ಅಗ್ನಿವೀರ್ ಸ್ಪರ್ಧಾರ್ಥಿಗಳಿಗೆ ಮತ್ತೊಂದು ಗುಡ್‌ ನ್ಯೂಸ್‌ ಎದುರಾಗಿದೆ. 3ಸೇನೆ ಕಡೆಯಿಂದ ಒಳ್ಳೆಯ ಸುದ್ದಿ. ಈ ನಿಟ್ಟಿನಲ್ಲಿ ಯುವಕರಿಗೆ ಸೇನೆಯಲ್ಲಿ ಖಾಯಂ ಉದ್ಯೋಗದ ಅವಕಾಶಗಳು ಹೆಚ್ಚಾಗಲಿವೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

ನವದೆಹಲಿ:ಭಾರತೀಯ ಸಶಸ್ತ್ರ ಪಡೆಗಳಿಗೆ ಸೇರ್ಪಡೆಗೊಳ್ಳುವ ಯುವಕ-ಯುವತಿಯರಿಗೆ ಕೇಂದ್ರ ಸರ್ಕಾರದ 'ಅಗ್ನಿವೀರ್' ಯೋಜನೆಯಡಿಯಲ್ಲಿ ಇದೀಗ ಮತ್ತೊಂದು ಅತ್ಯಂತ ಪ್ರಮುಖ ಹಾಗೂ ಶುಭ ಸುದ್ದಿ ಹೊರಬಿದ್ದಿದೆ. ೪ ವರ್ಷಗಳ ಸೇವಾವಧಿ ಪೂರ್ಣಗೊಳಿಸಿದ ನಂತರ ಕೇವಲ ಶೇಕಡಾ 25ರಷ್ಟು ಅಗ್ನಿವೀರರನ್ನು ಮಾತ್ರವೇ ಖಾಯಂ ಸೈನಿಕರನ್ನಾಗಿ ಉಳಿಸಿಕೊಳ್ಳಲಾಗುವುದು ಎಂಬ ನಿಯಮವನ್ನು ಬದಲಾಯಿಸಿ, ಈ ಮಿತಿಯನ್ನು ಶೇಕಡಾ 50-75ಕ್ಕೆ ಹೆಚ್ಚಿಸಲು ಸಶಸ್ತ್ರ ಪಡೆಗಳು ಚಿಂತನೆ ನಡೆಸಿವೆ. ಅಗ್ನಿಪಥ್ ಯೋಜನೆಯಡಿ ಆಯ್ಕೆಯಾದ ಮೊದಲ ಬ್ಯಾಚ್ ಅಗ್ನಿವೀರರು ತಮ್ಮ ೪ ವರ್ಷಗಳ ಸೇವಾವಧಿಯನ್ನು ಪೂರ್ಣಗೊಳಿಸುತ್ತಿದ್ದಂತೆ, ಈ ನೀತಿಯಲ್ಲಿ ಮಹತ್ವದ ಪರಿಷ್ಕರಣೆ ಮಾಡಲು ಸೇನೆಯ ಪ್ರಮುಖ ವಿಭಾಗಗಳು ರಕ್ಷಣಾ ಸಚಿವಾಲಯ ಹಾಗೂ 'ಮಿಲಿಟರಿ ವ್ಯವಹಾರಗಳ ಇಲಾಖೆಗೆ' ಪ್ರಸ್ತಾವನೆ ಸಲ್ಲಿಸಿವೆ. ಯಾವ ವಿಭಾಗದಲ್ಲಿ ಎಷ್ಟು ಶೇಕಡಾ ಹೆಚ್ಚಳ? ಇಲ್ಲಿದೆ ಸಂಪೂರ್ಣ ವಿವರ!

ಭಾರತೀಯ ನೌಕಾಪಡೆ !

ನೌಕಾಪಡೆಯಲ್ಲಿ ತಾಂತ್ರಿಕ ಹಾಗೂ ಜಟಿಲ ಯುದ್ಧ ನೌಕೆಗಳ ಕಾರ್ಯಾಚರಣೆಗೆ ಸುದೀರ್ಘ ತರಬೇತಿಯ ಅಗತ್ಯವಿರುತ್ತದೆ. ಹೀಗಾಗಿ, ನೌಕಾಪಡೆಯು ತನ್ನಲ್ಲಿ ತರಬೇತಿ ಪಡೆದ ಶೇಕಡಾ 75ರಷ್ಟು ಅಗ್ನಿವೀರರನ್ನು ಖಾಯಂ ಸೇವೆಯಲ್ಲಿ ಉಳಿಸಿಕೊಳ್ಳಲು ಅತ್ಯಂತ ಹೆಚ್ಚಿನ ಆಸಕ್ತಿ ವಹಿಸಿದೆ.

ಭೂಸೇನೆ ಮತ್ತು ವಾಯುಪಡೆ !

ಭಾರತೀಯ ಭೂಸೇನೆ ಹಾಗೂ ವಾಯುಪಡೆಗಳು ಪ್ರಸ್ತುತ ಇರುವ ಶೇ. 25ರ ಮಿತಿಯನ್ನು ಶೇಕಡಾ 50ಕ್ಕೆ ಹೆಚ್ಚಿಸಲು ಪ್ರಸ್ತಾವನೆ ನೀಡಿವೆ. ಶೇ. 75ರಷ್ಟು ವಿಸ್ತರಣೆಗೆ ಪ್ರಮುಖ ಕಾರಣಗಳೆಮದರೆ, ಅನುಭವ ಮತ್ತು ಕಾರ್ಯಾಚರಣೆಯ ಸಾಮರ್ಥ್ಯ, 4 ವರ್ಷಗಳ ಕಾಲ ಕಠಿಣ ತರಬೇತಿ ಪಡೆದು, ಆಧುನಿಕ ಶಸ್ತ್ರಾಸ್ತ್ರಗಳನ್ನು ನಿರ್ವಹಿಸುವಲ್ಲಿ ಪರಿಣತಿ ಹೊಂದಿದ ಅಗ್ನಿವೀರರನ್ನು ಸೇವೆಯಿಂದ ಕೈಬಿಟ್ಟರೆ, ಆ ಅನುಭವದ ಲಾಭ ಸೇನೆಗೆ ಸಿಗುವುದಿಲ್ಲ. ಹೀಗಾಗಿ ತರಬೇತಿ ಪಡೆದ ಸೈನಿಕರ ಅನುಭವವನ್ನು ಉಳಿಸಿಕೊಳ್ಳುವುದು ಮುಖ್ಯವಾಗಿದೆ.

ತರಬೇತಿ ವೆಚ್ಚದ ಉಳಿತಾಯ! 

ಪ್ರತಿ 4 ವರ್ಷಕ್ಕೊಮ್ಮೆ ಹೊಸಬರಿಗೆ ಶೂನ್ಯದಿಂದ ತರಬೇತಿ ನೀಡುವುದು ಅಪಾರ ವೆಚ್ಚ ಹಾಗೂ ಸಮಯ ಬೇಡುವ ಪ್ರಕ್ರಿಯೆ. ಈಗಾಗಲೇ ತರಬೇತಿ ಹೊಂದಿದವರನ್ನು ಮುಂದುವರಿಸುವುದರಿಂದ ಸೇನೆಯ ಆಡಳಿತಾತ್ಮಕ ವೆಚ್ಚ ಕಡಿಮೆಯಾಗುತ್ತದೆ. ಸೇನೆಯ ಬಲವರ್ಧನೆ: ದೇಶದ ಗಡಿ ಭದ್ರತೆ, ಆಧುನಿಕ ತಂತ್ರಜ್ಞಾನ ಆಧಾರಿತ ಯುದ್ಧ ಶೈಲಿ ಮತ್ತು ಸೇನೆಯಲ್ಲಿದ್ದ ಸಿಬ್ಬಂದಿ ಕೊರತೆಯನ್ನು ನಿವಾರಿಸಲು ಸುಸಜ್ಜಿತ ಯುವ ಸೈನಿಕರ ಅಗತ್ಯವಿದೆ.

ಉದ್ಯೋಗಾಕಾಂಕ್ಷಿಗಳಿಗೆ ಇದರಿಂದಾಗುವ ಅನುಕೂಲ!

ಈ ಪ್ರಸ್ತಾವನೆಗೆ ಅಂತಿಮ ಅನುಮೋದನೆ ದೊರೆತರೆ, ಅಗ್ನಿವೀರರಾಗಿ ಸೇನೆಗೆ ಸೇರುವ ಲಕ್ಷಾಂತರ ಯುವಕರಿಗೆ ಸೇನೆಯಲ್ಲಿ ಖಾಯಂ ಉದ್ಯೋಗ ಪಡೆಯುವ ಅವಕಾಶ ಮೂರು ಪಟ್ಟು ಹೆಚ್ಚಾಗಲಿದೆ. ಶೇ. 75ರಷ್ಟು ಸೈನಿಕರು ಖಾಯಂ ಆದರೆ, ಉದ್ಯೋಗ ಭದ್ರತೆಯ ಆತಂಕವೂ ದೂರವಾಗಲಿದೆ. ಇದಲ್ಲದೆ, 4 ವರ್ಷಗಳ ನಂತರ ಹೊರಬರುವಳಿದ ಶೇ. 25ರಷ್ಟು ಸೈನಿಕರಿಗೆ ಸಶಸ್ತ್ರ ಗಡಿ ಪಡೆಗಳು, ರಾಜ್ಯ ಪೊಲೀಸ್ ಇಲಾಖೆಗಳು ಹಾಗೂ ಭಾರತೀಯ ರೈಲ್ವೇಯಲ್ಲಿ 10% ರಿಂದ 15% ರವರೆಗೆ ಮೀಸಲಾತಿ ಹಾಗೂ 'ಸೇವಾ ನಿಧಿ' ಪ್ಯಾಕೇಜ್‌ಗಳು ಕೂಡ ಎಂದಿನಂತೆ ಲಭ್ಯವಿರುತ್ತವೆ.