ಗುಜರಾತ್‌ನ ಅಹಮದಾಬಾದ್‌ನಲ್ಲಿ ಹಾಡಹಗಲೇ  ಮಹಿಳೆಯೊಬ್ಬಳು ಖಾರದ ಪುಡಿ ಎರಚಿ ದರೋಡೆಗೆ ಯತ್ನಿಸಿ ಸಿಕ್ಕಿಬಿದ್ದಿದ್ದು, ಜ್ಯುವೆಲ್ಲರಿ ಶಾಪ್ ಮಾಲೀಕ ಆಕೆಗೆ ಸರಿಯಾಗಿ ಥಳಿಸಿದ್ದಾನೆ. ಈ ಘಟನೆಯ ವೀಡಿಯೋ ಈಗ ಭಾರಿ ವೈರಲ್ ಆಗಿದೆ.

ಖಾರದ ಪುಡಿ ಹಿಡಿದು ದರೋಡೆಗೆ ಬಂದ ಸುಕುಮಾರಿ

ಜ್ಯುವೆಲ್ಲರಿ ಶಾಪ್‌ನಲ್ಲಿ ಅಮಾಯಕರಂತೆ ಬಂದು ಮಹಿಳೆಯರು ಸಿಬ್ಬಂದಿ ಗಮನಕ್ಕೆ ಬಾರದಂತೆ ಮೆಲ್ಲನೆ ಚಿನ್ನಾಭರಣವನ್ನು ಎತ್ತಿಕೊಂಡು ಹೋಗುವಂತಹ ಹಲವು ಘಟನೆಗಳು ನಡೆದಿದೆ. ಇಂತಹ ಘಟನೆಗಳು ನಂತರ ಸಿಸಿಟಿವಿಯಲ್ಲಿ ಸೆರೆಯಾಗಿ ವೈರಲ್ ಕೂಡ ಆಗಿವೆ. ಆದರೆ ಇಲ್ಲೊಂದು ಕಡೆ ಮಹಿಳೆಯೊಬ್ಬಳು ಈ ರೀತಿ ಕಳ್ಳಾಟವಾಡದೇ ನೇರವಾಗಿ ಖಾರದ ಪುಡಿ ಹಿಡಿದು ಬಂದು ದರೋಡೆಗೆ ಇಳಿದಿದ್ದು, ಮಾಲೀಕನ ಕೈಗೆ ಸಿಕ್ಕಿ ಸರಿಯಾಗಿ ಇಕ್ಕಿಸಿಕೊಂಡಿದ್ದಾಳೆ. ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ಈ ಘಟನೆ ನಡೆದಿದ್ದು, ಖಾರದ ಪುಡಿ ಎರಚಿ ದರೋಡೆ ಮಾಡಲು ಬಂದ ಮಹಿಳೆಗೆ ಜ್ಯುವೆಲ್ಲರಿ ಶಾಪ್ ಮಾಲೀಕ ಸರಿಯಾಗಿ ಬಾರಿಸಿದ್ದಾನೆ. ಕೈಗೆ ಸಿಕ್ಕ ಆಕೆಗೆ ಸುಮಾರು 20 ಬಾರಿ ಆತ ಥಳಿಸುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜ್ಯುವೆಲ್ಲರಿ ಶಾಪ್ ಮಾಲೀಕನ ಕೈಗೆ ಸಿಕ್ಕಿ ಬೆನ್ನುಪುಡಿಪುಡಿ

ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ಮಹಿಳೆಯೊಬ್ಬಳು ದರೋಡೆ ಮಾಡುವ ಉದ್ದೇಶದಿಂದ ಜ್ಯುವೆಲ್ಲರಿ ಶಾಪೊಂದಕ್ಕೆ ಬಂದಿದ್ದಾಳೆ. ಆದರೆ ಮಾಲೀಕನ ಕೈಗೆ ಸಿಕ್ಕಿ ಹೊಡೆತ ತಿನ್ನುವುದರೊಂದಿಗೆ ಈ ಪ್ರಕರಣ ಅಂತ್ಯ ಕಂಡಿದೆ. ವೈರಲ್ ಆದ ವೀಡಿಯೋದಲ್ಲಿ ಮಹಿಳೆಯೊಬ್ಬಳು ಜ್ಯುವೆಲ್ಲರಿ ಶಾಪ್‌ನ ಗಾಜಿನ ಡೋರ್ ತೆಗೆದು ಒಮ್ಮೆಲೆ ಒಳಗೆ ಬಂದವಳೇ ಅಲ್ಲಿ ಕಂಪ್ಯೂಟರ್ ಸ್ಕ್ರೀನ್ ಮೇಲೆ ಏನನ್ನೋ ನೋಡುತ್ತಾ ಕುಳಿತಿದ್ದ ಮಾಲೀಕನ ಮುಖಕ್ಕೆ ಕೈಯಲ್ಲಿದ್ದ ಖಾರದ ಪುಡಿಯನ್ನು ಎರಚಿದ್ದಾಳೆ. ಕೂಡಲೇ ಜಾಗರೂಕನಾದ ಆ ಯುವಕ ಆಕೆಯ ಕೈಯಲ್ಲಿ ಹಿಡಿದುಕೊಂಡು ಆಕೆಗೆ ಸರಿಯಾಗಿ ಬಾರಿಸಿದ್ದಾನೆ. ಮಹಿಳೆ ಈ ಹಲ್ಲೆಯನ್ನು ತಡೆಯುವ ಪ್ರಯತ್ನ ಮಾಡಿದರೂ ಆಕೆಗೆ ಆತನ ಕೈಯಿಂದ ಬಿಡಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ. 25 ಸೆಕೆಂಡ್‌ನ ವೀಡಿಯೋದಲ್ಲಿ ಆತ ಅಂದಾಜು 20 ಬಾರಿ ಆಕೆಯನ್ನು ಥಳಿಸುವುದನ್ನು ಕಾಣಬಹುದು.

ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ನಡೆದ ಘಟನೆ: ವೀಡಿಯೋ ವೈರಲ್

ನವೆಂಬರ್ 3ರಂದು ಮಧ್ಯಾಹ್ನ 12.30ರ ಸುಮಾರಿಗೆ ಈ ಘಟನೆ ನಡೆದಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಹಿಳೆ ಎರಚಿದ ಚಿಲ್ಲಿ ಪೌಡರ್ ಆತನ ಮುಖದ ಮೇಲೆ ಬೀಳುವುದಕ್ಕೆ ವಿಫಲವಾಗಿದೆ ಹೀಗಾಗಿ ಆತ ಕೂಡಲೇ ಆಕೆಯನ್ನು ಹಿಡಿದು ಹಣ್ಣುಗಾಯಿ ನೀರುಗಾಯಿ ಮಾಡಿದ್ದಾನೆ. ಕೌಂಟರ್‌ನಿಂದ ಹೊರಗೆ ಹಾರಿ ಆತ ದರೋಡೆಗೆ ಬಂದ ಮಹಿಳೆಗೆ ಥಳಿಸುವುದನ್ನು ಕಾಣಬಹುದಾಗಿದೆ.

ಘಟನೆಗೆ ಸಂಬಂಧಿಸಿದಂತೆ ಅಂಗಡಿ ಮಾಲೀಕರು ಪ್ರಕರಣ ದಾಖಲಿಸಲು ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ. ಆದರೂ ಸಿಸಿಟಿವಿ ದೃಶ್ಯ ಆಧರಿಸಿದ ಆ ಮಹಿಳೆಯನ್ನು ಹಿಡಿಯಲು ಪ್ರಯತ್ನ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಅಂಗಡಿಯವನು ದೂರು ದಾಖಲಿಸಲು ನಿರಾಕರಿಸುತ್ತಿದ್ದಾನೆ ಆದರೆ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಮಹಿಳೆಯ ತನಿಖೆಯನ್ನು ಪ್ರಾರಂಭಿಸಿದ್ದಾರೆ ಎಂದು ರಾಣಿಪ್ ಪೊಲೀಸ್ ಠಾಣೆಯ ಪಿಐ ಕೇತನ್ ವ್ಯಾಸ್ ಹೇಳಿದ್ದಾರೆ. ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದೇವೆ ಮತ್ತು ದೂರುದಾರರನ್ನು ದೂರು ದಾಖಲಿಸಲು ಪ್ರೋತ್ಸಾಹಿಸಲು ಎರಡು ಬಾರಿ ಭೇಟಿಯಾಗಿದ್ದಾಗಿ ಅಹಮದಾಬಾದ್ ಪೊಲೀಸರು ದೃಢಪಡಿಸಿದ್ದಾರೆ.

ಈ ಪ್ರಕರಣದಲ್ಲಿ ಹೇಳಿಕೆ ಪಡೆಯಲು ದೂರುದಾರರನ್ನು ಎರಡು ಬಾರಿ ವೈಯಕ್ತಿಕವಾಗಿ ಭೇಟಿಯಾಗಿ ದೂರು ದಾಖಲಿಸುವಂತೆ ಕೇಳಲಾಗಿತ್ತು, ಆದರೆ ದೂರುದಾರ ಉದ್ಯಮಿ ಈ ವಿಷಯದಲ್ಲಿ ಯಾವುದೇ ದೂರು ದಾಖಲಿಸಲು ಒಲವು ತೋರುತ್ತಿಲ್ಲ. ಆದರೂ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳನ್ನು ಹುಡುಕಲು ತನಿಖೆ ಆರಂಭಿಸಲಾಗಿದೆ ಎಂದು ಅಹಮದಾಬಾದ್ ಪೊಲೀಸರು ಗುರುವಾರ ಎಕ್ಸ್‌ನಲ್ಲಿ ಹೇಳಿಕೆ ನೀಡಿದ್ದಾರೆ. ಅದೇನೆ ಇರಲಿ ಇವರಿಗೆಲ್ಲಾ ಹೀಗೆ ಹಾಡಹಗಲೇ ಕಂಡವರ ಆಸ್ತಿ ಮೇಲೆ ಕಣ್ಣು ಹಾಕಲು ಅದೆಲ್ಲಿಂದ ಧೈರ್ಯ ಬರುತ್ತದೋ ದೇವರೇ ಬಲ್ಲ.

ಇದನ್ನೂ ಓದಿ: ಪಂಚೆ ಎತ್ತಿ ಕಟ್ಟಿ ರಸ್ತೆ ಡಿವೈಡರ್ ಧ್ವಂಸಗೊಳಿಸಿದ ಕೇರಳ ಮಾಜಿ ಶಾಸಕನ ವಿರುದ್ಧ ಕೇಸ್

ಇದನ್ನೂ ಓದಿ: ಸಿಮೆಂಟ್ ಮಿಕ್ಸರ್ ಲಾರಿ ಡಿಕ್ಕಿ: ಕಾಂಪೌಂಡ್ ಗೋಡೆ ಬಿದ್ದು ಆಟವಾಡುತ್ತಿದ್ದ ಮಗು ಸಾವು