ಇಡೀ ದೇಶದ ವಿಮಾನಯಾನ ವಲಯದಲ್ಲಿ ತಲ್ಲಣ ಮೂಡಿಸಿರುವ ಇಂಡಿಗೋ ವಿಮಾನ ರದ್ದತಿ ಪ್ರಸಂಗದ ಕಾರಣ, ಏರ್‌ಲೈನ್ಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಪೀಟರ್‌ ಎಲ್ಬರ್ಸ್‌ ಅವರನ್ನು ಹುದ್ದೆಯಿಂದ ವಜಾಗೊಳಿಸಲು ಸಂಸ್ಥೆಗೆ ಕೇಂದ್ರ ಸರ್ಕಾರ ಸೂಚನೆ ನೀಡುವ ಸಾಧ್ಯತೆಯಿದೆ.

ನವದೆಹಲಿ : ಇಡೀ ದೇಶದ ವಿಮಾನಯಾನ ವಲಯದಲ್ಲಿ ತಲ್ಲಣ ಮೂಡಿಸಿರುವ ಇಂಡಿಗೋ ವಿಮಾನ ರದ್ದತಿ ಪ್ರಸಂಗದ ಕಾರಣ, ಏರ್‌ಲೈನ್ಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಪೀಟರ್‌ ಎಲ್ಬರ್ಸ್‌ ಅವರನ್ನು ಹುದ್ದೆಯಿಂದ ವಜಾಗೊಳಿಸಲು ಸಂಸ್ಥೆಗೆ ಕೇಂದ್ರ ಸರ್ಕಾರ ಸೂಚನೆ ನೀಡುವ ಸಾಧ್ಯತೆಯಿದೆ. 24 ತಾಸಿನಲ್ಲಿ ವಿವರಣೆ ನೀಡುವಂತೆ ಅವರಿಗೆ ಸರ್ಕಾರ ನೊಟೀಸ್ ಜಾರಿ ಮಾಡಿದೆ. ಜೊತೆಗೆ, ಇಂಡಿಗೋ ಮೇಲೆ ಅತಿ ಕಠಿಣ ದಂಡವನ್ನು ವಿಧಿಸಲು ಸಿದ್ಧತೆ ನಡೆಸಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಇದಕ್ಕೆ ಪೂರಕವಾಗಿ ಶನಿವಾರ ರಾತ್ರಿ ಎಲ್ಬರ್ಸ್‌ ಅವರಿಗೆ ವಿಮಾನಯಾನ ಸಚಿವಾಲಯ, 24 ತಾಸಿನಲ್ಲಿ ಉತ್ತರಿಸಲು ನೋಟಿಸ್‌ ನೀಡಿದೆ. ಸೂಕ್ತ ಉತ್ತರ ನೀಡದಿದ್ದರೆ ಕ್ರಮದ ಎಚ್ಚರಿಕೆ ನೀಡಿದೆ.

ಇದಲ್ಲದೆ, ಸಂಸ್ಥೆಗೆ ನೀಡಿದ್ದ ಪರವಾನಗಿ ಮೇಲೆ ನಿಯಮ ಹೇರಿ, ಅಗತ್ಯವಿದ್ದಷ್ಟುಸಿಬ್ಬಂದಿ ಲಭ್ಯತೆ​ಯನ್ನು ಖಚಿತಪಡಿಸಿದರೆ ಮಾತ್ರ ಚಾಲನೆಗೆ ಅನು​ಮತಿ ನೀಡುವ ಸಾಧ್ಯತೆಯಿದೆ.

ಇಂಡಿಗೋ ಭಾರತದ ಅತಿ ದೊಡ್ಡ ವಿಮಾನಯಾನ ಸಂಸ್ಥೆಯಾಗಿದ್ದು, ಪ್ರತಿನಿತ್ಯ 2,700ಕ್ಕೂ ಹೆಚ್ಚು ವಿಮಾನ ಸಂಚಾರ ನಡೆಸುತ್ತದೆ. ಪೈಲಟ್‌ಗಳ ಕೊರತೆಯಿಂದಾಗಿ ಕಳೆದ 5 ದಿನಗಳಲ್ಲಿ ಸಾವಿರಾರು ವಿಮಾನಗಳ ಸಂಚಾರ ರದ್ದಾಗಿದೆ. ಪೈಲಟ್‌ಗಳ ಕರ್ತವ್ಯ ಅವಧಿಯ ಮೇಲೆ ಕೇಂದ್ರ ಸರ್ಕಾರ ನವೆಂಬರ್‌ನಲ್ಲೇ ಮಿತಿ ಹೇರಿದ್ದರೂ ಡಿಸೆಂಬರ್‌ವರೆಗೆ ಇಂಡಿಗೋ ಅದನ್ನು ಜಾರಿ ಮಾಡಿರಲಿಲ್ಲ. ಈಗ ಡಿಸೆಂಬರ್‌ನಲ್ಲಿ ಏಕಾಏಕಿ ಅದನ್ನು ಜಾರಿ ಮಾಡಿದ ಕಾರಣ ನಿತ್ಯ ಸಾವಿರಾರು ವಿಮಾನ ರದ್ದಾಗಿವೆ. ಇದರ ಹಿಂದೆ ಸಿಇಒ ವೈಫಲ್ಯ ಎದ್ದು ಕಾಣುತ್ತಿದೆ ಎಂಬುದು ಕೇಂದ್ರ ಸರ್ಕಾರದ ಅನಿಸಿಕೆ. ಹೀಗಾಗಿ ಅವರ ವಜಾಗೆ ಕೇಂದ್ರ ಸರ್ಕಾರ ಸೂಚಿಸುವ ಸಾಧ್ಯತೆ ಇದೆ.

ಮೋದಿಗೂ ವಿವರಣೆ:

ಇಂಡಿಗೋ ವಿಮಾನಗಳ ರದ್ದತಿ ಪ್ರಕರಣವು ಪ್ರಧಾನಿ ಕಚೇರಿಯನ್ನೂ ಪ್ರವೇಶಿಸಿದ್ದು, ಉನ್ನತ ಅಧಿಕಾರಿಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿವರಣೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

ಸುಪ್ರೀಂಗೆ ಅರ್ಜಿ:

ಸಾವಿರಾರು ಸಂಖ್ಯೆಯ ವಿಮಾನ ರದ್ದಾಗಿ, ಪ್ರಯಾಣಿಕರು ಪರದಾಡುತ್ತಿರುವ ವಿಚಾರದಲ್ಲಿ ಭಾರತದ ಮುಖ್ಯ ನ್ಯಾಯಾಧೀಶರು (ಸಿಜೆಐ) ಮಧ್ಯಪ್ರವೇಶಿಸಬೇಕು. ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು, ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ (ಡಿಜಿಸಿಎ) ವರದಿ ಸಲ್ಲಿಸುವಂತೆ ನಿರ್ದೇಶಿಸಬೇಕು ಮತ್ತು ತಕ್ಷಣ ಇದರ ವಿಚಾರಣೆ ನಡೆಸಲು ವಿಶೇಷ ಪೀಠವನ್ನು ಸ್ಥಾಪಿಸಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿಯೊಂದು ಸಲ್ಲಿಕೆಯಾಗಿದೆ.