Bulandshahr jewelry store theft: ಆಭರಣದ ಅಂಗಡಿಗೆ ಬಂದ ದಂಪತಿ ಅಲ್ಲಿ ತಮ್ಮ ಕೈಚಳಕ ತೋರಿದ್ದಾರೆ. ದಂಪತಿಯೊಬ್ಬರು ಜ್ಯುವೆಲ್ಲರಿ ಶಾಪ್‌ಗೆ ಭೇಟಿ ನೀಡಿ, 6 ಲಕ್ಷ ಮೌಲ್ಯದ ಚಿನ್ನದ ನೆಕ್ಲೇಸನ್ನು ಕದ್ದಿದ್ದಾರೆ. ಈ ಕೃತ್ಯವು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ ಆಗಿದೆ. 

ಜ್ಯುವೆಲರಿ ಶಾಪ್‌ನಲ್ಲಿ ದಂಪತಿ ಕೈಚಳಕ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಬುಲಂದ್‌ಶಹರ್‌: ಆಭರಣದ ಶಾಪೊಂದರಲ್ಲಿ ಕಣ್ಣು ಮಿಟುಕಿಸುವುದರೊಳಗೆ ಮಹಿಳೆಯೊಬ್ಬಳು 6 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಆಭರಣವನ್ನು ಸೀರೆಯೊಳಗೆ ಸೇರಿಸಿಕೊಂಡ ಘಟನೆ ನಡೆದಿದೆ. ದೃಶ್ಯ ಜ್ಯುವೆಲ್ಲರಿ ಶಾಪ್‌ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಉತ್ತರ ಪ್ರದೇಶದ ಬುಲಂದ್‌ ಶಹರ್‌ನಲ್ಲಿ ಈ ಘಟನೆ ನಡೆದಿದೆ. ಗಂಡ ಹೆಂಡತಿ ಇಬ್ಬರು ಜ್ಯುವೆಲ್ಲರಿ ಶಾಪ್‌ಗೆ ಬಂದಿದ್ದು, ನೋಡು ನೋಡುತ್ತಲೇ ಒಂದು ಬಂಗಾರದ ನೆಕ್ಲೇಸ್‌ ಅನ್ನು ಮಹಿಳೆ ಮ್ಯಾಜಿಕ್ ಮಾಡಿದಂತೆ ಸೀರೆಯೊಳಗೆ ಸೇರಿಸಿದ್ದಾಳೆ. ಜ್ಯುವೆಲ್ಲರಿ ಶಾಪ್ ಸಿಬ್ಬಂದಿಗೆ ಈ ವಿಚಾರ ಗೊತ್ತೇ ಆಗಿಲ್ಲ, ಅವರು ಈ ದಂಪತಿಗೆ ಬೇರೆ ಬೇರೆ ನೆಕ್ಲೇಸ್‌ಗಳನ್ನು ತೋರಿಸುತ್ತಲೇ ಇದ್ದರು.

ನೋಡುನೋಡುತ್ತಿದ್ದಂತೆ ಚಿನ್ನದ ನೆಕ್ಲೇಸ್ ಮಾಯ

ಇವರ ಚಾಣಾಕ್ಷತನ ಎಷ್ಟಿತ್ತೆಂದರೆ ಜ್ಯುವೆಲ್ಲರಿ ಶಾಪ್ ಮಾಲೀಕರಿಗೆ ಒಂದು ಸೆಟ್ ಬಂಗಾರ ಕಳೆದು ಹೋಗಿರುವುದು ಅಂಗಡಿಯಲ್ಲಿ ದೈನಂದಿನ ದಾಸ್ತಾನು ಪರಿಶೀಲನೆ ವೇಳೆ ಆಭರಣಗಳನ್ನು ತೂಕ ಮಾಡುವವರೆಗೂ ಗೊತ್ತೇ ಆಗಿಲ್ಲ. ಆಭರಣದ ತೂಕದಲ್ಲಿ ಇಳಿಕೆ ಕಂಡು ಬಂದ ಹಿನ್ನೆಲೆ ಅಂಗಡಿಯವರು ನಂತರ ಸಿಸಿ ಕ್ಯಾಮರಾಗಳನ್ನು ತಪಾಸಣೆ ಮಾಡಿದಾಗ ಈ ಜೋಡಿಯ ಕೃತ್ಯ ಬಯಲಾಗಿದೆ.

ಸಿಸಿಟಿವಿ ದೃಶ್ಯಗಳಲ್ಲಿ ದಂಪತಿ ಜ್ಯುವೆಲ್ಲರಿ ಶಾಪ್‌ವೊಳಗೆ ಕುಳಿತಿದ್ದು, ಅವರಿಗೆ ಶಾಪ್ ಮಾಲೀಕರು ತಮ್ಮ ಬಳಿಯ ನೆಕ್ಲೇಸ್‌ಗಳ ಕಲೆಕ್ಷನ್ ಅನ್ನು ತೋರಿಸುತ್ತಿರುತ್ತಾರೆ. ಈ ವೇಳೆ ಮಹಿಳೆ ಎರಡು ನೆಕ್ಲೇಸ್‌ಗಳ ಬಾಕ್ಸ್‌ಗಳನ್ನು ತನ್ನ ಮಡಿಲಲ್ಲಿ ಇರಿಸಿ ನೋಡುತ್ತಿದ್ದು,ಒಂದನ್ನು ಮಾತ್ರ ಮರಳಿ ಅಂಗಡಿಯವರಿಗೆ ನೀಡಿದ್ದಾರೆ. ತೊಡೆಯ ಮೇಲಿಟ್ಟ ನೆಕ್ಲೇಸ್‌ ಮೇಲೆ ಆಕೆ ನಿಧಾನವಾಗಿ ಸೆರಗನ್ನು ಮುಚ್ಚಿ ಕವರ್ ಮಾಡಿದ್ದು, ಆಗಾಗ ಸೆರಗನ್ನು ಸರಿ ಮಾಡಿಕೊಳ್ಳುವುದನ್ನು ಜೊತೆಗೆ ಜ್ಯುವೆಲ್ಲರಿ ಶಾಪ್‌ನವರ ಬಳಿ ಇನ್ನು ಕೆಲವು ನೆಕ್ಲೇಸ್‌ಗಳನ್ನು ನೋಡುತ್ತಾ ಅವುಗಳ ದರವವನ್ನು ಕೇಳುತ್ತಾ ನಿಧಾನವಾಗಿ ಒಂದು ಜ್ಯುವೆಲ್ಲರಿ ಪೀಸನ್ನು ತನ್ನ ಸೆರಗಿನೊಳಗೆ ಅಡಗಿಸಿದ್ದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.

ಕಳ್ಳ ದಂಪತಿಗಾಗಿ ಪೊಲೀಸರ ಹುಡುಕಾಟ

ಸ್ವಲ್ಪ ಸಮಯದ ನಂತರ, ದಂಪತಿಗಳು ತಾವು ನೋಡಿದ ಯಾವುದೇ ಆಭರಣಗಳು ನಮಗೆ ಇಷ್ಟವಾಗಲಿಲ್ಲ ಎಂದು ಹೇಳಿ ಅಂಗಡಿಯಿಂದ ಹೊರಟು ಹೋಗಿದ್ದಾರೆ. ಸಿಸಿಟಿವಿ ನೋಡಿದ ಬಳಿಕ ವಿಚಾರ ತಿಳಿದ ಜ್ಯುವೆಲ್ಲರಿ ಶಾಪ್ ಸಿಬ್ಬಂದಿ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ಇಬ್ಬರು ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಲಾಗಿದೆ.

ಇದನ್ನೂ ಓದಿ: ಮನೆಮುಂದೆ ನಾಯಿ ಕರೆತಂದು ಮಲಮೂತ್ರ ಮಾಡಿಸ್ತಿದ್ದ ಪೊಲೀಸ್‌: ಆಕ್ಷೇಪಿಸಿದ ಮಹಿಳೆಗೆ ಹೆಂಡ್ತಿ ಕರೆಸಿ ಹಲ್ಲೆ

ಇದನ್ನೂ ಓದಿ: 2 ವರ್ಷದ ಆರ್ಯತಾರಾ ಶಕ್ಯಾ ನೇಪಾಳದ ಹೊಸ ಕನ್ಯಾದೇವತೆಯಾಗಿ ಆಯ್ಕೆ

ಇದನ್ನೂ ಓದಿ: ಡ್ರಗ್ ಓವರ್‌ಡೋಸ್ ಆಗಿ ನಾಲ್ವರು ಸಾವು: ಮಕ್ಕಳ ಶವ ಬೀದಿಯಲ್ಲಿರಿಸಿ ಪೋಷಕರ ಆಕ್ರೋಶ