Radhika Merchant: ವೇದಿಕೆಯ ಮೇಲೆ ಮುಕೇಶ್ ಅಂಬಾನಿ ಇದ್ರು, ನೀತಾ ಅಂಬಾನಿ ಇದ್ರು, ಅಕ್ಕ-ಭಾವ, ಅಣ್ಣ-ಅತ್ತಿಗೆ ಎಲ್ಲರೂ ಇದ್ರು... ಆದ್ರೆ ಒಬ್ಬರು ಮಾತ್ರ ಇರಲಿಲ್ಲ! ಹೌದು, ಅಂಬಾನಿ ಕುಟುಂಬದ ಕಿರಿಯ ಸೊಸೆ ರಾಧಿಕಾ ಮರ್ಚೆಂಟ್ ಅವತ್ತು ಎಲ್ಲಿ ಹೋದ್ರು? ಅನಂತ್ ಅಂಬಾನಿ ಅಷ್ಟು ದೊಡ್ಡ ಭಾಷಣ ಮಾಡಿ ಅಳ್ತಿದ್ರೂ ರಾಧಿಕಾ ಅವರ ಜೊತೆಗೇಕೆ ಇರಲಿಲ್ಲ? ಇಲ್ಲಿದೆ ನೋಡಿ ಡಿಟೇಲ್ಸ್.

ಭಾರತೀಯ ಷೇರು ಮಾರುಕಟ್ಟೆಯ ಇತಿಹಾಸದಲ್ಲೇ ಮಹತ್ವದ ಮೈಲಿಗಲ್ಲಾಗಿ ದಾಖಲಾದ ‘ಜಿಯೋ ಪ್ಲಾಟ್‌ಫಾರ್ಮ್ಸ್’ ಲಿಸ್ಟಿಂಗ್ ಸಮಾರಂಭ ಮುಂಬೈನ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ (NSE) ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಮುಕೇಶ್ ಅಂಬಾನಿ ಅವರ ಇಡೀ ಕುಟುಂಬವೇ ವೇದಿಕೆಯ ಮೇಲೆ ಹಾಜರಿತ್ತು. ಆದರೆ, ಇಡೀ ಕುಟುಂಬವೇ ಒಟ್ಟಾಗಿ ನಿಂತಿದ್ದ ಆ ಸಂಭ್ರಮದ ವೇದಿಕೆಯಲ್ಲಿ, ಅಂಬಾನಿ ಕುಟುಂಬದ ಪ್ರಮುಖ ಸದಸ್ಯೆಯೊಬ್ಬರ ಅನಿರೀಕ್ಷಿತ ಗೈರುಹಾಜರಿ ಇದೀಗ ಎಲ್ಲರಲ್ಲೂ ತೀವ್ರ ಕುತೂಹಲ ಮತ್ತು ಅನುಮಾನಗಳನ್ನು ಹುಟ್ಟುಹಾಕಿದೆ.

ವೇದಿಕೆಯ ಮೇಲೆ ರಿಲಯನ್ಸ್ ಸಂಸ್ಥಾಪಕ ದಿವಂಗತ ಧೀರುಬಾಯಿ ಅಂಬಾನಿ ಅವರ ಪತ್ನಿ ಕೋಕಿಲಾಬೆನ್, ಮುಕೇಶ್ ಅಂಬಾನಿ, ನೀತಾ ಅಂಬಾನಿ, ಮಕ್ಕಳಾದ ಆಕಾಶ್, ಇಶಾ, ಅನಂತ್ ಅಂಬಾನಿ ಹಾಗೂ ಹಿರಿಯ ಸೊಸೆ ಶ್ಲೋಕಾ ಮೆಹ್ತಾ, ಅಳಿಯ ಆನಂದ್ ಪಿರಮಾಲ್ ಮತ್ತು ಮೊಮ್ಮಕ್ಕಳು ಕೂಡ ಹಾಜರಿದ್ದು ಸಾಂಪ್ರದಾಯಿಕ ಗಂಟೆ ಬಾರಿಸಿದರು. ಆದರೆ, ಕಿರಿಯ ಸೊಸೆ, ಅಂದರೆ ಅನಂತ್ ಅಂಬಾನಿ ಅವರ ಪತ್ನಿ ರಾಧಿಕಾ ಮರ್ಚೆಂಟ್ ಮಾತ್ರ ಎಲ್ಲಿಯೂ ಕಾಣಿಸಲಿಲ್ಲ!

ಅಂಬಾನಿ ಕುಟುಂಬದ ಯಾವುದೇ ಸಣ್ಣ ಅಥವಾ ದೊಡ್ಡ ಸಮಾರಂಭವಿರಲಿ, ಕುಟುಂಬದ ಫೋಟೋಗಳಲ್ಲಿ ಸದಾ ನಗುಮುಖದಿಂದ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ ರಾಧಿಕಾ ಅವರ ಅನುಪಸ್ಥಿತಿ ಎಲ್ಲರ ಹುಬ್ಬೇರಿಸಿದೆ. ಅದರಲ್ಲೂ ವಿಶೇಷವಾಗಿ, ಪತಿ ಅನಂತ್ ಅಂಬಾನಿ ಅವರು ವೇದಿಕೆಯ ಮೇಲೆ ನಿಂತು "ಮೂರು ದೇಹ, ಒಂದೇ ಆತ್ಮ" ಎಂದು ಇಡೀ ಸಭಾಂಗಣವೇ ಭಾವುಕವಾಗುವಂತೆ ಐತಿಹಾಸಿಕ ಭಾಷಣ ಮಾಡುತ್ತಿದ್ದ ಕ್ಷಣದಲ್ಲಿ, ಅವರ ಪಕ್ಕದಲ್ಲಿ ಪತ್ನಿ ರಾಧಿಕಾ ಇರದಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ರಾಧಿಕಾ ಮರ್ಚೆಂಟ್ ಅವರ ಈ ದಿಢೀರ್ ಗೈರುಹಾಜರಿಗೆ ಅಂಬಾನಿ ಕುಟುಂಬದಿಂದಾಗಲಿ ಅಥವಾ ಅಧಿಕೃತ ಮೂಲಗಳಿಂದಾಗಲಿ ಯಾವುದೇ ಸ್ಪಷ್ಟನೆ ಹೊರಬಿದ್ದಿಲ್ಲ. ಇದು ನೆಟ್ಟಿಗರ ಅನುಮಾನವನ್ನು ಮತ್ತಷ್ಟು ಹೆಚ್ಚಿಸಿದೆ. ಪತಿಯ ಇಡೀ ವೃತ್ತಿಜೀವನದಲ್ಲೇ ಅತ್ಯಂತ ಮಹತ್ವದ ಹಾಗೂ ಐತಿಹಾಸಿಕ ಎನಿಸಿದ ಇಂತಹ ದಿನದಂದು ರಾಧಿಕಾ ಏಕೆ ಬರಲಿಲ್ಲ? ಅವರಿಗೆ ಅನಾರೋಗ್ಯ ಕಾಡುತ್ತಿದೆಯೇ? ಅಥವಾ ಬೇರೆ ಯಾವುದಾದರೂ ಅನಿವಾರ್ಯ ಕಾರಣಗಳಿಂದ ಅವರು ದೂರ ಉಳಿಯಬೇಕಾಯಿತೇ? ಎಂಬ ಪ್ರಶ್ನೆಗಳು ಎಲ್ಲರಲ್ಲೂ ಕಾಡುತ್ತಿವೆ. ಸದಾ ಮಾಧ್ಯಮಗಳ ಗಮನ ಸೆಳೆಯುವ ಅಂಬಾನಿ ಕುಟುಂಬದ ಈ ಸಂಭ್ರಮದ ನಡುವೆಯೂ ರಾಧಿಕಾ ಅವರ ಅನುಪಸ್ಥಿತಿ ಒಂದು ಬಗೆಹರಿಯದ ನಿಗೂಢವಾಗಿಯೇ ಉಳಿದಿದೆ.

ನೆಟ್ಟಿಗರಲ್ಲಿ ನೂರಾರು ಅನುಮಾನ

ಅಂಬಾನಿ ಕುಟುಂಬದ ಯಾವುದೇ ಕಾರ್ಯಕ್ರಮವಿರಲಿ, ಅಲ್ಲಿ ಕ್ಯಾಮೆರಾ ಕಣ್ಣುಗಳು ಮೊದಲು ಹುಡುಕುವುದು ಕಿರಿಯ ಸೊಸೆ ರಾಧಿಕಾ ಮರ್ಚೆಂಟ್ ಅವರನ್ನು. ಆದರೆ ಮುಂಬೈನ ಷೇರು ವಿನಿಮಯ ಕೇಂದ್ರದಲ್ಲಿ (NSE) ನಡೆದ ಐತಿಹಾಸಿಕ ಜಿಯೋ ಲಿಸ್ಟಿಂಗ್ ಈವೆಂಟ್‌ನಲ್ಲಿ ಇಡೀ ಇಂಟರ್‌ನೆಟ್‌ ಲೋಕಕ್ಕೆ ಕುತೂಹಲ ಮೂಡಿಸಿದ್ದು ರಾಧಿಕಾ ಮಿಸ್ಸಿಂಗ್ ದೃಶ್ಯ.

ಅಜ್ಜಿಯಿಂದ ಹಿಡಿದು ಮೊಮ್ಮಕ್ಕಳವರೆಗೆ ಇಡೀ ಅಂಬಾನಿ ಖಾಂದಾನ್ ವೇದಿಕೆಯ ಮೇಲಿತ್ತು. ಆದರೆ, ಆ ಪರ್ಫೆಕ್ಟ್ ಫ್ಯಾಮಿಲಿ ಫೋಟೋದಲ್ಲಿ ರಾಧಿಕಾ ಮರ್ಚೆಂಟ್ ಮಾತ್ರ ಇರಲಿಲ್ಲ!

ಇಷ್ಟು ದಿನ "ಅಂಬಾನಿ ಕುಟುಂಬದ ಮುದ್ದಿನ ಸೊಸೆ" ಎಂದೇ ಗುರುತಿಸಿಕೊಂಡಿದ್ದ ರಾಧಿಕಾ, ಪತಿ ಅನಂತ್ ಅಂಬಾನಿಯ ಇಡೀ ಬದುಕಿನ ಅತಿದೊಡ್ಡ ದಿನದಂದೇ ನಾಪತ್ತೆಯಾಗಿದ್ದು ಏಕೆ? ಎಂಬ ಪ್ರಶ್ನೆ ಈಗ ಸೋಶಿಯಲ್ ಮೀಡಿಯಾದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಅದರಲ್ಲೂ ಅನಂತ್ ಅಂಬಾನಿ "ನಾವೆಲ್ಲರೂ ಒಂದೇ ಆತ್ಮ" ಎಂದು ಭಾವುಕರಾಗಿ ಕಣ್ಣೀರು ಹಾಕುವಾಗ, ಅವರ ಕಣ್ಣೀರು ಒರೆಸಲು ಪತ್ನಿ ಪಕ್ಕದಲ್ಲಿಲ್ಲದಿರುವುದು ನೆಟ್ಟಿಗರಲ್ಲಿ ನೂರಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.