ಕೋವಿಡ್ ಆತಂಕದ ಬೆನ್ನಲ್ಲೇ ಪ್ರಧಾನಿ ಮೋದಿ ತುರ್ತು ಸಭೆ, ಮಹತ್ವದ ಸೂಚನೆ!
ಚೀನಾದಲ್ಲಿನ ಕೊರೋನಾ ಅಲೆಯಿಂದ ಇದೀಗ ಭಾರತದಲ್ಲಿ ಆತಂಕ ಹೆಚ್ಚಾಗಿದೆ. ಕಳೆದೆರಡು ಅಲೆಗಳು ಭಾರತದಲ್ಲಿ ಗಂಭೀರ ಪರಿಣಾಮ ಬೀರಿತ್ತು. ಇದೀಗ ಮತ್ತೊಂದು ಅಲೆಯಿಂದ ಪಾರಾಗಲು ಭಾರತದ ಈಗಲೇ ಸನ್ನದ್ದವಾಗುತ್ತಿದೆ. ಕೋವಿಡ್ ಆತಂಕ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಉನ್ನತ ಮಟ್ಟದ ಸಭೆ ನಡೆಸಿ ಮಹತ್ವದ ಸೂಚನೆ ನೀಡಿದ್ದಾರೆ.
ನವದೆಹಲಿ(ಡಿ.22): ಚೀನಾದಲ್ಲಿ ಕೋವಿಡ್ ಅಬ್ಬರಕ್ಕೆ ಸಾವಿನ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಸೋಂಕಿತರಿಗೆ ಆಸ್ಪತ್ರೆ ಸಿಗುತ್ತಿಲ್ಲ. ಸೋಂಕಿಗೆ ಬಲಿಯಾದವರ ಶವಸಂಸ್ಕಾರಕ್ಕೆ 3 ರಿಂದ 4 ದಿನ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಚೀನಾದ ವಿಡಿಯೋಗಳು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಇದೀಗ ಚೀನಾದಲ್ಲಿ ಕೋವಿಡ್ ಸ್ಫೋಟಕ್ಕೆ ಕಾರಣವಾಗಿರುವ Bf7 ಒಮಿಕ್ರಾನ್ ಉಪತಳಿ ಭಾರತದಲ್ಲೂ ಪತ್ತೆಯಾಗಿದೆ. ಇದು ಆತಂಕ ಹೆಚ್ಚಿಸಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಇಂದು ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಆರೋಗ್ಯ ಸಚಿವ ಮನ್ಸುಕ್ ಮಾಂಡವಿಯಾ, ನೀತಿ ಆಯೋಗದ ಸದಸ್ಯರು ಸೇರಿದಂತೆ ಆರೋಗ್ಯ ಸಚಿವಾಲಯದ ಅಧಿಕಾರಿಗಳು ಪಾಲ್ಗೊಂಡಿದ್ದರು.
ಸಭೆಯ ಆರಂಭದಲ್ಲಿ ಪ್ರಧಾನಿ ಮೋದಿ ಅಧಿಕಾರಿಗಳಿಂದ ಭಾರತದಲ್ಲಿನ ಕೋವಿಡ್ ಪ್ರಕರಣ ಸಂಖ್ಯೆ, ಚೀನಾದಲ್ಲಿನ ಕೋವಿಡ್ ಅಬ್ಬರಿಂದ ಭಾರತದಲ್ಲಿ ಆಗಿರುವ ಪರಿಣಾದ ಕುರಿತು ವರದಿ ತರಿಸಿಕೊಂಡರು. ಈ ಕುರಿತು ಅಧಿಕಾರಿಗಳ ಬಳಿ ಮಹತ್ವದ ಮಾಹಿತಿ ಪಡೆದುಕೊಂಡರು. ಆರೋಗ್ಯ ಸಚಿವಾಲಯದ ಅಧಿಕಾರಿಗಳು ಸದ್ಯಗ ಸ್ಥಿತಿಗತಿ ಕುರಿತು ಮೋದಿಗೆ ವಿವರಿಸಲಾಯಿತು. ಬಳಿಕ ಆರೋಗ್ಯ ಸಚಿವ ಮನ್ಸುಕ್ ಮಾಂಡವಿಯಾ ಸ್ಥಿತಿಗತಿ ಅವಲೋಕಿಸಿದರು.
ಕೋವಿಡ್ ಆತಂಕ, ತಾಜ್‌ಮಹಲ್ ಪ್ರವೇಶಕ್ಕೆ ನೆಗಟೀವ್ ರಿಪೋರ್ಟ್ ಕಡ್ಡಾಯ!
ಭಾರತದ ಕೋವಿಡ್ ಮಾಹಿತಿ ಪಡೆದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಸಾರ್ವಜನಿಕರಲ್ಲಿ ಮತ್ತೆ ಮಾಸ್ಕ್, ಸಾಮಾಜಿಕ ಅಂತರ ಸೇರಿದಂತೆ ಕೋವಿಡ್ ಮಾರ್ಗಸೂಚಿಗಳ ಜಾಗೃತಿ ಮೂಡಿಸಲು ಸೂಚಿಸಲಾಗಿದೆ. ಜನಸಂದಣಿ ಪ್ರದೇಶಗಳಲ್ಲಿ ಮಾಸ್ಕ್ ಧರಿಸಲು ಸೂಚನೆ ನೀಡಿದ್ದಾರೆ. ಈ ಹಿಂದಿನ ಕೊರೋನಾ ಅಲೆಗಳಲ್ಲಿ ಭಾರತ ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಂಡು ಅಪಾಯದಿಂದ ಪಾರಾಗಿದೆ.
ಬೂಸ್ಟರ್ ಡೋಸ್ ಹೆಚ್ಚಿನ ಮಂದಿ ಪಡೆದಿಲ್ಲ. ಸಾರ್ವಜನಿಕರು ಹೆಚ್ಚಾಗಿ ಬೂಸ್ಟರ್ ಡೋಸ್ ಪಡೆಯಲು ಸೂಚಿಸಬೇಕು ಎಂದು ಮೋದಿ ಸಲಹೆ ನೀಡಿದ್ದಾರೆ. ಇದರ ಜೊತೆಗೆ ಕೋವಿಡ್ ಟೆಸ್ಟ್ ಸಂಖ್ಯೆ ಹೆಚ್ಚಿಸಬೇಕು. ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕಡ್ಡಾಯ ಟೆಸ್ಟಿಂಗ್ ಕುರಿತು ಮೋದಿ ಸಭೆಯಲ್ಲಿ ಚರ್ಚಿಸಿದ್ದಾರೆ.
ಶೀಘ್ರ ಕೋವಿಡ್ ಮಾರ್ಗಸೂಚಿ ಬಿಡುಗಡೆ: ಸಚಿವ ಸುಧಾಕರ್
ಕೇಂದ್ರ ಸರ್ಕಾರ ಈ ಹಿಂದಿನ ಕೋವಿಡ್ ಅಲೆಯಲ್ಲಿ ಅನುಸರಿಸಿದ 3ಟಿ ಸೂತ್ರ ಈಗಲೂ ಅನುಸರಿಸಲು ಮೋದಿ ಸೂಚನೆ ನೀಡಿದ್ದಾರೆ. ಟ್ರ್ಯಾಕ್, ಟೆಸ್ಟ್ ಹಾಗೂ ಟ್ರೀಟ್ಮೆಂಟ್ ಕೋವಿಡ್ ನಿಯಂತ್ರಣದಲ್ಲಿ ಅತೀ ಮುಖ್ಯ ಪಾತ್ರ ನಿರ್ವಹಿಸಿದೆ. ಹೀಗಾಗಿ ಕೋವಿಡ್ ಟೆಸ್ಟಿಂಗ್ ಹೆಚ್ಚು ಮಾಡಿ ಆರಂಭದಲ್ಲೇ ಕೋವಿಡ್ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಮೂಲಕ ಭಾರತವನ್ನು ಅಪಾಯದಿಂದ ಪಾರು ಮಾಡಬಹುದು ಎಂದು ಸಲಹೆ ನೀಡಿದ್ದಾರೆ.
ಚೀನಾದಲ್ಲಿ ಕೋವಿಡ್ ಸ್ಫೋಟಕ್ಕೆ ಕಾರಣವಾಗಿರುವ ಒಮಿಕ್ರಾನ್ Bf7 ಉಪತಳಿ ಇದೀಗ ಭಾರತದಲ್ಲಿ 3 ಪ್ರಕರಣಗಳು ಪತ್ತೆಯಾಗಿದೆ. ಇದು ಅತಂಕ ಹೆಚ್ಚಿಸಿದೆ. ಹೀಗಾಗಿ ಅೆಂತಾರಾಷ್ಟ್ರೀಯ ವಿಮಾನ ನಿಲ್ದಾಣಗಲ್ಲಿ ನಿರ್ಬಂಧ ಹೆಚ್ಚಾಗುತ್ತಿದೆ. ಜೊತೆಗೆ ಅಂತಾರಾಷ್ಟ್ರೀಯ ವಿಮಾನ ಪ್ರಯಾಣ ನಿರ್ಬಂಧಕ್ಕೆ ಒತ್ತಾಯ ಕೇಳಿಬರುತ್ತಿದೆ. ಅದರಲ್ಲೂ ಪ್ರಮುಖವಾಗಿ ಚೀನಾದಿಂದ ಆಗಮಿಸುವವರ ಮೇಲೆ ನಿಗಾ ಇಡಲು ಸಲಹೆಗಳು ಕೇಳಿಬಂದಿದೆ.