'ಹೊರಗಡೆ ಪೇಪರ್ ಲೀಕ್, ಸಂಸತ್‌ನಲ್ಲಿ ವಾಟರ್ ಲೀಕ್..' ಭಾರಿ ಮಳೆಗೆ ನೂತನ ಸಂಸತ್ ಭವನ ಸೋರಿಕೆಗೆ ವಿಪಕ್ಷ ಟೀಕೆ!
ದೆಹಲಿಯಲ್ಲಿ ಭಾರೀ ಮಳೆ ಅನಾಹುತವನ್ನೇ ಸೃಷ್ಟಿಸಿದೆ. ಮಳೆಯಿಂದಾಗಿ ನೂತನ ಸಂಸತ್ ಭವನ ಕೂಡ ಸೋರಲು ಆರಂಭಿಸಿತ್ತು. ಈ ಬಗ್ಗೆ ವಿಪಕ್ಷಗಳು ಕೇಂದ್ರ ಸರ್ಕಾರವನ್ನು ಟೀಕಿಸಲು ಆರಂಭಿಸಿವೆ.
ನವದೆಹಲಿ (ಆ.1): ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಮುಜುಗರ ಎನಿಸುವಂತೆ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷಗಳು ಹೊಸ ಸಂಸತ್ ಭವನದಲ್ಲಿ ನೀರು ಸೋರಿಕೆಯಾಗುತ್ತಿರುವ ವಿಡಿಯೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿವೆ. ದೆಹಲಿಯಲ್ಲಿ ಜುಲೈ 31 ರಂದು ಒಂದೇ ದಿನ 108 ಮಿಲಿ ಮೀಟರ್ ಮಳೆಯಾಗಿದೆ. ಕಳೆದ 14 ವರ್ಷದಲ್ಲಿ ಜುಲೈ ತಿಂಗಳ ಒಂದೇ ದಿನದಲ್ಲಿ ಸುರಿದ ದಾಖಲೆ ಮಳೆ ಇದಾಗಿದೆ. ಲೋಕಸಬೆಯ ಲಾಬಿಯಲ್ಲಿ ನೀರು ಸೋರಿಕೆ ಆಗುತ್ತಿರುವ ಬಗ್ಗೆ ಕಾಂಗ್ರೆಸ್ ಸಂಸದ ಮಾಣಿಕ್ಕಂ ಟ್ಯಾಗೋರ್ ಅವರು ಈ ವಿಷಯದ ಕುರಿತು ಮುಂದೂಡಿಕೆ ನಿರ್ಣಯವನ್ನು ಮಂಡಿಸಿದರೆ, ಅಖಿಲೇಶ್ ಯಾದವ್ ಹೊಸ ಸಂಸತ್ತನ್ನು ನಿರ್ಮಿಸಲು ಕೋಟ್ಯಂತರ ಖರ್ಚು ಮಾಡಿದೆ ಎಂದು ಬಿಜೆಪಿಯನ್ನು ಲೇವಡಿ ಮಾಡಿದರು ಮತ್ತು ಕಲಾಪವನ್ನು ಹಳೆಯ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಒತ್ತಾಯ ಮಾಡಿದ್ದಾರೆ.
ಎಕ್ಸ್‌ನಲ್ಲಿ ಈ ಕುರಿತು ಪೋಸ್ಟ್ ಮಾಡಿದ ಮಾಣಿಕ್ಕಂ ಟ್ಯಾಗೋರ್, "ಹೊರಗೆ ಪೇಪರ್ ಲೀಕ್, ಸಂಸತ್‌ನ ಒಳಗೆ ವಾಟರ್ ಲೀಕ್. ಸಂಸತ್ ಭವನದಲ್ಲಿ ಇತ್ತೀಚೆಗೆ ಆಗುತ್ತಿರವ ವಾಟರ್ ಲೀಕೇಜ್, ಹೊಸ ಬಿಲ್ಡಿಂಗ್ ಇನ್ನೂ ಹೊಸ ವಾತಾವರಣಕ್ಕೆ ಹೊಂದಿಕೊಳ್ಳಿಲ್ಲ ಎನ್ನುವುದನ್ನು ತರಿಸಿದೆ. ಸಂಸತ್ ಭವನ ಪೂರ್ಣಗೊಂಡ ಒಂದೇ ವರ್ಷದಲ್ಲಿ ಈ ರೀತಿಯ ಸಮಸ್ಯೆ ಆಗಿದೆ' ಎಂದು ಬರೆದಿದ್ದಾರೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಮತ್ತು ಕನೌಜ್ ಸಂಸದ ಅಖಿಲೇಶ್ ಯಾದವ್ ಅವರು ಮುಂಗಾರು ಅಧಿವೇಶನದ ಉಳಿದ ಭಾಗವನ್ನು ಹಳೆಯ ಸಂಸತ್ತಿನ ಕಟ್ಟಡಕ್ಕೆ ಸ್ಥಳಾಂತರಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು. ''ಹಳೆ ಸಂಸದರು ಕೂಡ ಬಂದು ಭೇಟಿಯಾಗುತ್ತಿದ್ದ ಹಳೆ ಸಂಸತ್ ಇದಕ್ಕಿಂತ ಚೆನ್ನಾಗಿತ್ತು, ಕೋಟ್ಯಂತರ ರೂಪಾಯಿವೆಚ್ಚದಲ್ಲಿ ನಿರ್ಮಿಸಿರುವ ನೂತನ ಕಟ್ಟಡದಲ್ಲಿ ‘ನೀರು ತೊಟ್ಟಿಕ್ಕುವ ಕಾರ್ಯಕ್ರಮ’ ನಡೆಯುವವರೆಗೂ ಹಳೇ ಸಂಸತ್ತಿಗೆ ಏಕೆ ಹೋಗಬಾರದು " ಎಂದು ಯಾದವ್ ಟ್ವೀಟ್ ಮಾಡಿದ್ದಾರೆ.
Watch: '.. ನನಗೆ ಬದುಕೋಕೆ ಇಷ್ಟವಿಲ್ಲ..' ಸಂಸತ್ತಿನಲ್ಲಿ ಹೀಗ್ಯಾಕೆ ಹೇಳಿದ್ರು ಮಲ್ಲಿಕಾರ್ಜುನ್ ಖರ್ಗೆ!
‘ಬಿಜೆಪಿ ಸರ್ಕಾರದಲ್ಲಿ ನಿರ್ಮಿಸಿದ ಪ್ರತಿ ಹೊಸ ಛಾವಣಿಯಿಂದಲೂ ನೀರು ಸೋರಿಕೆಯಾಗುತ್ತಿರುವುದು ಅವರ ಸುಸಜ್ಜಿತ ವಿನ್ಯಾಸದ ಭಾಗವೇ ಎಂದು ಸಾರ್ವಜನಿಕರು ಕೇಳುತ್ತಿದ್ದಾರೆ,’’ ಎಂದು ವ್ಯಂಗ್ಯವಾಡಿದರು.