋವು ಕಾಣಿಸಿಕೊಂಡಿದೆ. ಬಳಿಕ ಬಾಲಕಿ ಶಾಲೆಯಿಂದ ಗ್ರಾಮಕ್ಕೆ ತೆರಳಲು ಬಸ್ ನಿಲ್ದಾಣದತ್ತ ತೆರಳಿದ್ದಾಳೆ. ಆದರೆ, ಇಲ್ಲಿನ ಬಸ್ ನಿಲ್ದಾಣದ ಸಮೀಪ, ಪೊಲೀಸ್ ಸ್ಟೇಷನ್ ಹಿಂಭಾಗಕ್ಕೆ ಬರುತ್ತಿದ್ದಂತೆ ರಸ್ತೆಯಲ್ಲಿಯೇ ಹೆರಿಗೆಯಾಗಿದೆ.
ಇದರಿಂದ ಭಯಗೊಂಡ ಬಾಲಕಿ ಮಗುವನ್ನು ಅಲ್ಲಯೇ ಬಿಟ್ಟು ತೆರಳಲು ಮುಂದಾಗಿದ್ದಾಳೆ. ಇದನ್ನು ನೋಡಿದ ಸಾರ್ವಜನಿಕರು ಬಾಲಕಿ ಹಾಗೂ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ. ಅಪ್ರಾಪ್ತ ವಯಸ್ಸಿನಲ್ಲಿ, ಅವಧಿಗೂ ಮುನ್ನವೇ ಹೆರಿಗೆಯಾಗಿದ್ದರಿಂದ ಮಗು 2 ಗಂಟೆಯಲ್ಲಿ ಮೃತಪಟ್ಟಿದೆ. ಬಾಲಕಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.