ಭಾರತದ ವಾಯುಯಾನ ಇತಿಹಾಸದಲ್ಲೇ ಅನಿರೀಕ್ಷಿತ ಬೆಳವಣಿಗೆಯೊಂದು ನಡೆದಿದೆ. ಇಂಡಿಗೋ ವಿಮಾನಗಳ ರದ್ದು ಮತ್ತು ವಿಳಂಬದಿಂದಾಗಿ ದೇಶಾದ್ಯಂತ ಸಾವಿರಾರು ಪ್ರಯಾಣಿಕರು ಪರದಾಡುವಂತಾಗಿದೆ. ನಿಯಮ ಜಾರಿಗೆ 18 ತಿಂಗಳು ಕೊಟ್ಟರೂ ಇಂಡಿಗೋ ಏಕೆ ಸಜ್ಜಾಗಲಿಲ್ಲ? ಬೇರೆ ವಿಮಾನ ಕಂಪನಿಗಳಲ್ಲಿಲ್ಲದ ಸಮಸ್ಯೆ ಇಂಡಿಗೋದಲ್ಲೇ ಏಕೆ?
-ಪ್ರಾಜ್ಞ ಕೆ.
-----------------------
ಪವರ್‌ಪಾಯಿಂಟ್
ಭಾರತದ ವಾಯುಯಾನ ಇತಿಹಾಸದಲ್ಲೇ ಅನಿರೀಕ್ಷಿತ ಬೆಳವಣಿಗೆಯೊಂದು ನಡೆದಿದೆ. ಇಂಡಿಗೋ ವಿಮಾನಗಳ ರದ್ದು ಮತ್ತು ವಿಳಂಬದಿಂದಾಗಿ ದೇಶಾದ್ಯಂತ ಸಾವಿರಾರು ಪ್ರಯಾಣಿಕರು ಪರದಾಡುವಂತಾಗಿದೆ. ಅವರ ಪ್ರವಾಸದ ಯೋಜನೆಗಳೆಲ್ಲ ತಲೆಕೆಳಗಾಗಿವೆ. ಈ ವೇಳೆ ಮನಕಲಕುವ ಪ್ರಶ್ನೆಯೊಂದು ಉದ್ಭವವಾಗುತ್ತಿದೆ: ಇದು ನಿಜವಾಗಿಯೂ ವಿಮಾನಗಳ ಕಾರ್ಯಾಚರಣೆ ಸಮಸ್ಯೆಯಿಂದ ಉಂಟಾದದ್ದೇ ಅಥವಾ ಸರ್ಕಾರಿ ನಿಯಮಗಳಲ್ಲಿ ಬದಲಾವಣೆ ತರುವಂತೆ ಒತ್ತಾಯಿಸಲು ಪ್ರಯಾಣಿಕರನ್ನು ಒತ್ತೆಯಾಳುಗಳನ್ನಾಗಿ ಮಾಡಿಕೊಳ್ಳುವ ಒಂದು ಪೂರ್ವಯೋಜಿತ ಕೃತ್ಯವೇ?
ಇಂಡಿಗೋ ಭಾರತದ ವಿಮಾನಯಾನ ಮಾರುಕಟ್ಟೆಯಲ್ಲಿ ಶೇ.60ರಷ್ಟು ಪ್ರಾಬಲ್ಯ ಹೊಂದಿದೆ. ಇಷ್ಟು ದೊಡ್ಡ ಸಂಸ್ಥೆಯ ಕಾರ್ಯಾಚರಣೆಯಲ್ಲಿ ಬಹುದೊಡ್ಡ ಕುಸಿತವಾಗಲು ಪೈಲಟ್‌ಗಳ ಕೊರತೆ ಮಾತ್ರ ಕಾರಣವಾಗಿರಲಾರದು. ಪ್ರಯಾಣಿಕರು ಕೇವಲ ಸಂಚಾರ ವ್ಯತ್ಯಯದಿಂದ ತೊಂದರೆಗೆ ಒಳಗಾಗಲಿಲ್ಲ, ಬದಲಾಗಿ ಸರ್ಕಾರದ ವಿರುದ್ಧದ ಕಾರ್ಯತಂತ್ರದ ಕೈಗೊಂಬೆಗಳಾದರು ಎಂಬ ಭಯಾನಕ ಕೋನವನ್ನೂ ಇದು ಹುಟ್ಟುಹಾಕುತ್ತದೆ.
ಇದಕ್ಕೆಲ್ಲ ಕಾರಣ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಜಾರಿಗೆ ತಂದ ‘ವಿಮಾನ ಕರ್ತವ್ಯ ಸಮಯದ ಮಿತಿಗಳು’ (ಎಫ್‌ಡಿಟಿಎಲ್) ಎಂಬ ಸಿದ್ಧ ಉತ್ತರ ಕೈಯಲ್ಲಿದೆ. ಇವು ಪೈಲಟ್‌ಗಳಿಗೆ ಹೆಚ್ಚಿನ ವಿಶ್ರಾಂತಿ ಕೊಟ್ಟು, ಅವರು ನಿತ್ರಾಣಗೊಂಡು ಸಂಭವಿಸಬಹುದಾದ ಅಪಘಾತಗಳನ್ನು ಕಡಿಮೆ ಮಾಡುವ ಉದ್ದೇಶ ಹೊಂದಿತ್ತು. ಈ ಮೂಲಕ ಲಕ್ಷಾಂತರ ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಇದನ್ನು ಜಾರಿಗೊಳಿಸಲಾಗಿತ್ತು. ಈ ನಿಯಮವನ್ನು ರಾತ್ರೋರಾತ್ರಿ ವಿಮಾನಯಾನ ಸಂಸ್ಥೆಗಳ ಮೇಲೆ ಹೇರಿಕೆ ಮಾಡಲಿಲ್ಲ. ಕಳೆದ ವರ್ಷದ ಆರಂಭದಲ್ಲೇ ಘೋಷಣೆ ಮಾಡಿ, ನಂತರ ಸಿದ್ಧತೆಗಾಗಿ 18 ತಿಂಗಳ ಸಮಯಾವಕಾಶ ನೀಡಲಾಗಿತ್ತು. ಅದರ ನಂತರವೇ ಜಾರಿಗೊಳಿಸಲಾಯಿತು. ಇಷ್ಟು ದೀರ್ಘ ಅವಧಿಯಲ್ಲಿ ಇಂಡಿಗೋ ಏನು ಮಾಡಿತು? ತನ್ನ ಹಾರಾಟದ ವೇಳಾಪಟ್ಟಿಯನ್ನು ಸುದೀರ್ಘವಾಗಿ ವಿಸ್ತರಿಸಿತು, ಮತ್ತಷ್ಟು ವಿಮಾನಗಳನ್ನು ಸೇರ್ಪಡೆ ಮಾಡಿತು ಮತ್ತು ಲಾಭದಾಯಕವಾದ ಚಳಿಗಾಲದ ಸಮಯದಲ್ಲಿ ವಿಮಾನಗಳ ಸಂಚಾರವನ್ನು ಅಧಿಕಗೊಳಿಸಿತು. ಇಷ್ಟಾದರೂ ಪೈಲಟ್‌ಗಳ ಸಂಖ್ಯೆಯನ್ನು ಹೆಚ್ಚಿಸಲಿಲ್ಲ. ಕಡಿಮೆ ಸಿಬ್ಬಂದಿ ಮೂಲಕವೇ ಕೆಲಸ ಮಾಡಿಸುತ್ತಿತ್ತು. ಯಾವಾಗ ಸುರಕ್ಷತಾ ನಿಯಮಗಳು ಜಾರಿಯಾದವೋ ಆಗ ಸಂಪೂರ್ಣ ವ್ಯವಸ್ಥೆ ತಲೆಕೆಳಗಾಯಿತು.
‘ಒತ್ತೆಯಾಳು’ಗಳಾದ ಪ್ರಯಾಣಿಕರು:
ಕಳೆದ 5 ದಿನಗಳ ಕಾಲ ಸಾವಿರಾರು ಪ್ರಯಾಣಿಕರು ಇಂಡಿಗೋದ ಒತ್ತೆಯಾಳುಗಳಂತೆ ಪರದಾಟ ಅನುಭವಿಸಿದರು. ಅವರೆಲ್ಲ ಮದುವೆಗಳು, ವೈದ್ಯಕೀಯ ಅಪಾಯಿಂಟ್‌ಮೆಂಟ್‌ಗಳು ಮತ್ತು ಪ್ರಮುಖ ವ್ಯಾಪಾರ ಸಭೆಗಳನ್ನು ತಪ್ಪಿಸಿಕೊಂಡು ಅತಂತ್ರರಾದ ಆ ಕ್ಷಣದಲ್ಲಿ ಸರ್ಕಾರ ಸಂದಿಗ್ಧತೆಯಲ್ಲಿ ಸಿಕ್ಕಿಹಾಕಿಕೊಂಡಿತು. ಇಂಡಿಗೋ ವಿಮಾನಗಳ ರದ್ದತಿ ಸಂಖ್ಯೆ ಸಾವಿರಗಳನ್ನು ದಾಟಿದಾಗ ಮತ್ತು ಜನರ ಕೋಪ ತಾರಕಕ್ಕೇರಿದಾಗ, ಸರ್ಕಾರಕ್ಕೆ ಮೊದಲು ಸಾಮಾನ್ಯ ಸ್ಥಿತಿಯನ್ನು ಮರುಸ್ಥಾಪಿಸುವುದರ ಹೊರತು ಬೇರೆ ಆಯ್ಕೆ ಉಳಿದಿರಲಿಲ್ಲ.
ಇಂಡಿಗೋದ ಸಿಬ್ಬಂದಿ ಕೊರತೆಯು ತೀವ್ರ ಸಾರ್ವಜನಿಕ ತುರ್ತು ಪರಿಸ್ಥಿತಿಯನ್ನು ಸೃಷ್ಟಿಸಿದ ಆ ನಿರ್ಣಾಯಕ ಗಳಿಗೆಯಲ್ಲಿ, ಜನರ ಸಮಸ್ಯೆ ಪರಿಹರಿಸಲು ಸರ್ಕಾರವು ನಿರ್ದಾಕ್ಷಿಣ್ಯವಾಗಿ ಕಾರ್ಯಪ್ರವೃತ್ತವಾಗಬೇಕಾಯಿತು. ಅಂದರೆ ಹೊಸ ಸುರಕ್ಷತಾ ನಿಯಮಗಳ (ಎಫ್‌ಡಿಟಿಎಲ್) ಕಟ್ಟುನಿಟ್ಟಿನ ಅನುಷ್ಠಾನವನ್ನು ಕೆಲವು ತಿಂಗಳುಗಳ ಕಾಲ ತಾತ್ಕಾಲಿಕವಾಗಿ ಮುಂದೂಡಬೇಕಾಯಿತು. ಪ್ರಯಾಣಿಕರನ್ನು ಒತ್ತೆಯಾಳುಗಳಂತೆ ಹಿಡಿದಿಟ್ಟುಕೊಳ್ಳುವ ಸಂದರ್ಭ ಸೃಷ್ಟಿಯಾದಾಗ, ಯಾವುದೇ ಸರ್ಕಾರದ ತಕ್ಷಣದ ಆದ್ಯತೆಯೆಂದರೆ ತನ್ನ ಪ್ರಜೆಗಳ ಸುರಕ್ಷಿತ ಬಿಡುಗಡೆ. ಇಂಡಿಗೋದ ಲೋಪದಿಂದಾಗಿ ಸರ್ಕಾರವನ್ನು ಸಂಕಟಕ್ಕೆ ಸಿಲುಕಿಸಲಾಯಿತು ಮತ್ತು ಹೊಸ ನಿಯಮದ ಅನುಷ್ಠಾನಕ್ಕಿಂತ ಮೊದಲು ತಕ್ಷಣದ ಸಾರ್ವಜನಿಕರ ಹಿತರಕ್ಷಣೆಯೇ ಸರ್ಕಾರಕ್ಕೆ ಅನಿವಾರ್ಯವಾಯಿತು.
ಉದ್ದೇಶವನ್ನೇ ಪ್ರಶ್ನಿಸಬೇಕಾಗುತ್ತದೆ:
18 ತಿಂಗಳ ಮುಂಚೆಯೇ ಸರ್ಕಾರದ ಎಚ್ಚರಿಕೆ, ಆ ನಂತರ ಇಂಡಿಗೋ ಕಾರ್ಯಾಚರಣೆಯಲ್ಲಿ ಅತಿಯಾದ ವಿಸ್ತರಣೆ ಮತ್ತು ಹೊಸ ನಿಯಮ ಜಾರಿಯಾದ ಮೊದಲ ದಿನವೇ ವಿಮಾನಗಳು ರದ್ದಾದದ್ದು- ಈ ಸರಣಿ ಬೆಳವಣಿಗೆಗಳು ಸಮಸ್ಯೆಯ ಹಿಂದಿನ ನಿಜವಾದ ಉದ್ದೇಶವನ್ನೇ ಪ್ರಶ್ನಿಸುವಂತೆ ಮಾಡುತ್ತವೆ. ಇದು ನಿಜವಾಗಿಯೂ ಅನಿರೀಕ್ಷಿತವಾಗಿ ಎದುರಾದ ಸಮಸ್ಯೆಯೇ? ಅಥವಾ ಸರ್ಕಾರಕ್ಕೆ ಬೆದರಿಕೆ ಹಾಕಿ ಒತ್ತಡ ಹೇರಲು ಉದ್ದೇಶಪೂರ್ವಕವಾಗಿ ರೂಪಿತ ನಾಟಕವೇ?
ಏರ್ ಇಂಡಿಯಾ ಮತ್ತು ವಿಸ್ತಾರ ಸೇರಿದಂತೆ ಇತರ ಪ್ರಮುಖ ವಿಮಾನಯಾನ ಸಂಸ್ಥೆಗಳು ಅದೇ ಎಫ್‌ಡಿಟಿಎಲ್ ನಿಯಮಗಳನ್ನು ಬಹಳ ಕಡಿಮೆ ಸಾರ್ವಜನಿಕ ಅಡಚಣೆಯೊಂದಿಗೆ ನಿಭಾಯಿಸಿದವು. ಕೇವಲ ಒಂದೇ ವಿಮಾನಯಾನ ಸಂಸ್ಥೆಯ (ಇಂಡಿಗೋ) ವ್ಯವಸ್ಥೆಯು ತನ್ನದೇ ಪ್ರಯಾಣಿಕರಿಗೆ ಸೂಕ್ತ ಪ್ರಯಾಣ ಕಲ್ಪಿಸಲು ವಿಫಲವಾಗಿದ್ದೇಕೆ? ಸಂಶಯಕ್ಕೆ ಎಡೆಮಾಡಿಕೊಡಲು ಇದೊಂದೇ ಉದಾಹರಣೆ ಸಾಕು.
ಒಂದು ವಿಮಾನಯಾನ ಸಂಸ್ಥೆಗೆ ತನ್ನ ವ್ಯಾಪಾರ ವ್ಯವಸ್ಥೆಗೆ ಹೊಂದಿಕೊಳ್ಳದ ನಿಯಮ ಜಾರಿಯಾದಾಗಲೆಲ್ಲಾ ದೇಶದ ವಿಮಾನಯಾನ ವ್ಯವಸ್ಥೆಯನ್ನೇ ವಿಚಲಿತಗೊಳಿಸುವ ಶಕ್ತಿ ಇದ್ದರೆ, ಸುರಕ್ಷತೆಯೇ ರಾಜಿ ವಿಷಯವಾಗಿಬಿಡುತ್ತದೆ ಮತ್ತು ಸಾಮಾನ್ಯ ಭಾರತೀಯ ಪ್ರಯಾಣಿಕನು ಯಾವಾಗಲೂ ಹಣಕಾಸಿನ ಮತ್ತು ಭಾವನಾತ್ಮಕ ನಷ್ಟವನ್ನೇ ಎದುರಿಸಬೇಕಾಗುತ್ತದೆ. ಅನಿರೀಕ್ಷಿತವಾಗಿ ಎದುರಾದ ಸಮಸ್ಯೆಯನ್ನು ನಿಭಾಯಿಸಲು ಸರ್ಕಾರ ತಕ್ಷಣ ಹೊಸ ನಿಯಮಗಳನ್ನು ಹಿಂತೆಗೆದುಕೊಂಡಿತು. ಈ ಕ್ರಮ ಅಗತ್ಯವೂ ಆಗಿತ್ತು. ಆದರೆ ಅದು ಅಷ್ಟಕ್ಕೇ ನಿಲ್ಲಬಾರದು. ತನಿಖೆ ನಡೆಸಬೇಕು. ತಕ್ಷಣವೇ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕು.
*ಸಾಕಷ್ಟು ಪೈಲಟ್‌ಗಳು ಇಲ್ಲದಿದ್ದರೂ ಇಂಡಿಗೋ ಉದ್ದೇಶಪೂರ್ವಕವಾಗಿ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಿದ್ದು ಏಕೆ?
* ಪೈಲಟ್‌ಗಳ ಲಭ್ಯತೆಯಿಲ್ಲ ಎಂದು ತಿಳಿದಿದ್ದರೂ ಪ್ರಯಾಣ ನಿಗದಿಪಡಿಸಿ, ಪ್ರಯಾಣಿಕರನ್ನು ಮುಖ್ಯ ಒತ್ತಡದ ಸಾಧನವನ್ನಾಗಿ ಬಳಸಿಕೊಂಡಿದ್ದು ಏಕೆ?
ನಷ್ಟ ಭರಿಸುವವರು ಯಾರು?:
ಕಾರ್ಯಾಚರಣೆ ವೆಚ್ಚವನ್ನು ಅಂತಿಮವಾಗಿ ಇಂಡಿಗೋ ಭರಿಸಬಹುದು, ಆದರೆ ಪ್ರಯಾಣಿಕರ ನಷ್ಟಕ್ಕೆ ಯಾರು ಪರಿಹಾರ ನೀಡುತ್ತಾರೆ? ಯಾರೂ ಇಲ್ಲ. ರದ್ದಾದ ಟಿಕೆಟ್‌ಗೆ ಪೂರ್ಣ ಮರುಪಾವತಿ ನೀಡಬಹುದು. ಆದರೆ 50,000 ರು. ಹೋಟೆಲ್ ಬುಕಿಂಗ್ ಕಳೆದುಕೊಂಡವನಿಗೆ ಅಥವಾ ಮುಖ್ಯ ಅಂತಾರಾಷ್ಟ್ರೀಯ ವ್ಯಾಪಾರ ಸಭೆ ತಪ್ಪಿಸಿಕೊಂಡವನಿಗೆ ಅದು ಯಾವುದೇ ಪರಿಹಾರ ನೀಡುವುದಿಲ್ಲ.
ಅನೇಕ ಅಭಿವೃದ್ಧಿ ಹೊಂದಿದ ದೇಶಗಳಲ್ಲಿರುವಂತೆ, ವಿಮಾನಯಾನ ಸಂಸ್ಥೆಗಳು ನಿಗದಿತ ಮಿತಿಗಿಂತ ಹೆಚ್ಚು ಬಾರಿ ಪ್ರಯಾಣವನ್ನು ರದ್ದುಗೊಳಿಸಿದರೆ ಅಥವಾ ತಡವಾಗಿಸಿದರೆ, ಪ್ರಯಾಣಿಕರಿಗೆ ನೇರವಾಗಿ ಬಹುಸ್ತರದ ದಂಡ ಪಾವತಿಸಬೇಕಾದ ನಿಯಮಗಳಿರಬೇಕು. ಇದು ಪ್ರಯಾಣಿಕರ ಹಿತಾಸಕ್ತಿಗಿಂತ ಲಾಭದ ಆಟಗಳನ್ನಾಡಲು ಪ್ರಯತ್ನಿಸುವ ವಿಮಾನಯಾನ ಸಂಸ್ಥೆಗಳಿಗೆ ತಕ್ಕ ಪಾಠ ಕಲಿಸುತ್ತದೆ. ಲಾಭದ ಬೆನ್ನತ್ತಿರುವ ವಿಮಾನಯಾನ ಕಂಪನಿಗಳು ಅದನ್ನು ಸಾಕಾರಗೊಳಿಸಿಕೊಳ್ಳಲು ಪ್ರಯಾಣಿಕರನ್ನು ಆರ್ಥಿಕ ಒತ್ತೆಯಾಳುಗಳಾಗಿ ಇಟ್ಟುಕೊಳ್ಳಬಾರದು. ಆಕಾಶ ಎಂಬುದು ರಾಜಿ ಸಂಧಾನದ ವೇದಿಕೆಯಾಗಬಾರದು.
ತಕ್ಷಣದ ಸಮಸ್ಯೆ ಮುಗಿದಿದೆ ಎಂಬುದು ನಿಜ. ಆದರೆ ಬಹುಮುಖ್ಯವಾದ ಪ್ರಶ್ನೆಯೊಂದು ಉಳಿಯುತ್ತದೆ: ವಿಮಾನ ಸಂಚಾರ ರದ್ದುಗೊಂಡಿದ್ದಕ್ಕೆ ಮಾತ್ರವಲ್ಲ, ಸಾರ್ವಜನಿಕರ ಅನುಕೂಲ ಮತ್ತು ಸುರಕ್ಷತೆ ಜೊತೆ ಆಟವಾಡಿದ್ದಕ್ಕೆ ಯಾರು ಹೊಣೆಗಾರರು?


