ತೀರ್ಥಹಳ್ಳಿ(ಜು.21): ತೀವ್ರ ಪ್ರಸವ ವೇದನೆಯಿಂದ ಬಳಲುತ್ತಿದ್ದ ಗರ್ಭಿಣಿಯೊಬ್ಬರು ಖಾಸಗಿ ಆಸ್ಪತ್ರೆಗಳಲ್ಲಿ ಹೆರಿಗೆಗೆ ದಾಖಲಿಸಿಕೊಳ್ಳದ ಪರಿಣಾಮ ಮಧ್ಯರಾತ್ರಿ ಕಾರಿನಲ್ಲೇ ಹೆಣ್ಣುಮಗುವಿಗೆ ಜನ್ಮ ನೀಡಿದ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದಲ್ಲಿ ನಡೆದಿದೆ.

ಹೌದು, ತೀರ್ಥಹಳ್ಳಿ ತಾಲ್ಲೂಕಿನ ಕಂಕಳ್ಳಿ ಗ್ರಾಮದ ಕೀರ್ತಿ ಕುಮಾರ್ ಎಂಬುವವರ ಪತ್ನಿ ಅನಸೂಯಾ (24) ಗೆ ಕಳೆದ ರಾತ್ರಿ 1 ಗಂಟೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣ ತೀರ್ಥಹಳ್ಳಿ ಪಟ್ಟಣದ ಖಾಸಗಿ(ಮಾನಸ ನರ್ಸಿಂಗ್ ಹೋಮ್ ) ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಆದರೆ ಆಸ್ಪತ್ರೆಯವರು ಕೊವಿಡ್ ಟೆಸ್ಟ್ ಮಾಡಿಸಿಕೊಂಡು ಬಂದರೇ ಗರ್ಭಿಣಿಗೆ ಅಡ್ಮಿಟ್ ಮಾಡಿಕೊಳ್ಳುತ್ತೇವೆ ಎಂದು ಹೇಳಿ ಹೊರಗೆ ಕಳಿಸಿದ್ದಾರೆ. ಬಳಿಕ ಮತ್ತೊಂದು ಖಾಸಗಿ ( ಅನುರಾಧ ನರ್ಸಿಂಗ್ ಹೋಂ) ಆಸ್ಪತ್ರೆಯಲ್ಲಿ ಸುಮಾರು ಅರ್ಧ ಗಂಟೆಗಳ ಕಾಲ ಗರ್ಭಿಣಿ ಮಹಿಳೆ ಇದುವರೆಗೂ ಪಡೆದ ಚಿಕಿತ್ಸೆಯ ದಾಖಲೆಗಳನ್ನು ನೋಡಿ ನಂತರ ಡಾಕ್ಟರ್ ಇಲ್ಲ ಬೇರೆ ಕಡೆಗೆ ಕರೆದೊಯ್ಯಲು ಹೇಳಿದ್ದಾರೆ. 
 
ಅಷ್ಟರಲ್ಲೇ ಹೆರಿಗೆ ನೋವು ಜಾಸ್ತಿಯಾಗಿ ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ನಡು ರಸ್ತೆಯಲ್ಲೇ ಕಾರಿನಲ್ಲೇ ಹೆರಿಗೆಯಾಗಿದೆ. ಖಾಸಗಿ ನರ್ಸಿಂಗ್ ಹೋಮ್ ಗಳಿಗೆ ಅಲೆದಾಡ ನಡೆಸಿ ಸಾವು ಬದುಕಿನ ನಡುವೆ ಹೋರಾಟ ನಡೆಸಿ ಅನುಸೂಯ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. 

ಕೊರೋನಾ ನಿಯಂತ್ರಣ ಕಟ್ಟುನಿಟ್ಟಾಗಿ ಪಾಲಿಸಲು ಶಿವಮೊಗ್ಗ ಜಿಲ್ಲಾಧಿಕಾರಿ ಸೂಚನೆ

ತೀರ್ಥಹಳ್ಳಿ ಪಟ್ಟಣದ ಸರ್ಕಾರಿ ಜಯ ಚಾಮರಾಜೇಂದ್ರ ಅಸ್ಪತ್ರೆಯ ಹೆರಿಗೆ ತಜ್ಞೆ ಡಾ ಸುಮಾ ಹೋಮ್ ಕ್ವಾರಂಟೈನ್ ನಲ್ಲಿದ್ದ ಕಾರಣ ಗರ್ಭಿಣಿ ಅನುಸೂಯ ಖಾಸಗಿ ಅಸ್ಪತ್ರೆಗಳಿಗೆ ಅಲೆದಾಡಬೇಕಾದ ಪರಿಸ್ಥಿತಿ ಒದಗಿ ಬಂದಿತ್ತು. ಕೊನೆಗೆ ಕಾರಿನಲ್ಲೇ ಹೆರಿಗೆಯಾದ ವಿಷಯವನ್ನು ಹೋಮ್ ಕ್ವಾರಂಟೈನ್ ನಲ್ಲಿದ್ದ ಸರ್ಕಾರಿ ವೈದ್ಯೆಗೆ ಅನಸೂಯಾ ಪತಿ ತಿಳಿಸಿದ್ದಾರೆ. ವಿಷಯ ತಿಳಿದ ತಕ್ಷಣವೇ ಡಾ ಸುಮ ಸರ್ಕಾರಿ ಆಸ್ಪತ್ರೆಯಲ್ಲಿ ತಾಯಿ ಮತ್ತು ಮಗುವನ್ನು ದಾಖಲಿಸಿ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿದ್ದಾರೆ. ಸದ್ಯ ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ತಾಯಿ ಮಗು ಚಿಕಿತ್ಸೆ ಪಡೆಯುತ್ತಿದ್ದು ಆರೋಗ್ಯವಾಗಿದ್ದಾರೆ.