ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ ಜಿಲ್ಲೆಯಲ್ಲಿ ಉತ್ತರಪ್ರದೇಶದ ಆಯೋಧ್ಯೆಯ ಬಾಬ್ರಿ ಮಸೀದಿಯನ್ನೇ ಹೋಲುವಂತಹ ಮಸೀದಿ ನಿರ್ಮಾಣಕ್ಕೆ ಟಿಎಂಸಿಯಿಂದ ಅಮಾನತುಗೊಂಡಿರುವ ಶಾಸಕ ಹುಮಾಯೂನ್‌ ಕಬೀರ್‌ ಶಂಕುಸ್ಥಾಪನೆ ಶನಿವಾರ ನೆರವೇರಿಸಿದ್ದಾರೆ.

ಬೆಹ್ರಾಂಪುರ : ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ ಜಿಲ್ಲೆಯಲ್ಲಿ ಉತ್ತರಪ್ರದೇಶದ ಆಯೋಧ್ಯೆಯ ಬಾಬ್ರಿ ಮಸೀದಿಯನ್ನೇ ಹೋಲುವಂತಹ ಮಸೀದಿ ನಿರ್ಮಾಣಕ್ಕೆ ಟಿಎಂಸಿಯಿಂದ ಅಮಾನತುಗೊಂಡಿರುವ ಶಾಸಕ ಹುಮಾಯೂನ್‌ ಕಬೀರ್‌ ಶಂಕುಸ್ಥಾಪನೆ ಶನಿವಾರ ನೆರವೇರಿಸಿದ್ದಾರೆ.

ಸೌದಿ ಅರೇಬಿಯಾದಿಂದ ಮೌಲ್ವಿಗಳನ್ನು ಕರೆಸಿ ಅವರು ಉದ್ವಿಗ್ನ ವಾತಾವರಣದ ನಡುವೆ ಶಂಕುಸ್ಥಾಪನೆ ಮಾಡಿದರು. ಈ ವೇಳೆ, ‘ನಾರಾ-ಎ-ತಕ್ಬೀರ್‌, ಅಲ್ಲಾಹು ಅಕ್ಬರ್’ ಎಂಬ ಘೋಷಣೆ ಮೊಳಗಿತು.ಡಿ.6ರಂದು ಬಾಬ್ರಿ ಮಸೀದಿ ಧ್ವಂಸಗೊಂಡು ವರ್ಷಾಚರಣೆ ಹಿನ್ನೆಲೆ ಅದೇ ದಿನ ಶಂಕುಸ್ಥಾಪನೆ ನೆರವೇರಿಸುವುದಾಗಿ ಹೇಳಿದ್ದ ಕಬೀರ್‌ ಅವರನ್ನು ಟಿಎಂಸಿ ಇತ್ತೀಚೆಗಷ್ಟೇ ಪಕ್ಷದಿಂದ ಅಮಾನತುಗೊಳಿಸಿತ್ತು. ಈ ನಡುವೆ ಅವರು ಮಸೀದಿ ನಿರ್ಮಾಣಕ್ಕೆ ಅಡಿಪಾಯ ಹಾಕಿದ್ದಾರೆ. ಕಾರ್ಯಕ್ರಮ ನಡೆದ ರೆಜಿನಗರದಲ್ಲಿ ಸಾವಿರಾರು ಮಂದಿ ಆಗಮಿಸಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಬಿಗಿ ಭದ್ರತೆ ಆಯೋಜಿಸಿದ್ದರು.

ಅಯೋಧ್ಯೆಯಂತೆ ಕಾಶಿ, ಮಥುರಾ ತಲುಪುತ್ತೇವೆ: ಯೋಗಿ

ಲಖನೌ: ‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕೇವಲ ಒಂದು ತುಣುಕಷ್ಟೇ. ಕಾಶಿ-ಮಥುರಾ ಇನ್ನೂ ಬಾಕಿ ಉಳಿದಿದೆ’ ಎಂಬ ಜನಪ್ರಿಯ ಘೋಷಣೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌, ‘ನಾವು ಪ್ರತಿಯೊಂದು ಜಾಗವನ್ನು ನಾವು ತಲುಪುತ್ತೇವೆ ’ಎಂದು ಮಾರ್ಮಿಕವಾಗಿ ಹೇಳಿದ್ದಾರೆ.ಹಿಂದೂಸ್ತಾನ್ ಟೈಮ್ಸ್‌ ನಾಯಕತ್ವ ಶೃಂಗಸಭೆಯಲ್ಲಿ ಮಾತನಾಡಿದ ಯೋಗಿ ಅವರಿಗೆ ವಿವಾದಿತ ಜ್ಞಾನವಾಪಿ ಮತ್ತು ಮಥುರಾ ಶಾಹಿ ಈದ್ಗಾ ಮಸೀದಿ ಕುರಿತ ಜನಪ್ರಿಯ ಘೋಷಣೆ ಬಗ್ಗೆ ಪ್ರಶ್ನೆ ಎದುರಾಯಿತು. ಅದಕ್ಕೆ ಉತ್ತರಿಸಿದ ಅವರು, ‘ನಾವು ಎಲ್ಲಾ ಸ್ಥಳವನ್ನೂ ತಲುಪುತ್ತೇವೆ. ಈಗಾಗಲೇ ತಲುಪಿದ್ದೇವೆ’ ಎಂದರು.ಈ ಮೂಲಕ ಹಿಂದೆ ಹಿಂದೂ ಧಾರ್ಮಿಕ ಕೇಂದ್ರಗಳಾಗಿತ್ತು ಎನ್ನುವ ಐತಿಹ್ಯವಿರುವ ಕಾಶಿಯಲ್ಲಿರುವ ಜ್ಞಾನವಾಪಿ ಮಸೀದಿ ಮತ್ತು ಮಥುರಾದ ಶಾಹಿ ಈದ್ಗಾ ಮಸೀದಿಯ ವಶದ ಬಗ್ಗೆ ಸುಳಿವು ನೀಡಿದರು.

ನೆಹರು ಪರಂಪರೆ ಅಳಿಸುವುದು ಬಿಜೆಪಿ ಗುರಿ: ಸೋನಿಯಾ

ನವದೆಹಲಿ : ದೇಶದ ಮೊದಲ ಪ್ರಧಾನಿ ಜವಾಹರ್‌ಲಾಲ್‌ ನೆಹರು ಅವರ ಬಗ್ಗೆ ಬಿಜೆಪಿಗರ ಟೀಕೆಗಳಿಗೆ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಆಕ್ಷೇಪಿಸಿದ್ದಾರೆ. ‘ನೆಹರು ಅವರ ವ್ಯಕ್ತಿತ್ವ ತಿರುಚಿ ಅವಮಾನಿಸುತ್ತಿದ್ದಾರೆ. ಅವರ ಪರಂಪರೆ ಅಳಿಸುವುದು ಮಾತ್ರವಲ್ಲದೇ, ಅವರು ಸ್ಥಾಪಿಸಿದ ದೇಶದ ಅಡಿಪಾಯಗಳನ್ನು ನಾಶಪಡಿಸುವುದೇ ಅವರ ಗುರಿ’ ಎಂದು ಕಿಡಿಕಾರಿದ್ದಾರೆ.ಇಲ್ಲಿನ ಜವಾಹರ್ ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ಈ ಬಗ್ಗೆ ಹರಿಹಾಯ್ದರು. ಅವರು, ತಮ್ಮ ಅಪರೂಪದ ಭಾಷಣದಲ್ಲಿ ಆರ್‌ಎಸ್‌ಎಸ್‌, ಬಿಜೆಪಿ ಹೆಸರು ಉಲ್ಲೇಖಿಸಲಿಲ್ಲ. ಆದರೆ ಅವರು ಪರೋಕ್ಷವಾಗಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಕುರಿತಾಗಿಯೇ ಹೇಳಿದ್ದು ಎನ್ನುವುದು ಸ್ಪಷ್ಟವಾಗಿತ್ತು.‘ನೆಹರು ಅವರ ಕೊಡುಗೆ, ವಿಶ್ಲೇಷಣೆಗಳ ಟೀಕೆ ಸ್ವಾಗತಾರ್ಹ. ಆದರೆ ಅವರು ಬರೆದ, ಹೇಳಿದ ವಿಷಯ ಇಟ್ಟುಕೊಂಡು ದುರುದ್ದೇಶಪೂರಿತವಾಗಿ ವರ್ತಿಸುವುದು ಸ್ವೀಕಾರರ್ಹವಲ್ಲ. ಅವರನ್ನು ಕೆಣಕುವ ಯೋಜನೆಯೇ ಇಂದಿನ ಆಡಳಿತದ ಮುಖ್ಯ ಉದ್ದೇಶ. ಅವರ ಗುರಿ ಅವರನ್ನು ಅಳಿಸಿ ಹಾಕುವುದು ಮಾತ್ರವಲ್ಲ. ಅವರು ರೂಪಿಸಿದ್ದ ಸಾಮಾಜಿಕ, ರಾಜಕೀಯ, ಆರ್ಥಿಕ ಅಡಿಪಾಯಗಳನ್ನು ನಾಶ ಪಡಿಸುವುದು’ ಎಂದು ಆರೋಪಿಸಿದರು.

‘ನೆಹರು ಅವರಂತಹ ಐತಿಹಾಸಿಕ ವ್ಯಕ್ತಿಯ ಜೀವನವನ್ನು ವಿಶ್ಲೇಷಿಸುವುದು, ಟೀಕಿಸುವುದು ಸಹಜ. ಆದರೆ ಇತಿಹಾಸವನ್ನು ಪುನಃ ಬರೆಯಬೇಕು ಎನ್ನುವ ಸ್ವಾರ್ಥ ಪ್ರಯತ್ನದ ಮೂಲಕ ಅವರ ಬಹುಮುಖಿ ಪರಂಪರೆಯನ್ನು ಕೆಡವಲು ನಡೆಯುತ್ತಿರುವ ವ್ಯವಸ್ಥಿತ ಪ್ರಯತ್ನ ಸ್ವೀಕಾರಾರ್ಹವಲ್ಲ’ ಎಂದರು.

ಮೊದಲು ಮಲ್ಯ ಭಾರತಕ್ಕೆ ಬರಲಿ: ಕೋರ್ಟ್‌

ಮುಂಬೈ: ಜಾರಿ ನಿರ್ದೇಶನಾಲಯ(ಇ.ಡಿ.)ವು ತಮ್ಮ ವಿರುದ್ಧ ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸುವ ಹಾಗೂ ಆಸ್ತಿ ಮುಟ್ಟುಗೋಲು ಹಾಕುವ ಕ್ರಮಕ್ಕೆ ತಡೆಕೋರಿ ಮದ್ಯದ ದೊರೆ ವಿಜಯ್‌ ಮಲ್ಯ ಅವರು ಸಲ್ಲಿಸಿದ್ದ ಮನವಿಯ ವಿಚಾರಣೆಗೆ ಬಾಂಬೆ ಹೈಕೋರ್ಟ್‌ ನಿರಾಕರಿಸಿದೆ. ‘ಮೊದಲು ನೀವು ಭಾರತಕ್ಕೆ ಬನ್ನಿ, ಆ ಬಳಿಕವಷ್ಟೇ ಪ್ರಕರಣದ ವಿಚಾರಣೆ ನಡೆಸುತ್ತೇವೆ’ ಎಂದು ಕೋರ್ಟ್‌ ತಿಳಿಸಿದೆ.

ದೇಶಭ್ರಷ್ಟ ಆರ್ಥಿಕ ಅಪರಾಧಗಳ ಕಾಯ್ದೆ (ಎಫ್‌ಇಒ) ಅಡಿ ದಾಖಲಿಸಿರುವ ಕೇಸ್‌ ಹಾಗೂ ಇದರಡಿ ಆಸ್ತಿ ಮುಟ್ಟುಗೋಲು ಹಾಕಲು ನಿರ್ಧರಿಸಿರುವ ಇ.ಡಿ.ಯ ನಡೆಗೆ ತಡೆ ಕೋರಿ ಮಲ್ಯ ಪರ ವಕೀಲ ಅಮಿತ್‌ ದೇಸಾಯಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ವೇಳೆ ತಮ್ಮ ಅರ್ಜಿದಾರರು ಲಂಡನ್‌ನಲ್ಲಿದ್ದಾರೆ ಎಂದು ವಕೀಲರು ಹೇಳಿದಾಗ, ‘ಮೊದಲು ಅವರು ಭಾರತಕ್ಕೆ ವಾಪಸ್‌ ಬರಲಿ, ಅವರು ಯಾವಾಗ ಭಾರತಕ್ಕೆ ವಾಪಸಾಗಬಹುದು ಎಂಬ ಮಾಹಿತಿ ನೀವು ನೀಡಿ. ಅಲ್ಲಿಯವರೆಗೆ ಈ ಅರ್ಜಿಗೆ ಸಂಬಂಧಿಸಿದ ಯಾವುದೇ ಮನವಿಯನ್ನು ನಾವು ಪುರಸ್ಕರಿಸುವುದಿಲ್ಲ’ ಎಂದು ಕೋರ್ಟ್‌ ತಿಳಿಸಿತು.

ವಿಜಯ್‌ ಮಲ್ಯ ಅವರು 2016ರ ಮಾರ್ಚ್‌ನಿಂದ ಲಂಡನ್‌ನಲ್ಲಿ ನೆಲೆಸಿದ್ದಾರೆ.ಮಲ್ಯ ಅರ್ಜಿಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ್ದ ಜಾರಿ ನಿರ್ದೇಶನಾಲಯವು, ನ್ಯಾಯಾಲಯದ ವಿಚಾರಣೆಯಿಂದ ತಪ್ಪಿಸಿಕೊಂಡು ವಿದೇಶಗಳಿಗೆ ಪಲಾಯನಗೈಯುವುದನ್ನು ತಪ್ಪಿಸಲು ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಮಲ್ಯ ಅವರಿಗೆ ಕೋರ್ಟ್‌ ಮುಂದೆ ಹಾಜರಾಗಲು ಅನೇಕ ಅವಕಾಶಗಳನ್ನು ನೀಡಲಾಗಿತ್ತು. ಆದರೆ, ಅದನ್ನು ಬಳಸಿಕೊಳ್ಳುವಲ್ಲಿ ವಿಫಲರಾದರು. ಹೀಗಾಗಿ ಅವರ ಆಸ್ತಿ ಮುಟ್ಟುಗೋಲು ಹಾಕುವುದು ನ್ಯಾಯಸಮ್ಮತವಾಗಿದೆ. ಮಲ್ಯ ಅವರ ವಿರುದ್ಧ 100 ಕೋಟಿ ರು. ಗೂ ಹೆಚ್ಚಿನ ಹಣಕಾಸು ಅಕ್ರಮದ ಆರೋಪ ಇದೆ. ಇದು ದೇಶದ ಆರ್ಥಿಕತೆ ಮೇಲೆ ನೇರ ಪರಿಣಾಮ ಬೀರುತ್ತದೆ. ಇದರಿಂದಾಗಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ನಿರ್ಧಾರ ಸರಿಯಾಗಿಯೇ ಇದೆ ಎಂದು ಇ.ಡಿ. ವಾದಿಸಿದೆ.