ನಾಳೆ ವಿಶ್ವ ಗುಬ್ಬಚ್ಚಿ ದಿನ : ಮನೆಗೆ ಗುಬ್ಬಿ ಬಂದ್ರೆ ಎಷ್ಟು ಒಳ್ಳೇದು ಗೊತ್ತಾ?
ನಾಳೆ ಅಂದರೆ ಮಾರ್ಚ್ 20 ರಂದು ವಿಶ್ವ ಗುಬ್ಬಚ್ಚಿ ದಿನವನ್ನು ಆಚರಿಸಲಾಗುತ್ತದೆ. ಹೀಗಾಗಿ ಈ ಲೇಖನದಲ್ಲಿ ಗುಬ್ಬಚ್ಚಿಗಳ ಬಗ್ಗೆ ಕೆಲವು ಕುತೂಹಲಕಾರಿ ವಿಷಯಗಳನ್ನು ನೋಡೋಣ.

ವಿಶ್ವ ಗುಬ್ಬಚ್ಚಿ ದಿನ 2025: ಗುಬ್ಬಚ್ಚಿಗಳು ಈಗ ಕ್ಷೀಣಿಸುತ್ತಿರುವ ಪ್ರಭೇದವಾಗಿದೆ. ಅವುಗಳನ್ನು ರಕ್ಷಿಸುವ ಉದ್ದೇಶದಿಂದ ಮಾರ್ಚ್ 20 ರಂದು ವಿಶ್ವ ಗುಬ್ಬಚ್ಚಿ ದಿನವನ್ನು ಆಚರಿಸಲಾಗುತ್ತದೆ. ಹಿಂದಿನ ಕಾಲದಲ್ಲಿ ಮನೆಗಳಲ್ಲಿ ಕಂಡುಬರುತ್ತಿದ್ದ ಜಗುಲಿ, ಮಾಳಿಗೆ, ತೊಲೆ, ಸೂರುಗಳ ಸಂದುಗಳಲ್ಲಿ, ಗಾಳಿಗಾಗಿ ಬಿಡುತ್ತಿದ್ದ ರಂಧ್ರಗಳಲ್ಲಿ ಗುಬ್ಬಚ್ಚಿಗಳು ಗೂಡು ಕಟ್ಟಿಕೊಂಡು ವಾಸಿಸುತ್ತಿದ್ದವು. ಈಗಿನ ಕಾಲದಲ್ಲಿ ಕಟ್ಟಡಗಳು ದೊಡ್ಡದಾಗಿವೆ. ಮರಗಳು ಕಡಿಮೆಯಾಗಿವೆ. ಮನೆಗಳಲ್ಲಿ ಹವಾನಿಯಂತ್ರಣದಂತಹ ತಂತ್ರಜ್ಞಾನಗಳು ಹೆಚ್ಚಾಗಿವೆ. ಗುಬ್ಬಚ್ಚಿಗಳಿಗೆ ನಮ್ಮ ಮನೆಗಳು ಅಪರಿಚಿತವಾಗಿವೆ. 13 ವರ್ಷಗಳ ಆಯಸ್ಸು ಹೊಂದಿದ್ದ ಗುಬ್ಬಚ್ಚಿಗಳು ಈಗ 5 ವರ್ಷಗಳಲ್ಲೇ ಸಾಯುತ್ತಿವೆ. ಇದಕ್ಕೆ ಕಾರಣ ಮಾನವನ ತಾಂತ್ರಿಕ ಬೆಳವಣಿಗೆ ಎಂದರೆ ತಪ್ಪಾಗಲಾರದು.
ಗುಬ್ಬಚ್ಚಿ ದಿನ ಬಂದಿದ್ದು ಹೇಗೆ?
ಮನೆ ಒಳಗೆ ಗಾಳಿ ಬರದ ಹಾಗೆ ಬಿಗಿಯಾದ ನಗರ ಪ್ರದೇಶದ ಮನೆಗಳಲ್ಲಿ ಗುಬ್ಬಚ್ಚಿಗಳು ಬದುಕಲು ಸಾಧ್ಯವಿಲ್ಲ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ನಗರ ಪ್ರದೇಶಗಳಲ್ಲಿ ಗಾಜಿನ ಕಿಟಕಿಗಳ ಅರ್ಥ ತಿಳಿಯದೆ ಅದಕ್ಕೆ ಡಿಕ್ಕಿ ಹೊಡೆದು ಸಾಯುವ ದುರಂತವೂ ಇದೆ. ಹಳ್ಳಿಗಳಲ್ಲೂ ಮನೆಗಳು ಕಾಂಕ್ರೀಟ್ ಆದ ಕಾರಣ ಗುಬ್ಬಚ್ಚಿಗಳು ಮನೆಗೆ ಬರುವುದು ಕಡಿಮೆಯಾಗಿದೆ. ಹೀಗಾಗಿ ಗುಬ್ಬಚ್ಚಿಗಳು ಸಂತಾನೋತ್ಪತ್ತಿ ಮಾಡಲು ಬೇಕಾದ ವಾತಾವರಣ ಇಲ್ಲದೆ ಕೆಲವು ವರ್ಷಗಳಲ್ಲಿ 60% ಕ್ಕೂ ಹೆಚ್ಚು ಗುಬ್ಬಚ್ಚಿಗಳು ನಾಶವಾಗುತ್ತಿವೆ ಎಂದು ಅಂಕಿ ಅಂಶಗಳು ಹೇಳುತ್ತಿವೆ ಇದು ಆಘಾತಕಾರಿ ವಿಚಾರ. ಈ ಪರಿಸ್ಥಿತಿಯನ್ನು ಬದಲಾಯಿಸುವ ಉದ್ದೇಶದಿಂದ 2010 ರಲ್ಲಿ ಮಾರ್ಚ್ 20 ರಂದು ವಿಶ್ವ ಗುಬ್ಬಚ್ಚಿ ದಿನವನ್ನಾಗಿ ವಿಶ್ವಸಂಸ್ಥೆ ಅಂಗೀಕರಿಸಿತು.
ಹಿರಿಯರ ನಂಬಿಕೆ:
ಗುಬ್ಬಚ್ಚಿಗಳು ಮನೆಗೆ ಬರುವುದು ಒಳ್ಳೆಯದು ಎಂದು ನಮ್ಮ ಹಿರಿಯರು ಭಾವಿಸಿದ್ದರು. ಗುಬ್ಬಚ್ಚಿಗಳು ಬಂದು ತಂಗುವ ಮನೆಯಲ್ಲಿ ಸಂತಾನಾಭಿವೃದ್ಧಿಯಾಗುತ್ತದೆ ಎಂಬ ನಂಬಿಕೆಯೂ ಇತ್ತು. ಕೆಲವು ನಂಬಿಕೆಗಳು ಒಳ್ಳೆಯದನ್ನು ಮಾಡುತ್ತವೆ. ಅಂತಹ ನಂಬಿಕೆಗಳಲ್ಲಿ ಇದು ಒಂದು. ಸಣ್ಣ ಜೀವಿಯಾದರೂ ಅದನ್ನು ಬದುಕಿಸುವವರ ಜೀವನ ವಸಂತವಾಗಿಯೇ ಇರುತ್ತದೆ. ಈ ಲೇಖನದಲ್ಲಿ ಗುಬ್ಬಚ್ಚಿಗಳನ್ನು ವೃದ್ಧಿಸಲು ಅವುಗಳನ್ನು ಮನೆಗೆ ಹೇಗೆ ಕರೆಯುವುದು ಎಂದು ನೋಡೋಣ.
ಗುಬ್ಬಚ್ಚಿಗಳನ್ನು ಹೇಗೆ ಕರೆಯುವುದು?
ಗುಬ್ಬಚ್ಚಿಗಳು ತೋಟದಲ್ಲಿರುವ ಪೊದೆಗಳು, ಗಿಡಗಳು, ಮರಗಳಲ್ಲಿ ಗೂಡು ಕಟ್ಟುತ್ತವೆ. ನಿಮ್ಮ ಮನೆ ಹತ್ತಿರ ಗುಬ್ಬಚ್ಚಿಗಳು ಬರುತ್ತಿವೆಯೇ ಎಂದು ಗಮನಿಸಿ. ಬರುವ ಹಾಗಿದ್ದರೆ ಅವುಗಳಿಗೆ ಆಹಾರ ಇಡಿ. ಪುಡಿ ಮಾಡಿದ ಅಕ್ಕಿ, ಸಣ್ಣ ಧಾನ್ಯಗಳನ್ನು ಇಡಬಹುದು. ಅವು ಬರುವ ದಿಕ್ಕಿನಲ್ಲಿ ಅವುಗಳ ದಾಹ ತಣಿಸಲು ನೀರು ಇಡಿ. ನೀರನ್ನು ಆಗಾಗ ಬದಲಾಯಿಸುತ್ತಿರಬೇಕು. ಇಲ್ಲದಿದ್ದರೆ ಸೊಳ್ಳೆಗಳು ಹರಡಲು ದಾರಿಯಾಗುತ್ತದೆ. ಒಂದು ಕಾರ್ಡ್ಬೋರ್ಡ್ ಪೆಟ್ಟಿಗೆಗೆ ಗುಬ್ಬಚ್ಚಿ ಹೋಗುವಷ್ಟು ತೂತು ಮಾಡಿ ಎತ್ತರದಲ್ಲಿ ತೂಗುಹಾಕಿ. ಗುಬ್ಬಚ್ಚಿಗಳು ಅದರಲ್ಲಿ ತಂಗುವ ಸಾಧ್ಯತೆ ಇದೆ.