Cement mixer lorry accident: ಬೆಂಗಳೂರಿನ ಕುಂದಲಹಳ್ಳಿ ಕಾಲೋನಿಯಲ್ಲಿ, ಸಿಮೆಂಟ್ ಮಿಕ್ಸರ್ ಲಾರಿಯೊಂದು ಕಾಂಪೌಂಡ್ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಗೋಡೆ ಕುಸಿದು 1 ವರ್ಷ 8 ತಿಂಗಳ ಮಗು ಪ್ರಣವ್ ಸಾವನ್ನಪ್ಪಿದ್ದ ಘಟನೆ ನಡೆದಿದೆ.

ಸಿಮೆಂಟ್ ಮಿಕ್ಸರ್ ಲಾರಿ ಅವಾಂತರ: ಮಗು ಸಾವು

ಬೆಂಗಳೂರು: ಕಾಂಪೌಂಡ್‌ಗೆ ಸಿಮೆಂಟ್ ಮಿಕ್ಸರ್‌ ಲಾರಿ ಡಿಕ್ಕಿ ಹೊಡೆದ ಪರಿಣಾಮ ಗೋಡೆ ಕುಸಿದು ಪುಟಾಣಿ ಕಂದ ಸಾವನ್ನಪ್ಪಿದ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಮಗುವಿನ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ಮಗುವನ್ನು 1 ವರ್ಷ 8 ತಿಂಗಳಷ್ಟೇ ತುಂಬಿದ್ದ ಪ್ರಣವ್ ಎಂದು ಗುರುತಿಸಲಾಗಿದೆ. ಬೆಂಗಳೂರಿನ ಕುಂದಲಹಳ್ಳಿ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ನಿನ್ನೆ ಸಂಜೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ಗೋಡೆಗೆ ಡಿಕ್ಕಿ ಹೊಡೆದ ಸಿಮೆಂಟ್ ಲಾರಿ: ಮಗುವಿನ ಮೇಲೆ ಬಿದ್ದ ಕಾಂಪೌಂಡ್

ಮನೆ ಮುಂದೆ ದಾಟಿ ಹೋಗುತ್ತಿದ್ದ ಸಿಮೆಂಟ್ ಮಿಕ್ಸರ್‌ ಲಾರಿಗೆ ವಿದ್ಯುತ್ ವೈರ್‌ ಸಿಲುಕಿದ ಪರಿಣಾಮ ಅದು ನಿಯಂತ್ರಣ ಕಳೆದುಕೊಂಡು ಕಾಂಪೌಂಡ್ ಗೋಡೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾಂಪೌಂಡ್ ಗೋಡೆ ಕುಸಿದು ಬಿದ್ದು, ಮಗು ಸಾವನ್ನಪ್ಪಿದೆ. ನವಂಬರ್ 7 ಸಂಜೆ ಸಿಮೆಂಟ್ ಮಿಕ್ಸರ್ ಲಾರಿಯೊಂದು ಮನೆಯೊಂದರ ಮೌಲ್ಡಿಂಗ್ ಕೆಲಸ ಮುಗಿಸಿ ವಾಪಸ್ ಹೋಗುತ್ತಿತ್ತು. ಈ ವೇಳೆ ಮೇಲೆ ಹಾದು ಹೋಗಿರುವ ವಿದ್ಯುತ್ ವೈರ್ ಲಾರಿಗೆ ಸಿಲುಕಿದೆ. ಕೂಡಲೇ ಅಲ್ಲಿದ್ದವರೆಲ್ಲರೂ ಕೂಗಿಕೊಂಡಿದ್ದಾರೆ. ಆದರೆ ಚಾಲಕನ ಗಮನಕ್ಕೆ ಇದು ಬಂದಿಲ್ಲ, ಆತ ಲಾರಿ ಚಾಲಾಯಿಸಿಕೊಂಡು ಮುಂದೆ ಹೋದಾಗ ವೈರಿಂಗ್ ಕಂಬ ಕಿತ್ತು ಬಂದಿದ್ದಲ್ಲದೇ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಮನೆಯ ಗೋಡೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಗೋಡೆ ಕುಸಿದು ಆಟ ಆಡ್ತಿದ್ದ ಮಗುವಿನ ಮೇಲೆ ಬಿದ್ದು ಮಗು ಸಾವನ್ನಪ್ಪಿದೆ.

ಮಗುವಿನ ಪೋಷಕರ ಆಕ್ರಂದನ

ಘಟನೆಯಲ್ಲಿ ಗಂಭೀರ ಗಾಯಗೊಂಡ ಮಗುವನ್ನು ಕೂಡಲೇ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮಗು ಸಾವನ್ನಪ್ಪಿದೆ. ಮಗುವಿನ ಶವವನ್ನು ಬೌರಿಂಗ್ ಆಸ್ಪತ್ರೆಯ ಶವಗಾರಕ್ಕೆ ದಾಖಲಿಸಲಾಗಿದೆ. ಮೃತ ಮಗುವಿನ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆಗೆ ಸಂಬಂಧಿಸಿದಂತೆ ಹೆಚ್‌ಎಎಲ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆಯ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದಾನೆ. ಲಾರಿ ಚಾಲಕನನ್ನು ಹರೀಶ್ ಎಂದು ಗುರುತಿಸಲಾಗಿದೆ. ಆತನಿಗಾಗಿ ಸಂಚಾರಿ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಪುಂಡರ ಬೈಕ್‌ ರೇಸ್‌ಗೆ 23ರ ಯುವತಿ ಬಲಿ: ಡಿಕ್ಕಿ ಹೊಡೆದು 50 ಮೀಟರ್ ಎಳೆದೊಯ್ದ ಬೈಕ್

ಇದನ್ನೂ ಓದಿ: ಚಾರ್ಟೆಡ್ ಅಕೌಂಟೆಂಟ್‌ಗೇ ಸೈಬರ್ ವಂಚಕರಿಂದ 1.5 ಕೋಟಿ ಉಂಡೆನಾಮ