ಜುಲೈ 26ರವರೆಗೂ ಕೇರಳಕ್ಕೆ ಕೇಂದ್ರದಿಂದ ಭಾರೀ ಮಳೆಯ ಅಲರ್ಟ್‌ ಹೋಗಿತ್ತು, ಅಲ್ಲಿನ ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ: ಅಮಿತ್‌ ಶಾ

ಕೇರಳದ ವಯನಾಡ್‌ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತಕ್ಕೆ ಸಂಬಂಧಪಟ್ಟಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿಪಕ್ಷಗಳ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಕೇರಳಕ್ಕೆ ಕೇಂದ್ರದಿಂದ ಎಲ್ಲಾ ರೀತಿಯ ಅಲರ್ಟ್‌ಗಳನ್ನು ಕಳಿಸಲಾಗಿತ್ತು ಎಂದು ಅಮಿತ್‌ ಶಾ ಹೇಳಿದ್ದಾರೆ.
 

Kerala Wayanad Landslide tragedy Amit Shah Statement In Parliament on early warning san

ನವದೆಹಲಿ (ಜು.31): ಕೇರಳದ ವಯನಾಡ್‌ನಲ್ಲಿ ಸಂಭವಿಸಿದ ಭೂಕುಸಿತಕ್ಕೆ ಸಂಬಂಧಪಟ್ಟಂತೆ ವಿಪಕ್ಷಗಳು ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದವು. ಕೇಂದ್ರ ಸರ್ಕಾರ ಮುನ್ನೆಚ್ಚರಿಕೆ ಅಲರ್ಟ್‌ಗಳನ್ನು ಸರಿಯಾದ ಸಮಯದಲ್ಲಿ ನೀಡಿದ್ದರೆ ಈ ದುರಂತ ಸಂಭವಿಸುತ್ತಿರಲಿಲ್ಲ ಎಂದು ಆರೋಪ ಮಾಡಿದ್ದವು. ವಿಪಕ್ಷಗಳ ಆರೋಪಕ್ಕೆ ದಾಖಲೆ ಸಮೇತ ಉತ್ತರ ನೀಡಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಕೇರಳರಾಜ್ಯಕ್ಕೆ ಜುಲೈ 23 ರಿಂದ 26ರವರೆಗೂ ಕೇಂದ್ರ ಸರ್ಕಾರದಿಂದ ಭಾರೀ ಮಳೆಯ ಅಲರ್ಟ್‌ಗಳನ್ನು ನೀಡಿದ್ದೆವು. ಅಲ್ಲದೆ, ಭೂಕುಸಿತವಾಗುವ ಸಾಧ್ಯತೆಯೂ ಇದೆ ಎಂದು ಹೇಳಿದ್ದೆವು. ಹಾಗಿದ್ದರೂ ಅಲ್ಲಿನ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳದೇ ಇರುವುದರಿಂದ ಈ ಹಾನಿಯಾಗಿದೆ. ದುರಂತಗಳು ಸಂಭವಿಸುವ ಮುನ್ನವೇ ಈ ಕುರಿತಾಗಿ ಎಚ್ಚರಿಕೆಗಳನ್ನು ನೀಡಲು ಭಾರತ ಸರ್ಕಾರ ಈಗಾಗಲೇ 2000 ಕೋಟಿ ರೂಪಾಯಿ ಹಣವನ್ನು ಖರ್ಚು ಮಾಡಿದೆ. ಆದರೆ, ಈ ಅಲರ್ಟ್‌ಗಳ ಮೇಲೆ ಕಾರ್ಯ ನಿರ್ವಹಿಸುವುದು ಅಲ್ಲಿನ ರಾಜ್ಯ ಸರ್ಕಾರದ ಮುತುವರ್ಜಿ ಎಂದು ಹೇಳಿದ್ದಾರೆ.

ಸಂಸತ್‌ನಲ್ಲಿ ಮಾತನಾಡಿದ ಅಮಿತ್‌ ಶಾ, 'ಕೇರಳ ಭೂಕುಸಿತದ ಬಗ್ಗೆ ಭಾರತ ಸರ್ಕಾರದ ಹೇಳಿಕೆಯನ್ನು ಸಚಿವ ನಿತ್ಯಾನಂದ ರೈ ಅವರೇ ತಿಳಿಸಲಿದ್ದಾರೆ. ಆದರೆ, ನಾನು ಇಲ್ಲಿ ಕೆಲವೊಂದು ವಿಚಾರಗಳನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ಈ ಘಟನೆಯಲ್ಲಿ ಎಷ್ಟು ಜನ ಮೃತಪಟ್ಟಿದ್ದಾರೋ, ಗಾಯಾಳುವಾಗಿದ್ದಾರೂ ಈ ಪರಿವಾರಗಳಿಗೆ ಭಾರತ ಸರ್ಕಾರ ಸಂತಾಪ ಸೂಚಿಸುತ್ತದೆ ಎಂದು ಹೇಳಿದ್ದಾರೆ.

ಭೂಕುಸಿತದ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದು ನಾನು ಬಯಸಿದ್ದೆ. ಈ ಕುರಿತಾದ ಟೀಕೆಗಳು ಆಗಬಾರದು ಎನ್ನುವುದು ನಮ್ಮ ಆಶಯವಾಗಿತ್ತು. ಆದರೆ, ನಮ್ಮ ವಿರುದ್ಧವೇ ಕೆಲವು ಟೀಕೆಗಳು ಬಂದಿವೆ. ಈ ವಿಚಾರದಲ್ಲಿ ದೇಶದ ಜನರಿಗೆ ತಪ್ಪು ಸಂದೇಶ ಹೋಗಬಾರದು ಎನ್ನುವ ನಿಟ್ಟಿನಲ್ಲಿ ನಾನು ಕೆಲವು ಸ್ಪಷ್ಟನೆಗಳನ್ನು ನೀಡಲು ಬಯಸುತ್ತೇನೆ. ದೋಷಾರೋಪಣೆಯೋ ಅಥವಾ ಅವರಿಗೆ ಮಾಹಿತಿ ಇಲ್ಲವೋ ಗೊತ್ತಿಲ್ಲ. ವಿಪಕ್ಷಗಳು ಎಲ್ಲಾ ಸದಸ್ಯರು 'ಮುನ್ನೆಚ್ಚರಿಕೆ..' ಅನ್ನೋ ಶಬ್ದವನ್ನು ಬಳಸುತ್ತಲೇ ಹೋಗಿದ್ದಾರೆ.  ಇಂಗ್ಲೀಷ್‌ನಲ್ಲಿ ಎಷ್ಟು ಗಂಭೀರ ಪ್ರಮಾಣದ ಶಬ್ದಗಳಿವೆಯೋ ಅವೆಲ್ಲವನ್ನೂ ವಿಪಕ್ಷಗಳು ಬಳಸಿವೆ ಎಂದಿದ್ದಾರೆ.

ನಾನು ಸದನದ ಎದುರು ಹೇಳುವುದು ಏನೆಂದರೆ, ಜುಲೈ 23ಕ್ಕೆ ಅಂದರೆ ಘಟನೆ ನಡೆಯುವ ಏಳು ದಿನ ಮುನ್ನ ಕೇರಳ ಸರ್ಕಾರಕ್ಕೆ ಕೇಂದ್ರದಿಂದ ಮುನ್ನೆಚ್ಚರಿಕೆ ನೀಡಲಾಗಿತ್ತು. ಅದೇ ರೀತಿಯ ಅಲರ್ಟ್‌ಗಳು ಜುಲೈ 24ಕ್ಕೆ ಹೋಗಿತ್ತು.  ಆ ಬಳಿಕ ಜುಲೈ 25 ರಂದೂ ಅಲರ್ಟ್‌ ಕಳಿಸಲಾಗಿತ್ತು. ಜುಲೈ 26 ರಂದು ಕಳಿಸಿದ ಅಲರ್ಟ್‌ನಲ್ಲಿ ಕೇರಳದಲ್ಲಿ 20 ಸೆಂಟೀಮೀಟರ್‌ಗಿಂತ ಹೆಚ್ಚಿನ ಪ್ರಮಾಣ ಮಳೆಯಾಗುತ್ತದೆ ಎನ್ನಲಾಗಿತ್ತು. ಭೂಕುಸಿತ ಆಗಬಹುದು ಎನ್ನುವ ಅಲರ್ಟ್‌ ಕೂಡ ನೀಡಲಾಗಿತ್ತು. ಕೆಸರುಮಣ್ಣು ಜನವಸತಿ ಪ್ರದೇಶದ ಬಳಿ ನುಗ್ಗಬಹುದು. ಇದರಿಂದ ಜನ ಸಾವುಗಳೂ ಆಗಬಹುದು ಎಂದು ಎಚ್ಚರಿಸಲಾಗಿತ್ತು. ಇದನ್ನು ನಾನು ಹೇಳಬೇಕು ಎಂದು ಬಯಸಿರಲಿಲ್ಲ. ಆದರೆ, ವಿಪಕ್ಷಗಳು ಭಾರತ ಸರ್ಕಾರ ಮುನ್ನೆಚ್ಚರಿಕಾ ವ್ಯವಸ್ಥೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರಿಂದ ಈ ವಿವರ ನೀಡಿದ್ದೇನೆ. 'ನಮ್ಮ ಮಾತು ಕೇಳಿ..ನಮ್ಮ ಮಾತು ಕೇಳಿ..' ಎಂದು ವಿಪಕ್ಷಗಳು ಕೂಗುವುದು ಬೇಡ. ನಾವು ಅವರಿಗೆ ಹೇಳೋದು ಏನೆಂದರೆ, ಕಳಿಸಿರುವ ಅಲರ್ಟ್‌ಅನ್ನು ಕನಿಷ್ಠ ಪಕ್ಷ ಓದಿ. ವಾರ್ನಿಂಗ್‌ಅನ್ನು ಓದಿ ಎಂದು ಹೇಳುತ್ತೇನೆ.

ಭಾರತದಲ್ಲಿನ ಕೆಲವು ರಾಜ್ಯಗಳು ಇಂಥ ಎಚ್ಚರಿಕೆಗಳನ್ನು ಬಳಸಿಕೊಂಡು ಹಾನಿಯನ್ನು ತಪ್ಪಿಸಿವೆ. ಒಡಿಶಾದಲ್ಲಿ ನವೀನ್‌ ಪಟ್ನಾಯಕ್‌ ಸಿಎಂ ಆಗಿದ್ದಾಗ ಏಳು ದಿನ ಮೊದಲೇ ಸೈಕ್ಲೋನ್‌ನ ಎಚ್ಚರಿಕೆ ಕಳಿಸಿದ್ದೆವು. ಇದರ ಮೇಲೆ ಸರ್ಕಾರ ಕ್ರಮ ವಹಿಸಿದ್ದರಿಂದ ಕೇವಲ ಒಬ್ಬ ವ್ಯಕ್ತಿ ಮಾತ್ರವೇ ಆತನ ತಪ್ಪಿನಿಂದ ಸಾವು ಕಂಡಿದ್ದ. ಗುಜರಾತ್‌ ಸರ್ಕಾರಕ್ಕೆ ಮೂರು ದಿನದ ಮುಂಚೆ ನೀಡಿದ ಅಲರ್ಟ್‌ನಿಂದ ಒಂದೇ ಒಂದು ಜಾನುವಾರಿಗೂ ಕೂಡ ಹಾನಿಯಾಗಲಿಲ್ಲ ಎಂದು ಹೇಳಿದ್ದರು.

Wayanad Landslide: ಸಾವಿನ ಸಂಖ್ಯೆ 115ಕ್ಕೆ ಏರಿಕೆ, ಶವಗಳಿಂದ ಆಸ್ಪತ್ರೆಗಳೇ ಭರ್ತಿ!

2014ರ ಬಳಿಕ ಮುನ್ನೆಚ್ಚರಿಕಾ ವ್ಯವಸ್ಥೆಗಾಗಿ 2000 ಕೋಟಿ ಖರ್ಚು ಮಾಡಿದ್ದೇವೆ. ಅನಾಹುತಗಳಾಗುವ ಸೂಚನೆ ಇದ್ದಾಗ ಏಳು ದಿನ ಮೊದಲೇ ಸೂಚನೆಗಳು ಹೋಗುತ್ತದೆ. ಇದು ಹವಮಾನ ಇಲಾಖೆಯ ವೆಬ್‌ಸೈಟ್‌ನಲ್ಲೂ ಲಭ್ಯ ಇರುತ್ತದೆ. ಆದರೆ, ಕೆಲವರಿಗೆ ಇಲ್ಲಿನದಕ್ಕಿಂತ ವಿದೇಶಿ ವೆಬ್‌ಸೈಟ್‌ಗಳನ್ನು ನೋಡುವ ಅಭ್ಯಾಸವೇ ಹೆಚ್ಚಿದೆ. ವಿದೇಶದಲ್ಲಿ ಈ ಅಲರ್ಟ್‌ಗಳು ಸಿಗೋದಿಲ್ಲ. ಮಳೆಗೆ, ಹೀಟ್‌ವೇವ್‌, ಚಂಡಮಾರುತ, ವಿದ್ಯುತ್‌ ಕುರಿತಾಗಿ ಮುನ್ನೆಚ್ಚರಿಕಾ ವ್ಯವಸ್ಥೆಗಳು ನಮ್ಮಲ್ಲಿವೆ ಎಂದು ಅಮಿತ್‌ ಶಾ ಹೇಳಿದ್ದಾರೆ.

Wayanad Landslide: ಮುಂಡಕೈಯಲ್ಲಿ ಉಳಿದಿರೋದು 10 ಮನೆಗಳು ಮಾತ್ರ!

Latest Videos
Follow Us:
Download App:
  • android
  • ios