ಇರಾನ್-ಇಸ್ರೇಲ್ ಸಂಘರ್ಷದಿಂದ ಹಾರ್ಮುಜ್ ಜಲಸಂಧಿ ಅಸುರಕ್ಷಿತವಾಗಿರುವ ಹಿನ್ನೆಲೆಯಲ್ಲಿ, ಸೌದಿ ಅರೇಬಿಯಾ ಭಾರತಕ್ಕೆ ನಿರಂತರ ತೈಲ ಪೂರೈಕೆಯ ಭರವಸೆ ನೀಡಿದೆ. ಈ ನಿಟ್ಟಿನಲ್ಲಿ, ಸೌದಿಯು ತನ್ನ ಯಾನ್ಬು ಬಂದರಿನಿಂದ ಕೆಂಪು ಸಮುದ್ರದ ಮೂಲಕ ಪರ್ಯಾಯ ಮಾರ್ಗವನ್ನು ಬಳಸಿ ಭಾರತಕ್ಕೆ ಕಚ್ಚಾ ತೈಲ ಸಾಗಿಸುತ್ತಿದೆ.

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧವು ಜಗತ್ತನ್ನೇ ಆತಂಕಕ್ಕೆ ತಳ್ಳಿರುವ ಬೆನ್ನಲ್ಲೇ ಭಾರತಕ್ಕೆ ಸಮಾಧಾನಕರ ಸುದ್ದಿಯೊಂದು ಸಿಕ್ಕಿದೆ. ಇರಾನ್ ಸಂಘರ್ಷದಿಂದಾಗಿ ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ಕಂಟಕ ಎದುರಾಗಿರುವ ಈ ಸಂದರ್ಭದಲ್ಲಿ, ಸೌದಿ ಅರೇಬಿಯಾ ಭಾರತದ ನೆರವಿಗೆ ಧಾವಿಸಿದೆ. ಭಾರತಕ್ಕೆ ನಿರಂತರ ತೈಲ ಪೂರೈಕೆ ಮಾಡುವ ಭರವಸೆ ನೀಡಿರುವ ಸೌದಿ, ಈಗಾಗಲೇ ತನ್ನ ಸ್ನೇಹದ ಸಂಕೇತವಾಗಿ ತೈಲ ಟ್ಯಾಂಕರ್‌ಗಳನ್ನು ರವಾನಿಸಲು ಆರಂಭಿಸಿದೆ.

Add Asianetnews Kannada as a Preferred SourcegooglePreferred

ಹಾರ್ಮುಜ್ ಅಸುರಕ್ಷಿತ, ಪರ್ಯಾಯ ಮಾರ್ಗ ಅಳವಡಿಸಿಕೊಂಡ ಸೌದಿ

ವಿಶ್ವದ ಒಟ್ಟು ತೈಲ ವ್ಯಾಪಾರದ ಶೇ. 20 ರಷ್ಟು ಭಾಗ ಹಾರ್ಮುಜ್ ಜಲಸಂಧಿಯ ಮೂಲಕವೇ ಸಾಗುತ್ತದೆ. ಆದರೆ, ಇರಾನ್ ಹಡಗುಗಳ ಮೇಲೆ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಈ ಮಾರ್ಗವು ಈಗ ಅತ್ಯಂತ ಅಸುರಕ್ಷಿತವಾಗಿದೆ. ಈ ಅಪಾಯವನ್ನು ಅರಿತ ಸೌದಿ ಅರೇಬಿಯಾ, ಭಾರತಕ್ಕೆ ತೈಲ ತಲುಪಿಸಲು ಪರ್ಯಾಯ ಮಾರ್ಗವನ್ನು ಕಂಡುಕೊಂಡಿದೆ. ಸೌದಿಯ 'ಯಾನ್ಬು' ಬಂದರಿನಿಂದ ಕೆಂಪು ಸಮುದ್ರದ ಮೂಲಕ ಈಗ ಭಾರತಕ್ಕೆ ಕಚ್ಚಾ ತೈಲ ಸಾಗಣೆಯಾಗುತ್ತಿದೆ.

ಭಾರತದತ್ತ ಬರುತ್ತಿವೆ 4 ಬೃಹತ್ ಟ್ಯಾಂಕರ್‌ಗಳು

ಕೆಪ್ಲರ್ ವರದಿಯ ಅಂಕಿಅಂಶಗಳ ಪ್ರಕಾರ, ಸೌದಿ ಅರೇಬಿಯಾದಿಂದ ನಾಲ್ಕು ಬೃಹತ್ ಟ್ಯಾಂಕರ್‌ಗಳು ಈಗಾಗಲೇ ಭಾರತದತ್ತ ಪ್ರಯಾಣ ಬೆಳೆಸಿವೆ. ಈ ಟ್ಯಾಂಕರ್‌ಗಳಲ್ಲಿ ಸರಿಸುಮಾರು 6 ಮಿಲಿಯನ್ ಬ್ಯಾರೆಲ್ ತೈಲವಿದ್ದು, ಈ ತಿಂಗಳ ಅಂತ್ಯದ ವೇಳೆಗೆ ಇನ್ನೂ 9 ರಿಂದ 10 ಮಿಲಿಯನ್ ಬ್ಯಾರೆಲ್ ತೈಲ ಭಾರತಕ್ಕೆ ತಲುಪುವ ನಿರೀಕ್ಷೆಯಿದೆ. ಸುಮಾರು 1,200 ಕಿಲೋಮೀಟರ್ ಉದ್ದದ ಪೈಪ್‌ಲೈನ್ ಮೂಲಕ ತೈಲವನ್ನು ಯಾನ್ಬು ಬಂದರಿಗೆ ತಂದು ಅಲ್ಲಿಂದ ಹಡಗುಗಳ ಮೂಲಕ ಭಾರತಕ್ಕೆ ಕಳುಹಿಸಲಾಗುತ್ತಿದೆ.

ಬಾಬ್ ಎಲ್-ಮಂಡೇಬ್ ಬಳಿ ಹೌತಿ ಬಂಡುಕೋರರಿಂದ ಅಪಾಯ

ಸೌದಿ ಅರೇಬಿಯಾ ಪರ್ಯಾಯ ಮಾರ್ಗವನ್ನು ಆಯ್ದುಕೊಂಡಿದ್ದರೂ, ಸವಾಲುಗಳು ಪೂರ್ಣವಾಗಿ ಮುಗಿದಿಲ್ಲ. ಹೌತಿ ಬಂಡುಕೋರರ ಉಪಟಳವಿರುವ ಬಾಬ್ ಎಲ್-ಮಂಡೇಬ್ ಪ್ರದೇಶದಲ್ಲಿ ಹಡಗುಗಳ ಮೇಲೆ ದಾಳಿ ನಡೆಯುವ ಸಾಧ್ಯತೆಗಳಿವೆ. ಹೀಗಾಗಿ ಕೆಂಪು ಸಮುದ್ರದ ಮಾರ್ಗವು ಸಂಪೂರ್ಣ ಸುರಕ್ಷಿತವಲ್ಲದಿದ್ದರೂ, ಸದ್ಯದ ಯುದ್ಧದ ಪರಿಸ್ಥಿತಿಯಲ್ಲಿ ಭಾರತಕ್ಕೆ ಇದು ದೊಡ್ಡ ಮಟ್ಟದ ಇಂಧನ ಪರಿಹಾರವನ್ನು ನೀಡಲಿದೆ. ಪೈಪ್‌ಲೈನ್ ಸಾಮರ್ಥ್ಯದ ಮಿತಿಯಿದ್ದರೂ, ತೈಲ ಪೂರೈಕೆ ಸ್ಥಗಿತಗೊಳ್ಳದಂತೆ ಸೌದಿ ಎಚ್ಚರಿಕೆ ವಹಿಸಿದೆ.

ಇರಾನ್ ಕ್ಷಿಪಣಿ ನೆಲೆಗಳ ಮೇಲೆ ಅಮೆರಿಕದ ಬಾಂಬ್ ದಾಳಿ

ಮತ್ತೊಂದೆಡೆ, ಜಾಗತಿಕ ತೈಲ ಮಾರುಕಟ್ಟೆಯ ಮೇಲೆ ಇರಾನ್ ಹೊಂದಿರುವ ಹಿಡಿತವ ತಪ್ಪಿಸಲು ಅಮೆರಿಕ ತೀವ್ರ ದಾಳಿ ನಡೆಸುತ್ತಿದೆ. ಮಾರ್ಚ್ 17 ರಂದು ಹಾರ್ಮುಜ್ ಜಲಸಂಧಿಯ ಬಳಿ ಇದ್ದ ಇರಾನ್‌ನ ಹಡಗು ವಿರೋಧಿ ಕ್ಷಿಪಣಿ ನೆಲೆಗಳ ಮೇಲೆ ಅಮೆರಿಕ ಬಾಂಬ್ ದಾಳಿ ನಡೆಸಿದೆ. ಈ ಮೂಲಕ ಜಲಸಂಧಿಯ ಮೇಲಿನ ಇರಾನ್ ನಿಯಂತ್ರಣವನ್ನು ಕಡಿಮೆ ಮಾಡಿ, ಅಂತರಾಷ್ಟ್ರೀಯ ಹಡಗು ಸಂಚಾರಕ್ಕೆ ಹಾದಿ ಸುಗಮಗೊಳಿಸಲು ಅಮೆರಿಕ ಮುಂದಾಗಿದೆ.