Damaging public property:ಯು-ಟರ್ನ್ ಮುಚ್ಚಿದ್ದನ್ನು ವಿರೋಧಿಸಿ, ಮಾಜಿ ಶಾಸಕ ಅನಿಲ್ ಅಕ್ಕರ ಅವರು ಸ್ವತಃ ಗುದ್ದಲಿ ತೆಗೆದುಕೊಂಡು ಹೊಸದಾಗಿ ನಿರ್ಮಿಸಿದ ಡಿವೈಡರ್‌ನ್ನು ಒಡೆದು ಹಾಕಿದ್ದು,ಅವರ ವಿರುದ್ಧ ಕೇಸ್ ದಾಖಲಾಗಿದೆ.
ಮಾಜಿ ಶಾಸಕನಿಂದಲೇ ಸಾರ್ವಜನಿಕ ಆಸ್ತಿಗೆ ಹಾನಿ
ತ್ರಿಶೂರ್-ಕುಟ್ಟಿಪ್ಪುರಂ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ವಿಭಜಕಕ್ಕೆ ಹಾನಿ ಮಾಡಿದ ಆರೋಪದ ಮೇಲೆ ಪರಮಂಗಲಂ ಪೊಲೀಸರು ಶುಕ್ರವಾರ ಕಾಂಗ್ರೆಸ್ ನಾಯಕ ಮತ್ತು ವಡಕ್ಕಂಚೇರಿ ಮಾಜಿ ಶಾಸಕ ಅನಿಲ್ ಅಕ್ಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಶಾಸಕ ಅನಿಲ್ ಅಕ್ಕರ ಯುಟರ್ನ್ ಮುಚ್ಚಿದ್ದಕ್ಕೆ ಡಿವೈಡರ್‌ನ್ನು ಗುದ್ದಲಿ ತೆಗೆದುಕೊಂಡು ಒಡೆದು ಹಾಕಿದ್ದರು. ಕೇರಳದ ತ್ರಿಶ್ಯೂರ್‌ನಲ್ಲಿ ಈ ಘಟನೆ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆಯ ರಸ್ತೆ ಸುಧಾರಣೆ ಕಾರ್ಯವನ್ನು ನಿರ್ವಹಿಸುತ್ತಿರುವ ಇಕೆಕೆ ಇನ್ಫ್ರಾಸ್ಟ್ರಕ್ಚರ್‌ನ ಗುತ್ತಿಗೆದಾರ ಪೊಲೀಸರಿಗೆ ದೂರು ನೀಡಿದ್ದು, ನಂತರ ಪೊಲೀಸರು ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ ಆರೋಪದ ಮೇಲೆ ಅನಿಲ್ ಅಕ್ಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪಿಡಬ್ಲ್ಯೂಡಿ ಯು ಟರ್ನ್ ಅನ್ನು ಮುಚ್ಚಿದ ನಂತರ ಘಟನೆ
ರಸ್ತೆ ಪುನರಾಭಿವೃದ್ಧಿ ಕಾರ್ಯದ ಭಾಗವಾಗಿ ಮುತುವರ ಶ್ರೀ ಮಹಾದೇವ ದೇವಸ್ಥಾನದ ಬಳಿಯ ತ್ರಿಶೂರ್-ಕುಟ್ಟಿಪ್ಪುರಂ ರಾಜ್ಯ ಹೆದ್ದಾರಿಯಲ್ಲಿ ಪಿಡಬ್ಲ್ಯೂಡಿ ಯು ಟರ್ನ್ ಅನ್ನು ಮುಚ್ಚಿದ ನಂತರ ಈ ಘಟನೆ ನಡೆದಿದೆ. ಈ ಡಿವೈಡರ್ ಹಾಕಿದ ನಂತರ ತ್ರಿಶೂರ್‌ನಿಂದ ಬರುವ ವಾಹನಗಳು ಈ ದೇವಾಲಯವನ್ನು ತಲುಪಲು ಯು-ಟರ್ನ್ ತೆಗೆದುಕೊಳ್ಳಲು ಒಂದು ನಿರ್ದಿಷ್ಟ ದೂರದವರೆಗೆ ಅಂದರೆ ಅಮಲಾ ಆಸ್ಪತ್ರೆ ಜಂಕ್ಷನ್ ವರೆಗೆ ಪ್ರಯಾಣಿಸಬೇಕಾಗಿತ್ತು. ಅಧಿಕಾರಿಗಳ ಪ್ರಕಾರ, ವಾಹನಗಳು ಅಪಘಾತಕ್ಕೀಡಾಗದಂತೆ ತಡೆಯಲು ವಿಭಜಕವನ್ನು ಅಳವಡಿಸಲಾಗಿದೆ. ಆದರೆ ಈ ಡಿವೈಡರ್ ಹಾಕಿರುವುದಕ್ಕೆ ವಿರೋಧ ವ್ಯಕ್ತವಾಗಿತ್ತು.
ಕಂಟ್ರಾಕ್ಟರ್ ದೂರು: ಅನಿಲ್ ವಿರುದ್ಧ ಕೇಸ್
ನಂತರ ಮಾಜಿ ಶಾಸಕ ಅನಿಲ್ ಅಕ್ಕರಾ ತಮ್ಮ ವಾಹನದಲ್ಲಿ ಸ್ಥಳಕ್ಕೆ ಬಂದು ಅಲ್ಲಿದ್ದ ಕೆಲಸದವರ ಗುದ್ದಲಿ ತೆಗೆದುಕೊಂಡು ಈ ಹೊಸದಾಗಿ ನಿರ್ಮಿಸಿದ ಸಿಮೆಂಟ್ ಡಿವೈಡರ್ ಅನ್ನು ಒಡೆಯಲು ಶುರು ಮಾಡಿದ್ದಾರೆ. ಅನಿಲ್ ಅಕ್ಕರ ಅವರ ಕೃತ್ಯದಿಂದ 19,160 ರೂ ಹಾನಿಯಾಗಿದೆ ಎಂದು ಗುತ್ತಿಗೆದಾರರು ಆರೋಪಿಸಿದ್ದಾರೆ. ಆದರೆ ಡಿವೈಡರ್‌ನಿಂದಾಗಿ ತ್ರಿಶ್ಯೂರ್‌ನಿಂದ ಈ ದೇಗುಲಕ್ಕೆ ಬರುವ ಭಕ್ತರಿಗೆ ಬಹಳ ತೊಂದರೆಯಾಗುತ್ತಿದೆ ಎಂದು ಅನಿಲ್ ಆರೋಪಿಸಿದ್ದಾರೆ. ಆದರೆ ಈ ಘಟನೆಗೆ ಸಂಬಂಧಿಸಿದಂತೆ ಡಿವೈಎಫ್ಐ(Democratic Youth Federation of India) ಪ್ರತಿಕ್ರಿಯಿಸಿದ್ದು, ಅನಿಲ್ ಅಕ್ಕರಾ ರಾಜಕೀಯ ಪ್ರೇರಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದೆ.
ಇದನ್ನೂ ಓದಿ; ಸಿಮೆಂಟ್ ಮಿಕ್ಸರ್ ಲಾರಿ ಡಿಕ್ಕಿ: ಕಾಂಪೌಂಡ್ ಗೋಡೆ ಬಿದ್ದು ಆಟವಾಡುತ್ತಿದ್ದ ಮಗು ಸಾವು
ಇದನ್ನೂ ಓದಿ: ಪುಂಡರ ಬೈಕ್ ರೇಸ್‌ಗೆ 23ರ ಯುವತಿ ಬಲಿ: ಡಿಕ್ಕಿ ಹೊಡೆದು 50 ಮೀಟರ್ ಎಳೆದೊಯ್ದ ಬೈಕ್
